Pages

ಶುಕ್ರವಾರ, ಜೂನ್ 1, 2012


ಇಂತಿ ನಿನ್ನ...

ಪ್ರೀತಿಯ ಕಂದು ಕಣ್ಣಿನ ಹುಡುಗ..

ಎಲ್ಲಿ ನನ್ನ ಪತ್ರವನ್ನು ನೀನು ಹರಿದು ಹಾಕುತ್ತೀಯೋ ಎಂಬ ಹೆದರಿಕೆ. ಆದರೂ ಬರೆಯಲು ಕುಳಿತಿದ್ದೇನೆ. ಹೇಗೆ ಬರೆಯಬೇಕೆಂದು ಗೊತ್ತಾಗುತ್ತಿಲ್ಲ. ನನ್ನ ಹೆಸರು ಕೇಳಿದ ಕೂಡಲೇ ನಿನ್ನ ಮುಖ ಬದಲಾಗುತ್ತದೆ. ಸಿಟ್ಟು, ದುಃಖ, ನಿನ್ನ ಹಣೆಯ ನೆರಿಗೆಗಳಲ್ಲಿ ಮೂಡುತ್ತದೆ ಎಂದು ಸಂಶಯವಿದ್ದರೂ,  ಆದರೆ ನಿನ್ನ ಮನಸ್ಸು ಹಾಗಿಲ್ಲ. ಅದು ನನಗೆ ಎಂದೋ ಅರ್ಥವಾಗಿದೆ. ಬಾನಾಡಿಗಳಂತೆ, ಪ್ರಶಾಂತ ಕೊಳದ ತಿಳಿನೀರಿನಂತೆ, ಸ್ವಚ್ಛಂದ ಮನಸ್ಸು ನಿನ್ನದು. ಅದಕ್ಕಾಗಿಯೇ ನಿನ್ನ ಮರೆಯಲಾರದ ಅನಿವಾರ್ಯತೆಯಲ್ಲಿ ನಾನಿದ್ದೇನೆ. ನೀನು ಹೇಗಿದ್ದಿ, ಚೆನ್ನಾಗಿದ್ದೀಯಾ ಒಂದೂ ನಾನು ಕೇಳುವುದಿಲ್ಲ..
        ಸತ್ಯ ಹೇಳುತ್ತೇನೆ. ನಿನ್ನ ನೆನಪು ಮಾಸದೆ ಹಾಗೇ ಉಳಿದುಕೊಂಡಿದೆ. ಹೌದು ನಾನು ನಿನ್ನ ಪ್ರೀತಿಗೆ ಮೋಸ ಮಾಡಿದವಳು. ಪ್ರೀತಿಯನ್ನು ಕತ್ತು ಹಿಚುಕಿ ಕೊಲ್ಲಲು ಪ್ರಯತ್ನಿಸಿದವಳು. ಆ ಪಾಪದ ಫಲವನ್ನು ಉಣ್ಣಲೇಬೇಕಲ್ಲ. ಈಗ ನೋಡು ಅನುಭವಿಸುತ್ತಿದ್ದೇನೆ. ಬಹುಶಃ ನಿನಗೆ ತಮಾಷೆಯಾಗಿ ಕಾಣುತ್ತಿರಬೇಕು. ಇವಳಿಗೆಲ್ಲೋ ಹುಚ್ಚು ಹಿಡಿದಿದೆ ಅಂದುಕೊಂಡಿರಬೇಕು ಅಲ್ಲವೇ.. ಖಂಡಿತ ನಿನ್ನ ಹುಚ್ಚು ಹಿಡಿದಿದೆ. ನೀನು ದಿನವೂ ಹರಿಸುತ್ತಿದ್ದ ಪ್ರೇಮ ಸುಧೆಯಲ್ಲಿ ಮಿಂದು ಬರುತ್ತಿದ್ದ ನಾನು, ಸಂತೈಸುವವರಿಲ್ಲದೇ, ಕಣ್ಣೀರು ಒರೆಸುವುವರಿಲ್ಲದೇ, ನಿಜಕ್ಕೂ ಹುಚ್ಚಿಯಾಗಿದ್ದೇನೆ.
         ಅಂದು ನಾನು ನಿನ್ನನ್ನು ಬಿಟ್ಟು ಹೋಗಿದ್ದೆ.. ನೆನಪಿದೆಯಾ..? ನನಗೆ ನೀನು ಬೇಡ. ಬೇಡ ಅಂದರೆ ಬೇಡ.. ನಿನ್ನ ಕುರಿತ ಕಠೋರ ಸತ್ಯ ತಿಳಿದು ನಿನ್ನೊಂದಿಗಿನ ಸಂಬಂಧ ಕಡಿದುಕೊಂಡೆ. ಮುಖ ತೋರಿಸುತ್ತಿರಲಿಲ್ಲ. ಫೋನು ಮಾಡಿದರೆ ತೆಗೆಯುತ್ತಿರಲಿಲ್ಲ. ಮೆಸೇಜ್ ಮಾಡುತ್ತಿರಲಿಲ್ಲ. ಕಾರಣ ನಿನ್ನಲ್ಲಿ ನನ್ನ ಬಗ್ಗೆ ಒಂದು ತಾತ್ಸಾರ ಭಾವನೆ ಹುಟ್ಟಲಿ. ಆವಾಗ ನೀನೇ ದೂರವಾಗುತ್ತೀಯ ಎಂಬ ಆಲೋಚನೆ. ಆದರೆ ನೀನು ಏನು ಎಂದು ನನಗೆ ತಿಳಿದದ್ದು ಆವಾಗಲೇ. ನಾನು ನಿನ್ನಿಂದ ದೂರಾಗಲು ಶತಪ್ರಯತ್ನ ಮಾಡಿದರೂ, ನೀನೆಂದೂ ದೂರಾಗಲಿಲ್ಲ. ಅಮ್ಮನಿಂದ ದೂರಾಗುವುದುಂಟೇ ಎಂದು ಹೇಳುತ್ತಿದ್ದೆ. ಅಬ್ಬಾ ಎಂಥಾ ತಾಳ್ಮೆ ನಿನ್ನದು! ಕಡುಕೋಪಿಯಾದರೂ ನನ್ನಲ್ಲಿ ಎಂದಿಗೂ ಕೋಪಿಸಿಕೊಳ್ಳಲಿಲ್ಲ, ಬೇಸರದ ಮಾತನಾಡಲಿಲ್ಲ, ಹೋಗಾಚೆ ಎಂದು ದೂರ ತಳ್ಳಲಿಲ್ಲ. ಪ್ರೇಮ ಹರಿಸುವುದು ನಿಲ್ಲಿಸಲೇ ಇಲ್ಲ. ನನ್ನಲ್ಲಿ ಅದೇನು ಕಂಡಿದ್ದೀಯೋ ಯಾರಿಗೆ ಗೊತ್ತು..? ಅಂದೆಲ್ಲ, ನಮ್ಮ ಮಾತುಕತೆ ದೂರವಾದರೂ ನನಗೆ ನಿನ್ನ ಚಿತ್ರ ಮನಸ್ಸಿನಿಂದ ಮಾಸಿರಲಿಲ್ಲ. ನೀನು ಮತ್ತೊಮ್ಮೆ ಕಾಲೇಜಿಗೆ ಬಂದಾಗೆಲ್ಲ.. ಒಂದು ವರ್ಷಕ್ಕಾಗುವಷ್ಟು ನಿನ್ನ ನೆನಪು ರಿನಿವಲ್ ಆಗಿತ್ತು. ನನ್ನ ಸಂಬಂಧ ದೂರವಾದ ಮೇಲೆ ನೀನೆಲ್ಲೂ ಕಾಣುತ್ತಲೇ ಇರಲಿಲ್ಲ. ಪೇಟೆಯಲ್ಲಿ ನನ್ನ ನೀನು ಕಂಡರೂ ಮಾತನಾಡಿಸುತ್ತಿರಲಿಲ್ಲ.. ನೋಡಿಯೂ ನೋಡದಂತೆ ಇದ್ದೆ. ಜೀವನದಲ್ಲಿ ಎಂದೂ ಹೆಲ್ಮೆಟ್ ಹಾಕದೇ ಬೈಕ್ನಲ್ಲಿ ಹೋಗುತ್ತಿದ್ದ ನೀನು.. ನನಗೆ ಗುರುತೇ ಸಿಗಬಾರದೆಂದು ಹೆಲ್ಮೆಟ್ ಹಾಕತೊಡಗಿದೆ. ಆದರೂ ನನಗೆ ನಿನ್ನ ಗುರುತು ಚೆನ್ನಾಗಿಯೇ ಸಿಗುತ್ತಿತ್ತು. ಎದುರು ನೀನು ಕಂಡಾಗೆಲ್ಲ ಎದೆ ಢವ ಢವ ಹೊಡೆದುಕೊಳ್ಳುತ್ತಿತ್ತು ಮಾತನಾಡಿಸುತ್ತೀಯೇನೋ ಎಂಬಂತೆ. ಆದರೆ ಹಾಗೇ ನೀನು ಹೋದಾಗೆಲ್ಲ.. ಛೇ ಮಾತನಾಡಿಸದೇ ಹೋದನಲ್ಲಾ.. ನಾನಾದರೂ ಮಾತನಾಡಿಸುತ್ತಿದ್ದರೆ, ಮಾತನಾಡುತ್ತಿದ್ದನೋ ಎಂದು ಅನಿಸಿದ್ದಿದೆ.
           ಹೌದು ಹುಡುಗ... ಬೇಕೆಂದೇ ನಿನ್ನ ಸಂಬಂಧ ಕಡಿದುಕೊಂಡೆ. ನನಗೂ ಒಂದು ಜೀವನ ಎನ್ನವುದು ಇದೆಯಲ್ಲ. ಒಳ್ಳೆಯ ಮನೆಗೆ ಸೊಸೆಯಾಗಿ, ಒಳ್ಳೆಯ ಗಂಡನಿಗೆ ಹೆಂಡತಿಯಾಗಬೇಕು ಎಂದಿದೆಯಲ್ಲ..ನೀನೇ ಹೇಳು ನಾನು ಚೆನ್ನಾಗಿರಬಾರದಾ? ನನ್ನ ಸ್ಥಾನದಲ್ಲಿ ಒಂದು ಬಾರಿ ನಿಂತು ಆಲೋಚಿಸು.. ಹಾಂ ಅಷ್ಟು ಯೋಗ್ಯತೆ ನಿನ್ನಲ್ಲಿ ಇರಲಿಲ್ಲ ಎಂದಲ್ಲ. ನಿನ್ನ ಪಾಲಿನ ಕಠೋರ ಸತ್ಯಗಳನ್ನು ನಾನು ಅರಗಿಸಲಾರದೇ ಹೋದೆ. ಅಷ್ಟೊಂದು ಧೈರ್ಯವೇ ಇಲ್ಲ. ನೀನು ಕೇಳುತ್ತಿದ್ದೆಯಲ್ಲ. ನಾನು ಸತ್ತರೆ ಎಂಬಂತೆ. ಆವಾಗೆಲ್ಲ ಹೀಗೆಲ್ಲ ಮಾತಾಡಬೇಡ ಎಂದು ನಾನು ನಿನ್ನ ಬಾಯಿಗೆ ಕೈಹಿಡಿದದ್ದು ನೆನಪಿದೆಯೇ? ಪರಿಸ್ಥಿತಿ ನನ್ನನ್ನು ಹಾಗೆ ಮಾಡಿತು. ನಿನ್ನನ್ನು ಬೇಕು ಬೇಕೆಂದೇ ತಿರಸ್ಕರಿಸಿದೆ. ನೀನು ಎಂದಿಗೂ ಬರಬೇಡ ಎಂದು ಹೇಳಿದೆ. ನನ್ನ ವಿಚಾರ ಮರೆತುಬಿಡು ಎಂದು ಹೇಳಿದೆ. ನೀನು ನನ್ನೊಂದಿಗೆ ಎಷ್ಟು ದಿನ ಬದುಕಬಲ್ಲೆ ಎಂಬ ಪ್ರಶ್ನೆಯೇ ನನಗೆ ದೊಡ್ಡದಾಯಿತು. ಕಟ್ಟಿಕೊಂಡ ನಂತರ ನೀನು ನನ್ನಿಂದ ದೂರವಾದರೆ ಎನ್ನುವ ಅಭದ್ರತೆ ಕಾಡತೊಡಗಿತು. ನೀನು ಹೋದರೆ ಮತ್ತೆ ನಾನೇನು ಮಾಡಲಿ ಎನ್ನುವ ಪ್ರಶ್ನೆ ಬೃಹದಾಕಾರವಾಯಿತು, ನಿನ್ನ ಕಷ್ಟ ನೋಡುವ ಛಾತಿ ನನಗಿಲ್ಲ. ಏನೇ ಆದರೂ, ಜೀವನ ಎದುರಿಸುವ ನಿನ್ನ ಮನಸ್ಸು ನನಗಿಲ್ಲದಾಯಿತು.. ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಕಿತ್ತು ಕಿತ್ತು ತಿನ್ನಲು ಶುರುಮಾಡಿತು. ನಿನ್ನನ್ನು ಕಟ್ಟಿಕೊಂಡ ಬಳಿಕ ಕಳೆದುಕೊಳ್ಳುವುದರ ಬದಲು ಮೊದಲೇ ಕಳೆದುಕೊಂಡರೆ ಚೆನ್ನ ಎಂದು ಮನಸ್ಸಿಗನ್ನಿಸಿತು. ನೀನು ಚೆನ್ನಾಗಿರುವಷ್ಟು ದಿನ ದೂರದಿಂದಲೇ ನೋಡಬಹುದಲ್ಲ.. ಅದಕ್ಕಾಗಿಯೇ ತಿರಸ್ಕರಿಸಿದೆ. ದೂರ ಹೋಗು ಎಂದು ಸಾರಿ ಸಾರಿ.. ಗೋಗರೆದೆ.. ಆದರೆ....
            ನೀನು ದೂರವಾದರೂ, ಮನಸ್ಸಿನಿಂದ ದೂರವಾಗಲೇ ಇಲ್ಲ. ಹಾಗೇ ಇದ್ದೀಯಾ. ದಿನಾ ಬರುತ್ತೀಯಾ, ನಿನ್ನ ಹೆಸರು ಹೇಳಿ ನನ್ನ ಕಷ್ಟಗಳನ್ನೆಲ್ಲ ಹೇಳುತ್ತೇನೆ. ಹೀಗಾಯಿತು ಕಣೋ ಎಂದು ಬಿಕ್ಕಳಿಸುತ್ತೇನೆ. ನೀನು ಪ್ರೊಪೋಸ್ ಮಾಡಿದ್ದಾಗ ನಾನು ಒಪ್ಪಿರಲಿಲ್ಲ. ಹುಚ್ಚು ಹುಡುಗ ಏನು ಎತ್ತ ನೋಡದೆ ಮಾಡಿದ್ದಾನೆ ಅಂದುಕೊಂಡಿದ್ದೆ. ಆದರೆ ನಿನ್ನ ಮಾತುಗಳು ಪ್ರೀತಿಯ ದೃಢತೆಯನ್ನು ದಿನಕಳೆದಂತೆ ಒತ್ತಿ ಹೇಳುತ್ತಿದ್ದವು. ನಿನ್ನ ಮಾತು, ಕೃತಿ, ಹೊಸಜೀವನದ ತುಡಿತ, ಕನಸುಗಳಿಗೆ ಮರುಳಾಗಿ ನಿಧಾನಕ್ಕೆ ನಿನಗೆ ಮನಸ್ಸು ಕೊಟ್ಟೆ. ಅದ್ಯಾಕೋ ಒಮ್ಮೆ ನಿನ್ನ ಸಹವಾಸವೇ ಬೇಡ ಅನ್ನಿಸಿತ್ತು.
             ಅದು ಎಂದಿಗೂ ನೆರವೇರಲಿಲ್ಲ. ನೀನು ನನ್ನ ಧ್ಯಾನದಲ್ಲಿರುತ್ತಿದ್ದಿಯೋ ಗೊತ್ತಿಲ್ಲ. ಆದರೆ ಪ್ರೇಮಿಗಳು ಅಡ್ಡಾಡುತ್ತಿರುವಾಗ, ಬಸ್ಸಿನಲ್ಲಿ ಆ ಪ್ರೇಮಿಯ ಭುಜಕ್ಕೆ ಪ್ರಿಯತಮೆ ತಲೆಕೊಟ್ಟು ಮಲಗಿದ್ದನ್ನು ನೋಡಿದಾಗ ನಿನ್ನ ನೆನಪು ಕಾಡುತ್ತಿತ್ತು. ಎಲ್ಲವನ್ನೂ ಹೇಳಿಕೊಳ್ಳಬೇಕು, ನೀನು ನನ್ನ ಸಂತೈಸಬೇಕು, ಜೀವ ಹೋಗುವಷ್ಟು ಪ್ರೀತಿಸಬೇಕು ಎಂದಿದ್ದೆ. ಆದರೆ ಅಷ್ಟೆಲ್ಲ ಗಾಢವಾಗಿ ಪ್ರೀತಿಸಿದರೆ ಮುಂದೆ.. ಹೇಗಾಗಬಹುದು ಎಂಬ ಪ್ರಶ್ನೆಯೂ ಮೂಡತೊಡಗಿತ್ತು. ಆದರೆ ನೀನು ನನ್ನ ಪ್ರೀತಿ ಪಡೆಯುವ ಉತ್ಸಾಹದಲ್ಲಿ  ಏನನ್ನೂ ಮುಚ್ಚಿಡಲಿಲ್ಲ. ನಿನ್ನ ಪರಿಸ್ಥಿತಿಯನ್ನು ನೆನೆದು ಅಂದು ಮನಸೋ ಅತ್ತಿದ್ದೆ. ಇಂಥವನನ್ನು ಪ್ರೀತಿಸುವುದು ಹೇಗೆ ಅಂದುಕೊಂಡಿದ್ದೆ. ಆದರೆ ನಿನ್ನ ಮಾತುಗಳು ಅವೆಲ್ಲವನ್ನೂ ಮರೆಸುತ್ತಿತ್ತು. ಬೇರೇನೂ ನೆನಪಿರುತ್ತಿರಲಿಲ್ಲ. ನಾನು ಹೆಣ್ಣು. ನಿನ್ನಷ್ಟು ಬಿಡುಬೀಸಾಗಿ ಹೇಳಲು, ಪ್ರೀತಿಸಲು ಸಾಧ್ಯವಿಲ್ಲ ಎಂಬುದು ನಿನಗೂ ಅರ್ಥವಾಗಿಲ್ಲ ಕಾಣುತ್ತದೆ. ನೀನು ಪ್ರೀತಿಸುತ್ತಲೇ ಹೋದೆ.. ನಿನ್ನ ಬಗೆಗಿನ ನನ್ನ ಸಂಶಯಗಳು ನಿಧಾನಕ್ಕೆ ನನ್ನಲ್ಲಿ ಬಲವಾಗತೊಡಗಿದವು. ಹಿಂದೆ ಸರಿಯಲು ಆರಂಭಿಸಿದೆ. ಒಂದು ಬದಿಯಲ್ಲಿ ಪ್ರೀತಿ ಮತ್ತೊಂದೆಡೆ ಸಂಬಂಧ ಕಡಿದುಕೊಳ್ಳುವ ಆಲೋಚನೆ. ಅದರ ಮಧ್ಯೆ, ಬಸ್ಗೆ ಕಾದು ಕಾದು ಸೋತಾಗ ಬೈಕ್ನಲ್ಲಿ ಬರುವ ನಿನ್ನ ನೆನಪು, ಒಬ್ಬಂಟಿಯಾಗಿ ನಾನು ದಾರಿಯಲ್ಲಿ ನಡೆಯುತ್ತಿದ್ದರೆ ಹತ್ತಿರ ಬಂದು ಬೈಕ್ ಬ್ರೇಕ್ ಹಾಕಿ ಹೆದರಿಸುತ್ತಿದ್ದ ನೀನು, ಬೈಕ್ನಲ್ಲಿ ನಾನು ಹಿಂದೆ ಕುಳಿತರೆ ನೀನು ವೇಗವಾಗಿ ಹೋಗುತ್ತಿದ್ದೆ. ತುಂಟತನದಲ್ಲಿ ಬೇಕಂತಲೇ ಬ್ರೇಕು ಹಾಕುತ್ತಿದ್ದೆ. ಆವಾಗೆಲ್ಲ.. ನಿನ್ನ ಬೆನ್ನಿಗೆ ಗುದ್ದು ನಿಶ್ಚಿತವಾಗಿ ಬೀಳುತ್ತಿತ್ತು ಅಲ್ಲವೇ..? ಅದೇ ಅದೇ.. ನಿನ್ನ ಪ್ರೀತಿ ಮಾತುಗಳು, ಒಂಟಿಯಾಗಿ ಕುಳಿತಾಗೆಲ್ಲ ಕಾಡುತ್ತದೆ. ಒಂದು ಫೊನು ಮಾಡೋಣ ಎಂದು ಮೊಬೈಲ್ ಎತ್ತಿಕೊಳ್ಳುತ್ತೇನೆ. ಆದರೆ ಆ ಧೈರ್ಯವೇ ಇರುವುದಿಲ್ಲ. ಸ್ವರ ಗದ್ಗದಿತವಾದರೆ, ನಾನು ಅಳುವುದು ನಿನಗೆ ಗೊತ್ತಾದರೆ, ನೀನು ಖಂಡಿತ ಸಂತೈಸುತ್ತಿ. ಅದೇ ಅಲೆಯಲ್ಲಿ ನಾನು ಮತ್ತೆ ನಿನಗೆ ಶರಣಾದರೆ ಬೇಡ ಬೇಡ.. ಸಾಧ್ಯವೇ ಇಲ್ಲ ಎಂದು ಮತ್ತೆ ಸುಮ್ಮನಾಗುತ್ತೇನೆ.
          ಮೊದಲ ನಮ್ಮ ಭೇಟಿಯಲ್ಲಿ ನೀನು ಕೊಟ್ಟ ಪುಸ್ತಕವಿದೆಯಲ್ಲ. ಅದನ್ನು ನಾನು ಓದೇ ಇಲ್ಲ. ಎಲ್ಲ ಪುಸ್ತಕಗಳ ಸಾಲಿಗೆ ಸೇರಿಸದೇ ಅದನ್ನು ಬೇರೆಯದೇ ಆಗಿ ಎತ್ತಿಟ್ಟಿದ್ದೇನೆ. ನಿನ್ನ ನೆನಪಾದಾಗಲೆಲ್ಲ.. ರೂಮಿಗೆ ಹೋಗಿ ಪುಸ್ತಕ ತೆಗೆದುಕೊಂಡು ಎದೆಗವಚಿಕೊಳ್ಳುತ್ತೇನೆ. ಎರಡು ಹನಿ ಕಣ್ಣೀರು ಹಾಕುತ್ತೇನೆ. ಅಮ್ಮ ಬಂದರೆ ಕೇಳುತ್ತಾಳೆ ಯಾವ ಕಾದಂಬರಿ ಅಷ್ಟೂ ಚೆನ್ನಾಗಿದೆಯಾ ಎಂಬಂತೆ. ನಾನು ಹೌದು ಹೌದು ಎನ್ನುತ್ತಾ ಮತ್ತಷ್ಟು ಬಿಕ್ಕಳಿಸುತ್ತೇನೆ, ನನ್ನೆಲ್ಲ ಕಷ್ಟಗಳನ್ನು ಸಾವಧಾನವಾಗಿ ಕೇಳುವ ಮನಸ್ಸಿನೊಂದಿಗೆ ನಿನ್ನ ತೋಳಲ್ಲಿ ಬಂಧಿಯಾದಂತೆ ಕನವರಿಸುತ್ತೇನೆ. ಕೂಡಲೇ ಅಂತರಾತ್ಮ ಎಚ್ಚರಿಸುತ್ತದೆ, ಮತ್ತೆ ಅವನ ನೆನಪಲ್ಲಿ ಕರಗಿ ಹೋಗುತ್ತಿದ್ದೀಯಾ ಎಂಬಂತೆ.. ಧಡಕ್ಕನೆದ್ದು ಪುಸ್ತಕವನ್ನು ಬೀಸಿ ಒಗೆಯೋಣ ಎಂದೆನಿಸುತ್ತದೆ. ಆದರೆ ಅದ್ಯಾವುದಕ್ಕೂ ಮನಸ್ಸೇ ಬರುವುದಿಲ್ಲ.. ಮತ್ತೆ ಮೌನಿಯಾಗುತ್ತೇನೆ..!
            ನಾನು ಬರೆದಿದ್ದನ್ನೆಲ್ಲ ನಿಜಕ್ಕೂ ನೀನು ಓದುತ್ತಿದ್ದೀಯಾ ಗೊತ್ತಿಲ್ಲ.. ಆದರೂ ನಿನ್ನ ನೆನಪು ಮಾಸದಾಗಿದೆ ಎನ್ನುವುದನ್ನು ಖಂಡಿತ ಹೇಳಬಲ್ಲೆ. ಕೆಲ ಬಾರಿ ನನಗೆ ಪ್ರಶ್ನೆಗಳನ್ನು ಕೇಳಬೇಕೆನಿಸಿದ್ದಿದೆ.  ನೀನು ನನ್ನ ಯಾಕೆ ಪ್ರೀತಿಸಿದೆ..? ನಾನು ಬೇಡ ಬೇಡ ಎಂದರೂ ಮನಸ್ಸಿನಿಂದ ನೀನು ಹೋಗುತ್ತಿಲ್ಲ ಯಾಕೆ.. ಯಾಕೆ ಅಷ್ಟೊಂದು ಪ್ರೀತಿ ನನ್ನಲ್ಲಿ..? ನಿನಗೆ ಬೇರೆ ಯಾರೂ ಸಿಗಲಿಲ್ಲವೇ. ಆದರೆ ಉತ್ತರ ಹೇಳಲು ನೀನೇ ಇಲ್ಲವಲ್ಲ. ನನ್ನಷ್ಟಕ್ಕೇ ಕೇಳಿ ಸುಮ್ಮನಾಗುತ್ತೇನೆ. ನೀನು ಹೇಳುತ್ತಿದ್ದ ಒಂದು ಗ್ಲಾಸು ಜ್ಯೂಸು 2 ಸ್ಟ್ರಾ ಜೋಕು.. ಕಾಫಿ ಹಂಚಿ ಕುಡಿದ ಅನುಭವ ಮರೆಯುವುದು ಹೇಗೆ. ನಿನಗಿಷ್ಟವಾದ ಕಾಫಿ ಕುಡಿಯುತ್ತಿರಬೇಕಾದರೆ ನೆನಪಾಗುತ್ತದೆ. ಒಂದು ದೊಡ್ಡ ಕಪ್ ಕಾಫಿ ತಂದು ಭರೋ ಎಂದು ಫ್ಯಾನು ಹಾಕುತ್ತೇನೆ. ಕಾಫಿ ಹಬೆ ನಿಧಾನಕ್ಕೆ ಆವಿಯಾದಂತೆ ನೀನೇ ಕುಡಿಯುತ್ತಿದ್ದೀಯಾ ಅಂದುಕೊಳ್ಳುತ್ತೇನೆ. ಅದೇ ಖುಷಿಯಲ್ಲಿ ಮತ್ತೆ ಉಳಿದ ಕಾಫಿ ನಾನು ಕುಡಿಯುತ್ತೇನೆ. ಕೆಲವೊಮ್ಮೆ ಛೇ ಎಂತಾ ಹುಚ್ಚುಗಳಪ್ಪಎಂದು ತಲೆ ತಟ್ಟಿಕೊಳ್ಳುತ್ತೇನೆ. ಹುಂ ಏನೇ ಹೇಳಿದರೂ ಮರೆಯದ ನೆನಪುಗಳು.
          ನೀನು ಕೊಟ್ಟ ಪ್ರೀತಿ ಎಲ್ಲ ಸದಾ ಹಸಿರಾಗಿದೆ. ನನ್ನ ಯಾರು ಮದುವೆಯಾಗುತ್ತಾರೋ ಗೊತ್ತಿಲ್ಲ. ಆದರೆ ನಿನ್ನ ಮನಸ್ಸಿನಂತವರು ಇನ್ನೂ ಜಗತ್ತಿನಲ್ಲಿದ್ದಾರಾ ಎಂದು ಕೇಳಿಕೊಳ್ಳುತ್ತೇನೆ. ನಾನು ಗ್ರಹಿಸಿದ ಸುಂದರ ಜೀವನದ ಸ್ವಪ್ನಗಳೆಲ್ಲ ಈಡೇರುತ್ತಾ..? ಅದಕ್ಕೆ ಮದುವೆಯಾದ ನಂತರವೂ ಒಂದು ಹಿಡಿ ಪ್ರೀತಿ ಸಿಕ್ಕಿದರೆ ಸಾಕು ಅಲ್ಲವೇ..? ನೀನಾದರೆ ಹಿಡಿಯೇನು ಬೆಟ್ಟ ತಂದು ಮುಂದಿಡುತ್ತಿದ್ದೆ. ಆದರೆ ನಾನೇ ಒಪ್ಪಿಕೊಳ್ಳಲಿಲ್ಲ. ನನ್ನ ಬದುಕಿನಲ್ಲಿ ಏನು ಬರೆದಿದೆಯೋ ಅದೇ ಆಗುವುದು ಎಂದು ಅಂದುಕೊಂಡಿದ್ದೇನೆ. ನಿನ್ನ ಕಾಣುವುದಕ್ಕೂ, ಮಾತನಾಡದುವುದಕ್ಕೂ ಹಿಂಜರಿಕೆ ಇದ್ದರೂ, ಹಗಲು ರಾತ್ರಿ ನೀನು ಕಣ್ಮುಂದೆ ಬರುವುದು ಬಹುದೊಡ್ಡ ಸಮಾಧಾನ, ಪಶ್ಚಾತ್ತಾಪಗಳಿಗೆ ಕಾರಣವಾಗಿದೆ. ನಿನ್ನ ಬಿಡಬೇಕೆಂದು ಸಾರಿ ಸಾರಿ,  ಸಾವಿರಬಾರಿ ಅಂದುಕೊಂಡರೂ ಇಷ್ಟರವರೆಗೆ ಆ ಗ್ರಹಿಕೆಗಳೆಲ್ಲ ಸುಳ್ಳಾಗಿವೆ.
ನಿನ್ನಲ್ಲಿ ಒಂದೇ ಒಂದು ಕೇಳುತ್ತೇನೆ. ನಾನು ನಿನಗೆ ಕೊಟ್ಟ ಮನಸ್ಸಿದೆಯಲ್ಲ.. ಅದನ್ನ ವಾಪಸ್ ಕೊಡುತ್ತೀಯಾ..? ಇದು ನಿನಗೆ ಸಾಧ್ಯವೇ..?

ಇಂತಿ ನಿನ್ನ,
ಶಾರಿ

ಭಾನುವಾರ, ಮೇ 13, 2012


ತಿಟ್ಹತ್ತಿ ತಿರುಗಿ...

ಮನಸೇ ನನ್ನ ಮನಸೇ ಏನಾಗಿದೆ ನಿನಗೆ..?
ಕಿವಿಯಲ್ಲಿ ಗುಯಿಂಗುಡುವ ಭಾವಗೀತೆ. ಬೈಕು ನಿಧಾನನಕ್ಕೆ ವೇಗ ಏರಿಸಿಕೊಳ್ಳುತ್ತಿತ್ತು. ಅದೊಂದು ತಿರುವು.. ಎದುರಿಂದ ಬಂದ ಕಾರು ಸೋಕಿದಂತೆ ಭರ್ರನೇ ಹಾದುಹೋದಾಗ ಆತ ವಾಸ್ತವಕ್ಕೆ ಬಿದ್ದಿದ್ದ. ಕಾರಣ ಅವಳ ಮಾಸದ ನೆನಪು. ಕನಸಿನಂತೆ ಬಂದು ಹೋದವಳ ಅಚ್ಚಳಿಯದ ನೆನಪಿನಲ್ಲಿದ್ದ.
ಬೆಂಗಳೂರಿಗೆ ಇನ್ನು ಕೇವಲ 220 ಕಿ.ಮೀ. ಅಷ್ಟು ಕ್ರಮಿಸಿದರೆ ಮತ್ತೆ ಅದೇ ಹಾಳು ಜೀವನ. ಬೈಕಿನಲ್ಲಿ ಹೋಗುವುದು ನಿನ್ನೆಯದನ್ನು ಮರೆಯಲೋ, ಮತ್ತೆ ನೆನಪು ಮಾಡಿಕೊಳ್ಳಲೋ, ಹೊಸ ಆಲೋಚನೆ ಹುಟ್ಟಿಸಿಕೊಳ್ಳಲೋ.. ಎಲ್ಲದಕ್ಕೂ ಆತನಿಗೆ ಇರುವ ಏಕೈಕ ನೆವ ಅದು. ಅಚಾನಕ್ ಆಗಿ ಈ ಬಾರಿ ಆಕೆಯ ನೆನಪೇ ಆತನನ್ನು ಕಾಡುತ್ತಿತ್ತು.! ಬೆಳಗಿನ ಜಾವದ ಮಳೆಗೆ ಚೆನ್ನಾಗಿ ತೋಯ್ದಿದ್ದ ರಸ್ತೆ.. ಇಕ್ಕೆಲಗಳಲ್ಲಿ ಚಾದರದಂತೆ ಹಾಸಿದ ಮೇಫ್ಲವರ್ ಹೂಗಳು ಕಾಫಿ ತೋಟ, ಅಲ್ಪಸ್ವಲ್ಪ ಮುಸುಕಿದ ಮಂಜು ಆಕೆಯ ನೆನಪಿಗೆ ಮತ್ತಷ್ಟು ಬಲ ತಂದಿತ್ತು..
ಅಮ್ಮನ ಮಡಿಲಲ್ಲಿ ಮಲಗಿದ್ದಾಗ ತಲೆ ಸವರುತ್ತ ಹೇಳುತ್ತಿದ್ದಳು. ಅವಳನ್ನು ಮರೆತುಬಿಡು. ಜೀವನ ಎಂದರೆ ಹಾಗೆ, ಬಯಸಿದ್ದೆಲ್ಲ ಸಿಗಲ್ಲ, ಯಾವುದನ್ನೂ ಹಚ್ಚಿಕೊಳ್ಳಬೇಡ. ಅದ್ಹೇಗಾಗುತ್ತಮ್ಮ.. ಇವನ ಪ್ರಶ್ನೆ. ಅಮ್ಮನ ಉತ್ತರವಿಲ್ಲ. ಗಾಢ ಮೌನ. ಮಗನನ್ನು ಸಮಾಧಾನ ಮಾಡಲಾಗದ ಸಂಕಷ್ಟದಲ್ಲಿ ಅಮ್ಮನಿದ್ದರೆ, ಬಿಟ್ಟೂ ಬಿಟ್ಟಿರಲಾರದ ಅವಳ ಕನವರಿಕೆಯಲ್ಲಿ ಇವನಿದ್ದ.
ಇಷ್ಟಕ್ಕೂ ಅವಳು ಯಾರು?
ಅಚಾನಕ್ ಆಗಿ ಕಂಡಳು.. ಫೇಸ್ ಬುಕ್ ಲ್ಲಿ ಮಾತನಾಡಿದಳು, ಎಸ್ಎಂಎಸ್, ಫೋನ್, ಚಾಟಿಂಗ್ ಜೀವನವಾಗಿ ಹೋಯಿತು. ಅವಳೊಂದಿಗೆ ಹಂಚಿಕೊಂಡದ್ದೆಷ್ಟೋ, ಬಿಟ್ಟದ್ದೆಷ್ಟೋ.. ಮಾತನಾಡಿದ ವಿಷಯಗಳೆಷ್ಟೋ.. ಇಬ್ಬರಿಗೇ ಗೊತ್ತು. ಇಷ್ಟಕ್ಕೆಲ್ಲ ಹುಡುಗ ತಲೆಕೆಡಿಸಿಕೊಂಡು ಅವಳ ಹಿಂದೆ ಬಿದ್ದಿದ್ದ! ಫೋನಿನಲ್ಲೇ ನೀನೇ ಜೀವ ಎನ್ನುತ್ತಿದ್ದ.. ಅತ್ಲಾಗಿಂದ ಆ ಹುಡುಗಿ ಹೂಂ ಗುಟ್ಟುತ್ತಿದ್ದಳು. ಕೆಲವೊಮ್ಮೆ ಇಬ್ಬರ ನಡುವೆ ಗಾಢ ಮೌನ. ಮತ್ತೋಮ್ಮೆ ಭರ್ಜರಿ ಜಗಳ. ಸಂಜೆ, ರಾತ್ರಿಯಾಗುತ್ತಲೇ, ಅದೆಲ್ಲವನ್ನೂ ಇಬ್ಬರೂ ಮರೆಯುತ್ತಿದ್ದರು. ರಾತ್ರಿ ಗಂಟೆ ಒಂದಾದರೂ ವಿಷಯಗಳು ಮುಗಿಯುತ್ತಿರಲಿಲ್ಲ. ಮರುದಿನದಿಂದ ಮತ್ತದೇ ಮಾತು-ಕತೆ.. ಅವಳು ಹೋದದ್ದು ಬಂದದ್ದು, ಹಾಕಿದ ಡ್ರೆಸ್, ಊಟದ ವಿಚಾರ, ಫೋನಿನಲ್ಲಿ ಮಾತನಾಡುತ್ತಿರುವಾಗ ಅಮ್ಮ ಬಂದ ವಿಷಯ ಎಲ್ಲವನ್ನೂ ಹೇಳುತ್ತಿದ್ದಳು. ಇವನೋ. ಬದುಕಿನ ಚಪ್ಪರ ಕಟ್ಟುವಲ್ಲಿ ತನ್ನ ಕನಸುಗಳನ್ನು ಬಿಚ್ಚಿಡುತ್ತಿದ್ದ. ಕೆಲವೊಮ್ಮೆ ಇಬ್ಬರೂ ಮಾತನಾಡಿಕೊಳ್ಳುತ್ತಿದ್ದರು, ನಾವೆಷ್ಟು ಮಾತನಾಡುತ್ತೇವೆ. ಇಷ್ಟೊಂದು ವಿಷಯಗಳಿವೆಯಾ ಎಂಬಂತೆ. ಅವಳಿಗೆ ಮೆಸೇಜು, ಫೋನು ಮಾಡದಿದ್ದರೆ ಇವನಿಗೆ ದಿನ ಹೋಗುತ್ತಿರಲಿಲ್ಲ.. ಇವನ ಕರೆ, ಮೆಸೇಜು ಬಾರದಿದ್ದರೆ ಅವಳಿಗೇನೋ ಚಡಪಡಿಕೆ. ಇಬ್ಬರ ನಡುವೆ ಅದೇನೋ ಬಂಧ. ಇಬ್ಬರ ಮಾತುಕತೆ ಅನುರಾಗವಾಯಿತು.. ಅವನ ಭಾವನೆ ಹಂಚಿಕೊಳ್ಳುವ ಮನದೆನ್ನೆ, ಸಾಂತ್ವನಕ್ಕೆ ಅಮ್ಮ, ಕಷ್ಟಕ್ಕೆ ಸಮಾಧಾನ, ಯಶಸ್ಸಿಗೆ ಊರುಗೋಲು, ಸಾಧನೆಗೆ ಪ್ರೇರಣೆ ಎಲ್ಲವೂ ಆದಳು. ಅದಾಗಿ, ಊರಿಗೆ ಹೋದಾಗ ಅವಳನ್ನೊಮ್ಮೆ ಕಾಣಬೇಕೆನ್ನುವ ಆಸೆಯೂ ಅವನಿಗಿತ್ತು. ಪರಿಣಾಮ ಇಬ್ಬರೂ ಆ ಪೇಟೆಯ ಇಕ್ಕೆಲಗಳಲ್ಲಿ ಕೈ ಕೈ ಹಿಡಿದು ಸಂಭ್ರಮಿಸಿದರು, ಆ ಹೊತ್ತಿಗೆ ಎಲ್ಲವನ್ನೂ, ಎಲ್ಲರನ್ನೂ ಮರೆತಿದ್ದರು. ಅಂದು ಗಂಟೆಗಳು ಬೇಗ ಓಡಿದ್ದಕ್ಕೆ ಮತ್ತೆ ಇಬ್ಬರಿಗೂ ವಿಷಾದ. ಫೋನು ಮಾತುಕತೆಯಾದರೂ ಇದೆಯಲ್ಲ ಎಂದು ಸಮಾಧಾನ ಪಟ್ಟುಕೊಂಡರು.
ನಂಗೆ ನೀನು ಇಷ್ಟವಿಲ್ಲ!
ದಿನ ಕಳೆಯುತ್ತಿದ್ದಂತೆ ಅಂಥಾದ್ದೊಂದು ವಿಷಯ, ಆಗ ಬಾರದ್ದು ನಡೆದೇ ಹೋಯಿತು. ಮನೆಯಲ್ಲಿ ಕೇಳಿದರೋ, ಹಿರೀಕರಿಗೆ ಗೊತ್ತಾಯಿತೋ ಒಂದೂ ಇವನಿಗೆ ಗೊತ್ತಾಗಲಿಲ್ಲ. ಹುಡುಗ ಹುಚ್ಚು ಪ್ರೀತಿಯಲ್ಲಿ ಮುಳುಗಿದ್ದರೆ, ಅವಳು ಮೆಲ್ಲನೆ ಹಿಂದೆ ಸರಿಯುವ ಯತ್ನ ಮಾಡುತ್ತಿದ್ದಳು. ಕಾರಣ ಹುಡುಗನ ಕಿರಿಕಿರಿ. ಮದ್ವೆಯಾಗೋದು ಯಾವಾಗ, ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳಿದ್ದೇನೆ. ನಾಡಿದ್ದು, ನಿಮ್ಮ ಮನೆಗೆ ಬಂದು ಹುಡುಗಿ ಕೇಳುವ ಶಾಸ್ತ್ರ. ರೆಡಿಯಾಗಿರು ಎನ್ನುವುದು ಮುಗಿಯುತ್ತಿರಲಿಲ್ಲ. ಬಹುಶಃ ಅವಳಿಗೆ ತಲೆ ಕೆಟ್ಟು ಹೋಗಿರಬೇಕು. ಮದುವೆಯಾಗುವ ಮೊದಲೇ ಹೀಗೆ ಹುಚ್ಚನಂತಿದ್ದರೆ ಇನ್ನೇನೋ ಎಂದು ಗ್ರಹಿಸಿದ್ದಿರಬೇಕು ಪರಿಣಾಮ ನಿತ್ಯ ಒಂದು ಅಂತರವನ್ನು ಕಾಯ್ದುಕೊಂಡಳು. ಮದುವೆ, ಪ್ರೀತಿ ಮಾತೆತ್ತಿದ್ದರೆ ಪ್ಲೇಟ್ ಚೇಂಜ್.
ನಾಲ್ಕು ದಿನ ಕಳೆಯುವಷ್ಟರಲ್ಲಿ ಹುಡುಗನಿಗೆ ಹುಡುಗಿ ಕೈತಪ್ಪುವ ಭೀತಿ ಹುಟ್ಟತೊಡಗಿತು. ಎಲ್ಲ ಹುಡುಗಿಯರಂತೆ ನಾನಲ್ಲ ಎನ್ನುವ ಅವಳ ಮಾತು ಇವನಿಗೆ ಹಾಸ್ಯಾಸ್ಪದವಾಗಿ ಕಾಣತೊಡಗಿತು. ಪರಿಣಾಮ ಸಣ್ಣದೊಂದು ತಾತ್ಸಾರ ಭಾವನೆ. ಮೆಸೇಜು ಕುಟ್ಟುವುದು, ಫೋನು ಕಡಿಮೆಯಾಯಿತು. ಅಲ್ಲಿಗೆ ಮದುವೆಯಾಗುವ, ಪ್ರೀತಿ ದಡ ಎತ್ತಿಸುವ ವಿಚಾರಗಳೆಲ್ಲ.. ಹಿಂದೆ ಹಿಂದೆ ಸರಿಯಲು ಆರಂಭಿಸಿದವು. ಇದು ಮಾತುಗಳಲ್ಲೇ ವ್ಯಕ್ತವಾಗತೊಡಗಿತು. ಹುಡುಗಿ ಬಾಯಿಬಿಟ್ಟು ಹೇಳೇ ಬಿಟ್ಟಳು. ಮರೆತುಬಿಡು ಎಂಬಂತೆ. ಆದರೂ ಇಬ್ಬರ ಸಾಮೀಪ್ಯ ಕಡಿಮೆಯಾಗಿರಲಿಲ್ಲ. ಹುಡುಗನಿಗೂ ಏನನಿಸಿತೋ ಕೆಲವೊಮ್ಮೆ ಅವಳ ಮೆಸೇಜ್ಗೆ ಉತ್ತರ ಕಳುಹಿಸುತ್ತಿರಲಿಲ್ಲ. ಹುಡುಗ ಹೀಗೆ ಮಾಡಿದರೆ ಹುಡುಗಿ ಬಿಡುತ್ತಾಳಾ.. ಅವಳೂ ದೂರವಾಗತೊಡಗಿದಳು. ಇವನು ಅಪ್ಪಿತಪ್ಪಿ ಮದ್ವೆ ಮಾತೆತ್ತಿದ್ದರೆ, ಮರೆಯುವ ನಿನಗೇಕೆ ನನ್ನ ಚಿಂತೆ ಎಂಬ ಮಾತುಗಳು ಇಬ್ಬರಲ್ಲೂ ಕೇಳುತ್ತಿದ್ದವು. ಅಲ್ಲಿಗೆ ಒಂದು ಪ್ರೀತಿಯೋ, ಫ್ಲರ್ಟಿಂಗ್ ಕೊನೆಗೊಳ್ಳುವ ಹಂತಕ್ಕೆ ಬಂದು ನಿಂತಿತ್ತು! ಒಂದು ದಿನವಂತೂ ಕರೆ ಮಾಡಿದ ಅವನಿಗೆ ಅವಳು ಎಚ್ಚರಿಕೆಯ ಮಾತುಗಳನ್ನಾಡಿ ನನಗೆ ಇಷ್ಟವಿಲ್ಲ ಎಂದೂ ಹೇಳಿ ಬಿಟ್ಟಳು. ಹಾಗೆ ಹೇಳಿದ್ದೇ ಹುಡುಗ ತಲೆ ಕೆಡಿಸಿ, ಭಾವನಾತ್ಮಕವಾಗಿ ನೂರು ಮೆಸೇಜು ಕುಟ್ಟಿದ, ಏನೂ ಪರಿಣಾಮವಾಗಲಿಲ್ಲ. ತಲೆ ಕೆಟ್ಟುಹೋಯಿತೇನೋ.. ಊಟ ತಿಂಡಿ ನಿದ್ದೆ ಯಾವುದೂ ಬೇಡವಾಯಿತು. ಇವನ ಹಪಾಹಪಿಗೆ ಹುಡುಗಿ ಅದಾಗಲೇ ದೂರ ಹೋಗಿದ್ದಳು.
ಬಸ್ ಸ್ಟ್ಯಾಂಡ್ನಲ್ಲಿ ರೈಲಿಗೆ ಕಾದ!
ಹುಡುಗಿ ವಿಚಾರದಲ್ಲಿ ಆ ಹುಡುಗ ಸ್ವಲ್ಪ ಹುಚ್ಚನಾಗಿದ್ದ ಎಂದು ಬೇರೆ ಹೇಳಬೇಕಿಲ್ಲ ತಾನೇ..? ಅದಕ್ಕೆ ತಕ್ಕಂತೆ ಇವನ ಕನವರಿಕೆಗಳೂ ಇದ್ದವು.. ಅವಳು ಮಾತನಾಡದ, ದೂರ ಹೋದ ವಿಚಾರವೆಲ್ಲ ಅಮ್ಮನ ಬಳಿ ಹೇಳಿದ್ದ. ಅಳಲು ತೋಡಿಕೊಂಡಿದ್ದ. ಅವಳು ಬಿಟ್ಟು ಹೋದ್ದಕ್ಕೆ ಇವನ ಕೆಲ ಸ್ವಭಾವ ಕಾರಣವಾಯಿತು ಎಂದು ಅರ್ಥ ಮಾಡಿಸಿಕೊಳ್ಳುವವರು ಇರಲಿಲ್ಲ. ಹೋಗಲಿ ಬಿಡು ಎಂದು ಆಕೆ ಹೇಳುತ್ತಿದ್ದಳು. ಆದರೆ ಕೇಳುವ ವ್ಯವಧಾನ ಇವನಿಗೆ ಸ್ವಲ್ಪವೂ ಇರಲಿಲ್ಲ. ಅದಾಗಿ ತಿಂಗಳುಗಳು ಕಳೆದರೂ, ಅವಳ ನೆನಪು ಇವನಲ್ಲಿ ಮಾಸಲಿಲ್ಲ. ರಾತ್ರಿ ಎಲ್ಲ ಬರುತ್ತಿದ್ದಳು. ಮಾತನಾಡಿದ ಅನುಭವವಾಗುತ್ತಿದ್ದಂತೆ ಇವನು ಎದ್ದು ಕುಳಿತುಕೊಳ್ಳುತ್ತಿದ್ದ. ಮುಸುಕೆಳೆದರೆ ನಿದ್ದೆ ಇಲ್ಲ.. ರಸ್ತೆಯಲ್ಲಿ, ಕಂಪ್ಯೂಟರಿನಲ್ಲಿ, ತಲೆಯಲ್ಲಿ ಅವಳದೇ ಚಿತ್ರ. ಊರಿಗೆ ಹೋದರೆ ಪೇಟೆ ಕಾಣುವಾಗಲೆಲ್ಲ ಕಣ್ಣರಳಿಸಿ ನೋಡುತ್ತಿದ್ದ ಅವಳೆಲ್ಲಿದ್ದಾಳೋ ಎಂಬಂತೆ. ಒಂದು ದಿನವೂ ಅವಳು ಕಾಣಲಿಲ್ಲ. ಇವನ ಚಡಪಡಿಕೆ ಮುಗಿಯಲೂ ಇಲ್ಲ. ಮೊದಲೆಲ್ಲ ರಾತ್ರೆ ಹನ್ನರೆಡಾದರೂ ಅವಳ ಮೆಸೇಜು ಬರುತ್ತಿತ್ತು.. ಅದೇ ಅಭ್ಯಾಸದಲ್ಲಿ ಬೇರೆ ಯಾವ ಮೆಸೇಜ್ ಬಂದರೂ ಇವನಿಗೆ ಇದು ಅವಳ ಮೆಸೇಜ್ ಇರಬಹುದಾ ಎಂಬ ಕುತೂಹಲ, ಅನ್ನೋನ್ ನಂಬರ್ ಕರೆ ಬಂದರೆ ಬೇರೆ ನಂಬರ್ ನಿಂದ ಕರೆ ಮಾಡುತ್ತಿದ್ದಾಳಾ ಎಂಬ ಸಂಶಯ..ಫೇಸ್ ಬುಕ್ ಲ್ಲಿ ಮಾತನಾಡುತ್ತಾಳಾ ಎಂಬ ಕಾತರ ಸದಾ ಕಾಡುತ್ತಿತ್ತು. ಅವಳು ಮೆಸೇಜೂ ಕಳುಹಿಸುತ್ತಿರಲಿಲ್ಲ ಫೇಸ್ಬುಕ್ನಲ್ಲಿ ಕಂಡರೂ ಮಾತನಾಡುತ್ತಿರಲಿಲ್ಲ. ಇದು ಕೊನೆಗೆ ಹುಡುಗನಿಗೆ ಅಭ್ಯಾಸವಾಗಿ ಪುಣ್ಯಕ್ಕೆ ನನ್ನ ಫ್ರೆಂಡ್ಲಿಸ್ಟ್ನಲ್ಲಾದರೂ ಇದ್ದಾಳಲ್ಲ.. ಎಂದು ಆಕೆ ಆನ್ಲೈನ್ಗೆ ಬಂದಾಗಲೆಲ್ಲ ಮಾತನಾಡದಿದ್ದರೂ ಸಂಭ್ರಮಪಟ್ಟುಕೊಳ್ಳುತ್ತಿದ್ದ.. ಅಷ್ಟಾದರೂ ಅವಳು ಮತ್ತೆಂದಿಗೂ ಬರಲಾರಳು ಎಂಬುದು ತಲೆಗೇ ಹೋಗುತ್ತಿರಲಿಲ್ಲ. ಹುಡುಗ ಏನೋ ಸರಿ ಇಲ್ಲ ಎಂಬುದು ಅದೊಂದು ದಿನ ಮನೆಯವರಿಗೂ ಗೊತ್ತಾಗಿ ಬೇರೆ ಹುಡುಗಿ ನೋಡುವುದು ಎಂಬ ಮಾತನ್ನೆತ್ತಿದ್ದರು. ಮನೆಗೂ ಕರೆಸಿ ಆ ಹುಡುಗಿ ಮರೆಯಲು ಬುದ್ಧಿವಾದ ಹೇಳಿದರು. ಮನೆಯವರ ಯತ್ನ ಯಾವುದೂ ವರ್ಕ್ ಔಟ್ ಆಗಲಿಲ್ಲ. ಪದವಿ, ಎಂ.ಎ ಕಲಿತ  ಹುಡುಗಿಯರು ಎಂದೆಲ್ಲ ಎರಡು ಉತ್ತಮ ಜಾತಕವನ್ನೂ ತಂದು ತೋರಿಸಿದರು. ಇವನದ್ದು ಅದೇ ಧ್ಯಾನ. ಜಾತಕದ ಆ ಹುಡುಗಿಯರು ಯಾರಿಗೇನು ಕಡಿಮೆ ಇಲ್ಲದಿದ್ದರೂ, ಮನದಲ್ಲಿರುವಾಕೆಯೊಂದಿಗೆ ಕೈಕೈ ಹಿಡಿದು ನಡೆದಾಡಿದ ನೆನಪು ಇವನಿಗೆ ಸುಳಿಯುತ್ತಿತ್ತು. ಯಾವ ಹುಡುಗಿಯೂ ನನಗೆ ನೋಡಬೇಡಿ. ನಾನು ಮದುವೆಯೇ ಆಗಲ್ಲ ಎಂದು ಅಪ್ಪ-ಅಮ್ಮನ ಎದುರು ಅಬ್ಬರಿಸಿಯೂ ಬಿಟ್ಟ. ಪಾಪ ಅವರೇನು ಪಾಪ ಮಾಡಿದ್ದರೋ ಹುಡುಗನ ಶೋಚನೀಯ ಪಾಡು ಅವರಿಗೆ ನುಂಗಲಾರದ ತುತ್ತು. ಅವಳು ಬರುವುದಿಲ್ಲ ಎಂಬುದನ್ನು ನಂಬುವುದಿಲ್ಲ. ಬೇರೆ ಮದುವೆಗೂ ಒಪ್ಪುವುದಿಲ್ಲ ಎಂದರೆ ಕಥೆ ಏನು? ಹೇಳಬೇಕಾದವರ ಬಳಿ ಹೇಳಿಸಿದರು. ಬುದ್ಧಿಮಾತು, ಎಚ್ಚರಿಕೆ, ಸಣ್ಣ ಗದರಿಕೆ ಯಾವುದನ್ನೂ ಹುಡುಗ ಕೇಳಲಿಲ್ಲ. ಹಾಗೆ ದಿನ, ತಿಂಗಳು,, ವರ್ಷ ಕಳೆಯಿತು. ಅವಳ ಬಗೆಗಿನ ಒಲವು ಕಡಿಮೆಯಾಯಿತೋ ಗೊತ್ತಿಲ್ಲ. ಅದೊಂದು ಬಾರಿ ಊರಿಗೆ ಹೋದವನಿಗೆ ಅವಳ ದರ್ಶನವಾಗಿತ್ತು. ಇವನಿಗೆ ಹೃದಯ ಬಾಯಿಗೆ ಬರುವುದೊಂದು ಬಾಕಿ. ಇಬ್ಬರೂ ಏನಾದರೂ ಮಾತನಾಡಿಕೊಂಡರೋ, ಅವಳು ಮೊದಲು ಇವನ್ನು ಮಾತನಾಡಿಸಿದಳಾ, ಅಲ್ಲಾ ಇವನೇ ಮಾತನಾಡಿಸಿದನಾ, ಎರಡು ಹನಿ ಕಣ್ಣೀರು ಬಂತಾ ಗೊತ್ತಿಲ್ಲ. ಅದಾಗಿ ನಾಲ್ಕಾರು ದಿನ ಮತ್ತೆ ಮುದುಡಿದಂತಿದ್ದ. ಆದರೆ ಅವಳ ವಿಚಾರ ಗೆಳೆಯರಲ್ಲಿ ಹೇಳಿಕೊಂಡು ಸಂಭ್ರಮದಲ್ಲಿದ್ದ. ಅವಳು ಮತ್ತೆ ಬರುವುದಿಲ್ಲ. ನೀನು ತಲೆಕೆಡಿಸಿಕೊಳ್ಳುವ ಮಾತೇ ಇಲ್ಲ. ಸಾವಧಾನದಿಂದರು ಎಂದು ಅವರೂ ಸಾಕಷ್ಟು ಬುದ್ಧಿವಾದ ಹೇಳಿದರು. ಕೆಲವೊಮ್ಮೆ ಅತಿ ವಿರಹಿ, ಕೆಲವೊಮ್ಮೆ ಅತಿ ಸಂತೋಷ, ವಿಕ್ಷಿಪ್ತ ಭಾವನೆಗಳಿಗೆಲ್ಲ ಅವನ ಮುಖದಲ್ಲಿ ಕಾಣುತ್ತಿತ್ತು. ದಿನಗಳು ಓಡುತ್ತಿದ್ದವು. ಅವನು ಅವನ ಪಾಡಿಗೆ? ಇವಳು ಇವಳ ಪಾಡಿಗೆ ಇದ್ದರು. ಒಂದು ದಿನ ಊರಿನಿಂದ ಇವನ ಗೆಳೆಯನೊಬ್ಬ ಫೋನ್ ಮಾಡಿದ, ಅವಳಿಗೆ ಮದುವೆ ಫಿಕ್ಸ್ ಆಗಿದೆ. ಮುಂದೆ ಅವಳ ಬಗ್ಗೆ ನೀನು ಮಾತನಾಡಕೂಡದು. ನೀನು ಮರೆಯದಿದ್ದರೆ ಬೇಡ. ನಿನ್ನಿಂದಾಗಿ ಅವಳ್ಯಾಕೆ ಹಾಗೇ ಕೂರಬೇಕು? ನೀನು ಇನ್ನಾದರೂ ಸಂಪೂರ್ಣವಾಗಿ ಮರೆಯಬೇಕು ಎಂಬುದಕ್ಕೆ ಈ ವಿಚಾರ ಹೇಳಿದ್ದು ಟೇಕ್ ಕೇರ್ ಎಂದು ಫೋನಿಟ್ಟ. ಇವನ ಮುಖದಲ್ಲಿ ಸಣ್ಣ ವಿಷಾದದ ನಗೆ ಹಾದು ಹೋಯಿತು. ಅದಾಗಿ ಅವಳು ಮದುವೆಯೂ ಆಗಿ ದೂರದ ಊರಿಗೆಲ್ಲೋ ಹೋದಳು. ಇಷ್ಟೆಲ್ಲಾ ಆದರೂ, ಅವಳ ನೆನಪೇ ಇವನ ಜೀವನವಾಗಿ ಹೋಯಿತು. ಹುಚ್ಚು ಪ್ರೀತಿಯ ಅಮಲು ಇಳಿದಿರಲೇ ಇಲ್ಲ!
ಅಂದಹಾಗೆ..
ಮೊನ್ನೆ ಮೊನ್ನೆ ಆ ಹುಡುಗನ ರೂಮಿಗೆ ಹೋಗಿದ್ದೆ. ಒಳಗೆ ಯಾವುದೋ ಹಳೆ ಪಾತ್ರೆ ತಿಕ್ಕುತ್ತಿದ್ದ. ನನಗೆ ನಗು ಬಂತು. ಏನು ಮಾರಾಯ ಇದು. ಮದುವೆ ಆಗದ ಕರ್ಮಕ್ಕೆ ಈ ಅವಸ್ಥೆಯಲ್ಲಿ ಅಂದೆ ಅಷ್ಟಕ್ಕೆ ಅವನ ಮುಖಭಾವ ಬದಲಾಯಿತು. ಹಳೆ ಪಾತ್ರೆ ತಿಕ್ಕುವುದರಲ್ಲಿಯೂ ಖುಷಿ ಇದೆ. ಹಳೆ ನೆನಪುಗಳಂತೆ, ತಿಟ್ಹತ್ತಿ ತಿರುಗಿದಂತೆ, ಅದು ಹೊಳಪು ಕಂಡಾಗೆಲ್ಲ ನೆನಪು ಮತ್ತೆ ಮರುಕಳಿಸುತ್ತದೆ ಎಂದ. ಕಥೆ ಎಲ್ಲ ಹೇಳಿದ. ಬಹುಶಃ ಆ ಹುಡುಗಿ ನೆನಪು ಪಾತ್ರೆಯ ಹೊಳಪಲ್ಲಿ ಕಾಣುತ್ತಿದ್ದಿರಬೇಕು. ನನ್ನೆದುರಿಗೆ ಭಾರೀ ಸೆಕೆ ಅಂದು ಕಣ್ಣೀರು ಒರೆಸಿದ ಪುಣ್ಯಾತ್ಮ! 

ಶುಕ್ರವಾರ, ಏಪ್ರಿಲ್ 27, 2012


ಕಳ್ಳನೋಟು ವ್ಯವಹಾರದ ವೃತ್ತಾಂತವು...

ವಿ.ಸೂ: ಇದು ಮಸಾಲಾ ಕಥೆಯಲ್ಲ.. ಒಂದು ವೇಳೆ ನಿಮಗೆ ಇದು ಸುಳ್ಳೇ ಸುಳ್ಳು ಎಂದು ಕಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ!

ಒಂದಾನೊಂದು ದಿನ.. ಒಂದಾನೊಂದು ಬ್ಯಾಂಕಿಗೆ ವ್ಯವಹಾರ ನಿಮಿತ್ತ ನನ್ನ ಭೇಟಿಯಾಗಿತ್ತು. ಲಕ್ಷಗಟ್ಟಲೆ?, ಸಾವಿರಗಟ್ಟಲೆ? ಹೊರತಾಗಿ ‘ಚಿಲ್ಲರೆ’ ವ್ಯವಹಾರ ಅದು. ಇಂಥದ್ದೊಂದು ವ್ಯವಹಾರಕ್ಕೆ, ಮಹಡಿ ಮೇಲಿನ ಬ್ಯಾಂಕಿಗೆ ಮೆಟ್ಟಿಲೇರಿ ಹೋಗಿ ಹಣಕಟ್ಟುವ 5 ನಿಮಿಷದ ಕೆಲಸಕ್ಕೆ ಟೋಕನ್ ಪಡೆದು ಗಂಟೆಗಟ್ಟಲೆ ಕಾದು ಕುಳಿತಿದ್ದೆ. ಅಂತೂ ನನ್ನ ಸರದಿ ಬಂದು ಹಣ ಕಟ್ಟುವ ಅಮೋಘ ಕಾರ್ಯಕ್ರಮ ಇನ್ನೇನು ಶುರುವಾಗಬೇಕು.. ಕೌಂಟರ್ನೊಳಗೆ ಸ್ಲಿಪ್ ಮತ್ತು 500 ರೂ. ನೋಟನ್ನು ಇಟ್ಟಿದ್ದೆ. ಒಳಗಿದ್ದ ಕ್ಯಾಶಿಯರ್, ಹಣ ತೆಗೆದುಕೊಂಡು, ಸ್ಲಿಪ್ ಬದಿಗೆ ಸರಿಸಿ ನೋಟನ್ನು ಅಮೂಲಾಗ್ರ ಶೋಧನೆಗೆ ಶುರು ಮಾಡಿದ. ಸಾಮಾನ್ಯವಾಗಿ ಎಲ್ಲರೂ ನೋಟನ್ನು ನೋಡಿಯೇ ತೆಗೆದುಕೊಳ್ಳುತ್ತಾರೆ. ಬೇಕಾದರೆ ಆಲ್ಟ್ರಾವಾಯ್ಲೆಟ್ ಮಶೀನ್ ಬಾಯಿಗೊಮ್ಮೆ ತಳ್ಳುತ್ತಾರೆ. ಆದರೆ ಆತನಿಗೆ ಯಾಕೋ ಏನೋ ನೋಟಿನ ಮೇಲೆ ಡೌಟು... ಎರಡು ಬಾರಿ ಅದನ್ನು ಕಿವುಚಿ, ಮಶೀನ್ಗೆ ಇಟ್ಟು.. ನನ್ನತ್ತ ಮುಖ ಮಾಡಿ ಲಿಟ್ಲ್ ಡೌಟ್ಫುಲ್ ಅಂದ.
ಅಂದ.. ಹೋ.. ಇದ್ಯಾಕೋ ಕಷ್ಟವಾಯಿತು ಅಂತಾ ಸುಮ್ಮನಿದ್ದೆ. ಆದರೆ ಅಸಾಮಿ ಬಿಡಲಿಲ್ಲ. ಅವನ ಸನಿಹಕ್ಕೆ ಕೂತ ಕ್ಯಾಶಿಯರ್ ಗಳಿಗೆಲ್ಲ.. ನೋಟನ್ನು ದಾಟಿಸಿ ನೋಡಲು ಹೇಳಿ.. ಬಹುದೊಡ್ಡ ಸಂಶೋಧನೆಯೇ ಮಾಡಿದರು. ಅವರೂ ಮುಖ ಸೊಟ್ಟಗೆ ಮಾಡಿ ನೋಟು ವಾಪಾಸು ಕೊಟ್ಟರು. ಅಲ್ಲಿಗೆ ನನ್ನ ಹಣ ಕಟ್ಟುವ ವ್ಯಾಪಾರಕ್ಕೆ ಸಣ್ಣ ಬ್ರೇಕ್! ಅದಾಗಿ ವಿಚಾರಣೆ ಶುರು ಮಾಡಿದ. ಎಲ್ಲಿ ಸಿಕ್ಕಿತು ಈ ನೋಟು.. ಇತ್ಯಾದಿ.. ನಾನು ಕೆಲಸಮಾಡುವ ಸ್ಥಳದಲ್ಲಿನ ಎಟಿಎಮ್ ಒಂದರಲ್ಲಿ  ತೆಗೆದಿದ್ದು.. ಎಂದು 2 ಬಾರಿ ಸ್ಪಷ್ಟನೆ ನೀಡಿಯೂ ಆಯಿತು. ಆದರೆ ಸಮಾಧಾನವಾಗಲಿಲ್ಲ.
ಸ್ವಲ್ಪ ಹೊತ್ತಿಗೆ ಮ್ಯಾನೇಜರ್ ರೂಮ್ಗೆ ಹೋಗಿ ಅಂದ.. ಸರಿ ಅದರಲ್ಲೇನು ಅಂತಾ ನಾನು ಬಿಡುಬೀಸಾಗಿ ಹೋದೆ. ಒಳಗೆ ಒಂದು ಕಾಲಿಟ್ಟಿಲ್ಲ.. ಎ.ಸಿ.ರೂಮಿನಲ್ಲಿದ್ದ ಮ್ಯಾನೇಜರ್ ವೇರ್ ಡಿಡ್ ಯೂ ಗೆಟ್ ದಿಸ್ ಎಂಬ ಪ್ರಶ್ನೆ ತೂರಿಬಂತು.
ಯಾಕೋ ಸ್ವಲ್ಪ ಎಡವಟ್ಟಾಗುತ್ತಿದೆ ಅಂದುಕೊಂಡು, ಇಟ್ಸ್ ಫ್ರಮ್ ಎಟಿಎಮ್ ಸರ್ ಎಂದೆ. ಹೌ ಮಚ್ ಕರೆನ್ಸಿ ಯು ಹ್ಯಾವ್, ಶೋ ಮಿ ಯುವರ್ ಪರ್ಸ್ ಆ್ಯಂಡ್ ಕರೆನ್ಸೀಸ್... ಎಲ್ಲಾ ಕೇಳಿಯೂ ಆಯಿತು.. ನಾನು 10, 20ರ ಎರಡು ನೋಟು ಅವನತ್ತ ಚಾಚಿದೆ. ಅದು ಬಿಟ್ಟು ಬೇರೆ ಹಣವೂ ನನ್ನಲ್ಲಿರಲಿಲ್ಲ. ಮತ್ತೆ ಎಲ್ಲಿ ಕೆಲಸ, ಪ್ರವರ, ಗೋತ್ರ ಇತ್ಯಾದಿ ವಿಚಾರಣೆಯೂ ಆಯಿತು. (ಅಷ್ಟಕ್ಕೆ ಕಳ್ಳ ನೋಟು ವ್ಯವಹಾರದಲ್ಲಿ ಸಿಕ್ಕಿಬಿದ್ದೆನಾ ಎಂಬ ಸಂಶಯ ಕೊರೆಯ ತೊಡಗಿತ್ತು.) ಯಾಕೋ ಮ್ಯಾನೇಜರ್ ಗೆ ವಿಷಯ ಫಲ ಕಾಣಲಿಲ್ಲ. ಅಷ್ಟರಲ್ಲಿ ಡೆಪ್ಯುಟಿ ಮ್ಯಾನೇಜರ್ ಮತ್ತಿಬ್ಬರು ಚೇಂಬರ್ಗೆ ನುಗ್ಗಿ.. 3ನೇ ಸುತ್ತಿನ ವಿಚಾರಣೆ ಆರಂಭಿಸಿದರು.
ನಾನು ಅಮಾಯಕ ಅಂತಾ ಹೇಳಲೂ ಸಾಧ್ಯವಿಲ್ಲ.. ಕೆಲವೊಮ್ಮೆ ನಗು ಬರುತ್ತಿತ್ತು.. ಪ್ರತಿಯಾಗಿ ಪ್ರಶ್ನೆಯನ್ನೂ ಕೇಳಿದೆ. ಓರ್ವ ಸಾಮಾನ್ಯ ಮನುಷ್ಯ ಸರ್ ನಾನು.. ನನಗೆ ನೋಟಿನ ಬಗ್ಗೆ ಸಂಶಯ/ಕಳ್ಳನೋಟು ಅನ್ನೋದು ಹೇಗೆ ಗೊತ್ತಾಗಬೇಕು. ಗಾಂಧೀಜಿ ವಾಟರ್ ಮಾರ್ಕ್ ಅಡ್ಡಕೆ ಬರೆದ 500 (ಬಾರ್ ಕೋಡ್) ನೋಡುವುದು ಬಿಟ್ಟರೆ ನೋಟಿನ ಬಗ್ಗೆ ನನಗೇನೂ ಗೊತ್ತಿಲ್ಲ ಅಂದೆ. ಅದ್ಯಾವುದಕ್ಕೂ ಅವರ ಬಳಿ ಉತ್ತರವೇ ಇಲ್ಲ. ಮತ್ತೂ ಸ್ವಲ್ಪ ಹೊತ್ತು ಕಳೆಯಿತು. ಯಾಕೋ ಇವರ ವ್ಯವಹಾರ ಮುಗಿಯುತ್ತಿಲ್ಲ ಎಂದೆನಿಸಿತು. ವಾಚು ನೋಡಿಕೊಂಡೆ, ಬ್ಯಾಂಕ್ಗೆ ಬಂದು ಒಂದೂಕಾಲು ಗಂಟೆ ಕಳೆದಿತ್ತು. ಇನ್ನೂ ಇಲ್ಲೇ ಇದ್ದರೆ ನನ್ನ ಕೆಲಸಗಳೆಲ್ಲ ಢಮಾರ್ ಎಂದೆನಿಸಿತು. ಮ್ಯಾನೇಜರ್ ಕೇಳಿದೆ. ನಾನು ಹೊರಡಲಾ ಎಂಬಂತೆ. ವೇರ್ ಆರ್ ಯೂ ಗೋಯಿಂಗ್ ಅಂತಾ ಪುನಃ ಪ್ರಶ್ನೆ. ನನ್ನನ್ನು ಬಿಟ್ಟು ಬಿಡಬಾರದು. ಕಳ್ಳನೋಟಿನ ಖದೀಮ ಸಿಕ್ಕಿದ್ದಾನೆ, ಪೊಲೀಸರಿಗೆ ಫೋನ್ ಮಾಡಲು ಪ್ಲಾನ್ ಇದ್ಯೇನೋ ಅಂದುಕೊಂಡೆ ಇರಲಿಕ್ಕಿಲ್ಲ. ಬರೇ 500ರೂ.ಗೆ ಅಷ್ಟು ದೊಡ್ಡ ಸೀನ್ ಯಾಕೆ ಅಂದುಕೊಂಡೆ. ಮ್ಯಾನೇಜರ್ಗೆ ಸ್ವಲ್ಪ ಕಿಚಾಯಿಸೋಣ ಎಂದೆನಿಸಿತು.. ಕೇಳಿಯೇ ಬಿಟ್ಟೆ ಅಲ್ಲಾ ಸಾರ್, ಕಳ್ಳನೋಟು ವ್ಯವಹಾರ ಮಾಡೋರು ಯಾರಾದ್ರೂ ಬ್ಯಾಂಕ್ಗೆ ಬಂದು ಮಾಡ್ತಾರಾ? ಅಷ್ಟೂ ನಿಮ್ಗೆ ಗೊತ್ತಾಗಲ್ವಾ ? ಮ್ಯಾನೇಜರ್ ಮುಖ ಸ್ವಲ್ಪ ಬಿಳುಚಿತು. ಉತ್ತರ ಹೇಳಲು ಸಾಧ್ಯವಾಗಲಿಲ್ಲ. ಮತ್ತೂ ಸಮಯ ಜಾರಿ ಹೋಗುತ್ತಲೇ ಇತ್ತು. ಕೊನೆಗೆ ಮತ್ತೊಬ್ಬ ಯಾರೋ ಬಂದು ಚೇಂಬರ್ ಮುಂದೆ ನಿಂತ. ಅಷ್ಟಕ್ಕೆ ಹಿಂದೆ ಹೇಳಿದ್ದು ಮ್ಯಾನೇಜರ್ಗೆ ಮರೆತಿತ್ತೋ ಏನೋ ಮತ್ತೆ ಪ್ರಶ್ನೆ ಎಲ್ಲಿ ಕೆಲಸ..? ಐಡಿ ಕಾರ್ಡ್ ಇದೆಯಾ? ಇದೆ ಸಾರ್ ಎಂದು ಐಡಿ ಕಾರ್ಡ್ ಚಾಚಿದೆ. ಕಾರ್ಡ್ ನೋಡಿ ಮ್ಯಾನೇಜರ್ಗೆ ಗಲಿಬಿಲಿ. ಸಾರಿ ಕೇಳಿದ. ನಮಗೆ ಸಂಶಯ ಬಂದರೆ ಸ್ವಲ್ಪ ವಿಚಾರಣೆ ಮಾಡುತ್ತೇವೆ ಡೋಂಟ್ ಮೈಂಡ್ ಸರ್. ಹೀಗೆಲ್ಲ ನನ್ನ ಸಮಾಧಾನ ಮಾಡುವ ಕಾರ್ಯಕ್ರಮ ನಡೆಯಿತು. ನಾನೂ ಏನೂ ಹೇಳಿಲ್ಲ. ನೀವು ಕೇಳಿದ್ದಕ್ಕೆಲ್ಲ ಉತ್ತರಿಸಿದ್ದೇನೆ ಅಂದೆ. ಕೂಡಲೇ ಸ್ಲಿಪ್ಗೆ ಸೀಲ್, 500ರೂ.ಗೆ ಚೇಂಜ್ ಎಲ್ಲಾ ಕೈಗೆ ಬಂತು. ಕುರ್ಚಿಯಲ್ಲಿ ಕುಳ್ಳಿರಿಸಿ 500 ರೂ. ಒರಿಜಿನಲ್ ನೋಟು? ತಂದು ಇದು ಹೀಗಿದೆ, ನಿಮ್ಮ ನೋಟು ಹೀಗಿದೆ ಎಂದು ಪ್ರಾತ್ಯಕ್ಷಿಕೆ ನಡೆಯಿತು. ನಾನು ಅಡ್ಡಡ್ಡ ತಲೆ ಅಲ್ಲಾಡಿಸಿದೆ. ತೀರ ಸಾಮಾನ್ಯರಿಗೆ ಇದು ಗೊತ್ತಾಗುತ್ತಾ ಅಂತಾ ಕೇಳಿದೆ. ಎಲ್ಲರೂ ಸುಮ್ಮನೆ ನಿಂತರು. ನಾನು ಹೋಗಬೇಕು ಅಂದೆ.. ಮೆಟ್ಟಿಲು ಇಳಿವಲ್ಲಿವರೆಗೆ ಡೆಪ್ಯುಟಿ ಮೆನೇಜರ್ ಬಂದು (ಕಳುಹಿಸಿ ಕೊಡುವ ನೆವ) 2 ಬಾರಿ ಸಾರಿ ಕೇಳಿದ. ನಾನು ಬೈಕ್ ಏರುವಲ್ಲಿವರೆಗೆ ಆತ ಅಲ್ಲೇ ನಿಂತು ನನ್ನ ನೋಡುತ್ತಿದ್ದುದನ್ನು  ಕನ್ನಡಿಯಲ್ಲೇ ನೋಡಿ ನಕ್ಕೆ. ಪುಣ್ಯಕ್ಕೆ ನನ್ನ ಬಳಿ ಆ ಹಾಳು ಎಡವಟ್ಟಿನ ನಾಲ್ಕು 500 ನೋಟಿರಲಿಲ್ಲ.. ಇದ್ದಿದ್ದರೆ ನಾನು ಮುದ್ದೆ ಮೆಲ್ಲುವುದು ಖಚಿತವಾಗುತ್ತಿತ್ತು.

ಶುಕ್ರವಾರ, ಡಿಸೆಂಬರ್ 2, 2011

ಯುನಾನಿ ಪಂಡಿತ ಕುತ್ತಿಗೆ ಹಿಚುಕಿದ ಕಥೆ..!

ಊರಿಂದ ಬಂದು ನವರಂಗದಲ್ಲಿ ಇಳಿಯುವ ಹೊತ್ತಿಗೆ ಗಂಟೆ ಆರೂಕಾಲು. ಮನೆಗೆ ಹೋಗುತ್ತಲೇ ಪ್ರೀತಿಯ ನಾಯಿ ಕಾಲಿಗೆ ಸೋಕುವಂತೆ ಬಸ್ ಇಳಿಯುವಾಗಲೇ ಸಾರ್ ಬನ್ನಿ ಸಾರ್ ಅಟೋ ಬೇಕಾ.. ಅನ್ನುವ ಜನ. ನವರಂಗದಿಂದ ನನ್ನ ರೂಮಿಗೆ  ಒಂದು ಕಿಲೋಮೀಟರ್ ದೂರ. ಊರಿಂದ ಎಷ್ಟು ಹೊತ್ತಿಗೆ ಬಂದಿಳಿದರೂ ನನ್ನ ಪಾದಯಾತ್ರೆ ಶತಸಿದ್ಧ. ಬೆಳ್ಳಂಬೆಳಗ್ಗೆಯೇ ಸ್ಮಶಾನ ದರ್ಶನ (ಹರಿಶ್ಚಂದ್ರ ಘಾಟ್) ಮುಗಿಸಿ ಮನೆಗೆ ತೆರಳುತ್ತಿದ್ದೆ. ಅಷ್ಟರಲ್ಲಿ ಗೆಳೆಯನ ಫೋನು. ಬೆಂಗಳೂರಿಗೆ ಬಂದಿದ್ದೇನೆ ನಿನ್ನ ಮನೆಗೆ ಬರುತ್ತೇನೆ ಎರಡು ದಿನ ಕೆಲಸವಿದೆ. ನಿನ್ನ ಮನೆ ಯಾವ ಏರಿಯಾ ಎಂದು ಗೊತ್ತಿಲ್ಲ ಎಂದ. ನಾನೇ ರೈಲ್ವೇ ಸ್ಟೇಷನ್ಗೆ ಬಂದು ಕರೆದುಕೊಂಡು ಹೋಗುತ್ತೇನೆ ಅಂದೆ. ಅಂತೂ ನನ್ನ ಕೆಲಸ ಮುಗಿಸಿ ಬೈಕು ಸ್ಟಾರ್ಟ್ ಮಾಡಿ ಹೊರಟೆ. ಮೆಜೆಸ್ಟಿಕ್ ರೈಲ್ವೇ ಸ್ಟೇಷನ್ ಬಳಿ ಬೆಂಗಳೂರಿಗರ ಬೆಳಗ್ಗಿನ ಪಡಿಪಾಟಲುಗಳನ್ನು ನಿಂತುಕೊಂಡು ನೋಡುತ್ತಿದ್ದ ಅವನನ್ನು ಕುಳ್ಳಿರಿಸಿಕೊಂಡು ಬಂದಿದ್ದೆ. ದಾರಿ ಮಧ್ಯೆಯೇ ಬೆಂಗಳೂರು ಕಡೆಗೆ ಪಾದ ಬೆಳೆಸಿದ ಕಾರಣವನ್ನು ಆತ ಹೇಳತೊಡಗಿದ.
ಎಂಥದ್ದೋ ತಲೆನೋವು ಮಾರಾಯ. ನಮ್ಮ ಕಡೆಯಲ್ಲೊಬ್ಬರು ಇಂತಿಂಥವರನ್ನು.. ಇಂಥಕಡೆಯಲ್ಲಿ ಹೋಗಿ ಕಾಣು ಎಂದು ಹೇಳಿದ್ದಾರೆ. ಅಲ್ಲಿಗೊಮ್ಮೆ ಹೋಗಬೇಕು. ನಾನೂ ತಲೆ ಅಲ್ಲಾಡಿಸಿದ್ದೆ. ಊರಿನಿಂದ ಬಂದಿರುವವರಿಗೆ, ಹೆಚ್ಚೇಕೆ ಬೆಂಗಳೂರಿನಲ್ಲಿ  ಇರುವವರಿಗೇ ಇಲ್ಲಿನ ವಿಳಾಸ ಪತ್ತೆ ಮಾಡುವುದು ಕಷ್ಟ.  ಸರಿ ಆ ಯುನಾನಿ ಪಂಡಿತನ ಅನ್ವೇಷಣೆಗೆ ಶುರು ಮಾಡಿದ್ದವು.. ಹೆಚ್ಚೇನೂ ಕಷ್ಟವಾಗಲಿಲ್ಲ.  ಬ್ರಿಗೇಡ್ ರೋಡ್ನಿಂದಾಚೆಗೆ ರಿಚ್ಮಂಡ್ ಸರ್ಕಲ್ ರೋಡ್ ಬಳಿಯ ಸಂದು ಗೊಂದಿಗಳಲ್ಲಿ ತಡಕಾಡಿದಾಗ ಪಂಡಿತ ಸಿಕ್ಕಿದ್ದ. ನನಗೆ ಮೊದಲಿಗೆ ಅನಿಸಿತ್ತು ಇವ ಏನು ಔಷಧ ಕೊಡಬಹುದು ಎಂಬಂತೆ. ಕಾರಣ ಒಂದು ಮುರುಕಲು ಮನೆ. ಬೈಕ್ ನಿಲ್ಲಿಸಿ ಬಾಗಿಲು ತೆರೆದರೆ ಕಿಟಾರನೆ ಕಿರುಚಿ ತೆಗೆದುಕೊಂಡಿತ್ತು. ಅದರ ಬದಿಯಲ್ಲೇ ಒಂದು ಸಣ್ಣ ಕೋಣೆಯ ಮಂಚದಲ್ಲಿ ತಕ್ಕಮಟ್ಟಿಗೆ ಕಟ್ಟುಮಸ್ತಾಗಿದ್ದ ಸುಮಾರು 65-70ರ ಪ್ರಾಯದ ವ್ಯಕ್ತಿ ಕೂತಿದ್ದ. ನಮ್ಮನ್ನು ಕಂಡಕೂಡಲೇ ‘ಆವೋ ಆವೋ...  ಮಂಗಳೂರಿಂದ ಬಂದಿದ್ದೀರಾ..?’ ಪ್ರಶ್ನೆ.. ನಾನು ಎಲಾ ಇವನಾ ಅಂದುಕೊಂಡೆ..! ನಮ್ಮನ್ನು ನೋಡಿದ ಒಂದೇ ಬಾರಿಗೆ ಮಂಗಳೂರಿನವರು ಎನ್ನಬೇಕಾದರೆ ಅದೂ ಒಂದು ಮಾತು ಮಾತನಾಡದೇ.. ಭಲೇ ಅಂದುಕೊಂಡಿದ್ದೆ. ಆತನ ಕೋಣೆಯೊಳಗೆ ಹೋಗಲು ಜಾಗವೂ ಇರಲಿಲ್ಲ.  ಘಾಟು ವಾಸನೆ ಬೇರೆ..  ಇಬ್ಬರನ್ನೂ ಒಳಗೆ ಕುಳ್ಳಿರಿಸಿ ಕೇಳಿದ ಪ್ರಯಾಣ ಹೇಗಿತ್ತು ಇತ್ಯಾದಿ.. ಮತ್ತೆ ಅವನೊದ್ದೊಂದು ಪ್ರಶ್ನೆ ನಿಮಗೆ ತಲೆನೋವಾ.. ಸ್ವಾಮಿ ಕಳಿಸಿದ್ದಾರಾ ಎಂದು ಉರ್ದು, ಕನ್ನಡ ಇಂಗ್ಲಿಷ್ ಮಿಶ್ರಿತ ಭಾಷೆಯಲ್ಲಿ ಗೆಳೆಯನನ್ನು ಕೇಳಿದ ನನಗೆ ಮತ್ತೆ ಕುತೂಹಲ. ಅಸಾಮಿ ಸಾಧಾರಣದ್ದಲ್ಲ ಎಂದು ತೀರ್ಮಾನಿಸಿಕೊಂಡೆ. ಒಂದೋ ಕಳುಹಿಸಿದವರು ಈತನಿಗೆ ಫೋನು ಮಾಡಿರಬೇಕು.. ಇತ್ಯಾದಿ ಎಲ್ಲ ನನ್ನ ತಲೆಯಲ್ಲಿ ತಿರುಗುತ್ತಿತ್ತು. ಅಷ್ಟರಲ್ಲಿ ಅವನೇ ಸಂಶಯ ಪರಿಹಾರ ಮಾಡಿದ.. ನನಗೆ ನೀವು ಕಳುಹಿಸಿದ ಜನ ಯಾರು ಎಂದೇ ಗೊತ್ತಿಲ್ಲ.. ಈ ಮೊದಲು ನಾಲ್ಕು ಮಂದಿ ಇಲ್ಲಿಗೆ ಬಂದಿದ್ದಾರೆ. ನಾನು ಅವರನ್ನು ನೋಡಿಯೂ ಇಲ್ಲ, ಮಾತಾಡಿಯೂ ಇಲ್ಲ. ಆದರೆ ನನ್ನ ಮೇಲಿನ ನಂಬಿಕೆಯಿಂದ ನಿಮ್ಮನ್ನು ಕಳುಹಿಸಿದ್ದಾರೆ ಎಂದು ಕಿರುನಗೆಯಲ್ಲೇ ಹೇಳಿದ.
ಉಭಯ ಕುಶಲೋಪರಿ ಎಲ್ಲ ಕೇಳಿ ಬಳಿಕ ಆತ ವಿಚಾರದ ಬಗ್ಗೆ ಮಾತನಾಡಲು ಶುರು ಮಾಡಿದ.. ನಿಮ್ಗೆ ನಾಳೆ ಔಷಧ ಹಾಕ್ತಾನು.. ಬೆಳಗೆ 7 ಗಂಟೆಗೆ ತಿಂಡಿ ತಿಂದು ಇಲ್ಗೇ ಬನ್ನಿ ಇತ್ಯಾದಿ’ ಇದನ್ನೆಲ್ಲ ಹೇಳುವಷ್ಟರ ಹೊತ್ತಿಗೆ 2 ಬಾರಿ ಬಾಯಿಗೆ ಹೊಗೆಸೊಪ್ಪು ‘ಮಧು‘ ಇಟ್ಟು ನಾಲ್ಕು ಬಾರಿ ಅದನ್ನು ಕರಂಡಕಕ್ಕೆ ಉಗುಳಿದ್ದ. ಆತನ ಹಾವ ಭಾವ ಮಾತನಾಡುವ ಶೈಲಿ ಎಂಥವರನ್ನೂ ಮರುಳುಗೊಳಿಸಿವಂತಿತ್ತು. ಅಷ್ಟರಲ್ಲೇ ಆತ ‘ವಿಷಯ’ಕ್ಕೆ ಬಂದ. ನಿಮ್ಮ ಚಿಕಿತ್ಸೆಗೆ ಮೂರು ಸಾವಿರ ಆಗುತ್ತದೆ.! ನನಗೆ ಎದೆ ಧಸಕ್ಕೆಂದಿತು.  ಒಂದು ಬಾರಿ ಗೆಳೆಯನ ಮುಖ ನೋಡಿದೆ. ಅವ ಹಣ ನೀಡಲು ಬ್ಯಾಗು ತಡಕಾಡುತ್ತಿದ್ದ. ನಾನು ಸುಮ್ಮನೆ ಕೂತೆ.
ಈ ನಡುವೆ ಯುನಾನಿ ಪಂಡಿತನ ಗಮನ ನನ್ನೆಡೆಗೆ ತಿರುಗಿತ್ತು. ಯೂ ಆರ್ ಲುಕಿಂಗ್ ಸೋ ಎನೆರ್ಜೆಟಿಕ್.. ಬಟ್.. ನಾಟ್ ವೆರಿ ಹ್ಯಾಪಿ ಎನ್ನುತ್ತಲೇ ಎದ್ದುನಿಂತು ನನ್ನತ್ತ ತಿರುಗಿ ಕುತ್ತಿಗೆ ಹಿಡಿದುಕೊಂಡ.. ಇದ್ಯಾಕೋ ಎಡವಟ್ಟಾಗುತ್ತಿದೆ ಅನ್ನಿಸತೋಡಗಿತು.. ಗೆಳೆಯನ ಬಳಿ ಕೈ ಭಾಷೆ ಮಾಡುತ್ತಿದ್ದೆ. ಪಂಡಿತ ಒಂದು ಉಸಿರು ತೆಗೆದು ಹಿಡಿತ ಮತ್ತಷ್ಟು ಬಿಗಿ ಮಾಡಿದ ಮನೆಯರೆಲ್ಲ ಕಣ್ಮುಂದೆ ಬಂದರು ಅಷ್ಟೇ.. ನನ್ನ ಕಣ್ಣು ಮೇಲಕ್ಕೆ ಹೋಯಿತು.. ಭರ್ತಿ 15-20 ಸೆಕೆಂಡಾಗಿರಬೇಕು.. ಆತ ಪಟ್ಟು ಸಡಿಲಿಸಿದ. ನನ್ನ ಹೋದ ಜೀವ ಮರಳಿ ಬಂದಿತು ಅಬ್ಬಾ ದೇವರೆ.. ಇವನ ಚಿಕಿತ್ಸೆಯೇ ಬೇಡಪ್ಪಾ ಅಂದುಕೊಂಡೆ. ನನಗೆ ಪ್ರಾಣಾಂತಿಕವಾದ್ದನ್ನು ನೋಡಿ ಚಿಕಿತ್ಸೆ ತೆಗೆದುಕೊಳ್ಳಲಿರುವ ಗೆಳೆಯ ಬೆಪ್ಪಾಗಿದ್ದ.. ನಾಳೆ ಬರುವುದೋ ಬೇಡವೋ ಎನ್ನುವಲ್ಲಿವರೆಗೆ ಬಂದಿದ್ದ.
ಆದರೆ ಬಂದ ಕಾರ್ಯವಾಗಬೇಕು ನೋಡಿ. ಬ್ಯಾಂಗ್ನಿಂದ ಅಡ್ವಾನ್ಸ್ ಎಂದು ಐನೂರರ ಎರಡು ನೋಟುಗಳನ್ನು ಕೊಟ್ಟೇ ಬಿಟ್ಟ.. ಪಂಡಿತ ಹಣ ತೆಗೆದುಕೊಂಡವನೇ ತನ್ನ ಸನಿಹದ ಲಟಾರಿ ಕಪಾಟಿಗೆ ಅದನ್ನು ಎಸೆದುಬಿಟ್ಟ.. ಅದರಲ್ಲಿದ್ದ ರಾಶಿ ಔಷಧ ಡಬ್ಬಿಗಳು, ಪೇಪರ್, ಎಂಥದ್ದೋ ಬಾಕ್ಸ್ ಬದಿಗೆ ಹೋಗಿ ನೋಟುಗಳು ಬಿದ್ದಿದ್ದವು. ನನಗೆ ತೀರ ಅಚ್ಚರಿ. ಕೊಟ್ಟ ಹಣವನ್ನು ಹೀಗ್ಯಾರಾದರೂ ಎಸೆಯುತ್ತಾರಾ..? ಬಹುಶಃ ನನ್ನ ನೋಟ ಅವನಿಗೆ ಅರ್ಥವಾಗಿರಬೇಕು. ವೇದಾಂತ ಮಾತನಾಡಲು ಶುರುವಿಟ್ಟುಕೊಂಡ ‘ಮನಿ ಇಂಪಾರ್ಟ್ಟೆಂಟ್ ನಹೀ ಹೆ.. ಒಳ್ಳೆ ಮನಸ್ಸು ಬೇಕು. ಸಂಪಾದ್ನೆ ಮಾಡ್ತಿದ್ರೆ ನಾನು ರಾಜ ಆಗ್ತಿದ್ದೆ.. ಆಗ ಸಂಪಾದನೆ ಮಾಡಿಲ್ಲ. ನನ್ನ ತಲೆತಲಾಂತರದ ವೃತ್ತಿಯನ್ನು ನಡೆಸಿಕೊಂಡು ಬರಬೇಕಿತ್ತು. ಉಳಿದವರೆಲ್ಲ ಏನೇನೋ ಹೇಳಿ ಸಂಪಾದನೆ ಮಾಡುವಾಗ ಸಂಪಾದನೆ ಮಾಡಬೇಕಿತ್ತು ಅನಿಸುತ್ತದೆ.. ಈಗ ಕಾಲ ಕಳೆದುಹೋಗಿದೆ. ದುಡ್ಡಿನ ಅವಶ್ಯಕತೆ ನನಗಿಲ್ಲ.. ಸಾಯುವ ವರಗೆ ಸೇವೆ ಮಾಡಿಕೊಂಡಿರುತ್ತೇನೆ. ನಿಮ್ಮ ಕೈಂದ ಪಡೆದ ದುಡ್ಡು ಔಷಧ ರೆಡಿ ಮಾಡೋಕೆ’ ಅಷ್ಟರಲ್ಲಿ ನನಗ್ಯಾಕೋ ಈತ ಬಹಳ ವಿಚಿತ್ರ ಮನುಷ್ಯ ಎಂಬ ತೀರ್ಮಾನಕ್ಕೆ ಬಂದಿದ್ದೆ.
ಅದಾಗಿ ಮರುದಿನ ಬೆಳಗ್ಗೆ ಹೋಗಿ ಗೆಳೆಯ ಔಷಧ ಪಡೆದಿದ್ದೂ ಆಯ್ತು.. ನೀವು ಸೋಲ್ಜರ್ ಥರಾ, ಐ ವಿಲ್ ಮೇಕ್ ಯು ಪರ್ಫೆಕ್ಟ್ ಎನ್ನುತ್ತ ಅಮೋಘ 2 ನೇ ಬಾರಿಗೆ ಕುತ್ತಿಗೆ ಹಿಚುಕಿದ್ದ. ಆದರೆ ಆ ಅನುಭವ ಮರೆಯಲು ಸಾಧ್ಯವೇ ಇಲ್ಲ. ಪ್ರಾಣ ಹೋಗುತ್ತದೆ ಎಂದೆನಿಸಿದರೂ, ಆತ ಕೈಬಿಟ್ಟ ಬಳಿಕ ಮನಸ್ಸಿಗೆ ಬಹಳ ಮುದವಾಗುತ್ತಿತ್ತು. ಒಂಥರಾ ಸ್ನಾನ ಮಾಡಿ ಬಂದು ಫ್ಯಾನ್ ಅಡಿಯಲ್ಲಿ ಕೂತರೆ ಆಗುವ ಅನುಭವದಂತೆ. ಫುಲ್ ರಿಫ್ರೆಶ್ ಅಂತಾರಲ್ಲ ಹಾಗೆ. ಸಾಲದ್ದಕ್ಕೆ ತುಮಾರಾ ಐ ಸೈಟ್ ಶಾರ್ಪ್ ಕರೇಗಾ ಎಂದು ಹೇಳುತ್ತಾ ಎಂಥದ್ದೋ ಔಷಧವನ್ನು ಬೇಡ ಬೇಡವೆಂದರೂ ಬಿಟ್ಟಿದ್ದ. 10 ನಿಮಿಷ ನನಗೆ ಕಣ್ಣೇ ಕಂಡಿರಲಿಲ್ಲ.. ಉರಿಯೋ ಉರಿ. ಈ ಜನ್ಮದಲ್ಲಿ ಆ ಕಡೆ ತಲೆಹಾಕಿ ಮಲಗಲ್ಲ ಅಂದುಕೊಂಡಿದ್ದೆ. ಅಲ್ಲಿಗೆ ಆ ದಿನದ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದೆ. ಅಂದಹಾಗೆ 2ನೇ ದಿನವೂ ಪಂಡಿತನ ಲಟಾರಿ ಕಪಾಟು ನನ್ನ ಕಣ್ಣಿಗೆ ಬಿದ್ದಿತ್ತು. ಅಚ್ಚರಿ ಎಂದರೆ, ಹಿಂದಿನ ದಿನ ಮುದ್ದೆ ಮಾಡಿ ಬಿಸಾಕಿದ್ದ ಐನೂರರ ನೋಟು ಹಾಗೇ ಬಿದ್ದುಕೊಂಡಿದ್ದವು. ನಿನ್ನೆ ಬಿಸಾಕಿದ ರೀತಿ ನಮ್ಮೆದುರಿಗೆ ಸ್ಪೆಷಲ್ ಆಗಿ ತೋರಿಸಿದ್ದಲ್ಲ ಎಂಬುದು ನನಗೆ ಸ್ಪಷ್ಟವಾಗತೊಡಗಿತ್ತು.     
ಮತ್ತೆ ಮೂರನೇ ದಿನ ಕಿಷ್ಕಿಂಧೆಯಂಥಾ ಅವನ ಕೋಣೆಯೊಳಗೆ ನುಗ್ಗಿದ್ದೂ ಆಯ್ತು.. ಮತ್ತಿನ್ನೇನೋ ಔಷಧವನ್ನೂ ನೀಡಿದ್ದ.. ಅಲ್ಲದೇ ನನಗೂ ಸಣ್ಣ ಬಾಟಲಿಯಲ್ಲಿ ಕಂದು ಬಣ್ಣದ ಎಂಥದ್ದೋ ಔಷಧ ನೀಡಿ ಇದನ್ನು ಕಣ್ಣಿಗೆ ಹಾಕಿ.. ಒಳ್ಳೇದಾಗ್ತದೆ ಅಂದಿದ್ದ. ನನಗಾವಾಗಲೇ ಇದು ಅದೇ ಉರಿ ಔಷಧ ಎಂದು ಗೊತ್ತಾಗಿತ್ತು. ಅಲ್ಲಿಗೆ ನಮ್ಮ ಅಭಿಯಾನ ಮುಕ್ತಾಯಗೊಂಡಿತ್ತು. ಮೂರು ದಿನಗಳ ಭೇಟಿಯಾದರೂ, ವೇದಾಂತ, ಹಿತವಚನ, ಬದುಕು ಕಷ್ಟಕಾರ್ಪಣ್ಯ, ನಾವು ಆಫ್ಘಾನಿಸ್ತಾನದವರು, ಎಲ್ಲಿಂದಲೋ ಬಂದು ಎಲ್ಲಿಗೋ ತಲುಪುವವರು.. ಹಾಗೆ ಹೀಗೆ ಎಲ್ಲಾ ಅಲ್ಲಾನ ದಯೆ ಎನ್ನುವಲ್ಲಿವರೆಗೆ ಬಂದಿದ್ದ. ಉಳಿದ ಹಣವನ್ನೂ ನೀಡುತ್ತಿರುವಾಗಲೇ, ನನ್ನ ಔಷಧದಿಂದ ನಿಮಗೆ ಫಲಿತಾಂಶ ಸಿಗದಿದ್ದರೆ ಹಣ ವಾಪಸ್ ಎಂದು ಕೈಮೇಲೆ ಕೈಯಿಟ್ಟು ಹೇಳಿದ್ದ.
ನನಗೆ ಅತೀವ ಕುತೂಹಲಕ್ಕೆ ಕಾರಣವಾದ ಯುನಾನಿ ಪಂಡಿತ ಸಾಧಾರಣದವನಲ್ಲ ಎಂಬುದು ಖಚಿತವಾಗಿತ್ತು. ಒಂದು ಅತ್ಯುದ್ಭುತ ಜೀವನಾನುಭವ, ಎಂಥವರನ್ನೂ ಒಲಿಸಿಕೊಳ್ಳುವ ತಾಕತ್ತು ಅವನಿಗಿದೆ ಅನಿಸಿತ್ತು. ಆತ ಕೊಟ್ಟ ಔಷಧ ಕಣ್ಣಿಗೆ ಹಾಕದಿದ್ದರೂ (ಉರಿಯ ಹೆದರಿಕೆ) ಮನೆಯಲ್ಲಿಟ್ಟಿರುವ ಆ ಬಾಟಲ್ ಆತನನ್ನು ಪದೇ ಪದೇ ನೆನಪಿಸುತ್ತಿದೆ.





ಮಂಗಳವಾರ, ನವೆಂಬರ್ 29, 2011

ಕಳೆದು ಹೋದ ಅವಳ ನೆನಪಲ್ಲಿ...

ತ್ತೆ ಮತ್ತೆ ಅವಳ ನೆನಪು.. ಅದು ಕಾಡುವ ನೆನಪು.. ಒಂದೊಮ್ಮೆ ಮರೆತು ಹೋದರೂ, ಕೆಲವೊಮ್ಮೆ ನೆನಪಾಗಲೇ ಬೇಕು.. ಅವಳಂಥವಳನ್ನು ಕಂಡಾಗಲಾದರೂ ನೆನಪಾಗಬೇಕು. ಅಂಥಾ ಒಂದು ಸ್ಥಿತಿಗೆ ನಾನು ಬಂದಿದ್ದೇನೆ. ಬೆಂಗಳೂರಿಗೆ ಬಂದ ಸಮಯದಲ್ಲಿ ಅವಳ ಬಗ್ಗೆ ಹಲವು ಕನಸು.. ಬೀದಿ ಬೀದಿಗಳಲ್ಲಿ ಅವಳ ಜೊತೆ ಓಡಾಡಬೇಕು. ವಾರದ ರಜೆ ದಿನ ಅವಳೇ ಎಲ್ಲ ಇತ್ಯಾದಿ. ನಿರೀಕ್ಷೆ ನಿಜವಾಗಲು ಹೆಚ್ಚು ದಿನವೇನೂ ಹಿಡಿಯಲಿಲ್ಲ. ಶಿವಾಜಿನಗರದ ಬೀದಿ ಬದಿಯಲ್ಲಿ ಸಾಗುತ್ತಿದ್ದವನಿಗೆ ನೀರಿಕ್ಷಿಸಿದವಳೇ ಸಿಕ್ಕಿದ್ದಳು. ಒಂದಲ್ಲ ನಾಲ್ಕಾರು ಬಾರಿ ಅಲೋಚನೆ. ಇವಳು ಆಗಬಹುದಾ ಎಂಬಂತೆ. ನಿನ್ನ ಸ್ಥಿತಿ ಗತಿಗೆ ಅವಳೇ ಆಗಬಹುದು ಮಾರಾಯಾ ಅಂತಾ ಗೆಳೆಯ ರಾಗ ತೆಗೆದಿದ್ದ. ಮುಂದಿನ ಒಂದು ಶುಭ ಸಂದರ್ಭದಲ್ಲಿ ಅವಳನ್ನು ಮನೆಗೆ ಕರೆದುಕೊಂಡು ಹೋಗಬೇಕು ಅದಕ್ಕಿಂತಲೂ ಮೊದಲು ಅವಳ ಬಗ್ಗೆ ಮನೆಯಲ್ಲಿ ಅಪ್ಪ-ಅಮ್ಮನಿಗೆ ಹೇಳಬೇಕು ಎಂದೆಲ್ಲ ಅಂದುಕೊಂಡಿದ್ದೆ ಹೇಳಿಯೂ ಇದ್ದೆ. ಮೊದಲಿಗೆ ಅಪ್ಪ ಬೇಡ ಎಂದರೂ ನನ್ನ ಮಾತಿಗೆ ಕಟ್ಟು ಬಿದ್ದು ನಿನಗೆ ಒಳ್ಳೆದಾಗುವುದಾದರೆ ಆಗಲಿ ಅಂದಿದ್ದರು. ಸರಿ. ಮತ್ತಿನ್ಯಾರನ್ನೂ ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಗೆಳೆಯನನ್ನು ಕೂಡಿಕೊಂಡು ಅವಳನ್ನು ನೋಡಲೊಮ್ಮೆ ಹೋಗಿದ್ದೆ. ಮೊದಲೇ ಇಷ್ಟವಾದವಳು ಅಲ್ಲವೇ? ಮತ್ತೆ ತಡಮಾಡಲಿಲ್ಲ. ನನ್ನೊಂದಿಗೆ ಬರುತ್ತೀಯಾ ಎಂದು ಕೇಳಿದೆ. ಆಕೆಗೂ ಮನಸ್ಸಿತ್ತು. ಮಾರನೇ ದಿನ ಹೋದಾಗ ಬಾಗಿಲಲ್ಲೇ ನಿಂತಿದ್ದಳು. ನಾನು ಅಪಾರ ಖುಷಿಯಿಂದ ಅವಳನ್ನು ಕರೆದುಕೊಂಡು ಬಂದೆ.
ನಿಜವಾದ ಕಥೆ ಶುರುವಾಗುವುದೇ ಇನ್ನು, ಅವಳು ಬಂದ ಮೇಲಿನ ಸಂಭ್ರಮ ಹೇಳಬೇಕೆ. ಸಣ್ಣ ಮಕ್ಕಳಿಗೆ ಪ್ರೀತಿಯ ವಸ್ತುಕೊಟ್ಟರೆ ಆಗುವಷ್ಟೇ ಸಂತಸ ನನಗಾಗಿತ್ತು. ದಿನವೂ ಅವಳೊದಂದಿಗೆ ಸಂಭ್ರಮಿಸುವುದೇನು, ಕನ್ನಿಂಗ್ಹ್ಯಾಮ್ ರಸ್ತೆಯಿಂದ ಪ್ಯಾಲೇಸ್ ರೋಡ್ನವರೆಗೆ, ಕಬ್ಬನ್ ಪಾರ್ಕ್, ಕಮರ್ಷಿಯಲ್ ಸ್ಟ್ರೀಟ್ಗಳಲ್ಲಿ ಕೈಕೈ ಹಿಡಿದು ಅಡ್ಡಾಡಿದ್ದೇನು ಒಂದಾ ಎರಡಾ. ಆಫೀಸ್ಗೂ ಅವಳ ಜೊತೆಯೇ ಹೋಗುವುದೆಂದು ಬಳಿಕ ನಿರ್ಧಾರ ಮಾಡಿಕೊಂಡೆ. ಹೋಗುವುದು ಬರುವುದು ಜೊತೆಯಲ್ಲೇ. ದಿನಕಳೆದದ್ದೇ ಗೊತ್ತಾಗಲಿಲ್ಲ. ನಾನು ಇವಳ ಜೊತೆ ಬರುವುದೆಂದು ಆಫೀಸ್ನಲ್ಲಿ ಕೆಲವರಿಗೆ ತೀವ್ರ ಕುತೂಹಲ ಹುಟ್ಟಿತ್ತು. ಸೆಕ್ಯುರಿಟಿ ಗಾರ್ಡ್ ನಿಂದ ಹಿಡಿದು, ಬಾಸ್.. ಎಲ್ಲರೂ ನನ್ನನ್ನು ನೋಡುವವರೇ. ಕೆಲವರು ಮನಸ್ಸು ತಡೆಯಲಾರದೆ ಕೇಳಿಬಿಟ್ಟಿದ್ದರು. ಹೇಗಿದೆ ಲೈಫು ಎಂಬತೆ. ಇನ್ನು ಕೆಲವರು ನನ್ನದೇ ಮನಸ್ಥಿತಿಯವರು ಇಂಥವಳು ನಮಗೂ ಸಿಕ್ಕಿದ್ದರೆ ಚೆನ್ನಾಗಿತ್ತು ಎಂದೂ ಹೇಳಿದ್ದರು. ಅಷ್ಟರ ಮಟ್ಟಿಗೆ ನಾನು ಅದೃಷ್ಟವಂತ.
ಹೀಗೆ ದಿನಗಳು ಉರುಳುತ್ತಿದ್ದಂತೆ, ಸಂತೋಷವೂ ಹಾಗೇ ಇರಬೇಕೆಂದೇನಿಲ್ಲವಲ್ಲ.. ಅಷ್ಟಕ್ಕೂ ಆ ಘಟನೆ ನಡೆದೇ ಹೋಗಬಹುದೆಂಬ ಅನುಮಾನವೂ ನನಗಿರಲಿಲ್ಲ. ನಾನಿದ್ದ ಮನೆ, ನೆರೆಕರೆಯವರಿಗೂ ಇವಳು ಇಷ್ಟವಾಗಿದ್ದಳು. ನಾನು ಇವಳೊಂದಿಗೆ ಹೋಗುವಾಗ ಬರುವಾಗ ಎಲ್ಲರೂ ತದೇಕ ಚಿತ್ತದಿಂದ ನನ್ನನ್ನೇ ನೋಡುತ್ತಿದ್ದರು. ನಾನೂ ಒಳಗೊಳಗೇ ಸಂಭ್ರಮಿಸುತ್ತಿದ್ದೆ. ನನ್ನ ಗೆಳೆಯರಂತೂ ನನಗಿಂತಲೂ ನನ್ನ ಖುಷಿಯ ಮನಸ್ಥಿಗೆ ಸಂಭ್ರಮಪಟ್ಟಿದ್ದರು. ಆದರೆ...
ಆ ದಿನ ಬಂದೇ ಬಿಟ್ಟಿತು.  ಅಂದು ನಾನು ಅವಳೊಂದಿಗೆ ಆಫೀಸಿಗೆ ಹೋಗೇ ಇರಲಿಲ್ಲ. ಬೆಳಗ್ಗೆ ಎಲ್ಲೋ ಸುತ್ತಾಡಿ, ಅಲ್ಲಿಂದಲೇ ಆಫೀಸಿಗೆ ಹೋಗಿದ್ದೆ. ಅವಳು ಮನೆಯಲ್ಲಿದ್ದಳು. ಹೋಗುವಾಗ ನನಗೆ ಕಂಪನಿಯಿಲ್ಲ ಎಂದು ಅನಿಸುತ್ತಿತ್ತು. ಇಂದು ಒಂದೇ ದಿನ ಮಾತ್ರ ಹೀಗೆ ನಾಳೆಯಿಂದ ಅವಳ ಕಂಪನಿ ಇದ್ದೇ ಇದೆಯಲ್ಲ ಅಂದುಕೊಂಡಿದ್ದೆ.
ಅಂದು ನನಗೆ ಮಧ್ಯಾಹ್ನ ಮೇಲೆ ಕೆಲಸ. ಮಧ್ಯಾಹ್ನ ಎರಡೂವರೆ ಹೊತ್ತಿಗೆ ಆಫೀಸಿಗೆ ತಲುಪಿ, ರಾತ್ರಿ ಹನ್ನೆರಡು ಗಂಟೆ ಪರ್ಯಂತ ನಿರಂತರ ದುಡಿಮೆ ಮಾಡಿ ಮನೆಗೆ ಹೊರಟಿದ್ದೆ. ಆಫೀಸ್ನ ಮೆಟ್ಟಿಲಿಳಿಯುತ್ತಿರುವಾಗಲೊಮ್ಮೆ ಮತ್ತೆ ಅವಳ ನೆನಪು. ಛೇ ಇವತ್ತಿಲ್ಲ ಅವಳು ಎಂಬಂತೆ. ಸರಿ ಬೀದಿ ದೀಪದ ಬೆಳಕಿನಲ್ಲೇ ಅವರಳನ್ನು ನೋಡುವ ನೆವದಲ್ಲಿ ಅವಸರವಸರವಾಗಿ ನಡೆದುಕೊಂಡು ಹೋಗಿದ್ದೆ. ಇನ್ನೇನು ಮನೆ ತಲುಪಲಿದೆ ಅನ್ನುವಷ್ಟರಲ್ಲಿ ಮನಸ್ಸು ಭಾರವಾಗಿತ್ತು.. ಏನೋ ಆಗಬಾರದ್ದು ಆಗಿದೆ ಎಂಬಂತೆ. ಹಾಗಾದಿರಲಪ್ಪಾ, ಅವಳು ಚೆನ್ನಾಗಿರಲಿ ಅಂತ ಮನದಲ್ಲೇ ಅಂದುಕೊಂಡಿದ್ದೆ. ಕೆಲವೊಮ್ಮೆ ಗ್ರಹಿಸಿದ್ದು ನಿಜವಾಗುತ್ತದಂತೆ.. ಇಲ್ಲೂ ಹಾಗೇ ಆಯಿತು. ನನ್ನ ಕನಸು ಚೂರು ಚೂರಾಗಿತ್ತು. ಅವಳು ಮನೆಯಲ್ಲಿ ಇರಲೇ ಇಲ್ಲ. ಒಮ್ಮೆ ಕುತೂಹಲ, ಹೊರಗಡೆ ಹೋಗಿರಬಹುದಾ ಎಂಬಂತೆ. ಅಲ್ಲೇ ಮಲಗಿದ್ದ ಸ್ನೇಹಿತನನ್ನು ಕೇಳಿದೆ. ಅವಳೆಲ್ಲಿದ್ದಾಳೆ ಎಂದು ‘ಗೊತ್ತಿಲ್ಲ.. ಇರಬಹುದು ಇಲ್ಲೇ’ ಎಂದು ಮುಸುಕೆಳೆದು ಮಲಗಿಕೊಂಡ. ನನಗೆ ಕ್ಷಣ ಕ್ಷಣ ಕಷ್ಟವಾಗುತ್ತಿತ್ತು. ಹಾಗಾದರೆ ಈ ರಾತ್ರಿ 1 ಗಂಟೆ ಸುಮಾರಿಗೆ ಎಲ್ಲಿಗೆ ಹೋಗಿರಬಹುದು ಎಂಬ ಪ್ರಶ್ನೆಯೊಂದಿಗೆ ಹುಡುಕಲು ಶುರುಮಾಡಿದೆ. ಎಲ್ಲೂ ಇಲ್ಲ ಮನೆಯ ಹಿಂಭಾಗ ಆ ವಠಾರದ ಸಂದು ಗೊಂದಿಗಳಲ್ಲೆಲ್ಲೂ ಇಲ್ಲ.. ಬಿಟ್ಟು ಹೋದ್ದಕ್ಕೆ ಆಗಬಾರದ್ದು ಆಯಿತಲ್ಲಾ ಎಂಬ ದುಃಖ ಉಮ್ಮಳಿಸಿ ಬರುತ್ತಿತ್ತು. ಉಪಾಯ ಕಾಣದೆ ಅವಳ ನೆನಪಲ್ಲಿ ಕದ ಹಾಕಿ ಮಲಗಿದೆ. ನಿದ್ದೆಯೂ ಇಲ್ಲ. ಬೆಳಗ್ಗೆ ಎದ್ದು ಇನ್ನೊಂದು ರೌಂಡ್ ಹುಡುಕುವ ಮನಸ್ಸಾಯಿತು. ಎಲ್ಲಿ ನೋಡಿದರೂ ಅವಳ ಪತ್ತೆಯಿಲ್ಲ. ಹತ್ತಿರದ ಮನೆಯವರಿಗೆ ಆಶ್ಚರ್ಯ, ಬೇಸರ. ಕೆಲವರು ನೋಡಿದ್ರೆ ಹೇಳ್ತೀವಪ್ಪಾ.. ಅಂದರು. ನನ್ನ ಕಷ್ಟ ಗೆಳೆಯರಿಗೂ ಹೇಳಿಕೊಂಡೆ ಆದರೆ ಪ್ರಯೋಜನವಾಗಲಿಲ್ಲ. ನಾಲ್ಕಾರು ತಿಂಗಳಿಂದ ಒಟ್ಟಿಗಿದ್ದವಳು ಒಂದು ಹೊತ್ತಿನಲ್ಲಿ ನನ್ನ ಬಿಟ್ಟೇ ಹೋಗಿದ್ದಳು. ಮತ್ತೆ ಏಕಾಂಗಿ ಬದುಕಿಗೆ ಮರಳಿದ್ದೆ.
ಅಲ್ಲಿಂದ ಬಳಿಕ ನನಗೆ ಕೆಲವೊಮ್ಮೆ ಅವಳ ನೆನಪು ಕಾಡುತ್ತದೆ. ಅವಳು ಅವಳೇ ಅಲ್ಲವೇ.? ಬೇರೆಯವರು ಆ ಜಾಗ ತುಂಬುವುದು ಕಷ್ಟ. ಭಾವನಾತ್ಮಕ ವಿಷಯ ಅದು. ಮೊನ್ನೆ ಮೊನ್ನೆ ಗೆಳತಿಯ ಮನೆಗೆ ಹೋಗಿದ್ದವನಿಗೆ ಅವಳಂತೇ ಒಬ್ಬಳು ಕಂಡಿದ್ದಳು. ಅಷ್ಟಕ್ಕೆ ಇಷ್ಟೆಲ್ಲ ಹೇಳಬೇಕಾಯಿತು. ಅದು ನನ್ನ ಪ್ರೀತಿ ಪಾತ್ರದ ಸೈಕಲ್. ಚೈನಿನಲ್ಲಿ ಬಿಗಿದಿದ್ದರೂ ದೊಡ್ಡ ಬೀಗ ಕತ್ತರಿಸಿ ಲಪಟಾಯಿಸಿದ್ದರು. ಖದೀಮರ  ಐದೋ ನಾಲ್ಕೋ ಸಾವಿರದ ಆಸೆಗೆ ನನ್ನ ಕನಸು ಹಾಗೇ ತೊಳೆದು ಹೋಗಿತ್ತು.
 

ಶನಿವಾರ, ನವೆಂಬರ್ 5, 2011

ಶವಯಾತ್ರೆಗಳ ನಡುವೆ

ಬ್ಲಾಗ್ ಬರೆಯದೇ ಹಲವು ಕಾಲವೇ ಆಗಿ ಹೋಯಿತು.. ಇನ್ನೇನು ಮರೆತೇ ಹೋಯಿತು ಅನ್ನುವಷ್ಟರಲ್ಲಿ ಮತ್ತೆ ವಿನಾಕಾರಣ ಬ್ಲಾಗ್ ನೆನಪಾಗಿದೆ. ಬೆಂಗಳೂರಿಗೆ ಬಂದು ಕಳೆದ ಬಾರಿ ಭಿಕ್ಷುಕರ ತವಕ ತಲ್ಲಣಗಳ ಬಗ್ಗೆ ಬರೆದಿದ್ದು. ಒಂದಷ್ಟು ಸಮಾನ ಮನಸ್ಕರು ಹೌದಾ.. ಹಾಗಾ ಎಂಬಂತೆ ಕೇಳಿದ್ದೂ ಆಯಿತು. ಅಲ್ಲಿಗೆ ಬದುಕಿನ ಜಂಜಾಟದಲ್ಲಿ ಬ್ಲಾಗ್ ಮರೆತೇ ಹೋಗಿತ್ತು. ಈಗ್ಯಾಕೆ ಬರೆಯುತ್ತಿದ್ದೀರಿ ಎಂಬುದಕ್ಕೆ ವಿಶೇಷ ಕಾರಣವಿದೆ. ಅಂತಹ ಸಂದರ್ಭವೂ ಸೃಷ್ಟಿಯಾಗಿದೆ. ನಾನಿರುವ ಸ್ಥಳ ಅಂಥದ್ದೇ ಆಗಿ ಹೋಗಿದೆ. ಹೇಳಿದರೆ ಆಶ್ಚರ್ಯ ಪಡುತ್ತೀರಿ.. ನನ್ನ (ಈಶ್ವರ) ಹೆಸರಿಗೆ ನಿಜವಾದ ಅನ್ವರ್ಥವೇ ಆಗಿದೆ.
ಹರಿಶ್ಚಂದ್ರ ಘಾಟ್..!! ಯಾರಿಗೆ ಗೊತ್ತಿಲ್ಲ ಹೇಳಿ.. ಬೆಂಗಳೂರು ಆಜು ಬಾಜಿನ ಸುತ್ತ.. ಹೊರವಲಯದಲ್ಲೂ ಬಹಳ ಫೇಮಸ್ಸು.. ಈ ಸ್ಥಳ... ಅದೊಂದು ಸ್ಮಶಾನ.. ಹೆಣ ಸುಡುವ ಅಥವಾ ಹೆಣ ಹೂಳುವ ಸ್ಥಳ.. ಬೆಂಗಳೂರಿನಲ್ಲೇ ಅತಿ ದೊಡ್ಡದು.. ವಿದ್ಯುತ್ ಮತ್ತು ಕಟ್ಟಿಗೆಯ ಸುಸಜ್ಜಿತ ಚಿತಾಗಾರಗಳಿರುವ ಸ್ಥಳ. ಅದರ ಎದುರು ಒಂದು ಬಸ್ ನಿಲ್ದಾಣ... ನೂರಾರು ಮಂದಿ ಆಫೀಸ್ಗೆ, ಮಕ್ಕಳು ಶಾಲಾ ಕಾಲೇಜಿಗೆ ಬಸ್ಸು ಹತ್ತುವ ಸ್ಥಳ. ಬದಿಯ ಓಣಿಯಲ್ಲಿ, ಸ್ವಲ್ಪ ಮುಂದೆ ಸಾಗಿ ಸ್ವಲ್ಪ ಎಡಕ್ಕೆ ತಿರುಗಿದರೆ ಅಲ್ಲೆ ನನ್ನ ಬಾಡಿಗೆ ಮನೆ. ಮನೆಗಿಂತಲೂ ಅದು ರೂಂ ಎಂದರೆ ಸೂಕ್ತ. ಇಂತಿಪ್ಪ.. ನಾನು ಹೇಳಲೇ ಬೇಕಾದ್ದು.. ಶವಗಳ ಕುರಿತು.. ಶವಯಾತ್ರೆಯ ಕುರಿತು.. ಮತ್ತು ಮನುಷ್ಯನ ಅಂತಿಮ ಯಾತ್ರೆಯ ಒಂದು ಸೂಕ್ಷ್ಮ ಮನಸ್ಥಿತಿ ಬಗ್ಗೆ.
ಹೇಳಿ ಕೇಳಿ ಇಂಥ ಸ್ಥಳದಲ್ಲೇ ನಾನು ಬಂದು ಕುಳಿತದ್ದು.. ಅಚಾನಕ್ ಆಗಿ, ಒಂದು ಹಂತದಲ್ಲಿ ತೀವ್ರ ಅನಿವಾರ್ಯತೆಯಿಂದಾಗಿ. ನಂಬಿದರೆ ನಂಬಿ ದಿನಕ್ಕೆ ನಾನು ಕನಿಷ್ಟ 1/2 ಶವಯಾತ್ರೆಯನ್ನು ತಪ್ಪದೇ ನೋಡುತ್ತೇನೆ.. ಅಥವಾ ಶವಯಾತ್ರೆಯ ಗೌಜಿ ಗದ್ದಲ ಬ್ಯಾಂಡ್, ಪಟಾಕಿಗಳ ಅಬ್ಬರವನ್ನಾದರೂ ಕೇಳುತ್ತೇನೆ. ಶವವನ್ನು ಹೂವಿನಿಂದ ಅಲಂಕರಿಸಿರುವ ಅಂಬ್ಯುಲೆನ್ಸ್ನಲ್ಲಿಟ್ಟಿದ್ದರೆ ಅದರೆದುರು ಒಂದು ಬ್ಯಾಂಡ್ ಸೆಟ್.. ಅದರ ಹಿಂದೆ ಪಟಾಕಿ ಹೊಡೆಯುವ ಹುಡುಗರು.. ಅಂಬ್ಯುಲೆನ್ಸ್ ಹಿಂದೆ ಮೃತರ ಸಂಬಂಧಿಕರೋ, ಆತ್ಮೀಯರೋ ಇತ್ಯಾದಿ.. ಇನ್ನು ಅಂಬ್ಯುಲೆನ್ಸ್ ಒಳಗೆಯೂ ನಾಲ್ಕಾರು ಮಂದಿ. ಅವರಲ್ಲೆ ಅಂಬ್ಯುಲೆನ್ಸ್ಗೆ ಕಟ್ಟಿದ್ದ ಹೂವಿನ ಮಾಲೆಗಳನ್ನು ಕಿತ್ತು, ಹೀಗೆ ದಾರಿಗೆ ಚೆಲ್ಲುತ್ತಾ ಹೋಗುತ್ತಾರೆ.. ಹಿಂದಿನವರಿಂದ ಮೃತರ ಹೆಸರು ಹೇಳಿ ಜೈಕಾರವೋ, ಗೋವಿಂದ ನಾಮಸ್ಮರಣೆಯೋ ಎಂಥದ್ದೋ ಒಂದು. ಅವರೊಂದಿಗೆ ಅಳುವವರೂ ಇಲ್ಲದಿಲ್ಲ.. ಆದರೆ ಶವ ಮೆರವಣಿಗೆಯ ಬೊಬ್ಬೆಯಲ್ಲಿ ಅವರ ಅಳು, ಯಾವುದೂ ಕೇಳಿಸುವುದಿಲ್ಲ.. ಹಾಗೇ ಹೋದವರು ಸ್ಮಶಾನದ ಒಳಗೆ ಹೋಗಿ ಅಂಬ್ಯುಲೆನ್ಸ್ನಿಂದ ಶವ ಇಳಿಸಿ, ವಿದ್ಯುತ್ ಚಿತಾಗಾರದಲ್ಲೋ, ಕಟ್ಟಿಗೆ ಚಿತಾಗಾರದಲ್ಲೋ ಇಟ್ಟು ಕೈತೊಳೆಯುತ್ತಾರೆ. ಅಲ್ಲಿಗೆ ಶವದ್ದು, ಸಂಬಂಧಿಗಳದ್ದು ಕೆಲಸ ಮುಗಿದಂತೆ.. ಈ ವಿಚಾರಗಳಿಗೆಲ್ಲ ಆರಂಭದಲ್ಲಿ ಅಷ್ಟೆಲ್ಲ ತಲೆಕೆಡಿಸಿಕೊಳ್ಳದಿದ್ದರೂ, ಕ್ರಮೇಣ ನನ್ನಲ್ಲಿ ಕೆಲ ಕುತೂಹಲ ಹುಟ್ಟಿಸಿದ್ದವು. ಶವ ಮೆರವಣಿಗೆಯಲ್ಲಿ ಸಂಬಂಧಿಕರ ನಡೆ. ಹೂವು ಹಾಕಿದ ಅಂಬ್ಯುಲೆನ್ಸ್, ಮೌನವಾಗಿ ಹೋಗುತ್ತಾರಾ.? ಅಥವಾ ಬ್ಯಾಂಡ್ ಪಟಾಕಿಗಳ ಅಬ್ಬರ ಇದೆಯಾ ಇತ್ಯಾದಿ. ಅದಕ್ಕೂ ಹೆಚ್ಚಿಗೆ ಶವ ಮೆರವಣಿಗೆಯಲ್ಲಿ ಜನರೆಷ್ಟಿದ್ದಾರೆ ಎಂಬುದು. ಮೃತಪಟ್ಟವ ಅವರ ಏರಿಯಾದಲ್ಲಿ, ತನ್ನ ಪಾಳಯದಲ್ಲಿ ಒಂದಷ್ಟು ಹವಾ ಸೃಷ್ಟಿಸಿದ್ದನೆಂದರೆ ಈ ಮೆರವಣಿಗೆಯಲ್ಲಿ ಜನ ಹೆಚ್ಚು. ಅಂಬ್ಯುಲೆನ್ಸ್ ಎದುರು ಒಂದು ರಿಕ್ಷದಲ್ಲೋ ಜೀಪಿನಲ್ಲೋ ಆತನ ಫೋಟೋ ಹಾಕಿ ಒಂದು ಹೂವಿನ ಹಾರ ಹಾಕಿ ಗಡದ್ದು ಮೆರವಣಿಗೆ. ಮೆರವಣಿಗೆ ಹಿಂದೆ ಮುಂದೆ ಜನವೋ ಜನ. ಅಲ್ಲದೇ ರಸ್ತೆಯಲ್ಲಿ ಹೋಗುವ ವಾಹನಗಳನ್ನು ನಿಯಂತ್ರಿಸಲು ಸ್ವಯಂಸೇವಕರಂತ ವ್ಯವಸ್ಥೆ. ಸಾಮಾನ್ಯರಾದರೆ ಅಂತಹ ಗೌಜಿ ಗದ್ದಲಗಳು ಕಡಿಮೆಯೇ..
ಇಂತಹ ಮೆರವಣಿಗೆಗಳೆಂದರೆ ನಾನಿರುವ ಪ್ರದೇಶದ ಜನರಿಗೆ ಸಾಮಾನ್ಯವಾಗಿ ಬಿಟ್ಟಿವೆ. ಅವರಿಗೆ ಏನೂ ಅನ್ನಿಸುವುದೇ ಇಲ್ಲ.. ನಿತ್ಯಕರ್ಮ ಅದು.. ಸಣ್ಣದಿರುವಾಗ ಒಂದು ಬ್ಯಾಂಡ್ ಶಬ್ದ, ಒಂದು ಮೋಟಾರು ವಾಹನದ ಶಬ್ದ ಕೇಳಿದರೆ ಎದ್ದು ಬಿದ್ದು ಅಂಗಳಕ್ಕೆ ಓಡುತ್ತಿದ್ದ ನನಗೆ, ದಿನವೂ ಬ್ಯಾಂಡ್ ಶಬ್ದ ಕೇಳುವಂತಾಗಿದೆ. ಇಷ್ಟಕ್ಕೂ ಅಲ್ಲೇ ಇರಬೇಕೆಂದೇನೂ ಇಲ್ಲ.. ಆದರೂ ಇದ್ದೇನೆ. ದಿನ ದಿನ ಕಳೆದಂತೆ ಶವಯಾತ್ರೆ ಕುತೂಹಲ ಹುಟ್ಟಿಸಿದ್ದರೂ. ಅದರ ಕುರಿತ ಒಳನೋಟದಲ್ಲಿ ಎಲ್ಲರೂ ಹೀಗೇ ಹೋಗುವವರೇ ಎಂದು ಅನಿಸಿದ್ದಿದೆ. ಜೀವಂತವಿದ್ದಾಗ ಯಾರಿಗೂ ಬೇಡವಾಗಿ ಮೃತಪಟ್ಟ ಬಳಿಕ ಅತ್ತೂ ಕರೆದು ಕಳುಹಿಸಿ ಕೊಡುವ ಗೌಜು ಗದ್ದಲಗಳೇನು.. ತೀರ ವಿಚಿತ್ರ ಅನ್ನಿಸಿ ಬಿಡುತ್ತದೆ. ಹುಟ್ಟಿನ ಸಂಭ್ರಮವನ್ನು ಸಾವಿನಲ್ಲೂ ಕಾಣಿ ಎಂಬುದು ಹಿಂದಿನ ಮಾತು. ಅದರಂತೆ ನನ್ನೆದುರು ಶವಯಾತ್ರೆಗಳೂ ಹೋಗುತ್ತವೆ. ಮೃತಪಟ್ಟವರನ್ನು ತುಂಬು ಮನಸ್ಸಿನಿಂದ ಯಾರಾದರೂ ಕಳುಹಿಸಿ ಕೊಡುತ್ತಾರಾ..? ನಿನ್ನ ಬದುಕು ಸಾರ್ಥಕವಾಯಿತು ಎಂದು ಯಾರಾದರೂ ಹೇಳುತ್ತಾರಾ? ಇಂಥ ಪ್ರಶ್ನೆಗಳೆಲ್ಲವನ್ನು ಶವಯಾತ್ರೆ ಹೋದಾಗೆಲ್ಲ ಆಗಿಂದಾಗ್ಗೆ ಮನಸಿಗೆ ಬರುತ್ತವೆ. ಅಂತ್ಯಕ್ರಿಯೆಯೊಂದಿಗೆ ವ್ಯಕ್ತಿಯ ಬದುಕು ಅಂತ್ಯವಾದರೂ, ಅವನಿಂದ ಸೃಷ್ಟಿಯಾದದ್ದು ಒಂದಿಬ್ಬರಿಗಾದರೂ ನೆನಪಿನಲ್ಲಿ ಉಳಿಯುತ್ತಾದಾ ಎಂಬುದನ್ನೂ ಕೇಳಿಕೊಳ್ಳುತ್ತೇನೆ.. ಇಷ್ಟು ಬರೆಯುವಷ್ಟರಲ್ಲಿ.. ಮತ್ತೆ ದೂರದಲ್ಲೆಲ್ಲೋ ಬ್ಯಾಂಡ್, ಪಟಾಕಿ ಶಬ್ದದಂತೆ ಕೇಳಿಸುತ್ತಿದೆ.

ಚಿತ್ರ: ಇಂಟರ್ನೆಟ್ ಕೃಪೆ

ಸೋಮವಾರ, ಸೆಪ್ಟೆಂಬರ್ 13, 2010


ನಮ್ಮ `ಗೆಸ್ಟ್'..!

ಇನ್ನೇನು ಚಪ್ಪಲಿ ಹಾಕಿ ಹೊರಡಬೇಕು ಎನ್ನುವಷ್ಟರಲ್ಲಿ ಸ್ನೇಹಿತನ ಆಗಮನ. ಅವಸರವಸರವಾಗಿ ಬಂದವನೇ ನಮ್ಮ ಬಾಡಿಗೆ ಮನೆಗೆ ಒಳಹೊಕ್ಕು ಕೇಳಿದ... ಈರೆಡ ಪರತ್ ಟೀಶರ್ಟ್ ಉಂಡೇ...(ನಿಮ್ಮಲ್ಲಿ ಹಳೆ ಟೀಶರ್ಟ್ಇದೆಯಾ) ಅಂತಾ ಕೇಳಿದ.. ಏನಪ್ಪಾ ಇವನು ಹಳೆ ಟೀಶರ್ಟ್ ಕೇಳ್ತಾನೆ... ಅಂಗಿ ಏನಾದ್ರೂ ಹರಿದುಹೋಯ್ತಾ... ಅಂತಾ ಅಡಿಯಿಂದ ಮುಡಿಯುವವರೆಗೆ ಆರ್ಶರ್ಯಕರ ರೀತಿಯಲ್ಲಿ ನೋಡಿದೆ... ಬಹುಶಃ ನನ್ನ ಅವನಿಗೆ ಭಾವನೆ ಕೂಡಲೇ ಅರ್ಥವಾಗಿರಬೇಕು..... ಎಂಕತ್ತ್ ಮಾರ್ರೆ... (ನನಗಲ್ಲ ಮಾರಾಯ್ರೆ) ಅಂದ.. ಪುನಃ ನನ್ನ ಪ್ರಶ್ನೆ.. ಮತ್ತೆ ಯಾರಿಗೆ....??  ಗೆಸ್ಟ್ ಬಂದಿದ್ದಾರೆ.. ಅವರಿಗೆ ಕೊಡಬೇಕು.. ಎಂದ.. ನಾನಂದೆ... ನನ್ನಲ್ಲಿ ಹಳೇ ಟೀಶರ್ಟ್ ಅಂತಾ ಯಾವುದೂ ಇಲ್ಲ... ಒಂದ್ಸಲ ಹಾಕೋದಾದ್ರೆ ಕೊಡೋಣ... ಅಲ್ಲ.. ಅದು ಅವ್ರಿಗೆ ಪರ್ಮನೆಂಟ್.. ಬೇಕು.... ಎಂದ ಸರಿ... ಎನ್ನುತ್ತಾ ನಾನು ಅಲ್ಲೇ ಇದ್ದ ನನ್ನ    ಟೀಶರ್ಟ್ ತೆಗೆದುಕೊಟ್ಟೆ... ಅದಕ್ಕಿಂತಲೂ ನನಗೆ ಸ್ನೇಹಿತ ಕರಕೊಂಡು ಬಂದ ಗೆಸ್ಟ್ ನೋಡೋ ಕುತೂಹಲ.. ಯಾರಪ್ಪ ಒಂದು ಬಟ್ಟೆಗೂ ಗತಿಯಿಲ್ಲದಿರೋನು  ಅಂತಾ ಆಶ್ಚರ್ಯವಾಗಿತ್ತು. ಮನೆಯಿಂದ ಹೊರಗೆ ಬಂದವನೇ...... ಎದುರಿಗೆ ಇವನ ಗೆಸ್ಟ್ ನಿಂತಿದ್ದಾನೆ.. ಖಾಕಿ ಅಂಗಿ, ಚಡ್ಡಿಯಲ್ಲಿ. ನಿರರ್ಗಳವಾಗಿ ಇಂಗ್ಲೀಷ್ನಲ್ಲಿ ಮಾತನಾಡುತ್ತಿದ್ದ......  ಅಸಹನೀಯ ಗಬ್ಬುನಾಥ ಬೇರೆ.. ವಾಕ್ ವಾಕ್.. ವಾಂತಿ ಬಂದತಾಯಿತು.. ಅಯ್ಯೋ... ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ.

ಬಿಟ್ಟು ಬಿಡಿ ಪ್ಲೀಸ್....
ಅಂದಹಾಗೆ..ಗೆಸ್ಟ್ ಗೂ ಮೊನ್ನೆ ಮೊನ್ನೆ ಬೆಂಗಳೂರಿನ ಭಿಕ್ಷುಕರ ಕಾಲೊನಿಗೂ ಸಂಬಂಧವಿದೆ. ಕಾಲೊನಿಯದ್ದು ಹೇಳಲಾರದ... ಕರುಣಾಜನಕ ಕಥೆ.. ಇಡೀ ಮನವ ಸಮಾಜಕ್ಕೇ ನಾಚಿಕೆಗೇಡಿನ ವಿಚಾರ.  ಭಿಕ್ಷುಕರ ಕಾಲೊನಿ ಅನ್ನೋ ನರಕಸದೃಶ ವಾತಾವರಣದಲ್ಲಿ.. ಚಿಕಿತ್ಸೆ ಇಲ್ಲದೆ... ಬೀದಿ ನಾಯಿಗಿಂತಲೂ ತೀರ ನಿಕೃಷ್ಟ ಮಟ್ಟದಲ್ಲಿ ಒಂದೇ ತಿಂಗಳಿನಲ್ಲಿ ಸುಮಾರು 27 ಹೆಣಗಳುರುಳಿದ್ದವು.... ಅದಕ್ಕೂ ಮುನ್ನ ಮಲಗಿದ್ದಲ್ಲೇ ಹೆಣವಾದವರೆಷ್ಟೋ....? ಅಲ್ಲಿ ಮನುಷ್ಯರನ್ನು ಮನುಷ್ಯರಂತೆ ನೋಡಿಕೊಳ್ಳುತ್ತಿಲ್ಲ ಅನ್ನೋದು ನನಗೆ ಅರಿವಾದದ್ದು ಸ್ನೇಹಿತ ಕರೆದುಕೊಂಡು ಬಂದಿದ್ದ `ಗೆಸ್ಟ್'ನ ಅವಸ್ಥೆ ನೋಡಿಯೇ...
ಮೈತುಂಬಾ ಕೊಳೆ, ಗಬ್ಬು ನಾರುವ ದೇಹ, ಬಟ್ಟೆಗಳು.... ಹಲ್ಲುಜ್ಜದೇ ವರ್ಷಗಳೇ ಕಳೆದುವೇನೋ ಅನ್ನೋ ಪರಿಸ್ಥಿತಿ.. ಆ ಮನುಷ್ಯನ ಹತ್ತಿರಕ್ಕೂ ಹೋಗಲಾಗುತ್ತಿರಲಿಲ್ಲ.. ಅಂತಾ ಮನುಷ್ಯನನ್ನು ಈ ಅಸಾಮಿ ಬೈಕ್ನಲ್ಲಿ ಕುಳ್ಳಿರಿಸಿ ಕರಕೊಂಡು ಬರಬೇಕಾದರೆ... ಅಬ್ಬಾ.. ಎಂದಿತ್ತು ಮನಸ್ಸು..
ಅವನ ಹೆಸರು ರಾಮಕೃಷ್ಣ... ವಯಸ್ಸು ಸುಮಾರು 55 ದಾಟಬಹುದು. ಶಿರಾ ಬಳಿಯ ಯಾವುದೋ ಒಂದು ಊರು.. ಪಾಶ್ರ್ವವಾಯು ಪೀಡಿತನಾಗಿದ್ದವನು ಚಿಕಿತ್ಸೆಗೆಂದು ಬೆಂಗಳೂರಿಗೆ  ಆಸ್ಪತ್ರೆಗೆ ಬಂದಿದ್ದ... ಬಟ್ಟೆಯೆಲ್ಲ ಕೊಳಕಾಗಿ ಭಿಕ್ಷುಕನಂತೆ ಕಾಣುತ್ತಿತ್ತೋ ಏನೋ.. ಆಸ್ಪತ್ರೆಯಲ್ಲಿ ಕುಳಿತಿದ್ದ ಇವನನ್ನು ಭಿಕ್ಷುಕರ ಕಾಲೊನಿಯ ಕಟುಕರು ನೋಡಿದವರೇ ಎತ್ತಾಕಿಕೊಂಡು ಹೋಗಿದ್ದರು.. ಇವನದೋ ಒಂದೇ ಸವನೆ ಬೊಬ್ಬೆ.. ಬಿಡಿ ನನ್ನ... ಊರಿಗೆ ಹೋಗ್ಬೇಕು.. ಉಹೂಂ... ಇವನ ರೋದನೆಗೆ ಅವ
ರಾರೂ ಜಗ್ಗಲಿಲ್ಲ.. ಎರಡೇಟು ಹಾಕಿ ಕಾಲೊನಿಯೊಳಕ್ಕೆ ದೂಡಿದ್ರೋ ಏನೋ...
2ವರ್ಷಗಳ ಹಿಂದೆ ಹಾಗೆ ಕಾಲೊನಿಯೊಳಕ್ಕೆ ಹೋದವನು... ಹೊರಕ್ಕೆ ಬಂದಿದ್ದು ಮೊನ್ನೆಯೇ.. ಅದಕ್ಕೂ ಹೆಚ್ಚಾಗಿ ಸುಲಲಿತವಾಗಿ ಇಂಗ್ಲಿಷ್ ಬರುತ್ತಿತ್ತು... ಸೋಪು, ಟವೆಲ್ ಕೊಟ್ಟು ಸ್ನಾನಕ್ಕೆ ಕಳುಹಿಸಿದಾಗಲೇ ಅಲ್ಪ ಸ್ವಲ್ಪ ಪ್ರವರ ತಿಳಿದುಕೊಂಡೆ.. ಅದು ನರಕ ಸ್ವಾಮಿ... ಅಲ್ಲಿ ಮನುಷ್ಯರಿಗೆ  ಬೆಲೆ ಇಲ್ಲ.. ಜೀವನವೇ ಬೇಡ ಅನಿಸುತ್ತಿತ್ತು.. ಹೋಗಲು ಬಿಡಿ ಎಂದರೆ.. ದನಕ್ಕೆ ಬಡಿಯುವಂತೆ ಬಡಿಯುತ್ತಾರೆ.. ಇನ್ನು.. ಊರಲ್ಲಿ ಮಗಳಿದ್ದಾಳೆ.. ಅವರನ್ನೆಲ್ಲಾ ನನಗೆ ನೋಡಬೇಕು.. ಮತ್ತೆ ಯಾವಾಗ ಮನೆ ಸೇರುತ್ತೇನೋ ಎಂಬಂತಿತ್ತು... ಅವನ ಮಾತು. ಹಲವು ಹೆಣಗುರುಳಿದ ಬಳಿಕ ಕಾಲೊನಿಯ ಗೇಟು ತೆಗೆದ ವೇಳೆ ಹಲವರು ಓಡಿ ಹೋದ್ರು.. ನನ್ನನ್ನು ನಿಮ್ಮವರು (ಸ್ನೇಹಿತನ ಬಗ್ಗೆ)  ಇಲ್ಲಿವರೆಗೆ ಕರಕೊಂಡು ಬಂದರು.. ಅಂತಾ ಎಲ್ಲವನ್ನೂ ಹೇಳಿದ.... ಬದುಕು ಹೀಗೂ ಉಂಟೇ ಎಂಬ ಪ್ರಶ್ನೆ ನಿಧಾನಕ್ಕೆ ನನ್ನನ್ನು ಸುಳಿಯತೊಡಗಿತು... ಅಲ್ಪ ಸ್ವಲ್ಪ ಕೊಳೆಯಾದ ಬಟ್ಟೆ ಹಾಕಿ ಬಸ್ಸ್ಟ್ಯಾಂಡ್... ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದರೆ.. ಭಿಕ್ಷುಕರ ಕಾಲೊನಿಯವರು ಹಿಡಿದು ಕರಕೊಂಡುಹೋಗುತ್ತಾರೆಂದರೆ... ಅಬ್ಬಾ ಪರಿಸ್ಥಿತಿ ಎಷ್ಟು ಕಠೋರ ಬೆಚ್ಚಿ ಬಿದ್ದೆ....! ಕೊಡೋ ಊಟವನ್ನೂ ಸರಿಯಾಗಿ ಕೊಡದೇ.... ಬೀದಿನಾಯಿಗಿಂತಲೂ ಕಡೆಯಾಗಿ ಬದುಕುವ ಪರಿಸ್ಥಿಯಿದೆಯಲ್ಲ... ಅದು ಯಾರಿಗೂ ಬೇಡ.. ಇದು ರಾಮಕೃಷ್ಣನ ಕಥೆ ಮಾತ್ರವಲ್ಲ.. ಭಿಕ್ಷುಕರ ಕಾಲೊನಿಯ ಕಟುಕರು ಹೀಗೆ ಹಲವಾರು ಮಂದಿಯನ್ನು ವಿವಿಧೆಡೆಗಳಿಂದ ಒತ್ತಾಯ ಪೂರ್ವಕವಾಗಿ ಎಳೆದುಕೊಂಡುಹೋಗಿದ್ದರು.. ಭಿಕ್ಷುಕರ ಕಾಲೊನಿಯ ದುರಂತ ಬಳಿಕ ಸತ್ಯಗಳು ಒಂದೊಂದಾಗಿ ಮೆಲ್ಲನೆ ಮಾಧ್ಯಮಗಳಲ್ಲಿ ಬರತೊಡಗಿದವು... ಆದರೆ ನನಗೆ ಭಿಕ್ಷುಕರ ಕಾಲೊನಿಯ `ವಿಶ್ವರೂಪ ದರ್ಶನ'ವಾದದ್ದು ರಾಮಕೃಷ್ಣನನ್ನು ನೋಡಿದ ಬಳಿಕವೇ....

ಇಂತಿಪ್ಪ ರಾಮಕೃಷ್ಣನನ್ನು ಬಟ್ಟೆಹಾಕಿಸಿ.. ಕೈಯಲ್ಲಿ ಒಂದಷ್ಟು ಕಾಸು ಕೊಟ್ಟು.... ಟಿಕೇಟ್ ತೆಗೆದು ರೈಲು ಹತ್ತಿಸಿ ಬಂದು ಸ್ನೇಹಿತ ನಿಜ ಮಾನವೀಯತೆ ಮೆರೆದ... ಒಂದರ್ಥದಲ್ಲಿ `ದೇವರೂ' ಆದ... ರಾಮಕೃಷ್ಣನ ಸನ್ನಿವೇಶದ ಬಳಿಕ 2 ದಿನ ನಾನು ಕೊಲೊನಿ ದುರಂತ ಬಗ್ಗೆ ಹೆಚ್ಚು ಅಲೋಚನೆ ಮಾಡುತ್ತಿದ್ದೆ.... ಅಲ್ಲಿ ಇಲ್ಲಿ ಪೇಟೆ ಸಂದುಗೊಂದುಗಳಲ್ಲಿದ್ದವರನ್ನೆಲ್ಲ ಎಳಕೊಂಡು ಹೋದರೆ... ಅವರ ಸಾವಿಗೆ ಮುನ್ನುಡಿ ಬರೆದಂತೆಯೇ.. ಭಿಕ್ಷುಕರ ಕಾಲೊನಿ ಕೊಲೆ ಕೇಂದ್ರವೇ ಅನ್ನೋ ಸಂಶಯವೂ ಮೂಡತೊಡಗಿತ್ತು. ಇಷ್ಟಕ್ಕೂ ದುರಂತ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವ ಡಿ. ಸುಧಾಕರ್ ಸುವರ್ಣನ್ಯೂಸ್ನಲ್ಲಿ ಹೀಗೆ ಹೇಳಿದ್ದರು... `ಕಾಲೊನಿಲ್ಲಿ ಇದೆಲ್ಲ ಕಾಮನ್... ಆಶ್ಚರ್ಯವೇನೂ ಇಲ್ಲ... ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ' ಎಂಬಂತೆ.. ಆ ಬಳಿಕ ಸಚಿವರ ತಲೆದಂಡವಾಗಿ... ಭಿಕ್ಷುಕರ ಕಾಲೊನಿಗೆ ಮಂದಿಮಾಗಧರು ಬಂದು... ಕಾಲೊನಿಯ ಚಿತ್ರಣ ಅಲ್ಪಸ್ವಲ್ಪ ಬದಲಾಗಿದೆ. ಆದ್ರೆ... ದುರಂತದ ಬಗೆಗಿನ ಚಿತ್ರಣಗಳು ನನ್ನ ಮನಸ್ಸಿನಿಂದ ಇನ್ನೂ ಮಾಸಿಲ್ಲ.