Pages

ಬುಧವಾರ, ಜನವರಿ 6, 2016

ತಟ್ಟೆ ಇಡ್ಲಿ ಅಲ್ಲ.. ಇದು ತಟ್ಟೆಕೆರೆ..!ಒಂದು ಮನವಿ
ತಟ್ಟೆಕೆರೆಗೆ ಹೋಗಿ, ಮೋಜು ಮಾಡಿ ಆದರೆ ಕಿರುಚಾಟ ಇತ್ಯಾದಿ ಬೇಡ. ಕಾರಣ ಅದು ಅರಣ್ಯವಲಯ. ಅಷ್ಟೇ ಅಲ್ಲ ಬಾಟ್ಲಿ, ಪ್ಲಾಸ್ಟಿಕ್, ಆಹಾರ ಎಲ್ಲ ಅಲ್ಲಿ ತಿಂದು ಎಸೆಯುವುದಿದ್ದರೆ ಹೋಗಲೇ ಬೇಡಿ. ಆ ಪ್ರದೇಶವಾದರೂ ಪ್ರಶಾಂತವಾಗಿರಲಿ.


ಬೆಂಗಳೂರು ಸನಿಹದ, ಅಷ್ಟಾಗಿ ಜನರಿಗೆ ಪರಿಚಯವಿಲ್ಲದ ಒಂದು ಸ್ಥಳ ಎಂದರೆ ಅದು ತಟ್ಟೆಕೆರೆ. ಹೆಸರು ತಟ್ಟೆಕೆರೆ. ಹಾಗಂತ ತಟ್ಟೆಯ ರೀತಿಯಲ್ಲೇನೂ ಇಲ್ಲ ಆ ಕೆರೆ. ಆದರೆ ವಿಶಾಲವಾಗಿ ಅದಕ್ಕೂ ಹೆಚ್ಚಿಗೆ ಪ್ರಶಾಂತವಾಗಿದೆ. ಬೆಂಗಳೂರಲ್ಲಿ ವಾರಪೂರ್ತಿ ಕಂಪ್ಯೂಟರ್ ಕುಟ್ಟಿ, ವಾರಾಂತ್ಯ ಪೇಟೆ ಜಂಜಾಟದಿಂದ ಹೊರ ಹೋದರೆ ಸಾಕಪ್ಪಾ.. ದೇವರೇ.. ಎಂದುಕೊಳ್ಳುವವರಿಗೆ ಇದೊಂದು ಬೆಸ್ಟ್ ಸ್ಪಾಟ್!
ಬೆಂಗಳೂರು ಸುತ್ತಮುತ್ತ ಹೊಸ ಜಾಗ ಏನಾದ್ರೂ ಇದ್ರೆ ಅಂತ ನಾನು ಗೆಳೆಯರನ್ನು ಕೇಳುವುದು. ಕೆಲವರು ನಾನು ಮೂರ್ನಾಲ್ಕು ಬಾರಿ ಹೋದ ಜಾಗವನ್ನೇ ಇದು ಬೆಸ್ಟ್ ಕಣೋ.. ಎಂದು ಹೇಳುವುದು ಇದ್ದೇ ಇದೆ. ಮೊನ್ನೆ ಅದೇನೋ ಸೈಕ್ಲಿಂಗ್ಗಾಗಿ ಯಾವುದಾದರೂ ಪ್ರಶಾಂತ ಜಾಗವಿದೆಯಾ ಎಂದು ತಡಕಾಡುತ್ತಿದ್ದಾಗ ಸಿಕ್ಕಿದ್ದು, ತಟ್ಟೆಕೆರೆ. ಹೆಚ್ಚೂ ಕಡಿಮೆ ಇಲ್ಲಿಗೆ ಬೆಂಗಳೂರಿನ ಸೈಕಲ್ ಉತ್ಸಾಹಿಗಳು ಬರುವುದಿದೆ. ಅದೂ ವಾರಾಂತ್ಯ. ಇದೇ ಕಾರಣಕ್ಕೆ ನಾನೂ ಗೆಳೆಯರನ್ನು ಕೇಳಿದೆ. ಹೇಗೆ ಸೈಕಲಲ್ಲೇ ಹೋಗೋಣ ಅಂದರೆ ಆ ಕಡೆಯಿಂದ ನಕಾರ. ಮೂವತ್ತು-ನಲವತ್ತು ಕಿ.ಮೀ. ಸೈಕಲಲ್ಲಿ ಹೋಗಿ ವಾಪಾಸ್ ಬರುವುದು ಎಂದರೆ ಅಷ್ಟು ಸುಲಭದ ಮಾತೇನಲ್ಲ. ಅದೂ ಏರು ತಗ್ಗು ಇದ್ದರಂತೂ ನಮ್ಮ ಛಲ, ದೈಹಿಕ ಸಾಮರ್ಥ್ಯ ಪರೀಕ್ಷೆ ಎಲ್ಲವೂ ಆಗುತ್ತದೆ. ಕೊನೆಗೆ ಮಳೆ ಬರುವ ಲಕ್ಷಣವಿದ್ದರಿಂದಲೂ ಸೈಕಲ್ ಬೇಡ,ಬೈಕ್ಗೆ ಜೈ ಎಂದಿದ್ದಾಯಿತು. 
ರಾತ್ರಿ ಕಚೇರಿ ಪಾಳಿ ಮುಗಿಸಿ ಬೆಳಗ್ಗೆ ಏಳುವುದೆಂದರೆ ಸೂರ್ಯ ನೆತ್ತಿ ಮೇಲೆ ಇರುತ್ತಾನೆ! ಇದೇ ಕಾರಣಕ್ಕೆ ಹೊರಡುವಾಗ ಗಂಟೆ ಹತ್ತೂವರೆ ದಾಟಿತ್ತು. ಬೈಕಿಗೆ ಪೆಟ್ರೋಲು ಸುರಿದು ನಾನು ಬನ್ನೇರುಘಟ್ಟದ ನೈಸ್ ರಸ್ತೆಯಲ್ಲಿ ಗೆಳೆಯರನ್ನು ಕೂಡಿಕೊಳ್ಳುವ ಹೊತ್ತಿಗೆ ಗಂಟೆ ಹನ್ನೆರಡಕ್ಕೆ ಐದೇ ನಿಮಿಷ! ಟ್ರಾಫಿಕ್, ಕಿತ್ತು ಹೋದ ಡಾಂಬರು, ಧಡ ಬಡ ಬೈಕು ಹಾರಿಸಿ, ಬನ್ನೇರುಘಟ್ಟದತ್ತ ಸಾಗಿದೆವು. ಅಲ್ಲಿಂದ ಹಾರೋಹಳ್ಳಿ-ತಟ್ಟೆಕೆರೆ ಮಾರ್ಗದಲ್ಲಿ ಬೈಕ್ ಓಡಿತು. ಒಟ್ಟು ನಾಲ್ಕು ಬೈಕ್ಗಳಲ್ಲಿ ಆರು ಜನ ಸವಾರರು. ರಸ್ತೆ ವಿಚಾರ ಹೇಳುವುದೇ ಬೇಡ. ಅಲ್ಲಲ್ಲಿ ಡಾಂಬರು ಕಿತ್ತು, ಕೆಸರು ಹಾರುವ ಪರಿಸ್ಥಿತಿ. ಆದರೆ ತಟ್ಟೆಕೆರೆಗೆ ಹತ್ತಿರ ಹತ್ತಿರವಾಗುತ್ತಲೇ ಪ್ರಶಾಂತ ವಾತಾವರಣ, ಹಸಿರ ಸಿರಿ, ಮಧ್ಯೆ ಹಾದು ಹೋದ ರಸ್ತೆಯೂ ಚೆನ್ನಾಗಿತ್ತು ಅನ್ನಿ. ಹಾಗೆ ತಟ್ಟೆಕೆರೆ ಎನ್ನುವ ಒಂದು ದ್ವಾರದಲ್ಲಿ ಬೈಕ್ಗೆ ಬ್ರೇಕ್. ಮುಚ್ಚಿದ ಗೇಟು. ಎದುರುಗಡೆ ದೊಡ್ಡ ಬೋರ್ಡ್. "ಅಕ್ರಮ ಪ್ರವೇಶ ನಿಷಿದ್ಧ. 25 ಸಾವಿರ ರೂ. ದಂಡ, ಜೈಲು'! ಎಚ್ಚರಿಕೆ. ತಟ್ಟೆಕೆರೆ ಕನಕಪುರ ರಕ್ಷಿತಾರಣ್ಯ ವ್ಯಾಪ್ತಿಗೆ ಬರುತ್ತದೆ. ಆನೆ ಕಾರಿಡಾರ್ ಕೂಡ ಹೌದು. ಆದರೆ ಅಲ್ಲಿಗೆ ಹೋಗಬೇಕಾದರೆ ಅನುಮತಿ ಬೇಕಾ..? ಎಂದು ತಲೆಕೆರೆದುಕೊಂಡೆ. ಒಂದಿಬ್ಬರ ಬಳಿ ಕೇಳಿದ್ದಾಗ ಇಲ್ಲ.. ಎಂದಷ್ಟೇ ಹೇಳಿದ್ದರು. ಆದರೆ ಆನೆಗಳು ಸಿಕ್ಕರೂ ಸಿಗಬಹುದು ಎಂದೂ ಮಾಹಿತಿ ಇತ್ತು. ಆದರೆ ಈ ವಿಚಾರ ಹೊಸದು. ಅಷ್ಟರಲ್ಲೇ ಒಬ್ಬರ ನೆರವಿಂದ, ಊರ ಕಡೆಯಿಂದ ಹೋಗಿ ಎನ್ನುವ ಸೂಚನೆ. ಸರಿ ಎಂದು ಬೈಕ್ ಸ್ವಲ್ಪ ಮುಂದೆ ಹೋಗಿ ತಟ್ಟೆಕೆರೆ ಗ್ರಾಮ ಪ್ರವೇಶಿಸಿ ಮಣ್ಣಿನ ಮಾರ್ಗ ಪ್ರವೇಶಿಸಿತು. ಹೆಚ್ಚೂ ಕಡಿಮೆ 1 ಕಿ.ಮೀ. ಸಾಗುವಷ್ಟರಲ್ಲಿ ವಿಶಾಲ ಕೆರೆ ಪ್ರತ್ಯಕ್ಷ. ಪಕ್ಕದಲ್ಲೇ ಕೋದಂಡರಾಮ, ಮಹದೇಶ್ವರ ಗುಡಿ. ಅಲ್ಲೇ ಬೈಕ್ ನಿಲ್ಲಿಸಿ ಕೆರೆ ಕಡೆಗೆ ಹೆಜ್ಜೆ. ತಂಪಾದ ಹವೆ, ಒಳ್ಳೆಯ ಪ್ರದೇಶ. ಆದರೆ ಪೇಟೆ ಮಂದಿ ಇಲ್ಲೂ ಬಂದು ಪ್ರದೇಶ ಕುಲಗೆಡಿಸಿದ್ದು ಕಣ್ಣಿಗೆ ಬಿತ್ತು. ಬಿಯರ್ ಬಾಟಲಿ, ನೀರ ಬಾಟಲಿ, ಪೆಪ್ಸಿ ಇತ್ಯಾದಿ ಹೇರಳವಾಗಿತ್ತೆನ್ನಿ. ಮನುಷ್ಯರು ಎಲ್ಲಿ ಹೋದರೂ ಹಾನಿ ಎಸಗುವುದು ಬಿಟ್ಟು ಒಳ್ಳೆಯದೇನಾದರೂ ಮಾಡಿದ್ದಿದೆಯೇ ಎಂಬ ಪ್ರಶ್ನೆ ಬಂತು. 
 ಅದಾಗಿ ತಟ್ಟೆಕೆರೆ ಒಂದು ಸುಂದರ ಪ್ರಶಾಂತ ಪ್ರದೇಶ. ಕೆರೆಯ ಪ್ರದೇಶ ಕನಕಪುರ ಅರಣ್ಯವಲಯಕ್ಕೆ ಬರುತ್ತದೆ. ಇಲ್ಲಿ ಅಕ್ರಮ ಪ್ರವೇಶ ನಿಷಿದ್ಧ. ಆದರೆ ತಟ್ಟೆಕೆರೆಗೆ ಸೀಮಿತವಾಗಿ ಹೋಗುವುದಕ್ಕೆ ಅಡ್ಡಿ ಏನಿಲ್ಲ. ಆ ಪ್ರದೇಶದಲ್ಲಿ ದೇವರುಗಳ ಗುಡಿಯೊಂದಿದ್ದು ಹೋಗಲಡ್ಡಿಯಿಲ್ಲ. ಇದನ್ನೇ ದುರುಪಯೋಗಪಡಿಸಿ ಬರುವ ಜನರು ಇಡೀ ಪ್ರದೇಶದಲ್ಲಿ ಅಧ್ವಾನ ಎಬ್ಬಿಸಿರುವುದು ರಾಚುತ್ತದೆ. ಸದ್ಯ ಸಾಕಷ್ಟು ನೀರಿದ್ದು ಕೆರೆಗೆ ಅರ್ಧಚಂದ್ರಾಕೃತಿಯಲ್ಲಿ ಸುತ್ತು ಹಾಕುವುದಕ್ಕೆ ಸಾಧ್ಯವಿಲ್ಲ. ಇಲ್ಲದಿದ್ದರೆ, ನಿಸರ್ಗ ರಮಣೀಯತೆಯ ಈ ಪ್ರದೇಶದಲ್ಲಿ ಕೆರೆ ದಂಡೆಯಲ್ಲಿ ಹಾಯಾಗಿ ಕೂರಬಹುದು. ಬೆಂಗಳೂರಿನ ತಲೆಬಿಸಿಯನ್ನು ಕೆರೆಗೆ ತಂದು ಬಿಟ್ಟು, ಶಾಂತವಾಗಿ ಹೋಗಬಹುದು. ಹಾಗೆ ಮತ್ತೆ ಎರಡೂವರೆಗೆ ನಮ್ಮ ಬೈಕ್ಗಳು ಹೊರಟು ನಾಲ್ಕೂವರೆಗೆಲ್ಲ ಬೆಂಗಳೂರು ತಲುಪಿದವು. ಒಂದು ವಾರಾಂತ್ಯದ ಅಲ್ಪ ಸಮಯ ಕಳೆಯಲು ತಟ್ಟೆಕೆರೆ ಸೂಪರ್.