Pages

ಶನಿವಾರ, ಜನವರಿ 9, 2010


ಮರೆಯಾದ ಗೋಲಿಸೋಡ!
 
      ಪೆಪ್ಸಿ, ಕೋಕಾಕೋಲ, ಮಿರಿಂಡ ಎಲ್ಲ ಆಷ್ಟಾಗಿ
ಬಾಧಿಸದಿದ್ದ ಕಾಲದಲ್ಲಿ ಹಳ್ಳಿಗಳಲ್ಲೆಲಲ್ಲ  ಬಾಯಾರಿದವರ ಅಮೃತವೆಂಬತಿದ್ದದ್ದು ಗೋಲಿಸೋಡ. ಎಂಟಾಣೆ-ಒಂದು ರೂಪಾಯಿ, ಹೆಚ್ಚೆಂದರೆ ಒಂದೂವರೆ ರೂಗಳಿಗೆಲ್ಲ ಬಾಯಾರಿದವರ ದಾಹ ತಣಿಸುತ್ತಿದ್ದ ಗೋಲಿಸೋಡ ಇಂದು ಮಾಯವಾಗಿದೆ. ಸ್ವಲ್ಪ ಫ್ಲಾಶ್ಬ್ಯಾಕ್ಗಿಳಿದರೆ, ಗೋಲಿಸೋಡ ಕುಡಿಯುವುದರ ಗಮ್ಮತ್ತೇ ಬೇರೆ ಎಂಬಂತಿತ್ತು. ಬಾಟಲಿ ಹೇರಿಕೊಂಡು ಬರುವ ಶಬ್ದ ಕೇಳಿದರೆ ಸಾಕು ಅದು ಗೋಲಿಸೋಡ ಎಂಬುದು ಖಾತರಿ. ಅಂಗಡಿಗೆ ಹೋಗಿ ಗೋಲಿಸೋಡ ಪಡೆದು ಬಾಟಲಿನ ಬಾಯಲ್ಲಿದ್ದ ಗೋಲಿಯನ್ನು ಅದುಮಿದರೆ, 'ಠುಸ್' ಎಂಬ ಶಬ್ದದೊಂದಿಗೆ ಗೋಲಿ ಬಾಟಲಿಯಲ್ಲೇ ಕೆಳಕ್ಕೆ ಜಾರಿ ಕುಡಿಯಲು ರೆಡಿ. ಅದಕಕ್ಕಿಂತಲೂ ಹೆಚ್ಚಿಗೆ, ಗೋಲಿಸೋಡ ಕುಡಿಯುವುದೆಂದರೆ ಅದೊಂದು ಕಲೆ. ಗೋಲಿ ನಿಲ್ಲುವ ಜಾಗವನ್ನು ಸರಿಯಾಗಿ ತಿರುಗಿಸಿ ಹಿಡಿದರೇ ಕುಡಿಯುವವನ ಬಯಿಗೆ ಸೋಡ ಬಿದ್ದೀತು. ಬಾಲರಿಂದ ಮುದುಕರವರೆಗೆ ಬಾಯಾರಿದಾಗಲೆಲ್ಲ ಗೂಡಂಗಡಿಗೆ ಹೋಗಿ ಕೇಳುತ್ತಿದ್ದದು `ಒಂಜಿ ಗೋಲಿಸೋಡ ಕೊರ್ಲೆ' ಎಂದೇ. ಗೋಲಿಸೋಡದಲ್ಲಿಯೂ ಈಗಿನ ತಂಪು ಪಾನೀಯದಂತೆ ಜಿಂಜರ್, ಲೆಮೆನ್, ಖಾಲಿ ಸೋಡ ಎಂಬ ವಿಧಗಳಿದ್ದವು. ಕಾಲಾಂತರದಲ್ಲಿ ತಂಪು ಪಾನೀಯ ಕಂಪೆನಿಗಳ ಭರಾಟೆಯಲ್ಲಿ ಸೋಡ ನೆಲಕ್ಕಚ್ಚಿತು. ಗೋಲಿಸೋಡದಿಂದಲೇ ಬದುಕು ಸಾಗಿಸುತ್ತಿದ್ದವರು ಆ ಕೆಲಸಕ್ಕೇ ತಿಲಾಂಜಲಿ ಇತ್ತರು.
               ಆದಾಗ್ಯೂ, ಗೋಲಿಸೋಡ ಉದ್ದಿಮೆ ಸಂಪೂರ್ಣ ನೆಲಕ್ಕಚ್ಚಿತು ಎಂದು ಹೇಳುವ ಮೊದಲೇ ಅಲ್ಲೊಂದು ಇಲ್ಲೊಂದು ತಯಾರಿಕಾ ಕೇಂದ್ರಗಳು ಇನ್ನೂ ಉಳಕೊಂಡಿವೆ.  ಒಂದು ಗ್ಯಾಸ್ ಸಿಲಿಂಡರ್, ಹಿಡಿಕೆಯಿರುವ ಒಂದು ಸಣ್ಣ ಮೆಷಿನ್ ಇದಷ್ಟೇ ಗೋಲಿಸೋಡ ತಯಾರಿಕೆಯವರ ಅಸ್ತಿ. ಗೋಲಿಸೋಡಕ್ಕೆಂದೇ ತಯಾರಾದ ಗೋಲಿಯಿರುವ ದಪ್ಪ ಬಾಟಲಿಗೆ ನೀರು ತುಂಬಿಸಿ ಮೂರು ಸುತ್ತು ತಿರುಗಿಸಿದರೆ ಗೋಲಿಸೋಡಾ ರೆಡಿಯಾಗಿರುತ್ತದೆ.
ಅಂಥದ್ದೊಂದು ಕೇಂದ್ರ ಮಲ್ಪೆ-ಕೋಡಿಬೆಂಗ್ರೆ ದಾರಿಯ ತೊಟ್ಟಂ ಬಳಿ ಈಗಲೂ ಇದೆ. ಸೈಕಲಲ್ಲಿ ಸೋಡಾ ಬಾಟ್ಲಿ ಹೇರಿ ಹೋಗುತ್ತಿದ್ದವರೊಬ್ಬರನ್ನು ಹಿಡಿದು ನಿಲ್ಲಿಸಿ ಮಾತನಾಡಿದಾಗ, ಗೋಲಿಸೋಡ ತಯಾರಿದಾರರ ಕಥೆ, ಆದಾಯ, ಮಾರುಕಟ್ಟೆ ಇಲ್ಲದಿರುವುದನ್ನೆಲ್ಲಾ ಆವರು ಹೇಳುತ್ತಲೇ ಹೋದರು.
ಅವರ ಹೆಸರು ವಾಸು. ಸೋಡ ವಾಸು ಎಂದೇ ಈ ಭಾಗದಲ್ಲಿ ಪ್ರಸಿದ್ಧಿ. ಮೊದಲಿನಿಂದಲೂ ಇದೇ ಉದ್ದಿಮೆ. ಒಬ್ಬರೇ ತಯಾರು ಮಾಡುತ್ತಾರೆ. ತಯಾರಿಸಿದ ಸೋಡ ಸಮೀಪದ ವೈನ್ಶಾಪ್ಗೆ ಮೀಸಲು. ಅದರಿಂದಲೇ ಅವರ ಆದಾಯ.
ಹಾಗಾದರೆ ಕಂಪೆನಿ ಸೋಡ ಅಲ್ಲಿಗೆ ಸರಬರಾಜು ಆಗುವುದಿಲ್ಲವೇ ಎಂಬ ಪ್ರಶ್ನೆಗೆ, `ಪಾಪದಕ್ಲೆಗ್ ಕಮ್ಮಿದಾವೋಡತ್ತೇ!' (ಬಡವರಿಗೆ ಕಡಿಮೆ ಕಾಸಿನದ್ದೇ ಆಗಬೇಕಲ್ಲ!) ಎಂದು ವಾಸು ನಗುತ್ತಲೇ ಉತ್ತರಿಸಿದರು.
ಅಂದಹಾಗೆ ವಾಸು ದಿನಕ್ಕೆ 75ರಿಂದ100 ಬಾಟಲಿ ಗೋಲಿಸೋಡ ತಯಾರಿಸುತ್ತಾರೆ. ಅವರು ವೈನ್ಶಾಪ್ಗೆ ಸೋಡ ಮಾರುವುದು 75ಪೈಸೆಗೆ. ವೈನ್ಶಾಪಲ್ಲಿ ಗೋಲಿಸೋಡ ಉಚಿತವಾಗಿ ಕೊಡುತ್ತಾರೆ. ಅದು ಹೊರತು ವಾಸುವಿಗೆ ಬೇರೆ ಮಾರುಕಟ್ಟೆ ಇಲ್ಲ. ಅವರ ನಾಲ್ಕು ಮಂದಿಯ ಕುಟುಂಬಕ್ಕೆ ಇದೇ ಪ್ರಮುಖ ಆದಾಯ.  ಇನ್ನು ಮನೆಯಲ್ಲಿ ಹೆಣ್ಣು ಮಕ್ಕಳು ಬೀಡಿ ಕಟ್ಟಿದ್ದರಲ್ಲೇ ನಾಕು ಕಾಸು ಸಂಪಾದನೆ.
        ಗೋಲಿಸೋಡ ತಯಾರಿಕೆಗೆ ಅಗತ್ಯವಾದ ಗ್ಯಾಸ್ ಸಿಲಿಂಡರ್ಗೆ 400 ರೂ ಇದೆ. ಸುಮಾರು 2500 ಬಾಟಲಿ ಸೋಡ ತಯಾರಿಸಬಹುದು ಎಂದು ಹೇಳುತ್ತಾರೆ. ವ್ಯಾಪಾರ ವೃದ್ಧಿ ಬಗ್ಗೆ ವಾಸು ಅವರಿಗೆ ತೀವ್ರ ನಿರಾಸೆ.  ಗೋಲಿಸೋಡ ಈಗ ಯಾರೂ ಕುಡಿಯುವುದಿಲ್ಲ. ಪರಿಣಾಮ ಬೇಡಿಕೆ ಇಲ್ಲ. ತಂಪು ಪಾನೀಯ, ಐಸ್ಕ್ಯಾಂಡಿ, ಲಾಲಿಪಾಪ್ ಒಟ್ಟಾಗಿ ಗೋಲಿಸೋಡವನ್ನು ಹೊಸಕಿ ಹಾಕಿದೆ ಎಂದು ಹೇಳುತ್ತಾರೆ. ಹಿಂದೆಲ್ಲಾ ಜಾತ್ರೆ, ಯಕ್ಷಗಾನ ಬಯಲಾಟ, ಕೋಳಿಆಂಕ,  ನಾಟಕ, ಸ್ಕೂಲ್ ಡೇ, ಇತ್ಯಾದಿ... ಇತ್ಯಾದಿ...  ಸಮಯದಲ್ಲಿ ಗೋಲಿಸೋಡದ್ದೇ ಕಾರುಬಾರು. ಆ ಸಮಯದಲ್ಲಿ ಆದಾಯವೂ ಚೆನ್ನಾಗಿತ್ತು ಎಂದು ಕಳೆದ ಸುಂದರ ದಿನಗಳನ್ನು ವಾಸು ಮೆಲುಕು ಹಾಕುತ್ತಾರೆ.  ಆ ಕಾಲದಲ್ಲಿ ಮೆಷಿನ್ ಖರೀದಿಗೆ ಸಹಕಾರಿ ಬ್ಯಾಂಕ್ಗಳಿಂದ ಧನಸಹಾಯವೂ ದೊರಕುತ್ತಿತ್ತು. ಈಗ ಉದ್ದಿಮೆಯನ್ನು ಜೀವಂತಗೊಳಿಸಲು ಸಾಧ್ಯವೇ ಇಲ್ಲ, ಅದೆಲ್ಲಾ ಕನಸಿನ ಮಾತು ಎಂಬುದು ಅವರ ಅಂಬೋಣ.
          ಅಂಗಡಿಗಳೆಲ್ಲೆಲ್ಲಾ ಅದರದ್ದೇ ಆದ ಸ್ಥಾನ ಪಡೆದಿದ್ದ, ಬಾಯಾರಿಕೆ ತಣಿಸುತ್ತಿದ್ದ ಗೋಲಿಸೋಡಾ ಈಗ ನೇಪಥ್ಯಕ್ಕೆ ಸರಿದಿದೆ. ಅದನ್ನೇ ನಂಬಿ ಬದುಕುತ್ತಿದ್ದ, ಸೋಡಾ ಮೆಷೀನ್ ತಿರುಗಿಸುತ್ತಿದ್ದ ಕೈಗಳೆಲ್ಲ, ಉದ್ಯಮ ನೆಲಕ್ಕಚ್ಚಿದ ಕೂಡಲೇ ಬೇರೆ ಬೇರೆ ಕೆಲಸಗಳಿಗೆ ತೊಡಗಿಕೊಂಡಿವೆ. ಆಧುನಿಕತೆಯ ಭರದಲ್ಲೋ ಅಥವಾ ತಂಪು ಪಾನೀಯ ತಯಾರಿಕಾ ಕಂಪೆನಿಗಳ ಸಾಲು ಸಾಲು ದಾಳಿಗೆ ಗೋಲಿಸೋಡ ಉದ್ಯಮ ನಶಿಸಿ ಹೋಗಿದೆ. ಹಾಗಾಗಿ ಗೋಲಿಸೋಡದ ಬಗ್ಗೆ ಚಿತ್ರದಲ್ಲೋ ಅಥವಾ ಹಳಬರ ಬಾಯಲ್ಲೋ ಕೇಳಬೇಕಾದ ಪರಿಸ್ಥಿತಿ ಹಾಗೆ..... ನಿಧಾನಕ್ಕೆ ಬರುತ್ತಿದೆ !