Pages

ಮಂಗಳವಾರ, ಡಿಸೆಂಬರ್ 8, 2009

 ಆನೆ ಬಂತೊಂದಾನೆ...........!!


ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಘಾಟಿಯ ಕೆಂಪುಹೊಳೆ ಕಿರು ಜಲ ವಿದ್ಯುತ್ ಯೋಜನೆಯ ಪ್ರದೇಶ ಸಮೀಪ ಶನಿವರ ಸಂಜೆ ಹೊತ್ತು ಸಾಗುತ್ತಿದ್ದವರಿಗೆ ಇದ್ದಕ್ಕಿಂದ್ದಂತೆ   ಒಂಟಿ ಸಲಗವೊಂದರ ದರ್ಶನವಾಗಿದೆ. ಈ ಪ್ರದೇಶದಲ್ಲಿ ಕಿರು ಜಲ ವಿದ್ಯುತ್ ಯೋಜನೆ ಮತ್ತು ಇತರ ಕಾಮಗಾರಿಗಳಿಂದ ಇತ್ತೀಚೆಗೆ ವನ್ಯಜೀವಿಗಳು ಅಪರೂಪವೇ ಅಗಿತ್ತು.
ನೇತ್ರಾವತಿ ನದಿಗೆ ಅಡ್ಡಲಾಗಿ ಹಲವು ಕಿರು ಜಲವಿದ್ಯುತ್ ಯೋಜನೆಗಳು ಕಾಯರ್ಾರಂಭ ಮಾಡಿದ್ದು,
ಅಪರೂಪದ ಮಳೆಕಾಡು, ಪರಿಸರ, ವನ್ಯಜೀವಿ ಸಂತತಿ ನಾಶದ ಭೀತಿಯುಂಟಾಗಿದೆ. ಈ ಮಧ್ಯೆ ಒಂಟಿ ಸಲಗ ದರ್ಶನದಿಂದ ವನ್ಯಜೀವಿ ಪ್ರೇಮಿಗಳಲ್ಲಿ ಹೊಸ ಭರವಸೆ ಮೂಡಿದೆ ಎಂದು ಕುದ್ರೆಮುಖ ವೈಲ್ಡ್ ಲೈಫ್ ಫೌಂಡೇಷನ್ನ ನಿರೇನ್ ಜೈನ್ ಹೇಳಿದ್ದಾರೆ.

ಶನಿವಾರ, ನವೆಂಬರ್ 7, 2009

ದುಡ್ಡೇ ದೊಡ್ಡಪ್ಪ!!

ಮಣಿಪಾಲ ಎಂಬ ಪೇಟೆ ಓ ಇಲ್ಲೇ ಉಡುಪಿಗೆ ತಾಗಿಕೊಂಡಿರುವ ಪೇಟೆಯಾದರೂ ಎಲ್ಲ ಪೇಟೆಯಂತಲ್ಲ. ಕೆಲವೊಮ್ಮೆ ನನಗದು ಹೊರದೇಶವೋ ಅಥವಾ ಹಿಮಾಲಯದ ತಪ್ಪಲಿನ ಊರು ಅನ್ನಿಸುವುದಿದೆ... ಯಾಕಂದ್ರೆ,... ಇಲ್ಲಿ ಎಲ್ಲಾ ಭಾರೀ ಕಾಸ್ಟ್ಲಿ ಮಾರ್ರೆ...!!! ಒಂದು ಪ್ಲೇಟು ಗೋಳಿಬಜೆ ತಿಂದು ಬಂದರೆ... 15ರೂ ಗ್ಯಾರೆಂಟಿ... ಅಂಥದ್ರಲ್ಲಿ.. ಎರಡೆರಡು ಪ್ಲೇಟು ಜೋಬು ನೋಡದೇ ತಿಂದಿರೋ... ನೀವು ಪ್ಲೇಟು ತೊಳೆಯುವ ಸೀನು ಖಂಡಿತ! ಈ ಮಣಿಪಾಲದ ಹೋಟೆಲ್ನವರದ್ದು ಇನ್ನೂ ಒಂದು ಗುಟ್ಟಿದೆ. ನೀವು ಊರಿನವರೂ ಹೊರಗಿನ ಸ್ಟೂಡೆಂಟೋ.. ಮಲಯಾಳಿಗಳೋ.. ಘಟ್ಟದವ್ರೋ.. ಎಂಬ ಆಧಾರದ ಮೇಲೆ ತಿಂಡಿ ರೇಟು ಫಿಕ್ಸು ಆಗುತ್ತೆ... ಅದಕ್ಕೆ ನಾನು ಒಂದು ಒಳ್ಳೆ ಉಪಾಯ ಇದೆ... ಏನಪ್ಪ ಅಂದ್ರೆ... ತಿಂಡಿ ಎಲ್ಲ ಮುಗಿಸಿ ಕೌಂಟರ್ ಹತ್ರ ಬಂದು ಕೇಳೋದು... ತುಳುವಿನಲ್ಲಿ ... (ಏತಾಂಡ್ ಎನ್ನ ಬಿಲ್ಲ್ ?) ಅಲ್ಲಿಗೆ ಅವರಿಗೆ ಗೊತ್ತಗುತ್ತದೆ. ಈ ಅಸಾಮಿ ಉರಿದ್ದೇ ಎಂದು.. ಮತ್ತೆ ರೇಟು ಏರಿಸಲು ಅವಕಾಶವಿಲ್ಲ.!!
ಇದು ಹೋಟೇಲಿನ ವಿಷಯವಾದರೆ... ಅಂಗಡಿಗಳದ್ದು.. ಸಾಮಾನ್ಯ ಇದೇ ಕಥೆ... ಜನ ನೋಡಿ ರೇಟು... ತುಳು ಮಾತಾಡಿದವನಿಗೆ ೨ ರೂ ಕಡಿಮೆ. ಆದರೆ ಉಡುಪಿಯಿಂದ ಮಣಿಪಾಲಕ್ಕೆ ಕೇವಲ 6ಕಿಮೀ ಅಂತರಕ್ಕೆ ಬರೋಬ್ಬರಿ ೫ ರೂ ವ್ಯತ್ಯಾಸ ಇದೆ... ಇಲ್ಲಿಗೆ ಬರೋರೆಲ್ಲ.. ಕಾಸು ಇದ್ದವರೇ ಎಂಬ ಭಾವನೆಯೋ.. ಅಲ್ಲಾ ಕಾಸು ಇಲ್ಲದವರು ಬರುವುದೇ ಬೇಡ ಎಂಬುದೋ ಗೊತ್ತಿಲ್ಲ.... ಏನಾದರೂ ನಾನು ಮಾತ್ರ ಇಲ್ಲ ವ್ಯವಹಾರ ಮಾಡಬಾರದು ಎಂಬ ನಿಲುವಿಗೆ ಬಂದಿದ್ದೇನೆ....... ಜುಜುಬಿ 5ರೂ ೨ ರೂ ಗೆ ಆಸೆ ಮಾಡ್ತಿದ್ದಾನೆ ಅಂತ ನೀವಂದ್ಕಂಡ್ರೆ.. ತಪ್ಪು ತಪ್ಪು... ಎಲ್ಲ ಕಾಸು-ಚಿಲ್ಲರೆ ಮಹಿಮೆ........ಸ್ವಾಮೀ !!!

ಭಾನುವಾರ, ಮೇ 31, 2009

ಅಲ್ಲಾ ಸ್ವಾಮೀ ಎಲ್ಲರೂ ಎಲ್ಲದ್ರಲ್ಲೂ ಮೋಸ ಮಾಡ್ತಾರಾ ಅಲ್ಲಾ ನಾನೇ ದಡ್ಡನಾಗಿರೋದ್ರಿಂದ ಮೋಸ ಮಾಡ್ತಾರಾ ಗೊತ್ತಿಲ್ಲ! ಈ ಚಿತ್ರ ನೋಡಿ ನೀವೂ ಮೋಸ ಹೋಗ್ತೀರಿ ಖಂಡಿತ!


ಭಾನುವಾರ, ಏಪ್ರಿಲ್ 19, 2009

ಕುರುಡು ಕಾಂಚಾಣ....
ಈ ಬಾರಿಯ ಚುನಾವಣೆಯಲ್ಲಿ ದೇಶದಲ್ಲಿ ಅದೆಷ್ಟು ಕೋಟಿಗಟ್ಟಲೇ ದುಡ್ಡು ವಶಪಡಿಸಿದ್ದಾರೋ ಆ ದೇವರಿಗೂ ಗೊತ್ತಿರಲಿಕ್ಕಿಲ್ಲ. ದಿನಾ ಅಲ್ಲಿ ಮೂರು ಇಲ್ಲಿ ಆರು.. ಮತ್ತೊಂದೆಡೆ ಎಂಭತ್ತು.. ತೊಂಭತ್ತು... ಐದು ಕೋಟಿ.... ಛೆ ಲೆಕ್ಕ... ಸಾಧ್ಯವೇ ಇಲ್ಲ... ಪ್ರಿಂಟ್ ಎಲ್ಲಿ ಇವರ ತಾತನ ಮನೇಲಿ ಆಗುತ್ತೋ ಗೊತ್ತಿಲ್ಲ. ಏನೋ ಕಪ್ಪು ಹಣ ಅಂತೆ.. ಪೋಲೀಸು ಸ್ಟೇಷನ್ನಿನ ಮೇಜಿನ ಮೇಲೆ ಕಂತೆ ಕಂತೆ... ಹರವಿದ್ದು ಮಾಧ್ಯಮದಲ್ಲಿ ಎಡೆಬಿಡದೆ ಪ್ರಚಾರವಾಗುತ್ತಿದೆ. ನಿಜಕ್ಕೂ ದುಡ್ಡು ಎಂದರೆ ಪುಕ್ಸಟ್ಟೆ ಆಗಿ ಹೋಯಿತಾ...! ಗೊತ್ತಿಲ್ಲ.. ತಿಂಗಳ ಕೊನೆಗೆ ಮಾಮೂಲಿಗೆ ಕೈಚಾಚುವ ಪೋಲೀಸರಿಗೇ ವೈರಾಗ್ಯ ಮೂಡಿರಬಹುದು...! ಒಂದು ಓಟಿಗೆ ಐನೂರು, ಸಾವಿರ ಕೊಡ್ತಾರಂತೆ... ಅಂತೆ ಕಂತೆಗಳ ಸುದ್ದಿ... ಕೆಲವೆಡೆ ಹಂಚಿದ್ದೂ ಇದೆ. ಪ್ರಚಾರಕ್ಕೆ ಹೋದವರಿಗೆಲ್ಲ ದಿನಕ್ಕೆ ಇನ್ನೂರು ಮುನ್ನೂರು ರೂಪಾಯಿಗಳ ಕೂಲಿ. ಆಹಾ ಲಕ್ಷ್ಮೀ ಕಟಾಕ್ಷ ಎಂದರೆ ಇದೇ.. ಓಟಿಗಾಗಿ ನೋಟು ಎಗ್ಗಿಲ್ಲದೇ ಹರಿಯುತ್ತಿರುವುದಂತೂ ಗ್ಯಾರಂಟಿ... ಓಟಿಗಾಗಿ ನೋಟು ತೆಗೆದುಕೊಳ್ಳಬೇಡಿ ಎಂದರೆ ಜನಸಾಮಾನ್ಯರಿಗೆ ಅರ್ಥಆಗುತ್ತದೆಯೇ ಗೊತ್ತಿಲ್ಲ. ಕೊಟ್ಟರೆ ತೆಗೆದುಕೊಳ್ಳುವುದಕ್ಕೇನು? ಎಂಬ ಮಾತು. ಸಿದ್ದರಾಮಯ್ಯ ಚುನಾವಣಾ ಪ್ರಚಾರವೊಂದರಲ್ಲಿ ಹೇಳಿದಂತೆ, ನೋಟು ಯಾರೇ ಕೊಟ್ಟರೂ ತೆಗೆದುಕೊಳ್ಳಿ.. ಆದರೆ ಓಟು ಮಾತ್ರ ನಮಗೇ ಹಾಕಿ! ಇದು ಈಗಿನ ಹೊಸ ವರಸೆ.. ಚುನಾವಣಾಧಿಕಾರಿಗಳಂತೂ ಈ ನೋಟಿನ ಹಾವಳಿ ಅಕ್ರಮಗಳಿಂದ ಹೈರಾಣಾಗಿ.... ಬೇಸತ್ತು ಕಂಗಾಲು. ಏನೇ ಆಗಲಿ ಓಟು ಯಾರಿಗಾದರೂ ಹಾಕಿ... ನೀವಂತೂ ನೋಟು ತೆಗೆದುಕೊಳ್ಳಬೇಡಿ..!
ಗುದ್ದು!: ಇಷ್ಟರವರೆಗೂ ಪೋಲೀಸರು ಹಿಡಿದದ್ದು ಹತ್ತು.. ಇಪ್ಪತ್ತು.. ಐವತ್ತು... ನೂರು... ಐನೂರು ಸಾವಿರಗಳ ಕಂತೆ ಕಂತೆ ನೋಟು. ಅಲ್ಲಿ ಎಲ್ಲೂ ಚಿಲ್ಲರೆ ಪತ್ತೆಯೇ ಇಲ್ಲ!

ಮನೆಯಲ್ಲಿ ಹಪ್ಪಳದ ಸಪ್ಪಳ!
ಬೇಸಿಗೆ ಎಂದರೆ ಕೆಲವರಿಗೆ ರಜೆ, ಪೇಟೆಯ ಮಕ್ಕಳಿಗೆ ಟ್ಯೂಷನ್ ಭೂತ.. ಹಳ್ಳಿಯ ಮಕ್ಕಳಿಗೆ ಅಜ್ಜನ ಮನೆಯ ನೀರಾಟ, ಐಸ್ಕ್ರೀಮ್, ಗಮ್ಮತ್ತು, ಹುಡುಗರಿಗೆ, ಮಾವಿನ ಮರಕ್ಕೆ ಕಲ್ಲು ತೂರುವ ಸಮಯ, ತೀರದ ಸೆಖೆಯಲ್ಲಿ ಮದುಮಕ್ಕಳಿಗೆ ಮದುವೆಯ ಗಮ್ಮತ್ತು.... ಹಳ್ಳಿಯವರಿಗೆ ಮಳೆಗಾಲಕ್ಕೆ ತಯಾರಾಗುವ ಅವಕಾಶ, ಇತ್ಯಾದಿ ಇತ್ಯಾದಿ...
ಮನೆಯ ಹೆಂಗಳೆಯರಿಗೆ, ಬೇಸಿಗೆ ಎಂದರೆ ಎದು ಹಪ್ಪಳ ಸೆಂಡಿಗೆಯ ಸಮಯ. ಮನೆಯಲ್ಲಿ ಮಕ್ಕಳಿದ್ದರಂತೂ ಹಪ್ಪಳ ತಯಾರಿಕೆಗೆ ಆನೆ ಬಲ. ಹಲಸಿನಕಾಯಿ ಬೆಳೆದಿದೆಯೋ ನೋಡಿ, ಕೊಯ್ದು, ತೊಳೆಗಳನ್ನೆಲ್ಲಾ ಬೇಯಿಸಿ ಗುದ್ದಿ ಹುಡಿಮಾಡಿದಲ್ಲಿಗೆ ಒಂದು ಹಂತದ ಕಾಯರ್ಾಚರಣೆ ಮುಗಿಯಿತು. ಅದನ್ನು ಸಣ್ಣ ಸಣ್ಣ ಉಂಡೆ ಮಾಡಿ ಮರದ ಹಪ್ಪಳ ಮಣೆಯಲ್ಲಿ ಒತ್ತಿ ಬಿಸಿಲಿಗಿಟ್ಟರೆ ಆಯಿತು. ಇದರಲ್ಲೇನು ಮಹಾ ಎಲ್ಲರ ಮನೆಯಲ್ಲೂ ಹಪ್ಪಳ ಮಾಡುವುದೇ.... ಅಂದರೆ, ಅದರಲ್ಲೇ ವಿಶೇಷ. ಈಗಿನ ಕಾಲದಲ್ಲಿ ಹಪ್ಪಳ ಎಂಬುದು ಒಂದು ರೆಡಿಮೇಡ್ ವಸ್ತುವಾಗಿ ಹೋಗಿದೆ. ಶಾಲೆಗೆ ಹೋಗುವ ಮಕ್ಕಳನ್ನು ಕೇಳಿ ನೋಡಿ... ಅದು ಅಂಗಡಿಯಲ್ಲಿ ಸಿಗುವುದು.. ಇನ್ನೇನೋ ಹೇಳುತ್ತಾರೆ. ಅಲ್ಲಿಗೆ ಹಪ್ಪಳದ ಬಗ್ಗೆ ಅವರ ಜ್ಞಾನ ಮುಗಿಯಿತು. ಆದರೆ ಹಳ್ಳಿಯಲ್ಲಿ ಕೆಲವೆಡೆ ಹಪ್ಪಳದ ಗಮ್ಮತ್ತು ಹಾಗೇ ಉಳಿದುಕೊಂಡಿದೆ. ನಾಳೆ ಒಂದೈನೂರು ಹಪ್ಪಳ ಮಾಡಬೇಕು ಎಂದು ಮನೆ ಹೆಂಗಸರು ಸ್ಕೆಚ್ ಹಾಕಿದ್ದಾರೆಂದರೆ ಮುಗಿದೇ ಹೋಯಿತು. ಮತ್ತೆ ಮರುದಿನ ಎಲ್ಲಾಕೆಲಸ ಅವರೇ ಬಹಳ ಮುತುವಜರ್ಿಯಿಂದ ಮಾಡುತ್ತಾರೆ. ಮನೆಯಲ್ಲಿ ಮಕ್ಕಳು, ಅಜ್ಜಿ ಮನೆಗೆ ಬಂದವರು ಇದ್ದರೆ ಅದರ ಗಮ್ಮತ್ತೇ ಬೇರೆ. ಎಲ್ಲರಿಗೂ ಅದೊಂದು ಜಾತ್ರೆ. ಮಹಿಳೆಯರಿಗಂತೂ ಇದ್ದ ಊರಿನ ಸುದ್ದಿ, ಮದುವೆ, ಸೀಮಂತ, ನಾಮಕರಣ... ಓಡಿಹೋದ ಸುದ್ದಿಗಳೆಲ್ಲ ಹಪ್ಪಳ ಮಾಡುತ್ತಿದ್ದಂತೇ ಹಪ್ಪಳದ ಮಣೆಯೊಳಗೆ ಸಿಕ್ಕು ಚಪ್ಪಟೆ... ಮಕ್ಕಳು ಹಪ್ಪಳದ ಹಿಟ್ಟನ್ನು ಕದ್ದು ತಿಂದು ಚಡ್ಡಿಗೆವರೆಸಿ ಮುಸು ಮುಸು ನಗುವಿನೊಂದಿಗೆ, ಮತ್ತೆ ಕೆಲವರಿಗೆ ಹಪ್ಪಳ ಒತ್ತುವ ತವಕ. ಅದೇನೋ ದೊಡ್ಡ ಕೆಲಸವೆಂಬ ಭಾವನೆ! ಅಂಗಳದಲ್ಲಿ ಒಣಗಲು ಇಟ್ಟ ಹಪ್ಪಳ ಹಾಗೆಯೇ ಕರುಂ ಕರುಂ ಎಂದು ತಿಂದರೆ ಮಕ್ಕಳ ಜೀವನ ಪಾವನ! ಅಂತೂ ಹಪ್ಪಳ ಮಾಡುವುದು ಎಂದರೆ ಅದು ಕೆಲಸವಲ್ಲ, ಮನರಂಜನೆ. ಹೆಂಗಸರಿಗೆ, ಇಡೀ ಪ್ರಪಂಚದ ಸಿದ್ದಿಯನ್ನು ಜಾಲಾಡಿದ ಹಾಗೆ, ಮಕ್ಕಳಿಗೆ ಗಮ್ಮತ್ತು... ಅಮ್ಮ ನನಗೆ ಎರಡು ಹಪ್ಪಳ ಹೆಚ್ಚು ಕೊಟ್ಟಾಳು ಎಂಬ ನಿರೀಕ್ಷೆ.
ಈ ಹಪ್ಪಳದ ಸಪ್ಪಳ ಇತ್ತೀಚೆಗೆ ಸ್ವಲ್ಪ ಕಡಮೆ. ಹಳ್ಳಿಯವರು ಇನ್ನೂ ಉಳಿಸಿಕೊಂಡಿದ್ದರೆ, ಕೆಲವರಿಗೆ ಅದರ ಕೆಲಸದ ಅಗಾಧತೆಗೆ ಕೈಕಾಲು ನೋವು ಮಾಡಿಸಿಕೊಳ್ಳೋದು ಯಾಕೆ ಎಂಬ ಭಾವ! ಮಕ್ಕಳಿಗೆ ಅಜ್ಜಿ ಮನೆಯ ಗಮ್ಮತ್ತೇ ಮರೆಯಾಗುತ್ತಿರುವ ಕಾಲ... ಟ್ಯೂಷನ್ ಭೂತ ರಜೇಲೆಲ್ಲಾ ಅವರನ್ನೇ ಕಾಡುತ್ತಿರುವುದರಿಂದ ಹಪ್ಪಳದ ರುಚಿ ಅವರಿಗೆ ತಿಳಿದಿಲ್ಲ. ಪೇಟೆಯ ತಮಿಳ ಮಾಡುವುದೇ ಹಪ್ಪಳ ಎಂಬುದಷ್ಟೇ ಅವರಿಗೆ ಗೊತ್ತಿರುವುದು. ಹಪ್ಪಳ ಎಂದರೆ ಅದು ಒಂದು ಟೀಮ್ ವಕರ್್. ಬರೋಬ್ಬರಿ ಜನ ಬೇಕು... ಅಂದರೇ ಅದರ ನಿಜವಾದ ಗಮ್ಮತ್ತು. ಇಬ್ಬರೇ ಒಬ್ಬರೇ ಮಾಡಿದರೆ ಹಪ್ಪಳ ಆಗುವುದಿಲ್ಲವೇ ಎಂದರೆ, ಅದರಲ್ಲಿ ಅಷ್ಟು ರುಚಿ ಇಲ್ಲ. ಒಂದು ನಗು, ಮಕ್ಕಳ ಕೇಕೆ... ಹೆಂಗಸರ... ಲೋಕಾಭಿರಾಮ... ಮನೆಹಿರಿಯರ/ಗಂಡುಮಕ್ಕಳ ಉಸ್ತುವಾರಿ, ಸೇರಿದರೆ ಹಪ್ಪಳದಲ್ಲಿ ಖುಷಿಯ ಸಪ್ಪಳ. ನೀವೂ ಒಂದ್ಸಲ ಟ್ರೈ ಮಾಡಿ ನೋಡಿ! ಹಲಸಿನಕಾಯಿ ಬೇಕಾದರೆ ಹೇಳಿ..!

ಭಾನುವಾರ, ಏಪ್ರಿಲ್ 12, 2009

ಇದು ಹಕ್ಕಿ ಅಲ್ಲ ಆದ್ರೂ ಹಾರುತ್ತೆ....!

ದಿತ್ಯವಾರ ಯಾಕೋ ಗುಡ್ಡ ಹತ್ತಿ ಇಳಿಯುವ ಮನಸ್ಸಾಗಿ ಸೀದಾ ಮನೆಯ ಹಿಂದಿನ ಗುಡ್ಡ ಏರಿದ್ದೆ. ಹಾಗೇ ಅಡ್ಡಾಡಿ ಮನೆಯ ಹತ್ತಿರ ಇಳಿದು ಬರುವಷ್ಟರಲ್ಲಿ ಪಕ್ಕನೆ ತಲೆ ಮೇಲಿಂದ ಏನೋ ಹಕ್ಕಿ ಹಾರಿದಂತಾಯಿತು. ಅರರೆ ಏನು ಆಶ್ಚರ್ಯ...! ಇದು ಹಕ್ಕಿ ಅಲ್ಲ ಆದ್ರೂ ಹಾರುತ್ತೆ.... ಹೊಸ್ದು.. ಅಂದುಕೊಂಡೆ. ಹಾರಿದ ಜೀವಿ ಅಲ್ಲೇ ಸಣ್ಣ ಗಿಡದ ಮೇಲೆ ಬಂದು ಕೂತಿತ್ತು. ಮತ್ತೆ ಸೂಕ್ಷವಾಗಿ ನೋಡಿದರೆ ಅದೊಂದು ಹಲ್ಲಿ, ರೆಕ್ಕೆಗಳಿವೆ, ಇದೋನೋ ಸ್ಪೆಷಲ್ಲಿರಬೇಕು ನಾನೇ ಕಂಡುಹುಡುಕಿದ್ದು ಎಂದು ಯುರೇಕಾ.... ಎಂದು ಕೂಗುವ ಮನಸ್ಸಾಯಿತು. ಮರದ ತೊಗಟೆಯ ಬಣ್ಣವಿತ್ತು. ಪಕ್ಕನೆ ಕಾಣಿಸಲಾರದು. ಅದಕ್ಕೆ ಪ್ರಕೃತಿಯೇ ಕೊಟ್ಟ ರಕ್ಷಣೆ ಇರಬಹಹುದು. ಸಣ್ಣ ಎರಡು ರೆಕ್ಕೆಗಳು, ಉಳಿದಂತೆ ಥೇಟ್ ಹಲ್ಲಿಯೇ... ಒಮ್ಮೆ ಹಿಡಿಯುದು ವೀಕ್ಷಿಸುವ ಮನಸ್ಸಾಯಿತು. ಬೈರಾಸು ತೆಗೆದು ಕಾಯರ್ಾಚರಣೆ ಶುರುವಾಗುವಷ್ಟರಲ್ಲಿ ಅದು ಇನ್ನೊಂದು ಕಡೆಗೆ, ಸುಮಾರು ಹತ್ತು ಮೀಟರ್ ದೂರಕ್ಕೆ ಹಾರಿತ್ತು... ಆದರೂ ಮನಸ್ಸು ಕೇಳಲಿಲ್ಲ, ಅಲ್ಲಿಗೆ ಹೋಗಿ ಪ್ರಯತ್ನಿಸಿದೆ, ಈ ಬಾರಿ ಹಾರಿ ದೊಡ್ಡ ಮರದಲ್ಲಿ ಕೂತಿತ್ತು. ನಿರಾಸೆ ಆಯಿತು. ಆದರೆ ಅದರ ದೇಹ ರಚನೆ ಆಶ್ಚರ್ಯ ತಂದಿತ್ತು. ಅದರ ಬಗ್ಗೆ ಇನ್ನು ಇಂಟನರ್ೆಟ್ಟಿನಲ್ಲಿ ಚಿತ್ರ, ಮಾಹಿತಿ ಹುಡುಕುವ ಕೆಲಸ ಬಾಕಿ ಇದೆ. ತೇಜಸ್ವಿಯವರು ಹಾರುವ ಓತಿ ಎಂಬಂತೆ ಕಾದಂಬರಿ ಬರೆದರೆ, ನನಗೆ ಸಣ್ಣ ಕಥೆ ಬರೆದರೆ ಹೇಗೆ? ಎಂಬ ಮನಸ್ಸಾಗಿದೆ. ಯಾಕೋ ಈಗೀಗ ಇಂಥ ಖಾಯಿಲೆಗಳೆಲ್ಲ ಬಂದು ಅಂಟಿಕೊಳ್ಳುತ್ತಿದೆ.!


ಅಂಗಾಂಗಳು ಬಾಕಿ ಇದೆ!

ಸಲದ ಚುನಾವಣಾ ರಾಜಕೀಯ ಎಷ್ಟು ಗಬ್ಬೆದ್ದು ಹೋಗಿದೆ ಎಂದರೆ, ರಾಜಕೀಯ ಎಂದಾಗಲೆಲ್ಲ ಮೂಗು ಮುಚ್ಚಿ ಅಸಹ್ಯಪಟ್ಟುಕೊಳ್ಳುವಂತಾಗಿದೆ. ಒಬ್ಬರು ಕೈ ಕಡಿಯುತ್ತೇನೆ.... ಮತ್ತೊಬ್ಬರು ತಲೆ ಕಡಿಯುತ್ತೇನೆ... ಅದೂ ಸಾಲದು ಎಂಬಂತೆ ತಿಥಿ ಮಾಡುತ್ತೇನೆ..... ಎಂದು ಹೇಳುವುದೇ ಆಯಿತು. ಇಲ್ಲಿವರೆಗೆ ಅಭಿವೃದ್ಧಿ ಎಂಬುದು ಎಂಲ್ಲೂ ಕೇಳಲೇ ಇಲ್ಲ.... ಎಲ್ಲ ಕಡಿಯುವ ಮಾತೇ ಆಯಿತು.ಇನ್ನೂ ಕೆಲವು ಅಂಗಗಳು ಬಾಕಿ ಇದ್ದವು. ಯಾರೂ ಹಲ್ಲು ಉದುರಿಸಲೇ ಇಲ್ಲ, ಸೊಂಟ ಮುರಿಯುವ ಮಾತೇ ಇಲ್ಲ, ಕತ್ತು ತಿರುಚಲೇ ಇಲ್ಲ, ಕಾಲಂತೂ ಮುರಿಯಲೇ ಇಲ್ಲ.... ಹೋ! ಸುಮಾರು ಅಂಗಾಂಗಳು ಬಾಕಿ ಇವೆ! ಬಹುಶಃ ಇವುಗಳೆಲ್ಲ ರಾಜಕಾರಣಿಗಳಿಗೆ ಸಣ್ಣದಾಗಿ ಕಂಡಿರಬೇಕು. ಹಾಗೇ ಸೀದಾ ತಿಥಿ ಮಾಡುವ ಹಂತಕ್ಕೆ ಬಂದು ನಿಂತಿದ್ದಾರೆ. ಮತದಾರರಿಗೆ ಬೀದಿ ನಾಯಿಗಳ ಜಗಳದಂತೆ, ಇವರ ಹೀನ ಛೀ ಥೂ...! ರಾಜಕೀಯ ಪುಕ್ಸಟ್ಟೆ ಮನರಂಜನೆಯಾಗಿದೆ. ಅಂದಹಾಗೆ, ಇಂಥವರು ಓಟು ಕೇಳಲು ಬಂದರೆ ಮತದಾರರು ಖುದ್ದು ತಿಥಿ ಮಾಡದಿದ್ದರೆ ಸಾಕು.

ಗುರುವಾರ, ಏಪ್ರಿಲ್ 2, 2009

ವಿಶ್ವವಿದ್ಯಾನಿಲಯದಿಂದ....

ಎರಡು ದಿನಗಳ ಕಾಲ ನಮ್ಮ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಭ್ರಮವೋ ಸಂಭ್ರಮ. ಕಾರಣ ಇಷ್ಟೇ... ನಮ್ಮ ಕಾಲೇಜ್ ಡೇ ಇತ್ತು. ಎಲ್ಲರೂ ಕುಣಿದರು, ಕೆಲವರು ಹಾಡಿದರು, ಮತ್ತೂ ಕೆಲವರು ದಣಿವರಿಯದೆ, `ಕುಡಿದು' ಕುಣಿದರು..! ಪರಮಾತ್ಮನ ಮಹಿಮೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಚೀರಾಟ, ಸಿಳ್ಳೆ ಕಡಮೆ. ಆದರೂ ಕೆಲವು ಚೀರಾಟಗಳು ಕೇಳಿ ಬರುತ್ತಿದ್ದವು. ವಿಭಾಗಗಳು ಪ್ರಸ್ತುತ ಪಡಿಸಿದ ನೃತ್ಯ, ಮೈಮ್, ಮೂವಿಸ್ಕೋಪ್ ಅತ್ಯಂತ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೇ ದೇಸೀ ಸೊಗಡಿನ ಫ್ಯಾಶನ್ ಶೋ ಮಾದರಿಯಾಯಿತು. ಒಟ್ಟಿನಲ್ಲಿ ಬಹುಮಾನ ಬಂದವರು ಗೆಲುವಿಗಾಗಿ ಸಂತಸಪಟ್ಟರೆ, ಬರದವರು ಕೂಗಿ ಚೀರಾಡಿ ಸಿಳ್ಳೆ ಆರ್ಭಟದಲ್ಲಿ ಸಮಾಧಾನ ಪಟ್ಟುಕೊಳ್ಳಬೇಕಾಯಿತು.ಕಾರ್ಯಕ್ರಮ ಸಾಂಗವಾಗಿ ನೆರವೇರಿದ್ದರ ಹಿಂದೆ, ಕ್ಷೇಮಪಾಲನಾ ಅಧಿಕಾರಿ, ಇತರರ ಶ್ರಮ ಎದ್ದು ಕಾಣುತ್ತಿತ್ತು. ಸಮಾರಂಭದ ವಿಶೇಷಗಳು:

* ಎಲ್ಲ ವಿಭಾಗಗಳು ಚುರುಕಿನಿಂದ ಪಾಲ್ಗೊಂಡರು.

* ಸಮಾರೋಪದ ಅತಿಥಿಗಳಾಗಿ ಸಾಹಿತಿ ಡಾ.ಅಮೃತ ಸೋಮೇಶ್ವರ, ಸಂಗೀತ ನಿದರ್ೇಶಕ ಗುರುಕಿರಣ್ ಪಾಲ್ಗೊಂಡಿದ್ದರು.

* ವಿಶೇಷ ಎಂಬಂತೆ ಸಮರೋಪ ಭಣಗುಡುತ್ತಿದ್ದ ಕಾಲ ಹೋಗಿ, ಗುರುಕಿರಣ್ ಹಾಜರಾತಿಯಿಂದಲೋ ಏನೋ ಸಭಾಂಗಣ ತುಂಬಿ ತುಳುಕುತ್ತಿತ್ತು.

* ಸಭೆಯ ಮುಂದಿನ ಸಾಲಿನಲ್ಲಿ ಕೂತವರಿಗೆ ವೇದಿಕೆಗೆ ಬದಲಾಗಿ ಕ್ಯಾಮೆರಾ ಹಿಡಿದವರನ್ನು ಮಾತ್ರ ನೋಡಬೇಕಾಯಿತು.

* ಎಲ್ಲ ಕುತೂಹಲಗಳಿಗೆ ತಣ್ಣೀರು ಎರಚಿದ್ದೆಂದರೆ, ಕಾರಣ ಗುರುಕಿರಣ್ ಒಂದೇ ಒಂದು ಪದ್ಯವನ್ನೂ ಹಾಡಲಿಲ್ಲ. ಹಲವರಿಗೆ ಇದರಿಂದ ನಿರಾಸೆಯಾದದ್ದು ನೂರಕ್ಕೆ ನೂರ ಒಂದು ಸತ್ಯ. ಹಲವರು ವ್ಯವಸ್ಥೆಯವರನ್ನು ದೂರಿದರು, ಕೆಲವರು ಛೆ! ಎಂದು ಮರುಕಪಟ್ಟರು.

* ಮೊದಲನೇ ದಿನ ವಿಶ್ವವಿದ್ಯಾನಿಲಯದವರು ಊಟದ ವ್ಯವಸ್ಥೆ ಮಾಡಿ ಧನ್ಯರಾದರು.

* ಕೆಲವರಿಗೆ ಈ ವರ್ಷದ ಸಂತಸದ ದಿನಗಳೆಲ್ಲ ಕಳೆದು ಹೋದ ಬಗ್ಗೆ ಬೇಜಾರಾಗಿತ್ತು.

* ಈ ವರ್ಷ ಸಿಳ್ಳೆ, ಕೂಗಾಟ, ಕುಣಿತಗಳಿಗೆ ಮೊದಲನೇ ಬಾರಿಯೋ ಎಂಬತೆ ಸ್ವಲ್ಪ ಬ್ರೇಕ್!ಅಂತೂ ಎರಡು ದಿನ ಕಳೆದದ್ದೇ ಗೊತ್ತಾಗಲಿಲ್ಲ, ನಾವಂತೂ ಸಂಭ್ರಮದಿಂದ ಪಾಲ್ಗೊಂಡೆವು. ನಮ್ಮ ಪ್ರಯತ್ನಕ್ಕೆ ಬಹುಮಾನವೂ ಬಂತು ಎಂದರು ವಿಜೇತರಾದವರು

* ಗೊಂದಲಗಳಿಂದಾಗಿ, ಕೆಲವು ಸ್ಪಧರ್ೆಯ ಫಲಿತಾಂಶಗಳನ್ನು ತಡೆಹಿಡಿಯಲಾಗಿತ್ತು.ಎರಡು ದಿನಗಳ ಕಾಲ ನಡೆದ ವಿಶ್ವವಿದ್ಯಾನಿಯದ ವಿಭಾಗೀಯ ಅಂತರದ ಸ್ಪಧರ್ೆಗಳು ಸಾಂಗವಾಗಿ ನೆರವೇರಿತು. ಸಂತಸದ ಘಳಿಗೆ ಮುಗಿದಿತ್ತು.

ಬುಧವಾರ, ಏಪ್ರಿಲ್ 1, 2009

ಸಣ್ಣ ಕಥೆ
ಒಂದು ತುಂಡು ಬೀಡಿ.....!
ಈ ಕಥೆಯ ವ್ಯಕ್ತಿಯದು ದಿನಚರಿಯೇ ಜೀವನವಾಗಿ ದಿನ ಕಳೆಯುವುದೇ ಸಾಧನೆ ಎಂಬಂತಿದ್ದ ತಹೇವಾರಿ ಮನುಷ್ಯರೆಡೆಯಲ್ಲಿ ಹೀಗೊಬ್ಬ.. ವ್ಯಕ್ತಿಯ ಕುರಿತು ಹೇಳಲೇಬೇಕು ಎಂಬುದು. ಅವನ ದಿನಚರಿಯ ಪೂರ್ಣ ಪಾಠವನ್ನು ತುಂಬ ಉದ್ದ ಮಾಡುವುದು ಸಾಧ್ಯವಿದ್ದರೂ ಕಥೆಯಾಗಿ ಇಷ್ಟೇ ಸಾಕು. ಜಾರಪ್ಪನಿಗೆ ಬೆಳಗಾಗುವುದೆಂದರೆ ಅದರಲ್ಲಿ ಏನೂ ವಿಶೇಷವಿಲ್ಲ! ಯಾವಾಗ್ಲೂ ಬೆಳಗಾಗುತ್ತೆ ಮತ್ತೆ ಅದ್ರಲ್ಲೇನು ಮಹಾ? ಅಂದ್ಕೊಳ್ತಿದ್ದ. ಅದಲ್ಲದೆ, ಅವನಿಗೆ ನಿನ್ನೆಯದರ ಚಿಂತೆಯೇ ಇಲ್ಲ. ನಾಳೆಯದರ ಬಗ್ಗೆ ಕೇಳುವುದೇ ಬೇಡ! ಆದರೆ.......ಚಿಂತೆ ಇಲ್ಲದಿದ್ದರೂ ಹೊಟ್ಟೆ ಕೇಳಬೇಕಲ್ಲ! ಇವತ್ತು ಹೊಟ್ಟೆಗೇನು ಎಂಬ ಪ್ರಶ್ನೆಯೇ ಅವನನ್ನು ಅಧೀರನನ್ನಾಗಿಸುತ್ತಿತ್ತು. ಬದುಕಿನಲ್ಲಿ ಅವನೆಣಿಸಿದಂತೆ ಏನೂ ಆಗಲಿಲ್ಲವಾದ್ದರಿಂದ ಆಸೆಗಳನ್ನೆಲ್ಲ ಅವ ಎಂದಿಗೋ ಬಿಸುಟು ಕೈತೊಳೆದಾಗಿತ್ತು. ಆದರೂ ದಿನ ಕಳೆಯುವುದು ಹೇಗೆಂಬ ಪ್ರಶ್ನೆಗೆ ಅವನಲ್ಲಿ ಉತ್ತರವೇ ಇಲ್ಲ! ಕೇಳಿದರೋ ಹೇಗೋ ನಡೀತದೆ... ಸ್ವಾಮೀ ನಂಗೇನು ಹೆಂಡ್ರಾ ಮಕ್ಳಾ..? ಅಂತಿದ್ದ! ಅವಂದು ಒಂಥರ ಒಂಟಿ ಬದುಕು. ಏಕಾಂಗಿ ಸಂಚಾರಿ. ಹೊಟ್ಟೆ ತುಂಬಿಸುವದಕ್ಕೆ ಅವನಿಗೆ ಕೂಲಿ ಕೆಲಸವೆ ಗತಿಯಾಗಿತ್ತು. ದೂರದ ಬಿಜಾಪುರದಿಂದ ಕೆಲಸ ಅರಸಿ ಬಂದವನೇ ಸೀದಾ ದಕ್ಷಿಣಕನ್ನಡಕ್ಕೆ ಬಂದು ತೋಟವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ದಿನ ಖಚರ್ಿಗೆ ಅವನಿಗೆ ಮೂರು ಹೊತ್ತು ಊಟ ಎರಡು ಕಟ್ಟು ಬೀಡಿ ಮತ್ತು ಬೇಸರ ಕಳೆಯಲು ಸಾರಾಯಿ ಅವನ ಗೆಳೆಯರು. ತೀರ ಮನಸ್ಸು ನೊಂದು ಕೊಂಡಿದೆಯಂದರೆ ಅಂದು ಮನಸೋ ಇಚ್ಛೆ ಕುಡಿದು ಬಂದು ಮಲಗುತ್ತಿದ್ದ. ಮತ್ತೆ ಊಟವೂ ಬೇಡ ಎಂಬತ್ತಾಗುತ್ತಿತ್ತು. ಅಲ್ಲಿಗೆ ಅವನ ದಿನಚರಿ ಮುಗಿಯುತ್ತಿತ್ತುಇಷ್ಟಕ್ಕೂ ಜಾರಪ್ಪನಿಗೆ ಹೆಂಡತಿ,ಮಕ್ಕಳಿರಲಿಲ್ಲ ಎಂದಲ್ಲ! ಎಲ್ಲರೂ ಇದ್ದರು. ಊರಲ್ಲಿದ್ದಾಗ ಸಂಗದೋಷವೋ ಏನೊ..! ಕುಡಿತದ ದಾಸನಾಗಿಬಿಟ್ಟಿದ್ದ. ಕೊನೆ ಕೊನೆಗೆ ಕುಡಿತ ಅತಿಯಾಗಿ ಮನೆಯವರಿಗೆಲ್ಲ ಹೊಡೆತ ಬಡಿತಗಳು ಶುರುವಾಗಿಬಿಟ್ಟದ್ದವು. ಕೈ ತುಂಬ ಸಾಲ ಬೇರೆ..! ತೀರ ಸಹಿಸಲೇ ಅಸಾಧ್ಯ ಎಂಬಷ್ಟರ ಮಟ್ಟಿಗೆ ಮನೆಯವರು ಬಂದು ಮುಟ್ಟಿದ್ದಿರಬೇಕು. ಮಕ್ಕಳು,ಹೆಂಡತಿ ಸೇರಿ ಹೊರಗಟ್ಟಿದ್ದರು. ಮತ್ತೆ ಮನೆಗೆ ಹೋಗುವ ಪ್ರಯತ್ನ ಮಾಡಿದನಾದರೂ , ಮುಚ್ಚಿದ ಕದ ತೆರೆಯಲೇ ಇಲ್ಲ! ಅಂದಿನಿಂದ ಅವನ ಬದುಕು ಬೀದಿಗೆ ಬಂದಿತ್ತು. ಎರಡು ದಿನ ಹೇಗೇಗೋ ಎರಡು ಹೊತ್ತು ಊಟಕ್ಕೆ ಪ್ರಯತ್ನ ಪಟ್ಟರೂ ಮತ್ತಿನ ದಿನಗಳಲ್ಲಿ ಒಪ್ಪತ್ತಿನ ಊಟಕ್ಕೆ ಊರಿಡೀ ಅಲೆಯಬೇಕಾದ ಪರಿಸ್ಥಿತಿಯಾಗಿತ್ತು. ಯಾರೂ ಕೆಲಸ ಕೊಡುವವರಿಲ್ಲ. ವಯಸ್ಸಾದ ಅವನನ್ನು ನೋಡಿ "ಅಜ್ಜ, ನಿನೇನು ಕೆಲ್ಸ ಮಾಡ್ತೀಯ"? ಅನ್ನುತ್ತಿದ್ದರು. ಹಾಗಂದವರಿಗೆಲ್ಲ ಕೋಪದಿಂದ ತನ್ನ ಹರಕು ಬಟ್ಟೆಯ ತೋಳೆರಿಸಿ "ಈ ರಟ್ಟೆಲಿ ಇನ್ನೂ ಬಂಡೇಕಲ್ಲು ಹುಡಿಮಾಡೋವಷ್ಟು ಬಲ ಐತಿ"! ಅನ್ನುತ್ತಿದ್ದ. ಜನ ಇವನ ಮಾತು ಕೇಳಬೇಕಲ್ಲ! ಹೋಗು ಹೋಗು ಅನ್ನುತ್ತಿದ್ದರು. ಕೆಲಸ ಅರಸಿ ಅರಸಿ ಸುಸ್ತಾದವನಿಗೆ ಊಟವಿಲ್ಲದಿದ್ದರೂ ಸಾರಾಯಿ, ಬೀಡಿಗೆ ಕಾಸು ಸಾಲದಾಗಿ ತಲೆ ಹಾಳಾಗಿತ್ತು. ಬಿಳಿ ಗಡ್ಡ, ಮೀಸೆ ಮುಖ ತುಂಬಿ ಯೋಗಿಯಂತಾಗಿದ್ದ. ಸ್ನಾನವಂತೂ ಇಲ್ಲವೇ ಇಲ್ಲ! ಹತ್ತಿರ ಹೋದರೆ ವಾಸನೆ ರಾಚುತ್ತಿತ್ತು. ಅಂತೂ ದಿನ ಕಳೆಯುವುದೆ ಅಸಾಧ್ಯವಾಗಿ ಇದ್ದಬದ್ದ ಚಿಲ್ಲರೆ ಕಾಸು ಸೇರಿಸಿ ತೋಟದ ಕೆಲಸ ಹುಡುಕಿ ಮಂಗಳೂರು ಬಸ್ಸು ಹತ್ತಿದ್ದ. ಹೊರಟ ಘಳಿಗೆ ಚೆನ್ನಾಗಿತ್ತೆಂದು ತೋರುತ್ತದೆ. ಕಟ್ಟಡ ಕಟ್ಟುವಲ್ಲಿ ಕೆಲಸ ಸಿಕ್ಕಿದರೂ ಅದು ಅವನಿಗೆ ಸರಿ ಹೊಂದಲಿಲ್ಲ. ತೋಟದ ಕೆಲಸಕ್ಕೆ.... ಎಂಬ ಮನಸ್ಸಿತ್ತಲ್ಲ! ಅಂತೂ ಅವನ ಅಸೆ ಫಲಿಸಿತ್ತು. ತೋಟದ ಕೆಲಸ ಒಲಿದು ಬಂತು.ಅಂದಿನಿಂದ ಕೆಲಸ ಶುರುವಾಗಿತ್ತು. ಹೊಸ ಬದುಕು ಕೂಡ! ಬೆಳಗಾದರೆ ಎದ್ದು ತೋಟದಿಂದ ಹುಲ್ಲು ತರುವುದು, ಅಡಿಕೆ ಹೆಕ್ಕುವುದು, ಇತರೆ ತಹೇವಾರಿ ಕೆಲಸ ಸಾಗುತ್ತಿತ್ತು. ಕತ್ತಲಾಗುತ್ತಿದ್ದಂತೆ ಜಾರಪ್ಪನಿಗೆ ಒಳಗೊಳಗೇ ಖುಷಿ! ಅ ದಿನದ ದುಡಿತದ್ದೆಲ್ಲ ಬೀಡಿಗೆ, ಕಂಠಮಟ್ಟ ಕುಡಿದು ಬರುತ್ತಿದ್ದ. ಬಂದವನೇ ತಾನಾಯಿತು ತನ್ನ ಪಾಡಾಯಿತು ಎಂಬತ್ತಿರುತ್ತಿದ್ದ. ಕುಡಿತದ ಭರಕ್ಕೆ ಕೆಲವೊಮ್ಮೆ ಮನಸೋ ಇಚ್ಚೆ ಬೈಗುಳ, ಕ್ಷಣಾರ್ಧದಲ್ಲಿ ಖಾಲಿಯಾಗುವ ಬೀಡಿ ಕಟ್ಟು, ಅದರೆಡೆಯಲ್ಲಿ ವಚನದಂಥಾ ಪದ್ಯಗಳೆಲ್ಲ ನಿರರ್ಗಳವಾಗಿ ಬರುತ್ತಿದ್ದವು.ಅಸಲಿಗೆ ಅವನಿಗೆ ಬದುಕಿನಲ್ಲಿ ತೀರ ನಿರಾಸಕ್ತಿ ಇದ್ದುದರಿಂಲೋ ಏನೋ! ಎಲ್ಲದಕ್ಕೂ ಸಾಯ್ಲಿ ಬಿಡಿ! ಅನ್ನುತ್ತಿದ್ದ. ಎಲ್ಲವೂ ಯಾಂತ್ರಿಕ ಎಂಬಂತ್ತಾಗಿತ್ತು. ತೋಟದ ಕೆಲಸ, ಹೆಂಡ, ಬೀಡಿ, ಮತ್ತೂ ಮನಸ್ಸಾದರೆ ಊಟ!ಬರೆಯ ದಿನಚರಿಯನ್ನೇ ಹೆಳುತ್ತಿದ್ದೇನೆಂದು ಅಂದು ಕೊಳ್ಳಬೇಡಿ. ವಿಶೇಷವೆಂದರೆ ಅದರ ಹೊರತು ಮತ್ತೇನೂ ಇರಲೇ ಇಲ್ಲ. ಬೀಡಿಯೇ ಅವನ ಪ್ರಪಂಚದ ಅವಿಭಾಜ್ಯ ಅಂಗ! ಅದುವೆ ಜೀವನ ಅದುವೆ ಆಪ್ತಮಿತ್ರ. ಊಟವಿಲ್ಲದಿದ್ದರೂ ಚಿಂತಿಲ್ಲ. ಬೀಡಿ ಎಳೆಯದಿದ್ದರೆ ನೀರಿನಿಂದ ತೆಗೆದ ಮೀನಿನಂತಾಗಿತ್ತಿತ್ತು ಅವನ ಪರಿಸ್ಥಿತಿ. ಇಂತಿಪ್ಪ ಜಾರಪ್ಪ, ಜೀವನದಲ್ಲಿ ತುಂಬ ನೊಂದು ಕೊಂಡಿದ್ದರಿಂದಲೋ ಏನೋ ಕುಡಿತದ ಸಹವಾಸ ಬಿಡಲೇ ಆಗದಷ್ಟರ ಮಟ್ಟಕ್ಕೆ ಮುಟ್ಟಿತ್ತು. ಮುಪ್ಪು ಅವರಿಸಿದ ಪರಿಣಾಮದಿಂದ ಆರೋಗ್ಯವೂ ಕೈಕೊಡಲಾರಂಭಿಸಿತ್ತು.ಅವನ ಬದುಕೆಂದರೆ ಥೇಟು ಬೀಡಿಯಂತಾಗಿತ್ತು. ಯಾರಿಗೂ ಬೇಡವಾದವನೆಂಬ ಭಾವವೂ ಇತ್ತು ಎಂದು ಕಾಣಿಸುತ್ತದೆ. ಕೆಲವೊಮ್ಮೆ ತುಂಬ ಮಂಕಾಗಿರುತ್ತಿದ್ದ. ಆದಿನ ಕೆಲವು ಬೀಡಿಕಟ್ಟು ಖಚರ್ಾಗುತ್ತಿತ್ತು. ಕೆಮ್ಮು ಹಿಂದನಿಂದಲೇ ತನ್ನ ಇರವನ್ನೂ ತೋರಿಸುತ್ತಿತ್ತು. ವೃದ್ಧಾಪ್ಯದಲ್ಲಿ ಹೆಂಡತಿ ಮಕ್ಕಳೊಂದಿಗೆ ಹಾಯಾಗಿ ಇರಬೇಕಾದವ ಎಲ್ಲೋ ಆಗಿ ಹೋಗಿದ್ದ. ಸೂರೂ ಇಲ್ಲ, ಆಸರೆಯೂ ಇಲ್ಲ. ಜೀವನ ನಿಂತು ಹೋಗುವ ಭೀತಿಯಿಂದಲೋ ಅಥವಾ ನನ್ನ ಇನ್ನು ಮನೆಯವರು ಸೇರಿಸಲಾರರು ಎಂಬ ಸಂಶಯವೋ.. ನನ್ನ ಈ ತೋಟದಲ್ಲೇ ಮಣ್ಣು ಮಾಡ್ಬಿಡಿ ಅನ್ನುತ್ತಿದ್ದ!ಬದುಕಿನ ಸತ್ಯಗಳ ಅರಿವಾಗಿ ಅಲ್ಲಾ ಹಿಂದಿನ ಘಟನೆಗಳೆಲ್ಲ ನೆನಪಾಗುತ್ತಿದ್ದುದರಿಂದಲೂ ಜಾರಪ್ಪ ಬೀಡಿ ಎಳೆಯುವುದೇ ಬದುಕಾಗಿತ್ತು. ಬೀಡಿಗೆ ಬೇಕಾಗಿಯೇ ಅವ ಬದುಕುವಂತಿತ್ತು.! ಇದು ಒಂಟಿ ಜೀವವೊಂದರ ಜೀವನದ ಕಥೆಯಾದ್ದರಿಂದ.. ಹೀಗೂ ಉಂಟೆ ಎಂದು ಮೊದಮೊದಲು ನನಗನಿಸಿದರೂ, ನಾನು ಒಪ್ಪಲೇ ಬೇಕಾಗಿತ್ತು.ಆ ದಿನ ಜಾರಪ್ಪ ಕಂಠ ಮಟ್ಟಕ್ಕಿಂತಲೂ ಹೆಚ್ಚಿಗೇ ಕುಡಿದು ಬಂದಿದ್ದ. ಸ್ವರ ತಾರಕಕ್ಕೇರಿತ್ತು. ನನ್ನ ಸಂತೋಷನೆಲ್ಲ ಕಸ್ಕೋಳ್ತಾರಲ್ಲ.. ಸೂ... ಮಕ್ಳು ಅಂತಿದ್ದ. ವಿಷಯ ಏನೆಂದು ನನಗೆ ನಿಧಾನಕ್ಕೆ ಅರಿವಾಗತೊಡಗಿತ್ತು. ಸರಕಾರ ಸಾರಾಯಿ ನಿಷೇಧ ಮಾಡಿದ್ದೇ ಅದಕ್ಕೆ ಕಾರಣವಂತೆ. ಆದರೇನು...? ಸಾರಾಯಿ ಇಲ್ಲದಿದ್ದರೆ ಅದರ ಚಟ ಬಿಟ್ಟಿರಲಾಗುವುದೇ? ಬೀಡಿಯೊಂದಿಗೆ ಸಾರಾಯಿ ಬದಲು ಈಗ ವೈನ್ ಶಾಪ್ನ ಕದ ತಟ್ಟುತ್ತಿದ್ದಾನೆಂದು ಯಾರೋ ಹೇಳಿದಂತಾಯಿತು.!

ಮಂಗಳವಾರ, ಮಾರ್ಚ್ 31, 2009

ಚಿಲ್ಲರೆ ವಿಷಯಗಳ ಬಗ್ಗೆ ಬರೀಬೇಕು ಅಂದ್ರೆ ಬರಯೋಕಾಗಲ್ಲ... ಎಕ್ಸಾಮು ಅದು ಇದು ಪೀಡೆ ತೊಲಗಲು ಕಾಯ್ತಿದ್ದೇನೆ. ಅದ್ರ ಮೊದಲು ಸ್ವಲ್ಪ ಬ್ಲಾಗ್ ಹುಚ್ಚು. ನಾಲ್ಕು ಜನರೋಂದಿಗೆ ಬೆರೆಯಬೇಕು.. ಏನೆಲ್ಲಾ ಕಲಿಯಬೇಕು ನಾಲ್ಕು ಕಾಸು ಸಂಪಾದಿಸಿ ಝಮ್ಮಂತ ಓಡಾಡಬೇಕು ಎಂಬ ಆಸೆ . ಅದರ ನಡುವೆ ಡಾಕ್ಯುಮೆಂಟರಿ ಗಡಿಬಿಡಿ ಇದೆ. assignment, dessertation ಬರೆದು ಈ ಜನ್ಮದಲ್ಲಿ ಮುಗಿಯೋ ಹಾಗೆ ಕಾಣುವುದಿಲ್ಲ. ಇನ್ನೂ ಹೆಚ್ಚಿಗೆ ಹೇಳಿದರೆ, ಬ್ಲಾಗು ನೋಡಲು ನೀವೇ ಇರುವುದಿಲ್ಲ....!