Pages

ಶನಿವಾರ, ಏಪ್ರಿಲ್ 10, 2010

ನಿರುತ್ತರ...!
                                                               
ಮನುಷ್ಯ ಎನ್ನುವ ಪ್ರಾಣಿಯಲ್ಲಿರುವ `ಸ್ವಾರ್ಥ' ಎನ್ನುವುದು ವಿಪರೀತ ಮಟ್ಟಕ್ಕೆ ಹೋಗುವುದಿದೆ. ತಾನು ಮಾತ್ರ ಬದುಕಿದರೆ ಅಯಿತು ಉಳಿದವರು ಏನಾದರೂ ಮಾಡಿಕೊಳ್ಳಲಿ ಎನ್ನುವ ಗುಣ! ಆಹಾ!! ಅದಕ್ಕೊಂದು ಉದಾಹರಣೆ ಕಂಡದ್ದು ನಾನಿರುವ ಉಡುಪಿ ಮನೆಯಲ್ಲಿ! ಎಲ್ಲರಿಗೂ ಸ್ವಾರ್ಥ ಎನ್ನುವುದು ಇದ್ದೇ ಇರುತ್ತದೆ. ಅದರೆ ಅದು ಒಂದು ಮಟ್ಟ ಮೀರಿ ಹೋದರೆ ಏನು ಸುಖ ಹೇಳಿ... ಸೀದ ವಿಷಯಕ್ಕೇ ಬರುತ್ತೇನೆ!
         ನಾನು ಮಣಿಪಾಲಕ್ಕೆ ಬಂದು ಕೆಲ ಸಮಯವಾಯಿತು. ಇರೋದು ಉಡುಪಿ ಸನಿಹದ ಒಂದು ಮನೆಯಲ್ಲಿ. ಆಶ್ಚರ್ಯದ ಸಂಗತಿಯೆಂದರೆ ಈ ಮನೆ ನನಗೆ ಎಂದೂ ಪೇಟೆ ಎಂದೆನಿಸಿದ್ದಿಲ್ಲ. ರಾಷ್ಟ್ರೀಯ ಹೆದ್ದಾರಿ ಸನಿಹವೇ ಇದ್ದರೂ ಅಲ್ಪ ಸ್ವಲ್ಪ ಹಳ್ಳಿಯ ವಾತಾವರಣ ಇನ್ನೂ ಉಳಕೊಂಡಿದೆ.  ಅದಕ್ಕಿಂತಲೂ ಹೆಚ್ಚಿಗೆ ನಾಲ್ಕು ಮೈನಾ ಹಕ್ಕಿ, ಎರಡು ಕಾಗೆ, ಅಪರೂಪಕ್ಕೆ ಗೀಜಗ, ಕೋಗಿಲೆ. ಮಿಂಚುಳ್ಳಿ ಎಲ್ಲಾ ಹಕ್ಕಿಗಳ ದರ್ಶನವೂ ನನ್ನ ಮನೆ ಹೊರಭಾಗದಲ್ಲಿ ನಿಂತರೆ ಆಗುವುದಿದೆ. ಕಾರಣ, ಮನೆಯ ಕಂಪೌಂಡ್ ಒಳಗಿರುವ ಸಮೃದ್ಧ ಹಣ್ಣು ನೀಡುವ ಎರಡು ಪಪ್ಪಾಯಿ ಸಸಿಗಳು ಮತ್ತು ಸೀತಾಫಲದ ಸಸಿ. ಹಣ್ಣು ಕಾಯಿ ಆಗುವ ಈ ಸಮಯ ಹಕ್ಕಿಗಳ ಮೆರವಣಿಗೆ ಹಾಗೇ ನಮ್ಮ ಮನೆ ಮುಂದೆ. ಆದನ್ನು ನೋಡುವುದೇ ಒಂದು ಸಂಭ್ರಮ. ಬೆಳಗಾಗೆದ್ದು, ಸಿಟೌಟಿನಲ್ಲಿ ಕೂತರೆ, ಎಲ್ಲಾ ಹಕ್ಕಿಗಳೂ ಬಂದು ಮುಂದಿನ ಸರಳುಗಳ ಮೇಲೆ ಕೂತು ನಮ್ಮ ಕ್ಷೇಮ ಸಮಾಚಾರ ಮಾತನಾಡಿ ಹೋಗುತ್ತವೆ.
ನಾಳೆ ಬರುತ್ತೇನೆ ಎನ್ನುವಂತೆ. ನಾನು ಬಂದ ಲಾಗಾಯ್ತು ಈ ಸಂಭಾಷಣೆ ನಿರಂತರ ನಡಕೊಂಡು ಬಂದಿದೆ.. ನನ್ನ ಬೇಸರ ಕಳೆಯಲು ಉಪಾಯವೂ ಆದ್ದಿದೆ.
          ಈ ಸಮಯ ಯಾವತ್ತೂ ಹೀಗೆ ಮುಂದುವರಿಯಬೇಕೆಂದೇನಿಲ್ಲವಲ್ಲ! ಹೌದು ಹಾಗೆಯೇ ಆಯಿತು.
ಮಹಡಿ ಮೇಲಿನ ಮನೆಯಲ್ಲಿ ನಾನಿರುವುದಾದರೆ, ಕೆಳಗಿನದ್ದು ಓನರ್ ಮನೆ. ಅವರಿಲ್ಲಿ ವಾಸ ಮಾಡದೇ ಕೆಲ ದಿನಗಳಾಗಿ ಧೂಳು, ಕಸ ತುಂಬಿ ನಮ್ಮ ಮನೆಗೆ ಬರುವವರಿಗೆ ನರಕ ದರ್ಶನವಾಗುತ್ತಿತ್ತು.  ಒಂದು ದಿನ ನಲ್ಕಾರು ಜನ ಬಂದು ಶುಚಿಗೊಳಿಸುವ ಕಾರ್ಯಕ್ರಮ ಆರಂಭವಾಯಿತು.ನನ್ನ ಮನೆಯಲ್ಲಿರುವ ಇಬ್ಬರು ಗೆಳೆಯರೂ ಸೇರಿದಂತೆ ನಮಗೆ ಖುಷಿಯಾಗಿತ್ತು. ಮನೆ ಪರಿಸರ ಸ್ವಚ್ಛ ಸುಂದರವಾಗುತ್ತಿದೆಯಲ್ಲ ಎಂದು.
        ಈ ಸಂತೋಷ ಎನ್ನುವುದೆಲ್ಲ ಅಲ್ಪಾಯುಷಿ! ಹೆಚ್ಚು ಸಮಯ ಇರುವುದಿಲ್ಲ. ಸ್ವಚ್ಛಗೊಳಿಸುವ ಕಾರ್ಯಕ್ರಮದ ಎರಡನೇ ಎಪಿಸೋಡ್ ಮರುದಿನ ಆರಂಭವಾಗಿತ್ತು. ಅಂದು ಯಥಾಪ್ರಕಾರ ಮಧ್ಯಾಹ್ನ ಆಫೀಸ್ಗೆ ಹೊರಟು ಹೋಗಿದ್ದೆ. ಹಾಗೆಯೇ ರಾತ್ರಿ ಮರಳಿ ಬಂದಿದ್ದೆ. ಮನೆ ಪರಿಸರ ಸ್ವಚ್ಛಗೊಳಿಸಿದ್ದಕ್ಕೆ ಮನಸ್ಸಿನಲ್ಲೇ ಓನರ್ಗೆ ಥ್ಯಾಂಕ್ಸ್ ಹೇಳಿದ್ದೆ.
ಯಾವತ್ತಿನಂತೆ ಮತ್ತೆ ಬೆಳಕು ಹರಿಯಿತು. ಬೆಳಗ್ಗೆ ಪೇಪರ್ ಓದಲು ಸಿಟೌಟ್ನಲ್ಲಿ ಕೂತದ್ದೂ ಆಯಿತು.
ಪೇಪರಿನ ಎರಡು ಪುಟ ತೆರೆಯಲಿಲ್ಲ. ಯಾವತ್ತೂ ನೊಡುವ ಮೈನಾ ಹಕ್ಕಿಗಳು ಕಾಣಲಿಲ್ಲ. ಬಹುಶಃ ಬ್ಯಸಿ ಇರಬಹುದೇನೋ ಅಂದುಕೊಂಡೆ.
       ಊಹುಂ! ನನ್ನ ಪೇಪರ್ ಓದುವಿಕೆ ಒಂದು ಹಂತ ಮುಗಿದು... ಬೇರೆ ಕೆಲಸಕ್ಕೆ ತೆರಳಿದರೂ ಈ ಹಕ್ಕಿ ಸಂಸಾರದ ಪತ್ತೆಯಿಲ್ಲ! ಸ್ವಲ್ಪ ಸಮಯದ ಬಳಿಕ ಹಾಗೇ ಮಹಡಿಯಿಂದ ಕೆಳಗಿಳಿದು ಯಾಕೋ ತಿರುಗಿ ನೋಡುತ್ತೇನೆ.....
ಅಯ್ಯೋ ರಾಮಾ...!! ಸೀತಾಫಲ ಸಸಿ ಮಂಗಮಾಯ!! ಬುಡದಿಂದ ಕತ್ತರಿಸಿಯಾಗಿದೆ.
ಬಾವಿಕಟ್ಟೆ ಸನಿಹ ಸುಮ್ಮನಿದ್ದ ಸಸಿಗೂ ಈ ಮಾರೀಚರು ಕೈಕೊಟ್ಟರಲ್ಲಾ ಅನಿಸಿತು.ಇದೇ ಕಾರಣ ಆ ದಿನ ಮೈನಾ ಬರಲಿಲ್ಲ. ಗೀಜಗ, ಅಳಿಲು, ಪಾರಿವಾಳ ಯಾವುದರ ಪತ್ತೆಯೂ ಇಲ್ಲ.ಇವರ ಸ್ವಚ್ಛತಾ ಅಭಿಯಾನ ನಾಲ್ಕು ಜೀವದ ಆಹಾರ ಕಸಿದಿತ್ತು.! ಬೇಸಿಗೆ ಕಾಲ ಬೇರೆ... ಎಲ್ಲಿಗೆ ಹೋದಾವು... ಅಂದು ಕೊಳ್ಳುತ್ತಿದ್ದೆ. ಆ ದಿನ ಬೇಸರದಲ್ಲೇ ಆಫೀಸ್ಗೆ ತಯಾರಾಗುತ್ತಿದ್ದೆ. ಸಿಟೌಟ್ ಹೊರಗಡೆ ಹಕ್ಕಿ ಸ್ವರ! ಅರೆ ಬಂದವು ಕೊನೆಗೂ ಅಂದು ಕೊಂಡೆ. ಸಿಟೌಟ್ ಸರಳಿನಲ್ಲಿ ಎರಡಲ್ಲ ಮೂರು ಮೈನಾ ಹಕ್ಕಿಗಳು... ಒಂದೇ ಸಮ ಕಿರುಚಾಟ... ಸೀತಾಫಲ ಸಸಿ ಕಡಿದವರನ್ನು ವಿಚಾರಿಸುವಂತಿತ್ತು. ಎರಡು ಬಾರಿ ಪುರ್ರನೆ ಹಾರಿ ಮತ್ತು ಬಂದು ಕೂತು ಕಿರುಚಾಟ... ಹೀಗೆ ಮುಂದುವರಿದಿತ್ತು ಸ್ವಲ್ಪ ಕಾಲ.. ನಮ್ಮ ಆಹಾರ ಕಸಿದರಲ್ಲಾ ಎನ್ನೋ ಹಾಗೆ...
ನನ್ನ ಮನಸ್ಸಂತೂ ತೀವ್ರ ಆದ್ರವಾಗಿತ್ತು. ಹಾಗೇ ಆ ದಿನವೂ ಕಳೆದಿತ್ತು.
        ಮರುದಿನ ಬೆಳಗ್ಗೆ ಹಕ್ಕಿ ಪಡೆಯ ಪತ್ತೆಯೇ ಇಲ್ಲ. ಯಾಕೋ ಎರಡು ಅಳಿಲು ಬಂದು ನೋಡಿ ಹೋದವು.
ಈ ಘಟನೆ ಬಳಿಕವೂ ಬೆಳಗ್ಗೆ ಸಿಟೌಟಿನಲ್ಲಿ ಕೂರುವ ಅಭ್ಯಾಸವಿದೆ. ಆದರೆ ಬೆಳಗಿನ ಕ್ಷೇಮ ಸಮಾಚಾರದ ಅತಿಥಿಗಳ ಪತ್ತೆ ಇಲ್ಲ... ಮತ್ತೆ ನಾಲ್ಕಾರು ದಿನ ಬಿಟ್ಟು ಯಾವುದೋ ಹಕ್ಕಿಗಳು ಬಂದರೂ ಅವುಗಳ ಕೂಗು ಸೀತಾಫಲ ಸಸಿ ಬಗ್ಗೆ ಕೇಳಿದಂತೆಯೇ ಭಾಸವಾಗುತ್ತಿದೆ. ಅವುಗಳ ಪ್ರಶ್ನೆಗೆ ನನ್ನಲಿ ಉತ್ತರವಿಲ್ಲ. ಪರಿಸರದ ಜೀವಿಗಳ ಆಹಾರ ಕಸಿದುಕೊಂಡ ಪಾಪಪ್ರಜ್ಞೆ ಕಾಡಲು ಶುರುವಾಗಿದೆ!!