Pages

ಶುಕ್ರವಾರ, ಜೂನ್ 1, 2012


ಇಂತಿ ನಿನ್ನ...

ಪ್ರೀತಿಯ ಕಂದು ಕಣ್ಣಿನ ಹುಡುಗ..

ಎಲ್ಲಿ ನನ್ನ ಪತ್ರವನ್ನು ನೀನು ಹರಿದು ಹಾಕುತ್ತೀಯೋ ಎಂಬ ಹೆದರಿಕೆ. ಆದರೂ ಬರೆಯಲು ಕುಳಿತಿದ್ದೇನೆ. ಹೇಗೆ ಬರೆಯಬೇಕೆಂದು ಗೊತ್ತಾಗುತ್ತಿಲ್ಲ. ನನ್ನ ಹೆಸರು ಕೇಳಿದ ಕೂಡಲೇ ನಿನ್ನ ಮುಖ ಬದಲಾಗುತ್ತದೆ. ಸಿಟ್ಟು, ದುಃಖ, ನಿನ್ನ ಹಣೆಯ ನೆರಿಗೆಗಳಲ್ಲಿ ಮೂಡುತ್ತದೆ ಎಂದು ಸಂಶಯವಿದ್ದರೂ,  ಆದರೆ ನಿನ್ನ ಮನಸ್ಸು ಹಾಗಿಲ್ಲ. ಅದು ನನಗೆ ಎಂದೋ ಅರ್ಥವಾಗಿದೆ. ಬಾನಾಡಿಗಳಂತೆ, ಪ್ರಶಾಂತ ಕೊಳದ ತಿಳಿನೀರಿನಂತೆ, ಸ್ವಚ್ಛಂದ ಮನಸ್ಸು ನಿನ್ನದು. ಅದಕ್ಕಾಗಿಯೇ ನಿನ್ನ ಮರೆಯಲಾರದ ಅನಿವಾರ್ಯತೆಯಲ್ಲಿ ನಾನಿದ್ದೇನೆ. ನೀನು ಹೇಗಿದ್ದಿ, ಚೆನ್ನಾಗಿದ್ದೀಯಾ ಒಂದೂ ನಾನು ಕೇಳುವುದಿಲ್ಲ..
        ಸತ್ಯ ಹೇಳುತ್ತೇನೆ. ನಿನ್ನ ನೆನಪು ಮಾಸದೆ ಹಾಗೇ ಉಳಿದುಕೊಂಡಿದೆ. ಹೌದು ನಾನು ನಿನ್ನ ಪ್ರೀತಿಗೆ ಮೋಸ ಮಾಡಿದವಳು. ಪ್ರೀತಿಯನ್ನು ಕತ್ತು ಹಿಚುಕಿ ಕೊಲ್ಲಲು ಪ್ರಯತ್ನಿಸಿದವಳು. ಆ ಪಾಪದ ಫಲವನ್ನು ಉಣ್ಣಲೇಬೇಕಲ್ಲ. ಈಗ ನೋಡು ಅನುಭವಿಸುತ್ತಿದ್ದೇನೆ. ಬಹುಶಃ ನಿನಗೆ ತಮಾಷೆಯಾಗಿ ಕಾಣುತ್ತಿರಬೇಕು. ಇವಳಿಗೆಲ್ಲೋ ಹುಚ್ಚು ಹಿಡಿದಿದೆ ಅಂದುಕೊಂಡಿರಬೇಕು ಅಲ್ಲವೇ.. ಖಂಡಿತ ನಿನ್ನ ಹುಚ್ಚು ಹಿಡಿದಿದೆ. ನೀನು ದಿನವೂ ಹರಿಸುತ್ತಿದ್ದ ಪ್ರೇಮ ಸುಧೆಯಲ್ಲಿ ಮಿಂದು ಬರುತ್ತಿದ್ದ ನಾನು, ಸಂತೈಸುವವರಿಲ್ಲದೇ, ಕಣ್ಣೀರು ಒರೆಸುವುವರಿಲ್ಲದೇ, ನಿಜಕ್ಕೂ ಹುಚ್ಚಿಯಾಗಿದ್ದೇನೆ.
         ಅಂದು ನಾನು ನಿನ್ನನ್ನು ಬಿಟ್ಟು ಹೋಗಿದ್ದೆ.. ನೆನಪಿದೆಯಾ..? ನನಗೆ ನೀನು ಬೇಡ. ಬೇಡ ಅಂದರೆ ಬೇಡ.. ನಿನ್ನ ಕುರಿತ ಕಠೋರ ಸತ್ಯ ತಿಳಿದು ನಿನ್ನೊಂದಿಗಿನ ಸಂಬಂಧ ಕಡಿದುಕೊಂಡೆ. ಮುಖ ತೋರಿಸುತ್ತಿರಲಿಲ್ಲ. ಫೋನು ಮಾಡಿದರೆ ತೆಗೆಯುತ್ತಿರಲಿಲ್ಲ. ಮೆಸೇಜ್ ಮಾಡುತ್ತಿರಲಿಲ್ಲ. ಕಾರಣ ನಿನ್ನಲ್ಲಿ ನನ್ನ ಬಗ್ಗೆ ಒಂದು ತಾತ್ಸಾರ ಭಾವನೆ ಹುಟ್ಟಲಿ. ಆವಾಗ ನೀನೇ ದೂರವಾಗುತ್ತೀಯ ಎಂಬ ಆಲೋಚನೆ. ಆದರೆ ನೀನು ಏನು ಎಂದು ನನಗೆ ತಿಳಿದದ್ದು ಆವಾಗಲೇ. ನಾನು ನಿನ್ನಿಂದ ದೂರಾಗಲು ಶತಪ್ರಯತ್ನ ಮಾಡಿದರೂ, ನೀನೆಂದೂ ದೂರಾಗಲಿಲ್ಲ. ಅಮ್ಮನಿಂದ ದೂರಾಗುವುದುಂಟೇ ಎಂದು ಹೇಳುತ್ತಿದ್ದೆ. ಅಬ್ಬಾ ಎಂಥಾ ತಾಳ್ಮೆ ನಿನ್ನದು! ಕಡುಕೋಪಿಯಾದರೂ ನನ್ನಲ್ಲಿ ಎಂದಿಗೂ ಕೋಪಿಸಿಕೊಳ್ಳಲಿಲ್ಲ, ಬೇಸರದ ಮಾತನಾಡಲಿಲ್ಲ, ಹೋಗಾಚೆ ಎಂದು ದೂರ ತಳ್ಳಲಿಲ್ಲ. ಪ್ರೇಮ ಹರಿಸುವುದು ನಿಲ್ಲಿಸಲೇ ಇಲ್ಲ. ನನ್ನಲ್ಲಿ ಅದೇನು ಕಂಡಿದ್ದೀಯೋ ಯಾರಿಗೆ ಗೊತ್ತು..? ಅಂದೆಲ್ಲ, ನಮ್ಮ ಮಾತುಕತೆ ದೂರವಾದರೂ ನನಗೆ ನಿನ್ನ ಚಿತ್ರ ಮನಸ್ಸಿನಿಂದ ಮಾಸಿರಲಿಲ್ಲ. ನೀನು ಮತ್ತೊಮ್ಮೆ ಕಾಲೇಜಿಗೆ ಬಂದಾಗೆಲ್ಲ.. ಒಂದು ವರ್ಷಕ್ಕಾಗುವಷ್ಟು ನಿನ್ನ ನೆನಪು ರಿನಿವಲ್ ಆಗಿತ್ತು. ನನ್ನ ಸಂಬಂಧ ದೂರವಾದ ಮೇಲೆ ನೀನೆಲ್ಲೂ ಕಾಣುತ್ತಲೇ ಇರಲಿಲ್ಲ. ಪೇಟೆಯಲ್ಲಿ ನನ್ನ ನೀನು ಕಂಡರೂ ಮಾತನಾಡಿಸುತ್ತಿರಲಿಲ್ಲ.. ನೋಡಿಯೂ ನೋಡದಂತೆ ಇದ್ದೆ. ಜೀವನದಲ್ಲಿ ಎಂದೂ ಹೆಲ್ಮೆಟ್ ಹಾಕದೇ ಬೈಕ್ನಲ್ಲಿ ಹೋಗುತ್ತಿದ್ದ ನೀನು.. ನನಗೆ ಗುರುತೇ ಸಿಗಬಾರದೆಂದು ಹೆಲ್ಮೆಟ್ ಹಾಕತೊಡಗಿದೆ. ಆದರೂ ನನಗೆ ನಿನ್ನ ಗುರುತು ಚೆನ್ನಾಗಿಯೇ ಸಿಗುತ್ತಿತ್ತು. ಎದುರು ನೀನು ಕಂಡಾಗೆಲ್ಲ ಎದೆ ಢವ ಢವ ಹೊಡೆದುಕೊಳ್ಳುತ್ತಿತ್ತು ಮಾತನಾಡಿಸುತ್ತೀಯೇನೋ ಎಂಬಂತೆ. ಆದರೆ ಹಾಗೇ ನೀನು ಹೋದಾಗೆಲ್ಲ.. ಛೇ ಮಾತನಾಡಿಸದೇ ಹೋದನಲ್ಲಾ.. ನಾನಾದರೂ ಮಾತನಾಡಿಸುತ್ತಿದ್ದರೆ, ಮಾತನಾಡುತ್ತಿದ್ದನೋ ಎಂದು ಅನಿಸಿದ್ದಿದೆ.
           ಹೌದು ಹುಡುಗ... ಬೇಕೆಂದೇ ನಿನ್ನ ಸಂಬಂಧ ಕಡಿದುಕೊಂಡೆ. ನನಗೂ ಒಂದು ಜೀವನ ಎನ್ನವುದು ಇದೆಯಲ್ಲ. ಒಳ್ಳೆಯ ಮನೆಗೆ ಸೊಸೆಯಾಗಿ, ಒಳ್ಳೆಯ ಗಂಡನಿಗೆ ಹೆಂಡತಿಯಾಗಬೇಕು ಎಂದಿದೆಯಲ್ಲ..ನೀನೇ ಹೇಳು ನಾನು ಚೆನ್ನಾಗಿರಬಾರದಾ? ನನ್ನ ಸ್ಥಾನದಲ್ಲಿ ಒಂದು ಬಾರಿ ನಿಂತು ಆಲೋಚಿಸು.. ಹಾಂ ಅಷ್ಟು ಯೋಗ್ಯತೆ ನಿನ್ನಲ್ಲಿ ಇರಲಿಲ್ಲ ಎಂದಲ್ಲ. ನಿನ್ನ ಪಾಲಿನ ಕಠೋರ ಸತ್ಯಗಳನ್ನು ನಾನು ಅರಗಿಸಲಾರದೇ ಹೋದೆ. ಅಷ್ಟೊಂದು ಧೈರ್ಯವೇ ಇಲ್ಲ. ನೀನು ಕೇಳುತ್ತಿದ್ದೆಯಲ್ಲ. ನಾನು ಸತ್ತರೆ ಎಂಬಂತೆ. ಆವಾಗೆಲ್ಲ ಹೀಗೆಲ್ಲ ಮಾತಾಡಬೇಡ ಎಂದು ನಾನು ನಿನ್ನ ಬಾಯಿಗೆ ಕೈಹಿಡಿದದ್ದು ನೆನಪಿದೆಯೇ? ಪರಿಸ್ಥಿತಿ ನನ್ನನ್ನು ಹಾಗೆ ಮಾಡಿತು. ನಿನ್ನನ್ನು ಬೇಕು ಬೇಕೆಂದೇ ತಿರಸ್ಕರಿಸಿದೆ. ನೀನು ಎಂದಿಗೂ ಬರಬೇಡ ಎಂದು ಹೇಳಿದೆ. ನನ್ನ ವಿಚಾರ ಮರೆತುಬಿಡು ಎಂದು ಹೇಳಿದೆ. ನೀನು ನನ್ನೊಂದಿಗೆ ಎಷ್ಟು ದಿನ ಬದುಕಬಲ್ಲೆ ಎಂಬ ಪ್ರಶ್ನೆಯೇ ನನಗೆ ದೊಡ್ಡದಾಯಿತು. ಕಟ್ಟಿಕೊಂಡ ನಂತರ ನೀನು ನನ್ನಿಂದ ದೂರವಾದರೆ ಎನ್ನುವ ಅಭದ್ರತೆ ಕಾಡತೊಡಗಿತು. ನೀನು ಹೋದರೆ ಮತ್ತೆ ನಾನೇನು ಮಾಡಲಿ ಎನ್ನುವ ಪ್ರಶ್ನೆ ಬೃಹದಾಕಾರವಾಯಿತು, ನಿನ್ನ ಕಷ್ಟ ನೋಡುವ ಛಾತಿ ನನಗಿಲ್ಲ. ಏನೇ ಆದರೂ, ಜೀವನ ಎದುರಿಸುವ ನಿನ್ನ ಮನಸ್ಸು ನನಗಿಲ್ಲದಾಯಿತು.. ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಕಿತ್ತು ಕಿತ್ತು ತಿನ್ನಲು ಶುರುಮಾಡಿತು. ನಿನ್ನನ್ನು ಕಟ್ಟಿಕೊಂಡ ಬಳಿಕ ಕಳೆದುಕೊಳ್ಳುವುದರ ಬದಲು ಮೊದಲೇ ಕಳೆದುಕೊಂಡರೆ ಚೆನ್ನ ಎಂದು ಮನಸ್ಸಿಗನ್ನಿಸಿತು. ನೀನು ಚೆನ್ನಾಗಿರುವಷ್ಟು ದಿನ ದೂರದಿಂದಲೇ ನೋಡಬಹುದಲ್ಲ.. ಅದಕ್ಕಾಗಿಯೇ ತಿರಸ್ಕರಿಸಿದೆ. ದೂರ ಹೋಗು ಎಂದು ಸಾರಿ ಸಾರಿ.. ಗೋಗರೆದೆ.. ಆದರೆ....
            ನೀನು ದೂರವಾದರೂ, ಮನಸ್ಸಿನಿಂದ ದೂರವಾಗಲೇ ಇಲ್ಲ. ಹಾಗೇ ಇದ್ದೀಯಾ. ದಿನಾ ಬರುತ್ತೀಯಾ, ನಿನ್ನ ಹೆಸರು ಹೇಳಿ ನನ್ನ ಕಷ್ಟಗಳನ್ನೆಲ್ಲ ಹೇಳುತ್ತೇನೆ. ಹೀಗಾಯಿತು ಕಣೋ ಎಂದು ಬಿಕ್ಕಳಿಸುತ್ತೇನೆ. ನೀನು ಪ್ರೊಪೋಸ್ ಮಾಡಿದ್ದಾಗ ನಾನು ಒಪ್ಪಿರಲಿಲ್ಲ. ಹುಚ್ಚು ಹುಡುಗ ಏನು ಎತ್ತ ನೋಡದೆ ಮಾಡಿದ್ದಾನೆ ಅಂದುಕೊಂಡಿದ್ದೆ. ಆದರೆ ನಿನ್ನ ಮಾತುಗಳು ಪ್ರೀತಿಯ ದೃಢತೆಯನ್ನು ದಿನಕಳೆದಂತೆ ಒತ್ತಿ ಹೇಳುತ್ತಿದ್ದವು. ನಿನ್ನ ಮಾತು, ಕೃತಿ, ಹೊಸಜೀವನದ ತುಡಿತ, ಕನಸುಗಳಿಗೆ ಮರುಳಾಗಿ ನಿಧಾನಕ್ಕೆ ನಿನಗೆ ಮನಸ್ಸು ಕೊಟ್ಟೆ. ಅದ್ಯಾಕೋ ಒಮ್ಮೆ ನಿನ್ನ ಸಹವಾಸವೇ ಬೇಡ ಅನ್ನಿಸಿತ್ತು.
             ಅದು ಎಂದಿಗೂ ನೆರವೇರಲಿಲ್ಲ. ನೀನು ನನ್ನ ಧ್ಯಾನದಲ್ಲಿರುತ್ತಿದ್ದಿಯೋ ಗೊತ್ತಿಲ್ಲ. ಆದರೆ ಪ್ರೇಮಿಗಳು ಅಡ್ಡಾಡುತ್ತಿರುವಾಗ, ಬಸ್ಸಿನಲ್ಲಿ ಆ ಪ್ರೇಮಿಯ ಭುಜಕ್ಕೆ ಪ್ರಿಯತಮೆ ತಲೆಕೊಟ್ಟು ಮಲಗಿದ್ದನ್ನು ನೋಡಿದಾಗ ನಿನ್ನ ನೆನಪು ಕಾಡುತ್ತಿತ್ತು. ಎಲ್ಲವನ್ನೂ ಹೇಳಿಕೊಳ್ಳಬೇಕು, ನೀನು ನನ್ನ ಸಂತೈಸಬೇಕು, ಜೀವ ಹೋಗುವಷ್ಟು ಪ್ರೀತಿಸಬೇಕು ಎಂದಿದ್ದೆ. ಆದರೆ ಅಷ್ಟೆಲ್ಲ ಗಾಢವಾಗಿ ಪ್ರೀತಿಸಿದರೆ ಮುಂದೆ.. ಹೇಗಾಗಬಹುದು ಎಂಬ ಪ್ರಶ್ನೆಯೂ ಮೂಡತೊಡಗಿತ್ತು. ಆದರೆ ನೀನು ನನ್ನ ಪ್ರೀತಿ ಪಡೆಯುವ ಉತ್ಸಾಹದಲ್ಲಿ  ಏನನ್ನೂ ಮುಚ್ಚಿಡಲಿಲ್ಲ. ನಿನ್ನ ಪರಿಸ್ಥಿತಿಯನ್ನು ನೆನೆದು ಅಂದು ಮನಸೋ ಅತ್ತಿದ್ದೆ. ಇಂಥವನನ್ನು ಪ್ರೀತಿಸುವುದು ಹೇಗೆ ಅಂದುಕೊಂಡಿದ್ದೆ. ಆದರೆ ನಿನ್ನ ಮಾತುಗಳು ಅವೆಲ್ಲವನ್ನೂ ಮರೆಸುತ್ತಿತ್ತು. ಬೇರೇನೂ ನೆನಪಿರುತ್ತಿರಲಿಲ್ಲ. ನಾನು ಹೆಣ್ಣು. ನಿನ್ನಷ್ಟು ಬಿಡುಬೀಸಾಗಿ ಹೇಳಲು, ಪ್ರೀತಿಸಲು ಸಾಧ್ಯವಿಲ್ಲ ಎಂಬುದು ನಿನಗೂ ಅರ್ಥವಾಗಿಲ್ಲ ಕಾಣುತ್ತದೆ. ನೀನು ಪ್ರೀತಿಸುತ್ತಲೇ ಹೋದೆ.. ನಿನ್ನ ಬಗೆಗಿನ ನನ್ನ ಸಂಶಯಗಳು ನಿಧಾನಕ್ಕೆ ನನ್ನಲ್ಲಿ ಬಲವಾಗತೊಡಗಿದವು. ಹಿಂದೆ ಸರಿಯಲು ಆರಂಭಿಸಿದೆ. ಒಂದು ಬದಿಯಲ್ಲಿ ಪ್ರೀತಿ ಮತ್ತೊಂದೆಡೆ ಸಂಬಂಧ ಕಡಿದುಕೊಳ್ಳುವ ಆಲೋಚನೆ. ಅದರ ಮಧ್ಯೆ, ಬಸ್ಗೆ ಕಾದು ಕಾದು ಸೋತಾಗ ಬೈಕ್ನಲ್ಲಿ ಬರುವ ನಿನ್ನ ನೆನಪು, ಒಬ್ಬಂಟಿಯಾಗಿ ನಾನು ದಾರಿಯಲ್ಲಿ ನಡೆಯುತ್ತಿದ್ದರೆ ಹತ್ತಿರ ಬಂದು ಬೈಕ್ ಬ್ರೇಕ್ ಹಾಕಿ ಹೆದರಿಸುತ್ತಿದ್ದ ನೀನು, ಬೈಕ್ನಲ್ಲಿ ನಾನು ಹಿಂದೆ ಕುಳಿತರೆ ನೀನು ವೇಗವಾಗಿ ಹೋಗುತ್ತಿದ್ದೆ. ತುಂಟತನದಲ್ಲಿ ಬೇಕಂತಲೇ ಬ್ರೇಕು ಹಾಕುತ್ತಿದ್ದೆ. ಆವಾಗೆಲ್ಲ.. ನಿನ್ನ ಬೆನ್ನಿಗೆ ಗುದ್ದು ನಿಶ್ಚಿತವಾಗಿ ಬೀಳುತ್ತಿತ್ತು ಅಲ್ಲವೇ..? ಅದೇ ಅದೇ.. ನಿನ್ನ ಪ್ರೀತಿ ಮಾತುಗಳು, ಒಂಟಿಯಾಗಿ ಕುಳಿತಾಗೆಲ್ಲ ಕಾಡುತ್ತದೆ. ಒಂದು ಫೊನು ಮಾಡೋಣ ಎಂದು ಮೊಬೈಲ್ ಎತ್ತಿಕೊಳ್ಳುತ್ತೇನೆ. ಆದರೆ ಆ ಧೈರ್ಯವೇ ಇರುವುದಿಲ್ಲ. ಸ್ವರ ಗದ್ಗದಿತವಾದರೆ, ನಾನು ಅಳುವುದು ನಿನಗೆ ಗೊತ್ತಾದರೆ, ನೀನು ಖಂಡಿತ ಸಂತೈಸುತ್ತಿ. ಅದೇ ಅಲೆಯಲ್ಲಿ ನಾನು ಮತ್ತೆ ನಿನಗೆ ಶರಣಾದರೆ ಬೇಡ ಬೇಡ.. ಸಾಧ್ಯವೇ ಇಲ್ಲ ಎಂದು ಮತ್ತೆ ಸುಮ್ಮನಾಗುತ್ತೇನೆ.
          ಮೊದಲ ನಮ್ಮ ಭೇಟಿಯಲ್ಲಿ ನೀನು ಕೊಟ್ಟ ಪುಸ್ತಕವಿದೆಯಲ್ಲ. ಅದನ್ನು ನಾನು ಓದೇ ಇಲ್ಲ. ಎಲ್ಲ ಪುಸ್ತಕಗಳ ಸಾಲಿಗೆ ಸೇರಿಸದೇ ಅದನ್ನು ಬೇರೆಯದೇ ಆಗಿ ಎತ್ತಿಟ್ಟಿದ್ದೇನೆ. ನಿನ್ನ ನೆನಪಾದಾಗಲೆಲ್ಲ.. ರೂಮಿಗೆ ಹೋಗಿ ಪುಸ್ತಕ ತೆಗೆದುಕೊಂಡು ಎದೆಗವಚಿಕೊಳ್ಳುತ್ತೇನೆ. ಎರಡು ಹನಿ ಕಣ್ಣೀರು ಹಾಕುತ್ತೇನೆ. ಅಮ್ಮ ಬಂದರೆ ಕೇಳುತ್ತಾಳೆ ಯಾವ ಕಾದಂಬರಿ ಅಷ್ಟೂ ಚೆನ್ನಾಗಿದೆಯಾ ಎಂಬಂತೆ. ನಾನು ಹೌದು ಹೌದು ಎನ್ನುತ್ತಾ ಮತ್ತಷ್ಟು ಬಿಕ್ಕಳಿಸುತ್ತೇನೆ, ನನ್ನೆಲ್ಲ ಕಷ್ಟಗಳನ್ನು ಸಾವಧಾನವಾಗಿ ಕೇಳುವ ಮನಸ್ಸಿನೊಂದಿಗೆ ನಿನ್ನ ತೋಳಲ್ಲಿ ಬಂಧಿಯಾದಂತೆ ಕನವರಿಸುತ್ತೇನೆ. ಕೂಡಲೇ ಅಂತರಾತ್ಮ ಎಚ್ಚರಿಸುತ್ತದೆ, ಮತ್ತೆ ಅವನ ನೆನಪಲ್ಲಿ ಕರಗಿ ಹೋಗುತ್ತಿದ್ದೀಯಾ ಎಂಬಂತೆ.. ಧಡಕ್ಕನೆದ್ದು ಪುಸ್ತಕವನ್ನು ಬೀಸಿ ಒಗೆಯೋಣ ಎಂದೆನಿಸುತ್ತದೆ. ಆದರೆ ಅದ್ಯಾವುದಕ್ಕೂ ಮನಸ್ಸೇ ಬರುವುದಿಲ್ಲ.. ಮತ್ತೆ ಮೌನಿಯಾಗುತ್ತೇನೆ..!
            ನಾನು ಬರೆದಿದ್ದನ್ನೆಲ್ಲ ನಿಜಕ್ಕೂ ನೀನು ಓದುತ್ತಿದ್ದೀಯಾ ಗೊತ್ತಿಲ್ಲ.. ಆದರೂ ನಿನ್ನ ನೆನಪು ಮಾಸದಾಗಿದೆ ಎನ್ನುವುದನ್ನು ಖಂಡಿತ ಹೇಳಬಲ್ಲೆ. ಕೆಲ ಬಾರಿ ನನಗೆ ಪ್ರಶ್ನೆಗಳನ್ನು ಕೇಳಬೇಕೆನಿಸಿದ್ದಿದೆ.  ನೀನು ನನ್ನ ಯಾಕೆ ಪ್ರೀತಿಸಿದೆ..? ನಾನು ಬೇಡ ಬೇಡ ಎಂದರೂ ಮನಸ್ಸಿನಿಂದ ನೀನು ಹೋಗುತ್ತಿಲ್ಲ ಯಾಕೆ.. ಯಾಕೆ ಅಷ್ಟೊಂದು ಪ್ರೀತಿ ನನ್ನಲ್ಲಿ..? ನಿನಗೆ ಬೇರೆ ಯಾರೂ ಸಿಗಲಿಲ್ಲವೇ. ಆದರೆ ಉತ್ತರ ಹೇಳಲು ನೀನೇ ಇಲ್ಲವಲ್ಲ. ನನ್ನಷ್ಟಕ್ಕೇ ಕೇಳಿ ಸುಮ್ಮನಾಗುತ್ತೇನೆ. ನೀನು ಹೇಳುತ್ತಿದ್ದ ಒಂದು ಗ್ಲಾಸು ಜ್ಯೂಸು 2 ಸ್ಟ್ರಾ ಜೋಕು.. ಕಾಫಿ ಹಂಚಿ ಕುಡಿದ ಅನುಭವ ಮರೆಯುವುದು ಹೇಗೆ. ನಿನಗಿಷ್ಟವಾದ ಕಾಫಿ ಕುಡಿಯುತ್ತಿರಬೇಕಾದರೆ ನೆನಪಾಗುತ್ತದೆ. ಒಂದು ದೊಡ್ಡ ಕಪ್ ಕಾಫಿ ತಂದು ಭರೋ ಎಂದು ಫ್ಯಾನು ಹಾಕುತ್ತೇನೆ. ಕಾಫಿ ಹಬೆ ನಿಧಾನಕ್ಕೆ ಆವಿಯಾದಂತೆ ನೀನೇ ಕುಡಿಯುತ್ತಿದ್ದೀಯಾ ಅಂದುಕೊಳ್ಳುತ್ತೇನೆ. ಅದೇ ಖುಷಿಯಲ್ಲಿ ಮತ್ತೆ ಉಳಿದ ಕಾಫಿ ನಾನು ಕುಡಿಯುತ್ತೇನೆ. ಕೆಲವೊಮ್ಮೆ ಛೇ ಎಂತಾ ಹುಚ್ಚುಗಳಪ್ಪಎಂದು ತಲೆ ತಟ್ಟಿಕೊಳ್ಳುತ್ತೇನೆ. ಹುಂ ಏನೇ ಹೇಳಿದರೂ ಮರೆಯದ ನೆನಪುಗಳು.
          ನೀನು ಕೊಟ್ಟ ಪ್ರೀತಿ ಎಲ್ಲ ಸದಾ ಹಸಿರಾಗಿದೆ. ನನ್ನ ಯಾರು ಮದುವೆಯಾಗುತ್ತಾರೋ ಗೊತ್ತಿಲ್ಲ. ಆದರೆ ನಿನ್ನ ಮನಸ್ಸಿನಂತವರು ಇನ್ನೂ ಜಗತ್ತಿನಲ್ಲಿದ್ದಾರಾ ಎಂದು ಕೇಳಿಕೊಳ್ಳುತ್ತೇನೆ. ನಾನು ಗ್ರಹಿಸಿದ ಸುಂದರ ಜೀವನದ ಸ್ವಪ್ನಗಳೆಲ್ಲ ಈಡೇರುತ್ತಾ..? ಅದಕ್ಕೆ ಮದುವೆಯಾದ ನಂತರವೂ ಒಂದು ಹಿಡಿ ಪ್ರೀತಿ ಸಿಕ್ಕಿದರೆ ಸಾಕು ಅಲ್ಲವೇ..? ನೀನಾದರೆ ಹಿಡಿಯೇನು ಬೆಟ್ಟ ತಂದು ಮುಂದಿಡುತ್ತಿದ್ದೆ. ಆದರೆ ನಾನೇ ಒಪ್ಪಿಕೊಳ್ಳಲಿಲ್ಲ. ನನ್ನ ಬದುಕಿನಲ್ಲಿ ಏನು ಬರೆದಿದೆಯೋ ಅದೇ ಆಗುವುದು ಎಂದು ಅಂದುಕೊಂಡಿದ್ದೇನೆ. ನಿನ್ನ ಕಾಣುವುದಕ್ಕೂ, ಮಾತನಾಡದುವುದಕ್ಕೂ ಹಿಂಜರಿಕೆ ಇದ್ದರೂ, ಹಗಲು ರಾತ್ರಿ ನೀನು ಕಣ್ಮುಂದೆ ಬರುವುದು ಬಹುದೊಡ್ಡ ಸಮಾಧಾನ, ಪಶ್ಚಾತ್ತಾಪಗಳಿಗೆ ಕಾರಣವಾಗಿದೆ. ನಿನ್ನ ಬಿಡಬೇಕೆಂದು ಸಾರಿ ಸಾರಿ,  ಸಾವಿರಬಾರಿ ಅಂದುಕೊಂಡರೂ ಇಷ್ಟರವರೆಗೆ ಆ ಗ್ರಹಿಕೆಗಳೆಲ್ಲ ಸುಳ್ಳಾಗಿವೆ.
ನಿನ್ನಲ್ಲಿ ಒಂದೇ ಒಂದು ಕೇಳುತ್ತೇನೆ. ನಾನು ನಿನಗೆ ಕೊಟ್ಟ ಮನಸ್ಸಿದೆಯಲ್ಲ.. ಅದನ್ನ ವಾಪಸ್ ಕೊಡುತ್ತೀಯಾ..? ಇದು ನಿನಗೆ ಸಾಧ್ಯವೇ..?

ಇಂತಿ ನಿನ್ನ,
ಶಾರಿ