ಮರೆಯಾದ ಗೋಲಿಸೋಡ!
ಪೆಪ್ಸಿ, ಕೋಕಾಕೋಲ, ಮಿರಿಂಡ ಎಲ್ಲ ಆಷ್ಟಾಗಿಬಾಧಿಸದಿದ್ದ ಕಾಲದಲ್ಲಿ
ಆದಾಗ್ಯೂ, ಗೋಲಿಸೋಡ ಉದ್ದಿಮೆ ಸಂಪೂರ್ಣ ನೆಲಕ್ಕಚ್ಚಿತು ಎಂದು ಹೇಳುವ ಮೊದಲೇ ಅಲ್ಲೊಂದು ಇಲ್ಲೊಂದು ತಯಾರಿಕಾ ಕೇಂದ್ರಗಳು ಇನ್ನೂ ಉಳಕೊಂಡಿವೆ. ಒಂದು ಗ್ಯಾಸ್ ಸಿಲಿಂಡರ್, ಹಿಡಿಕೆಯಿರುವ ಒಂದು ಸಣ್ಣ ಮೆಷಿನ್ ಇದಷ್ಟೇ ಗೋಲಿಸೋಡ ತಯಾರಿಕೆಯವರ ಅಸ್ತಿ. ಗೋಲಿಸೋಡಕ್ಕೆಂದೇ ತಯಾರಾದ ಗೋಲಿಯಿರುವ ದಪ್ಪ ಬಾಟಲಿಗೆ ನೀರು ತುಂಬಿಸಿ ಮೂರು ಸುತ್ತು ತಿರುಗಿಸಿದರೆ ಗೋಲಿಸೋಡಾ ರೆಡಿಯಾಗಿರುತ್ತದೆ.
ಅಂಥದ್ದೊಂದು ಕೇಂದ್ರ ಮಲ್ಪೆ-ಕೋಡಿಬೆಂಗ್ರೆ ದಾರಿಯ ತೊಟ್ಟಂ ಬಳಿ ಈಗಲೂ ಇದೆ. ಸೈಕಲಲ್ಲಿ ಸೋಡಾ ಬಾಟ್ಲಿ ಹೇರಿ ಹೋಗುತ್ತಿದ್ದವರೊಬ್ಬರನ್ನು ಹಿಡಿದು ನಿಲ್ಲಿಸಿ ಮಾತನಾಡಿದಾಗ, ಗೋಲಿಸೋಡ ತಯಾರಿದಾರರ ಕಥೆ, ಆದಾಯ, ಮಾರುಕಟ್ಟೆ ಇಲ್ಲದಿರುವುದನ್ನೆಲ್ಲಾ ಆವರು ಹೇಳುತ್ತಲೇ ಹೋದರು.
ಅವರ ಹೆಸರು ವಾಸು. ಸೋಡ ವಾಸು ಎಂದೇ ಈ ಭಾಗದಲ್ಲಿ ಪ್ರಸಿದ್ಧಿ. ಮೊದಲಿನಿಂದಲೂ ಇದೇ ಉದ್ದಿಮೆ. ಒಬ್ಬರೇ ತಯಾರು ಮಾಡುತ್ತಾರೆ. ತಯಾರಿಸಿದ ಸೋಡ ಸಮೀಪದ ವೈನ್ಶಾಪ್ಗೆ ಮೀಸಲು. ಅದರಿಂದಲೇ ಅವರ ಆದಾಯ.
ಹಾಗಾದರೆ ಕಂಪೆನಿ ಸೋಡ ಅಲ್ಲಿಗೆ ಸರಬರಾಜು ಆಗುವುದಿಲ್ಲವೇ ಎಂಬ ಪ್ರಶ್ನೆಗೆ, `ಪಾಪದಕ್ಲೆಗ್ ಕಮ್ಮಿದಾವೋಡತ್ತೇ!' (ಬಡವರಿಗೆ ಕಡಿಮೆ ಕಾಸಿನದ್ದೇ ಆಗಬೇಕಲ್ಲ!) ಎಂದು ವಾಸು ನಗುತ್ತಲೇ ಉತ್ತರಿಸಿದರು.
ಅಂದಹಾಗೆ ವಾಸು ದಿನಕ್ಕೆ 75ರಿಂದ100 ಬಾಟಲಿ ಗೋಲಿಸೋಡ ತಯಾರಿಸುತ್ತಾರೆ. ಅವರು ವೈನ್ಶಾಪ್ಗೆ ಸೋಡ ಮಾರುವುದು 75ಪೈಸೆಗೆ. ವೈನ್ಶಾಪಲ್ಲಿ ಗೋಲಿಸೋಡ ಉಚಿತವಾಗಿ ಕೊಡುತ್ತಾರೆ. ಅದು ಹೊರತು ವಾಸುವಿಗೆ ಬೇರೆ ಮಾರುಕಟ್ಟೆ ಇಲ್ಲ. ಅವರ ನಾಲ್ಕು ಮಂದಿಯ ಕುಟುಂಬಕ್ಕೆ ಇದೇ ಪ್ರಮುಖ ಆದಾಯ. ಇನ್ನು ಮನೆಯಲ್ಲಿ ಹೆಣ್ಣು ಮಕ್ಕಳು ಬೀಡಿ ಕಟ್ಟಿದ್ದರಲ್ಲೇ ನಾಕು ಕಾಸು ಸಂಪಾದನೆ.
ಅಂಗಡಿಗಳೆಲ್ಲೆಲ್ಲಾ ಅದರದ್ದೇ ಆದ ಸ್ಥಾನ ಪಡೆದಿದ್ದ, ಬಾಯಾರಿಕೆ ತಣಿಸುತ್ತಿದ್ದ ಗೋಲಿಸೋಡಾ ಈಗ ನೇಪಥ್ಯಕ್ಕೆ ಸರಿದಿದೆ. ಅದನ್ನೇ ನಂಬಿ ಬದುಕುತ್ತಿದ್ದ, ಸೋಡಾ ಮೆಷೀನ್ ತಿರುಗಿಸುತ್ತಿದ್ದ ಕೈಗಳೆಲ್ಲ, ಉದ್ಯಮ ನೆಲಕ್ಕಚ್ಚಿದ ಕೂಡಲೇ ಬೇರೆ ಬೇರೆ ಕೆಲಸಗಳಿಗೆ ತೊಡಗಿಕೊಂಡಿವೆ. ಆಧುನಿಕತೆಯ ಭರದಲ್ಲೋ ಅಥವಾ ತಂಪು ಪಾನೀಯ ತಯಾರಿಕಾ ಕಂಪೆನಿಗಳ ಸಾಲು ಸಾಲು ದಾಳಿಗೆ ಗೋಲಿಸೋಡ ಉದ್ಯಮ ನಶಿಸಿ ಹೋಗಿದೆ. ಹಾಗಾಗಿ ಗೋಲಿಸೋಡದ ಬಗ್ಗೆ ಚಿತ್ರದಲ್ಲೋ ಅಥವಾ ಹಳಬರ ಬಾಯಲ್ಲೋ ಕೇಳಬೇಕಾದ ಪರಿಸ್ಥಿತಿ ಹಾಗೆ..... ನಿಧಾನಕ್ಕೆ ಬರುತ್ತಿದೆ !