ತಿಟ್ಹತ್ತಿ ತಿರುಗಿ...
ಮನಸೇ ನನ್ನ ಮನಸೇ ಏನಾಗಿದೆ ನಿನಗೆ..?
ಕಿವಿಯಲ್ಲಿ ಗುಯಿಂಗುಡುವ ಭಾವಗೀತೆ. ಬೈಕು ನಿಧಾನನಕ್ಕೆ ವೇಗ ಏರಿಸಿಕೊಳ್ಳುತ್ತಿತ್ತು. ಅದೊಂದು ತಿರುವು.. ಎದುರಿಂದ ಬಂದ ಕಾರು ಸೋಕಿದಂತೆ ಭರ್ರನೇ ಹಾದುಹೋದಾಗ ಆತ ವಾಸ್ತವಕ್ಕೆ ಬಿದ್ದಿದ್ದ. ಕಾರಣ ಅವಳ ಮಾಸದ ನೆನಪು. ಕನಸಿನಂತೆ ಬಂದು ಹೋದವಳ ಅಚ್ಚಳಿಯದ ನೆನಪಿನಲ್ಲಿದ್ದ.
ಬೆಂಗಳೂರಿಗೆ ಇನ್ನು ಕೇವಲ 220 ಕಿ.ಮೀ. ಅಷ್ಟು ಕ್ರಮಿಸಿದರೆ ಮತ್ತೆ ಅದೇ ಹಾಳು ಜೀವನ. ಬೈಕಿನಲ್ಲಿ ಹೋಗುವುದು ನಿನ್ನೆಯದನ್ನು ಮರೆಯಲೋ, ಮತ್ತೆ ನೆನಪು ಮಾಡಿಕೊಳ್ಳಲೋ, ಹೊಸ ಆಲೋಚನೆ ಹುಟ್ಟಿಸಿಕೊಳ್ಳಲೋ.. ಎಲ್ಲದಕ್ಕೂ ಆತನಿಗೆ ಇರುವ ಏಕೈಕ ನೆವ ಅದು. ಅಚಾನಕ್ ಆಗಿ ಈ ಬಾರಿ ಆಕೆಯ ನೆನಪೇ ಆತನನ್ನು ಕಾಡುತ್ತಿತ್ತು.! ಬೆಳಗಿನ ಜಾವದ ಮಳೆಗೆ ಚೆನ್ನಾಗಿ ತೋಯ್ದಿದ್ದ ರಸ್ತೆ.. ಇಕ್ಕೆಲಗಳಲ್ಲಿ ಚಾದರದಂತೆ ಹಾಸಿದ ಮೇಫ್ಲವರ್ ಹೂಗಳು ಕಾಫಿ ತೋಟ, ಅಲ್ಪಸ್ವಲ್ಪ ಮುಸುಕಿದ ಮಂಜು ಆಕೆಯ ನೆನಪಿಗೆ ಮತ್ತಷ್ಟು ಬಲ ತಂದಿತ್ತು..
ಅಮ್ಮನ ಮಡಿಲಲ್ಲಿ ಮಲಗಿದ್ದಾಗ ತಲೆ ಸವರುತ್ತ ಹೇಳುತ್ತಿದ್ದಳು. ಅವಳನ್ನು ಮರೆತುಬಿಡು. ಜೀವನ ಎಂದರೆ ಹಾಗೆ, ಬಯಸಿದ್ದೆಲ್ಲ ಸಿಗಲ್ಲ, ಯಾವುದನ್ನೂ ಹಚ್ಚಿಕೊಳ್ಳಬೇಡ. ಅದ್ಹೇಗಾಗುತ್ತಮ್ಮ.. ಇವನ ಪ್ರಶ್ನೆ. ಅಮ್ಮನ ಉತ್ತರವಿಲ್ಲ. ಗಾಢ ಮೌನ. ಮಗನನ್ನು ಸಮಾಧಾನ ಮಾಡಲಾಗದ ಸಂಕಷ್ಟದಲ್ಲಿ ಅಮ್ಮನಿದ್ದರೆ, ಬಿಟ್ಟೂ ಬಿಟ್ಟಿರಲಾರದ ಅವಳ ಕನವರಿಕೆಯಲ್ಲಿ ಇವನಿದ್ದ.
ಇಷ್ಟಕ್ಕೂ ಅವಳು ಯಾರು?
ಅಚಾನಕ್ ಆಗಿ ಕಂಡಳು.. ಫೇಸ್ ಬುಕ್ ಲ್ಲಿ ಮಾತನಾಡಿದಳು, ಎಸ್ಎಂಎಸ್, ಫೋನ್, ಚಾಟಿಂಗ್ ಜೀವನವಾಗಿ ಹೋಯಿತು. ಅವಳೊಂದಿಗೆ ಹಂಚಿಕೊಂಡದ್ದೆಷ್ಟೋ, ಬಿಟ್ಟದ್ದೆಷ್ಟೋ.. ಮಾತನಾಡಿದ ವಿಷಯಗಳೆಷ್ಟೋ.. ಇಬ್ಬರಿಗೇ ಗೊತ್ತು. ಇಷ್ಟಕ್ಕೆಲ್ಲ ಹುಡುಗ ತಲೆಕೆಡಿಸಿಕೊಂಡು ಅವಳ ಹಿಂದೆ ಬಿದ್ದಿದ್ದ! ಫೋನಿನಲ್ಲೇ ನೀನೇ ಜೀವ ಎನ್ನುತ್ತಿದ್ದ.. ಅತ್ಲಾಗಿಂದ ಆ ಹುಡುಗಿ ಹೂಂ ಗುಟ್ಟುತ್ತಿದ್ದಳು. ಕೆಲವೊಮ್ಮೆ ಇಬ್ಬರ ನಡುವೆ ಗಾಢ ಮೌನ. ಮತ್ತೋಮ್ಮೆ ಭರ್ಜರಿ ಜಗಳ. ಸಂಜೆ, ರಾತ್ರಿಯಾಗುತ್ತಲೇ, ಅದೆಲ್ಲವನ್ನೂ ಇಬ್ಬರೂ ಮರೆಯುತ್ತಿದ್ದರು. ರಾತ್ರಿ ಗಂಟೆ ಒಂದಾದರೂ ವಿಷಯಗಳು ಮುಗಿಯುತ್ತಿರಲಿಲ್ಲ. ಮರುದಿನದಿಂದ ಮತ್ತದೇ ಮಾತು-ಕತೆ.. ಅವಳು ಹೋದದ್ದು ಬಂದದ್ದು, ಹಾಕಿದ ಡ್ರೆಸ್, ಊಟದ ವಿಚಾರ, ಫೋನಿನಲ್ಲಿ ಮಾತನಾಡುತ್ತಿರುವಾಗ ಅಮ್ಮ ಬಂದ ವಿಷಯ ಎಲ್ಲವನ್ನೂ ಹೇಳುತ್ತಿದ್ದಳು. ಇವನೋ. ಬದುಕಿನ ಚಪ್ಪರ ಕಟ್ಟುವಲ್ಲಿ ತನ್ನ ಕನಸುಗಳನ್ನು ಬಿಚ್ಚಿಡುತ್ತಿದ್ದ. ಕೆಲವೊಮ್ಮೆ ಇಬ್ಬರೂ ಮಾತನಾಡಿಕೊಳ್ಳುತ್ತಿದ್ದರು, ನಾವೆಷ್ಟು ಮಾತನಾಡುತ್ತೇವೆ. ಇಷ್ಟೊಂದು ವಿಷಯಗಳಿವೆಯಾ ಎಂಬಂತೆ. ಅವಳಿಗೆ ಮೆಸೇಜು, ಫೋನು ಮಾಡದಿದ್ದರೆ ಇವನಿಗೆ ದಿನ ಹೋಗುತ್ತಿರಲಿಲ್ಲ.. ಇವನ ಕರೆ, ಮೆಸೇಜು ಬಾರದಿದ್ದರೆ ಅವಳಿಗೇನೋ ಚಡಪಡಿಕೆ. ಇಬ್ಬರ ನಡುವೆ ಅದೇನೋ ಬಂಧ. ಇಬ್ಬರ ಮಾತುಕತೆ ಅನುರಾಗವಾಯಿತು.. ಅವನ ಭಾವನೆ ಹಂಚಿಕೊಳ್ಳುವ ಮನದೆನ್ನೆ, ಸಾಂತ್ವನಕ್ಕೆ ಅಮ್ಮ, ಕಷ್ಟಕ್ಕೆ ಸಮಾಧಾನ, ಯಶಸ್ಸಿಗೆ ಊರುಗೋಲು, ಸಾಧನೆಗೆ ಪ್ರೇರಣೆ ಎಲ್ಲವೂ ಆದಳು. ಅದಾಗಿ, ಊರಿಗೆ ಹೋದಾಗ ಅವಳನ್ನೊಮ್ಮೆ ಕಾಣಬೇಕೆನ್ನುವ ಆಸೆಯೂ ಅವನಿಗಿತ್ತು. ಪರಿಣಾಮ ಇಬ್ಬರೂ ಆ ಪೇಟೆಯ ಇಕ್ಕೆಲಗಳಲ್ಲಿ ಕೈ ಕೈ ಹಿಡಿದು ಸಂಭ್ರಮಿಸಿದರು, ಆ ಹೊತ್ತಿಗೆ ಎಲ್ಲವನ್ನೂ, ಎಲ್ಲರನ್ನೂ ಮರೆತಿದ್ದರು. ಅಂದು ಗಂಟೆಗಳು ಬೇಗ ಓಡಿದ್ದಕ್ಕೆ ಮತ್ತೆ ಇಬ್ಬರಿಗೂ ವಿಷಾದ. ಫೋನು ಮಾತುಕತೆಯಾದರೂ ಇದೆಯಲ್ಲ ಎಂದು ಸಮಾಧಾನ ಪಟ್ಟುಕೊಂಡರು.
ನಂಗೆ ನೀನು ಇಷ್ಟವಿಲ್ಲ!
ದಿನ ಕಳೆಯುತ್ತಿದ್ದಂತೆ ಅಂಥಾದ್ದೊಂದು ವಿಷಯ, ಆಗ ಬಾರದ್ದು ನಡೆದೇ ಹೋಯಿತು. ಮನೆಯಲ್ಲಿ ಕೇಳಿದರೋ, ಹಿರೀಕರಿಗೆ ಗೊತ್ತಾಯಿತೋ ಒಂದೂ ಇವನಿಗೆ ಗೊತ್ತಾಗಲಿಲ್ಲ. ಹುಡುಗ ಹುಚ್ಚು ಪ್ರೀತಿಯಲ್ಲಿ ಮುಳುಗಿದ್ದರೆ, ಅವಳು ಮೆಲ್ಲನೆ ಹಿಂದೆ ಸರಿಯುವ ಯತ್ನ ಮಾಡುತ್ತಿದ್ದಳು. ಕಾರಣ ಹುಡುಗನ ಕಿರಿಕಿರಿ. ಮದ್ವೆಯಾಗೋದು ಯಾವಾಗ, ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳಿದ್ದೇನೆ. ನಾಡಿದ್ದು, ನಿಮ್ಮ ಮನೆಗೆ ಬಂದು ಹುಡುಗಿ ಕೇಳುವ ಶಾಸ್ತ್ರ. ರೆಡಿಯಾಗಿರು ಎನ್ನುವುದು ಮುಗಿಯುತ್ತಿರಲಿಲ್ಲ. ಬಹುಶಃ ಅವಳಿಗೆ ತಲೆ ಕೆಟ್ಟು ಹೋಗಿರಬೇಕು. ಮದುವೆಯಾಗುವ ಮೊದಲೇ ಹೀಗೆ ಹುಚ್ಚನಂತಿದ್ದರೆ ಇನ್ನೇನೋ ಎಂದು ಗ್ರಹಿಸಿದ್ದಿರಬೇಕು ಪರಿಣಾಮ ನಿತ್ಯ ಒಂದು ಅಂತರವನ್ನು ಕಾಯ್ದುಕೊಂಡಳು. ಮದುವೆ, ಪ್ರೀತಿ ಮಾತೆತ್ತಿದ್ದರೆ ಪ್ಲೇಟ್ ಚೇಂಜ್.
ನಾಲ್ಕು ದಿನ ಕಳೆಯುವಷ್ಟರಲ್ಲಿ ಹುಡುಗನಿಗೆ ಹುಡುಗಿ ಕೈತಪ್ಪುವ ಭೀತಿ ಹುಟ್ಟತೊಡಗಿತು. ಎಲ್ಲ ಹುಡುಗಿಯರಂತೆ ನಾನಲ್ಲ ಎನ್ನುವ ಅವಳ ಮಾತು ಇವನಿಗೆ ಹಾಸ್ಯಾಸ್ಪದವಾಗಿ ಕಾಣತೊಡಗಿತು. ಪರಿಣಾಮ ಸಣ್ಣದೊಂದು ತಾತ್ಸಾರ ಭಾವನೆ. ಮೆಸೇಜು ಕುಟ್ಟುವುದು, ಫೋನು ಕಡಿಮೆಯಾಯಿತು. ಅಲ್ಲಿಗೆ ಮದುವೆಯಾಗುವ, ಪ್ರೀತಿ ದಡ ಎತ್ತಿಸುವ ವಿಚಾರಗಳೆಲ್ಲ.. ಹಿಂದೆ ಹಿಂದೆ ಸರಿಯಲು ಆರಂಭಿಸಿದವು. ಇದು ಮಾತುಗಳಲ್ಲೇ ವ್ಯಕ್ತವಾಗತೊಡಗಿತು. ಹುಡುಗಿ ಬಾಯಿಬಿಟ್ಟು ಹೇಳೇ ಬಿಟ್ಟಳು. ಮರೆತುಬಿಡು ಎಂಬಂತೆ. ಆದರೂ ಇಬ್ಬರ ಸಾಮೀಪ್ಯ ಕಡಿಮೆಯಾಗಿರಲಿಲ್ಲ. ಹುಡುಗನಿಗೂ ಏನನಿಸಿತೋ ಕೆಲವೊಮ್ಮೆ ಅವಳ ಮೆಸೇಜ್ಗೆ ಉತ್ತರ ಕಳುಹಿಸುತ್ತಿರಲಿಲ್ಲ. ಹುಡುಗ ಹೀಗೆ ಮಾಡಿದರೆ ಹುಡುಗಿ ಬಿಡುತ್ತಾಳಾ.. ಅವಳೂ ದೂರವಾಗತೊಡಗಿದಳು. ಇವನು ಅಪ್ಪಿತಪ್ಪಿ ಮದ್ವೆ ಮಾತೆತ್ತಿದ್ದರೆ, ಮರೆಯುವ ನಿನಗೇಕೆ ನನ್ನ ಚಿಂತೆ ಎಂಬ ಮಾತುಗಳು ಇಬ್ಬರಲ್ಲೂ ಕೇಳುತ್ತಿದ್ದವು. ಅಲ್ಲಿಗೆ ಒಂದು ಪ್ರೀತಿಯೋ, ಫ್ಲರ್ಟಿಂಗ್ ಕೊನೆಗೊಳ್ಳುವ ಹಂತಕ್ಕೆ ಬಂದು ನಿಂತಿತ್ತು! ಒಂದು ದಿನವಂತೂ ಕರೆ ಮಾಡಿದ ಅವನಿಗೆ ಅವಳು ಎಚ್ಚರಿಕೆಯ ಮಾತುಗಳನ್ನಾಡಿ ನನಗೆ ಇಷ್ಟವಿಲ್ಲ ಎಂದೂ ಹೇಳಿ ಬಿಟ್ಟಳು. ಹಾಗೆ ಹೇಳಿದ್ದೇ ಹುಡುಗ ತಲೆ ಕೆಡಿಸಿ, ಭಾವನಾತ್ಮಕವಾಗಿ ನೂರು ಮೆಸೇಜು ಕುಟ್ಟಿದ, ಏನೂ ಪರಿಣಾಮವಾಗಲಿಲ್ಲ. ತಲೆ ಕೆಟ್ಟುಹೋಯಿತೇನೋ.. ಊಟ ತಿಂಡಿ ನಿದ್ದೆ ಯಾವುದೂ ಬೇಡವಾಯಿತು. ಇವನ ಹಪಾಹಪಿಗೆ ಹುಡುಗಿ ಅದಾಗಲೇ ದೂರ ಹೋಗಿದ್ದಳು.
ಬಸ್ ಸ್ಟ್ಯಾಂಡ್ನಲ್ಲಿ ರೈಲಿಗೆ ಕಾದ!
ಹುಡುಗಿ ವಿಚಾರದಲ್ಲಿ ಆ ಹುಡುಗ ಸ್ವಲ್ಪ ಹುಚ್ಚನಾಗಿದ್ದ ಎಂದು ಬೇರೆ ಹೇಳಬೇಕಿಲ್ಲ ತಾನೇ..? ಅದಕ್ಕೆ ತಕ್ಕಂತೆ ಇವನ ಕನವರಿಕೆಗಳೂ ಇದ್ದವು.. ಅವಳು ಮಾತನಾಡದ, ದೂರ ಹೋದ ವಿಚಾರವೆಲ್ಲ ಅಮ್ಮನ ಬಳಿ ಹೇಳಿದ್ದ. ಅಳಲು ತೋಡಿಕೊಂಡಿದ್ದ. ಅವಳು ಬಿಟ್ಟು ಹೋದ್ದಕ್ಕೆ ಇವನ ಕೆಲ ಸ್ವಭಾವ ಕಾರಣವಾಯಿತು ಎಂದು ಅರ್ಥ ಮಾಡಿಸಿಕೊಳ್ಳುವವರು ಇರಲಿಲ್ಲ. ಹೋಗಲಿ ಬಿಡು ಎಂದು ಆಕೆ ಹೇಳುತ್ತಿದ್ದಳು. ಆದರೆ ಕೇಳುವ ವ್ಯವಧಾನ ಇವನಿಗೆ ಸ್ವಲ್ಪವೂ ಇರಲಿಲ್ಲ. ಅದಾಗಿ ತಿಂಗಳುಗಳು ಕಳೆದರೂ, ಅವಳ ನೆನಪು ಇವನಲ್ಲಿ ಮಾಸಲಿಲ್ಲ. ರಾತ್ರಿ ಎಲ್ಲ ಬರುತ್ತಿದ್ದಳು. ಮಾತನಾಡಿದ ಅನುಭವವಾಗುತ್ತಿದ್ದಂತೆ ಇವನು ಎದ್ದು ಕುಳಿತುಕೊಳ್ಳುತ್ತಿದ್ದ. ಮುಸುಕೆಳೆದರೆ ನಿದ್ದೆ ಇಲ್ಲ.. ರಸ್ತೆಯಲ್ಲಿ, ಕಂಪ್ಯೂಟರಿನಲ್ಲಿ, ತಲೆಯಲ್ಲಿ ಅವಳದೇ ಚಿತ್ರ. ಊರಿಗೆ ಹೋದರೆ ಪೇಟೆ ಕಾಣುವಾಗಲೆಲ್ಲ ಕಣ್ಣರಳಿಸಿ ನೋಡುತ್ತಿದ್ದ ಅವಳೆಲ್ಲಿದ್ದಾಳೋ ಎಂಬಂತೆ. ಒಂದು ದಿನವೂ ಅವಳು ಕಾಣಲಿಲ್ಲ. ಇವನ ಚಡಪಡಿಕೆ ಮುಗಿಯಲೂ ಇಲ್ಲ. ಮೊದಲೆಲ್ಲ ರಾತ್ರೆ ಹನ್ನರೆಡಾದರೂ ಅವಳ ಮೆಸೇಜು ಬರುತ್ತಿತ್ತು.. ಅದೇ ಅಭ್ಯಾಸದಲ್ಲಿ ಬೇರೆ ಯಾವ ಮೆಸೇಜ್ ಬಂದರೂ ಇವನಿಗೆ ಇದು ಅವಳ ಮೆಸೇಜ್ ಇರಬಹುದಾ ಎಂಬ ಕುತೂಹಲ, ಅನ್ನೋನ್ ನಂಬರ್ ಕರೆ ಬಂದರೆ ಬೇರೆ ನಂಬರ್ ನಿಂದ ಕರೆ ಮಾಡುತ್ತಿದ್ದಾಳಾ ಎಂಬ ಸಂಶಯ..ಫೇಸ್ ಬುಕ್ ಲ್ಲಿ ಮಾತನಾಡುತ್ತಾಳಾ ಎಂಬ ಕಾತರ ಸದಾ ಕಾಡುತ್ತಿತ್ತು. ಅವಳು ಮೆಸೇಜೂ ಕಳುಹಿಸುತ್ತಿರಲಿಲ್ಲ ಫೇಸ್ಬುಕ್ನಲ್ಲಿ ಕಂಡರೂ ಮಾತನಾಡುತ್ತಿರಲಿಲ್ಲ. ಇದು ಕೊನೆಗೆ ಹುಡುಗನಿಗೆ ಅಭ್ಯಾಸವಾಗಿ ಪುಣ್ಯಕ್ಕೆ ನನ್ನ ಫ್ರೆಂಡ್ಲಿಸ್ಟ್ನಲ್ಲಾದರೂ ಇದ್ದಾಳಲ್ಲ.. ಎಂದು ಆಕೆ ಆನ್ಲೈನ್ಗೆ ಬಂದಾಗಲೆಲ್ಲ ಮಾತನಾಡದಿದ್ದರೂ ಸಂಭ್ರಮಪಟ್ಟುಕೊಳ್ಳುತ್ತಿದ್ದ.. ಅಷ್ಟಾದರೂ ಅವಳು ಮತ್ತೆಂದಿಗೂ ಬರಲಾರಳು ಎಂಬುದು ತಲೆಗೇ ಹೋಗುತ್ತಿರಲಿಲ್ಲ. ಹುಡುಗ ಏನೋ ಸರಿ ಇಲ್ಲ ಎಂಬುದು ಅದೊಂದು ದಿನ ಮನೆಯವರಿಗೂ ಗೊತ್ತಾಗಿ ಬೇರೆ ಹುಡುಗಿ ನೋಡುವುದು ಎಂಬ ಮಾತನ್ನೆತ್ತಿದ್ದರು. ಮನೆಗೂ ಕರೆಸಿ ಆ ಹುಡುಗಿ ಮರೆಯಲು ಬುದ್ಧಿವಾದ ಹೇಳಿದರು. ಮನೆಯವರ ಯತ್ನ ಯಾವುದೂ ವರ್ಕ್ ಔಟ್ ಆಗಲಿಲ್ಲ. ಪದವಿ, ಎಂ.ಎ ಕಲಿತ ಹುಡುಗಿಯರು ಎಂದೆಲ್ಲ ಎರಡು ಉತ್ತಮ ಜಾತಕವನ್ನೂ ತಂದು ತೋರಿಸಿದರು. ಇವನದ್ದು ಅದೇ ಧ್ಯಾನ. ಜಾತಕದ ಆ ಹುಡುಗಿಯರು ಯಾರಿಗೇನು ಕಡಿಮೆ ಇಲ್ಲದಿದ್ದರೂ, ಮನದಲ್ಲಿರುವಾಕೆಯೊಂದಿಗೆ ಕೈಕೈ ಹಿಡಿದು ನಡೆದಾಡಿದ ನೆನಪು ಇವನಿಗೆ ಸುಳಿಯುತ್ತಿತ್ತು. ಯಾವ ಹುಡುಗಿಯೂ ನನಗೆ ನೋಡಬೇಡಿ. ನಾನು ಮದುವೆಯೇ ಆಗಲ್ಲ ಎಂದು ಅಪ್ಪ-ಅಮ್ಮನ ಎದುರು ಅಬ್ಬರಿಸಿಯೂ ಬಿಟ್ಟ. ಪಾಪ ಅವರೇನು ಪಾಪ ಮಾಡಿದ್ದರೋ ಹುಡುಗನ ಶೋಚನೀಯ ಪಾಡು ಅವರಿಗೆ ನುಂಗಲಾರದ ತುತ್ತು. ಅವಳು ಬರುವುದಿಲ್ಲ ಎಂಬುದನ್ನು ನಂಬುವುದಿಲ್ಲ. ಬೇರೆ ಮದುವೆಗೂ ಒಪ್ಪುವುದಿಲ್ಲ ಎಂದರೆ ಕಥೆ ಏನು? ಹೇಳಬೇಕಾದವರ ಬಳಿ ಹೇಳಿಸಿದರು. ಬುದ್ಧಿಮಾತು, ಎಚ್ಚರಿಕೆ, ಸಣ್ಣ ಗದರಿಕೆ ಯಾವುದನ್ನೂ ಹುಡುಗ ಕೇಳಲಿಲ್ಲ. ಹಾಗೆ ದಿನ, ತಿಂಗಳು,, ವರ್ಷ ಕಳೆಯಿತು. ಅವಳ ಬಗೆಗಿನ ಒಲವು ಕಡಿಮೆಯಾಯಿತೋ ಗೊತ್ತಿಲ್ಲ. ಅದೊಂದು ಬಾರಿ ಊರಿಗೆ ಹೋದವನಿಗೆ ಅವಳ ದರ್ಶನವಾಗಿತ್ತು. ಇವನಿಗೆ ಹೃದಯ ಬಾಯಿಗೆ ಬರುವುದೊಂದು ಬಾಕಿ. ಇಬ್ಬರೂ ಏನಾದರೂ ಮಾತನಾಡಿಕೊಂಡರೋ, ಅವಳು ಮೊದಲು ಇವನ್ನು ಮಾತನಾಡಿಸಿದಳಾ, ಅಲ್ಲಾ ಇವನೇ ಮಾತನಾಡಿಸಿದನಾ, ಎರಡು ಹನಿ ಕಣ್ಣೀರು ಬಂತಾ ಗೊತ್ತಿಲ್ಲ. ಅದಾಗಿ ನಾಲ್ಕಾರು ದಿನ ಮತ್ತೆ ಮುದುಡಿದಂತಿದ್ದ. ಆದರೆ ಅವಳ ವಿಚಾರ ಗೆಳೆಯರಲ್ಲಿ ಹೇಳಿಕೊಂಡು ಸಂಭ್ರಮದಲ್ಲಿದ್ದ. ಅವಳು ಮತ್ತೆ ಬರುವುದಿಲ್ಲ. ನೀನು ತಲೆಕೆಡಿಸಿಕೊಳ್ಳುವ ಮಾತೇ ಇಲ್ಲ. ಸಾವಧಾನದಿಂದರು ಎಂದು ಅವರೂ ಸಾಕಷ್ಟು ಬುದ್ಧಿವಾದ ಹೇಳಿದರು. ಕೆಲವೊಮ್ಮೆ ಅತಿ ವಿರಹಿ, ಕೆಲವೊಮ್ಮೆ ಅತಿ ಸಂತೋಷ, ವಿಕ್ಷಿಪ್ತ ಭಾವನೆಗಳಿಗೆಲ್ಲ ಅವನ ಮುಖದಲ್ಲಿ ಕಾಣುತ್ತಿತ್ತು. ದಿನಗಳು ಓಡುತ್ತಿದ್ದವು. ಅವನು ಅವನ ಪಾಡಿಗೆ? ಇವಳು ಇವಳ ಪಾಡಿಗೆ ಇದ್ದರು. ಒಂದು ದಿನ ಊರಿನಿಂದ ಇವನ ಗೆಳೆಯನೊಬ್ಬ ಫೋನ್ ಮಾಡಿದ, ಅವಳಿಗೆ ಮದುವೆ ಫಿಕ್ಸ್ ಆಗಿದೆ. ಮುಂದೆ ಅವಳ ಬಗ್ಗೆ ನೀನು ಮಾತನಾಡಕೂಡದು. ನೀನು ಮರೆಯದಿದ್ದರೆ ಬೇಡ. ನಿನ್ನಿಂದಾಗಿ ಅವಳ್ಯಾಕೆ ಹಾಗೇ ಕೂರಬೇಕು? ನೀನು ಇನ್ನಾದರೂ ಸಂಪೂರ್ಣವಾಗಿ ಮರೆಯಬೇಕು ಎಂಬುದಕ್ಕೆ ಈ ವಿಚಾರ ಹೇಳಿದ್ದು ಟೇಕ್ ಕೇರ್ ಎಂದು ಫೋನಿಟ್ಟ. ಇವನ ಮುಖದಲ್ಲಿ ಸಣ್ಣ ವಿಷಾದದ ನಗೆ ಹಾದು ಹೋಯಿತು. ಅದಾಗಿ ಅವಳು ಮದುವೆಯೂ ಆಗಿ ದೂರದ ಊರಿಗೆಲ್ಲೋ ಹೋದಳು. ಇಷ್ಟೆಲ್ಲಾ ಆದರೂ, ಅವಳ ನೆನಪೇ ಇವನ ಜೀವನವಾಗಿ ಹೋಯಿತು. ಹುಚ್ಚು ಪ್ರೀತಿಯ ಅಮಲು ಇಳಿದಿರಲೇ ಇಲ್ಲ!
ಅಂದಹಾಗೆ..
ಮೊನ್ನೆ ಮೊನ್ನೆ ಆ ಹುಡುಗನ ರೂಮಿಗೆ ಹೋಗಿದ್ದೆ. ಒಳಗೆ ಯಾವುದೋ ಹಳೆ ಪಾತ್ರೆ ತಿಕ್ಕುತ್ತಿದ್ದ. ನನಗೆ ನಗು ಬಂತು. ಏನು ಮಾರಾಯ ಇದು. ಮದುವೆ ಆಗದ ಕರ್ಮಕ್ಕೆ ಈ ಅವಸ್ಥೆಯಲ್ಲಿ ಅಂದೆ ಅಷ್ಟಕ್ಕೆ ಅವನ ಮುಖಭಾವ ಬದಲಾಯಿತು. ಹಳೆ ಪಾತ್ರೆ ತಿಕ್ಕುವುದರಲ್ಲಿಯೂ ಖುಷಿ ಇದೆ. ಹಳೆ ನೆನಪುಗಳಂತೆ, ತಿಟ್ಹತ್ತಿ ತಿರುಗಿದಂತೆ, ಅದು ಹೊಳಪು ಕಂಡಾಗೆಲ್ಲ ನೆನಪು ಮತ್ತೆ ಮರುಕಳಿಸುತ್ತದೆ ಎಂದ. ಕಥೆ ಎಲ್ಲ ಹೇಳಿದ. ಬಹುಶಃ ಆ ಹುಡುಗಿ ನೆನಪು ಪಾತ್ರೆಯ ಹೊಳಪಲ್ಲಿ ಕಾಣುತ್ತಿದ್ದಿರಬೇಕು. ನನ್ನೆದುರಿಗೆ ಭಾರೀ ಸೆಕೆ ಅಂದು ಕಣ್ಣೀರು ಒರೆಸಿದ ಪುಣ್ಯಾತ್ಮ!