Pages

ಗುರುವಾರ, ಅಕ್ಟೋಬರ್ 8, 2015

ಸಿಂಪಲ್ಲಾಗಿ ಒಂದು ಚಾರಣ ಸ್ಟೋರಿಬೆಂಗಳೂರಿಂದ ಒಂದು ದಿನವಾದರೂ ತಪ್ಪಿಸಿಕೊಳ್ಳೋಕೆ ಇರುವ ಊರು ಯಾವುದು ಎಂದರೆ ಅದೇ ನಂದಿಬೆಟ್ಟದ ಕಡೆ ಜನ ಕೈ ತೋರಿಸುತ್ತಾರೆ. ತಪ್ಪಿದರೆ, ದೇವರಾಯನದುರ್ಗ, ಶಿವಗಂಗೆ, ಮಧುಗಿರಿ, ಮುತ್ತತ್ತಿ, ಹೊಗೆನೇಕಲ್ ಇತ್ಯಾದಿ ಇತ್ಯಾದಿ. ಆದರೆ ಬೈಕ್ ರೈಡಿಂಗ್ ಮಜಾ ಬೇಕು. ಹಳ್ಳಿಗಳ ಮಧ್ಯೆ ಸಾಗಬೇಕು. ಒಂದು ಎತ್ತರದ ಪ್ರದೇಶ ಹತ್ತಿ ಆಹಾ ಅನ್ನಬೇಕು ಅಂತಿದ್ದರೆ ಈ ಇಲ್ಲೊಂದು ಜಾಗವಿದೆ. ಮೊನ್ನೆ ಇಂಟರ್ನೆಟ್ಟಿನಲ್ಲಿ ಪರದಾಡುತ್ತಿರಬೇಕಾದರೆ ಅಚಾನಕ್ ಸಿಕ್ಕಿದೆ. ಹೋಗಿ ಬಂದೂ ಆಗಿದೆ. ಅದು ಜಾಲಮಂಗಲ ಅಲಿಯಾಸ್ ನಾರಾಯಣ ಗಿರಿ. ಹೆಸರು ಕೇಳಿದವರು ಅಪರೂಪ. ತಿರುಗುವ ಹುಚ್ಚಿದ್ದವರಲ್ಲಿ ಕೆಲವರಿಗೆ ಗೊತ್ತಿದೆ. ರಾಮನಗರದಿಂದ ಭರ್ತಿ 20 ಕಿ.ಮೀ. ದೂರ. ಮಾವಿನ ತೋಪುಗಳ ನಡುವೆ ಸೂಪರ್ ರೈಡ್. ಸಪೂರದ ಆದರೆ ಟಾರು ಹಾಕಿದ ಒಳ್ಳೆಯ ರಸ್ತೆ. ಪ್ರಶಾಂತ ಪರಿಸರ. ಹೆಚ್ಚು ಪ್ಲಾಸ್ಟಿಕ್ ಬಿಸಾಕಿದ, ಗಿಜಿಗುಟ್ಟುವ, ಕಪಿಗಳ ಕಾಟ ವಿಪರೀತ ಇರುವ ಜಾಗ ಇದು ಅಲ್ಲವೇ ಅಲ್ಲ.
ನಾರಾಯಣಗಿರಿ ಒಂದು ಏಕಶಿಲಾ ಬಂಡೆ. ಈ ಭಾಗದಲ್ಲಿ ಇದೇ ದೊಡ್ಡದು. ಪೂರ್ವಕ್ಕೆ ರಾಮನಗರದ ರಾಮದೇವರ ಬೆಟ್ಟ, ಮಧ್ಯೆ ನಾರಾಯಣಗಿರಿ ಹಾಗೆ ಪಶ್ಚಿಮಕ್ಕೆ ಹೇಮಗಿರಿ ಎಂದಿದೆ. ಹೆಚ್ಚೂ ಕಡಿಮೆ ಗೆರೆ ಎಳೆದಂತೆ ಈ ಪ್ರದೇಶಗಳು ಸಾಲಾಗಿ ಬರುತ್ತವೆ. ಹಾಗೆ ಇಷ್ಟಪಟ್ಟು ನಾವೂ ಬರುತ್ತೇವೆ ಎಂದ ಗೆಳೆಯರನ್ನು ಬೆಳಗ್ಗೆ ಆರೂ ಕಾಲಕ್ಕೆ ಜ್ಞಾನಭಾರತಿ-ಕುಂಬಳಗೋಡಿನಲ್ಲಿ ಸೇರಿ ಮೂರು ಬೈಕಿನಲ್ಲಿ ಹೊರಟಿದ್ದೆವು. ರಾಮನಗರ ತಲುಪಿ ಅಲ್ಲೊಂದು ಗಡದ್ದು ಟಿಫಿನ್ ಮುಗಿಸಿ, ಮಧ್ಯಾಹ್ನಕ್ಕೆ ಕೆಂಪಾದ ಟೊಮೆಟೋ ಬಾತ್ ಕಟ್ಟಿಸಿಕೊಂಡಿದ್ದೆವು. ಕಾರಣ ಆ ಗ್ರಾಮದಲ್ಲಿ ಹೋಟೆಲ್ ಇತ್ಯಾದಿ ಕಷ್ಟ. ಅಷ್ಟಾಗಿ 9ರ ಸುಮಾರಿಗೆ ತಲುಪಿ ನಮ್ಮ ಬಂಡೆ ಏರುವ ಕಾರ್ಯಕ್ರಮ.
ಹೆಚ್ಚೇನು ದೂರದ ನಡಿಗೆ ಇಲ್ಲ. ಆದ್ದರಿಂದ ಮಾತು ಕತೆ ಜೋರಾಗಿತ್ತು. ಚಾಕ್ಲೇಟು ಇತ್ಯಾದಿ ಬ್ಯಾಗಿಂದ ಹೊರಬಂದು, ಸಮೃದ್ಧ ಫೋಟೋಗ್ರಫಿ ಮಾಡಿದ್ದಾಯ್ತು. ಹಾಗೆ ಬಿಸಿಲು ಏರುವ ಹೊತ್ತಿಗೆ. ನಾವೂ ತುದಿಯಲ್ಲಿದ್ದೆವು. ಗುಡ್ಡ ಏರಿ ನೋಡಿದರೆ ರಮಣೀಯ ಸ್ಥಳ. ಸುತ್ತಲೂ ಮಾವು, ರಾಗಿ ಇತ್ಯಾದಿ ಕೃಷಿ ಸ್ಥಳ. ಹಚ್ಚ ಹಸುರು. ಸುಖವಾದ ತಂಗಾಳಿ. ಬೆಟ್ಟದ ಮೇಲೊಂದು ಗುಡಿ. ನಾರಾಯಣ ದೇವರದ್ದಂತೆ. ಹೋಗುತ್ತಲೇ ಕಂಬಕ್ಕೆ ಕಟ್ಟಿದ್ದ ಮೇಕೆ ಸ್ವಾಗತ ಕೋರಿತ್ತು. ಮತ್ತೆ ನೋಡಿದರೆ, ಈ ನಾರಾಯಣ ದೇವರಿಗೆ ಮಾಂಸಾಹಾರದ ನೈವೇದ್ಯ. ನಾಲ್ಕಾರು ಜನ ಕಾಣಿಸಿಕೊಂಡರು. ನಮ್ಮ ಹಿಂದೆ ಮತ್ತೆ ನಾಲ್ಕು ಕೋಳಿ, ಪಾತ್ರೆ ಪಗಡೆ ಹಿಡಿದು ಹಳ್ಳಿಯ ವ್ಯಕ್ತಿಯೊಬ್ಬರಿದ್ದರು. ಶನಿವಾರ ಮಾತ್ರ ಇಲ್ಲಿ ಪೂಜೆ. ಮಾಂಸ ನೈವೈದ್ಯ, ಮಾಂಸಾಹಾರ ತಿನ್ನುವುದಾದರೆ ಮಧ್ಯಾಹ್ನ ಚೆನ್ನಾಗಿ ಬಾರಿಸಬಹುದು. ನಮ್ಮನ್ನೂ ಒತ್ತಾಯ ಮಾಡಿದರು. ದೇವರ ಸ್ಥಳಕ್ಕೆ ಬಂದು ಹಾಗೆ ಹೋದವರಿಲ್ಲ ಎಂದರು. ನಾನು ನಯವಾಗಿ ನಿರಾಕರಿಸಿದೆ. ಅದೇ ಹೊತ್ತಿಗೆ ಮಾಂಸಾಹಾರ ಪ್ರಿಯ ಗೆಳೆಯರನ್ನು ನೆನಪಾಗದೇ ಇರಲಿಲ್ಲವೆನ್ನಿ.
ಅಷ್ಟಾಗಿ ಸನಿಹದಲ್ಲಿದ್ದ ವಯಸ್ಸಾದವರೊಬ್ಬರನ್ನು ಮಾತನಾಡಿಸಿದೆ. ಭರ್ಜರಿ ಮಾತು. ಕೃಷಿ, ಈ ವರ್ಷದ ಮಾವಿನ ಬೆಳೆ ಬಗ್ಗೆ ಹೇಳಿದರು. ಈ ಬಾರಿ ಒಳ್ಳೆ ಬೆಳೆ ಬಂದಿದೆಯಂತೆ. ರೇಷ್ಮೆ ಕೂಡ ಚೆನ್ನಾಗಿದೆ ಎಂದರು. ಅವರ ಮಾತು ಮುಗಿವ ಲಕ್ಷಣ ಇರಲಿಲ್ಲ. ನಾವು ಮೆಲ್ಲಗೆ ಜಾರಿಕೊಂಡೆವು. ಹನ್ನೆರಡಕ್ಕೆಲ್ಲ ಬೆಟ್ಟದ ಕೆಳಗೆ. ಸುಸ್ತಾಗುವ ಪ್ರಮೇಯವೇ ಇಲ್ಲಿಲ್ಲ. ಹತ್ತೋದು, ಇಳಿಯೋದು ಎಲ್ಲಾ ಸಿಂಪಲ್ಲಾಗಿ ಇತ್ತು. ನಾಲ್ಕು ಫೋಟೋ ಕ್ಲಿಕ್ಕಿಸಿ, ಬ್ಯಾಗು ಹೆಗಲಿಗೆ ಹಾಕಿ ನಾವು ಎಸ್ಕೇಪ್.. ವಾಪಾಸ್ ಹಳ್ಳಿ ಮಧ್ಯೆ ರೈಡ್ ಮಾಡುವ ಮನಸ್ಸಾಗಿ ಮಾಗಡಿ-ದೊಡ್ಡಾಲದಮರ ದಾರಿ. ದಾರಿ ಮಧ್ಯೆ ಕೆಂಪು ಟೊಮೆಟೋ ಬಾತ್ ಗೆ ಮೋಕ್ಷ ಸಿಕ್ಕಿತ್ತು. ಅಲ್ಲಿಂದ ಸೀದಾ ಬೆಂಗಳೂರು. ಮಧ್ಯಾಹ್ನ 3ಕ್ಕೆ ನಮ್ಮ ಯಾನಕ್ಕೆ ಬ್ರೇಕ್. ಹೊಸ ಜಾಗ ಬೇಕು ಎನ್ನುವವರಿಗೆ ಇದು ಸೂಪರ್
ದಾರಿ ನಕ್ಷೆ ಕೆಳಗಿದೆ.
ಬೆಂಗಳೂರು-ರಾಮನಗರ-ಜಾಲಮಂಗಲ-ಮಾಗಡಿ-ದೊಡ್ಡಾಲದಮರ-ಬೆಂಗಳೂರು
ಹೊರತಾಗಿ ಮಾಗಡಿಯಿಂದ ನೇರ ಸುಂಕದಕಟ್ಟೆ ದಾರಿ/ಮಂಚನಬೆಲೆ ದಾರಿ ಕೂಡ ಓಕೆ. 

ಒಟ್ಟು ದೂರ 140 ಕಿ.ಮೀ.

ಕಾಮೆಂಟ್‌ಗಳಿಲ್ಲ: