ಸಣ್ಣ ಕಥೆ
ಒಂದು ತುಂಡು ಬೀಡಿ.....!
ಈ ಕಥೆಯ ವ್ಯಕ್ತಿಯದು ದಿನಚರಿಯೇ ಜೀವನವಾಗಿ ದಿನ ಕಳೆಯುವುದೇ ಸಾಧನೆ ಎಂಬಂತಿದ್ದ ತಹೇವಾರಿ ಮನುಷ್ಯರೆಡೆಯಲ್ಲಿ ಹೀಗೊಬ್ಬ.. ವ್ಯಕ್ತಿಯ ಕುರಿತು ಹೇಳಲೇಬೇಕು ಎಂಬುದು. ಅವನ ದಿನಚರಿಯ ಪೂರ್ಣ ಪಾಠವನ್ನು ತುಂಬ ಉದ್ದ ಮಾಡುವುದು ಸಾಧ್ಯವಿದ್ದರೂ ಕಥೆಯಾಗಿ ಇಷ್ಟೇ ಸಾಕು. ಜಾರಪ್ಪನಿಗೆ ಬೆಳಗಾಗುವುದೆಂದರೆ ಅದರಲ್ಲಿ ಏನೂ ವಿಶೇಷವಿಲ್ಲ! ಯಾವಾಗ್ಲೂ ಬೆಳಗಾಗುತ್ತೆ ಮತ್ತೆ ಅದ್ರಲ್ಲೇನು ಮಹಾ? ಅಂದ್ಕೊಳ್ತಿದ್ದ. ಅದಲ್ಲದೆ, ಅವನಿಗೆ ನಿನ್ನೆಯದರ ಚಿಂತೆಯೇ ಇಲ್ಲ. ನಾಳೆಯದರ ಬಗ್ಗೆ ಕೇಳುವುದೇ ಬೇಡ! ಆದರೆ.......ಚಿಂತೆ ಇಲ್ಲದಿದ್ದರೂ ಹೊಟ್ಟೆ ಕೇಳಬೇಕಲ್ಲ! ಇವತ್ತು ಹೊಟ್ಟೆಗೇನು ಎಂಬ ಪ್ರಶ್ನೆಯೇ ಅವನನ್ನು ಅಧೀರನನ್ನಾಗಿಸುತ್ತಿತ್ತು. ಬದುಕಿನಲ್ಲಿ ಅವನೆಣಿಸಿದಂತೆ ಏನೂ ಆಗಲಿಲ್ಲವಾದ್ದರಿಂದ ಆಸೆಗಳನ್ನೆಲ್ಲ ಅವ ಎಂದಿಗೋ ಬಿಸುಟು ಕೈತೊಳೆದಾಗಿತ್ತು. ಆದರೂ ದಿನ ಕಳೆಯುವುದು ಹೇಗೆಂಬ ಪ್ರಶ್ನೆಗೆ ಅವನಲ್ಲಿ ಉತ್ತರವೇ ಇಲ್ಲ! ಕೇಳಿದರೋ ಹೇಗೋ ನಡೀತದೆ... ಸ್ವಾಮೀ ನಂಗೇನು ಹೆಂಡ್ರಾ ಮಕ್ಳಾ..? ಅಂತಿದ್ದ! ಅವಂದು ಒಂಥರ ಒಂಟಿ ಬದುಕು. ಏಕಾಂಗಿ ಸಂಚಾರಿ. ಹೊಟ್ಟೆ ತುಂಬಿಸುವದಕ್ಕೆ ಅವನಿಗೆ ಕೂಲಿ ಕೆಲಸವೆ ಗತಿಯಾಗಿತ್ತು. ದೂರದ ಬಿಜಾಪುರದಿಂದ ಕೆಲಸ ಅರಸಿ ಬಂದವನೇ ಸೀದಾ ದಕ್ಷಿಣಕನ್ನಡಕ್ಕೆ ಬಂದು ತೋಟವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ದಿನ ಖಚರ್ಿಗೆ ಅವನಿಗೆ ಮೂರು ಹೊತ್ತು ಊಟ ಎರಡು ಕಟ್ಟು ಬೀಡಿ ಮತ್ತು ಬೇಸರ ಕಳೆಯಲು ಸಾರಾಯಿ ಅವನ ಗೆಳೆಯರು. ತೀರ ಮನಸ್ಸು ನೊಂದು ಕೊಂಡಿದೆಯಂದರೆ ಅಂದು ಮನಸೋ ಇಚ್ಛೆ ಕುಡಿದು ಬಂದು ಮಲಗುತ್ತಿದ್ದ. ಮತ್ತೆ ಊಟವೂ ಬೇಡ ಎಂಬತ್ತಾಗುತ್ತಿತ್ತು. ಅಲ್ಲಿಗೆ ಅವನ ದಿನಚರಿ ಮುಗಿಯುತ್ತಿತ್ತುಇಷ್ಟಕ್ಕೂ ಜಾರಪ್ಪನಿಗೆ ಹೆಂಡತಿ,ಮಕ್ಕಳಿರಲಿಲ್ಲ ಎಂದಲ್ಲ! ಎಲ್ಲರೂ ಇದ್ದರು. ಊರಲ್ಲಿದ್ದಾಗ ಸಂಗದೋಷವೋ ಏನೊ..! ಕುಡಿತದ ದಾಸನಾಗಿಬಿಟ್ಟಿದ್ದ. ಕೊನೆ ಕೊನೆಗೆ ಕುಡಿತ ಅತಿಯಾಗಿ ಮನೆಯವರಿಗೆಲ್ಲ ಹೊಡೆತ ಬಡಿತಗಳು ಶುರುವಾಗಿಬಿಟ್ಟದ್ದವು. ಕೈ ತುಂಬ ಸಾಲ ಬೇರೆ..! ತೀರ ಸಹಿಸಲೇ ಅಸಾಧ್ಯ ಎಂಬಷ್ಟರ ಮಟ್ಟಿಗೆ ಮನೆಯವರು ಬಂದು ಮುಟ್ಟಿದ್ದಿರಬೇಕು. ಮಕ್ಕಳು,ಹೆಂಡತಿ ಸೇರಿ ಹೊರಗಟ್ಟಿದ್ದರು. ಮತ್ತೆ ಮನೆಗೆ ಹೋಗುವ ಪ್ರಯತ್ನ ಮಾಡಿದನಾದರೂ , ಮುಚ್ಚಿದ ಕದ ತೆರೆಯಲೇ ಇಲ್ಲ! ಅಂದಿನಿಂದ ಅವನ ಬದುಕು ಬೀದಿಗೆ ಬಂದಿತ್ತು. ಎರಡು ದಿನ ಹೇಗೇಗೋ ಎರಡು ಹೊತ್ತು ಊಟಕ್ಕೆ ಪ್ರಯತ್ನ ಪಟ್ಟರೂ ಮತ್ತಿನ ದಿನಗಳಲ್ಲಿ ಒಪ್ಪತ್ತಿನ ಊಟಕ್ಕೆ ಊರಿಡೀ ಅಲೆಯಬೇಕಾದ ಪರಿಸ್ಥಿತಿಯಾಗಿತ್ತು. ಯಾರೂ ಕೆಲಸ ಕೊಡುವವರಿಲ್ಲ. ವಯಸ್ಸಾದ ಅವನನ್ನು ನೋಡಿ "ಅಜ್ಜ, ನಿನೇನು ಕೆಲ್ಸ ಮಾಡ್ತೀಯ"? ಅನ್ನುತ್ತಿದ್ದರು. ಹಾಗಂದವರಿಗೆಲ್ಲ ಕೋಪದಿಂದ ತನ್ನ ಹರಕು ಬಟ್ಟೆಯ ತೋಳೆರಿಸಿ "ಈ ರಟ್ಟೆಲಿ ಇನ್ನೂ ಬಂಡೇಕಲ್ಲು ಹುಡಿಮಾಡೋವಷ್ಟು ಬಲ ಐತಿ"! ಅನ್ನುತ್ತಿದ್ದ. ಜನ ಇವನ ಮಾತು ಕೇಳಬೇಕಲ್ಲ! ಹೋಗು ಹೋಗು ಅನ್ನುತ್ತಿದ್ದರು. ಕೆಲಸ ಅರಸಿ ಅರಸಿ ಸುಸ್ತಾದವನಿಗೆ ಊಟವಿಲ್ಲದಿದ್ದರೂ ಸಾರಾಯಿ, ಬೀಡಿಗೆ ಕಾಸು ಸಾಲದಾಗಿ ತಲೆ ಹಾಳಾಗಿತ್ತು. ಬಿಳಿ ಗಡ್ಡ, ಮೀಸೆ ಮುಖ ತುಂಬಿ ಯೋಗಿಯಂತಾಗಿದ್ದ. ಸ್ನಾನವಂತೂ ಇಲ್ಲವೇ ಇಲ್ಲ! ಹತ್ತಿರ ಹೋದರೆ ವಾಸನೆ ರಾಚುತ್ತಿತ್ತು. ಅಂತೂ ದಿನ ಕಳೆಯುವುದೆ ಅಸಾಧ್ಯವಾಗಿ ಇದ್ದಬದ್ದ ಚಿಲ್ಲರೆ ಕಾಸು ಸೇರಿಸಿ ತೋಟದ ಕೆಲಸ ಹುಡುಕಿ ಮಂಗಳೂರು ಬಸ್ಸು ಹತ್ತಿದ್ದ. ಹೊರಟ ಘಳಿಗೆ ಚೆನ್ನಾಗಿತ್ತೆಂದು ತೋರುತ್ತದೆ. ಕಟ್ಟಡ ಕಟ್ಟುವಲ್ಲಿ ಕೆಲಸ ಸಿಕ್ಕಿದರೂ ಅದು ಅವನಿಗೆ ಸರಿ ಹೊಂದಲಿಲ್ಲ. ತೋಟದ ಕೆಲಸಕ್ಕೆ.... ಎಂಬ ಮನಸ್ಸಿತ್ತಲ್ಲ! ಅಂತೂ ಅವನ ಅಸೆ ಫಲಿಸಿತ್ತು. ತೋಟದ ಕೆಲಸ ಒಲಿದು ಬಂತು.ಅಂದಿನಿಂದ ಕೆಲಸ ಶುರುವಾಗಿತ್ತು. ಹೊಸ ಬದುಕು ಕೂಡ! ಬೆಳಗಾದರೆ ಎದ್ದು ತೋಟದಿಂದ ಹುಲ್ಲು ತರುವುದು, ಅಡಿಕೆ ಹೆಕ್ಕುವುದು, ಇತರೆ ತಹೇವಾರಿ ಕೆಲಸ ಸಾಗುತ್ತಿತ್ತು. ಕತ್ತಲಾಗುತ್ತಿದ್ದಂತೆ ಜಾರಪ್ಪನಿಗೆ ಒಳಗೊಳಗೇ ಖುಷಿ! ಅ ದಿನದ ದುಡಿತದ್ದೆಲ್ಲ ಬೀಡಿಗೆ, ಕಂಠಮಟ್ಟ ಕುಡಿದು ಬರುತ್ತಿದ್ದ. ಬಂದವನೇ ತಾನಾಯಿತು ತನ್ನ ಪಾಡಾಯಿತು ಎಂಬತ್ತಿರುತ್ತಿದ್ದ. ಕುಡಿತದ ಭರಕ್ಕೆ ಕೆಲವೊಮ್ಮೆ ಮನಸೋ ಇಚ್ಚೆ ಬೈಗುಳ, ಕ್ಷಣಾರ್ಧದಲ್ಲಿ ಖಾಲಿಯಾಗುವ ಬೀಡಿ ಕಟ್ಟು, ಅದರೆಡೆಯಲ್ಲಿ ವಚನದಂಥಾ ಪದ್ಯಗಳೆಲ್ಲ ನಿರರ್ಗಳವಾಗಿ ಬರುತ್ತಿದ್ದವು.ಅಸಲಿಗೆ ಅವನಿಗೆ ಬದುಕಿನಲ್ಲಿ ತೀರ ನಿರಾಸಕ್ತಿ ಇದ್ದುದರಿಂಲೋ ಏನೋ! ಎಲ್ಲದಕ್ಕೂ ಸಾಯ್ಲಿ ಬಿಡಿ! ಅನ್ನುತ್ತಿದ್ದ. ಎಲ್ಲವೂ ಯಾಂತ್ರಿಕ ಎಂಬಂತ್ತಾಗಿತ್ತು. ತೋಟದ ಕೆಲಸ, ಹೆಂಡ, ಬೀಡಿ, ಮತ್ತೂ ಮನಸ್ಸಾದರೆ ಊಟ!ಬರೆಯ ದಿನಚರಿಯನ್ನೇ ಹೆಳುತ್ತಿದ್ದೇನೆಂದು ಅಂದು ಕೊಳ್ಳಬೇಡಿ. ವಿಶೇಷವೆಂದರೆ ಅದರ ಹೊರತು ಮತ್ತೇನೂ ಇರಲೇ ಇಲ್ಲ. ಬೀಡಿಯೇ ಅವನ ಪ್ರಪಂಚದ ಅವಿಭಾಜ್ಯ ಅಂಗ! ಅದುವೆ ಜೀವನ ಅದುವೆ ಆಪ್ತಮಿತ್ರ. ಊಟವಿಲ್ಲದಿದ್ದರೂ ಚಿಂತಿಲ್ಲ. ಬೀಡಿ ಎಳೆಯದಿದ್ದರೆ ನೀರಿನಿಂದ ತೆಗೆದ ಮೀನಿನಂತಾಗಿತ್ತಿತ್ತು ಅವನ ಪರಿಸ್ಥಿತಿ. ಇಂತಿಪ್ಪ ಜಾರಪ್ಪ, ಜೀವನದಲ್ಲಿ ತುಂಬ ನೊಂದು ಕೊಂಡಿದ್ದರಿಂದಲೋ ಏನೋ ಕುಡಿತದ ಸಹವಾಸ ಬಿಡಲೇ ಆಗದಷ್ಟರ ಮಟ್ಟಕ್ಕೆ ಮುಟ್ಟಿತ್ತು. ಮುಪ್ಪು ಅವರಿಸಿದ ಪರಿಣಾಮದಿಂದ ಆರೋಗ್ಯವೂ ಕೈಕೊಡಲಾರಂಭಿಸಿತ್ತು.ಅವನ ಬದುಕೆಂದರೆ ಥೇಟು ಬೀಡಿಯಂತಾಗಿತ್ತು. ಯಾರಿಗೂ ಬೇಡವಾದವನೆಂಬ ಭಾವವೂ ಇತ್ತು ಎಂದು ಕಾಣಿಸುತ್ತದೆ. ಕೆಲವೊಮ್ಮೆ ತುಂಬ ಮಂಕಾಗಿರುತ್ತಿದ್ದ. ಆದಿನ ಕೆಲವು ಬೀಡಿಕಟ್ಟು ಖಚರ್ಾಗುತ್ತಿತ್ತು. ಕೆಮ್ಮು ಹಿಂದನಿಂದಲೇ ತನ್ನ ಇರವನ್ನೂ ತೋರಿಸುತ್ತಿತ್ತು. ವೃದ್ಧಾಪ್ಯದಲ್ಲಿ ಹೆಂಡತಿ ಮಕ್ಕಳೊಂದಿಗೆ ಹಾಯಾಗಿ ಇರಬೇಕಾದವ ಎಲ್ಲೋ ಆಗಿ ಹೋಗಿದ್ದ. ಸೂರೂ ಇಲ್ಲ, ಆಸರೆಯೂ ಇಲ್ಲ. ಜೀವನ ನಿಂತು ಹೋಗುವ ಭೀತಿಯಿಂದಲೋ ಅಥವಾ ನನ್ನ ಇನ್ನು ಮನೆಯವರು ಸೇರಿಸಲಾರರು ಎಂಬ ಸಂಶಯವೋ.. ನನ್ನ ಈ ತೋಟದಲ್ಲೇ ಮಣ್ಣು ಮಾಡ್ಬಿಡಿ ಅನ್ನುತ್ತಿದ್ದ!ಬದುಕಿನ ಸತ್ಯಗಳ ಅರಿವಾಗಿ ಅಲ್ಲಾ ಹಿಂದಿನ ಘಟನೆಗಳೆಲ್ಲ ನೆನಪಾಗುತ್ತಿದ್ದುದರಿಂದಲೂ ಜಾರಪ್ಪ ಬೀಡಿ ಎಳೆಯುವುದೇ ಬದುಕಾಗಿತ್ತು. ಬೀಡಿಗೆ ಬೇಕಾಗಿಯೇ ಅವ ಬದುಕುವಂತಿತ್ತು.! ಇದು ಒಂಟಿ ಜೀವವೊಂದರ ಜೀವನದ ಕಥೆಯಾದ್ದರಿಂದ.. ಹೀಗೂ ಉಂಟೆ ಎಂದು ಮೊದಮೊದಲು ನನಗನಿಸಿದರೂ, ನಾನು ಒಪ್ಪಲೇ ಬೇಕಾಗಿತ್ತು.ಆ ದಿನ ಜಾರಪ್ಪ ಕಂಠ ಮಟ್ಟಕ್ಕಿಂತಲೂ ಹೆಚ್ಚಿಗೇ ಕುಡಿದು ಬಂದಿದ್ದ. ಸ್ವರ ತಾರಕಕ್ಕೇರಿತ್ತು. ನನ್ನ ಸಂತೋಷನೆಲ್ಲ ಕಸ್ಕೋಳ್ತಾರಲ್ಲ.. ಸೂ... ಮಕ್ಳು ಅಂತಿದ್ದ. ವಿಷಯ ಏನೆಂದು ನನಗೆ ನಿಧಾನಕ್ಕೆ ಅರಿವಾಗತೊಡಗಿತ್ತು. ಸರಕಾರ ಸಾರಾಯಿ ನಿಷೇಧ ಮಾಡಿದ್ದೇ ಅದಕ್ಕೆ ಕಾರಣವಂತೆ. ಆದರೇನು...? ಸಾರಾಯಿ ಇಲ್ಲದಿದ್ದರೆ ಅದರ ಚಟ ಬಿಟ್ಟಿರಲಾಗುವುದೇ? ಬೀಡಿಯೊಂದಿಗೆ ಸಾರಾಯಿ ಬದಲು ಈಗ ವೈನ್ ಶಾಪ್ನ ಕದ ತಟ್ಟುತ್ತಿದ್ದಾನೆಂದು ಯಾರೋ ಹೇಳಿದಂತಾಯಿತು.!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ