Pages

ಶುಕ್ರವಾರ, ಡಿಸೆಂಬರ್ 2, 2011

ಯುನಾನಿ ಪಂಡಿತ ಕುತ್ತಿಗೆ ಹಿಚುಕಿದ ಕಥೆ..!

ಊರಿಂದ ಬಂದು ನವರಂಗದಲ್ಲಿ ಇಳಿಯುವ ಹೊತ್ತಿಗೆ ಗಂಟೆ ಆರೂಕಾಲು. ಮನೆಗೆ ಹೋಗುತ್ತಲೇ ಪ್ರೀತಿಯ ನಾಯಿ ಕಾಲಿಗೆ ಸೋಕುವಂತೆ ಬಸ್ ಇಳಿಯುವಾಗಲೇ ಸಾರ್ ಬನ್ನಿ ಸಾರ್ ಅಟೋ ಬೇಕಾ.. ಅನ್ನುವ ಜನ. ನವರಂಗದಿಂದ ನನ್ನ ರೂಮಿಗೆ  ಒಂದು ಕಿಲೋಮೀಟರ್ ದೂರ. ಊರಿಂದ ಎಷ್ಟು ಹೊತ್ತಿಗೆ ಬಂದಿಳಿದರೂ ನನ್ನ ಪಾದಯಾತ್ರೆ ಶತಸಿದ್ಧ. ಬೆಳ್ಳಂಬೆಳಗ್ಗೆಯೇ ಸ್ಮಶಾನ ದರ್ಶನ (ಹರಿಶ್ಚಂದ್ರ ಘಾಟ್) ಮುಗಿಸಿ ಮನೆಗೆ ತೆರಳುತ್ತಿದ್ದೆ. ಅಷ್ಟರಲ್ಲಿ ಗೆಳೆಯನ ಫೋನು. ಬೆಂಗಳೂರಿಗೆ ಬಂದಿದ್ದೇನೆ ನಿನ್ನ ಮನೆಗೆ ಬರುತ್ತೇನೆ ಎರಡು ದಿನ ಕೆಲಸವಿದೆ. ನಿನ್ನ ಮನೆ ಯಾವ ಏರಿಯಾ ಎಂದು ಗೊತ್ತಿಲ್ಲ ಎಂದ. ನಾನೇ ರೈಲ್ವೇ ಸ್ಟೇಷನ್ಗೆ ಬಂದು ಕರೆದುಕೊಂಡು ಹೋಗುತ್ತೇನೆ ಅಂದೆ. ಅಂತೂ ನನ್ನ ಕೆಲಸ ಮುಗಿಸಿ ಬೈಕು ಸ್ಟಾರ್ಟ್ ಮಾಡಿ ಹೊರಟೆ. ಮೆಜೆಸ್ಟಿಕ್ ರೈಲ್ವೇ ಸ್ಟೇಷನ್ ಬಳಿ ಬೆಂಗಳೂರಿಗರ ಬೆಳಗ್ಗಿನ ಪಡಿಪಾಟಲುಗಳನ್ನು ನಿಂತುಕೊಂಡು ನೋಡುತ್ತಿದ್ದ ಅವನನ್ನು ಕುಳ್ಳಿರಿಸಿಕೊಂಡು ಬಂದಿದ್ದೆ. ದಾರಿ ಮಧ್ಯೆಯೇ ಬೆಂಗಳೂರು ಕಡೆಗೆ ಪಾದ ಬೆಳೆಸಿದ ಕಾರಣವನ್ನು ಆತ ಹೇಳತೊಡಗಿದ.
ಎಂಥದ್ದೋ ತಲೆನೋವು ಮಾರಾಯ. ನಮ್ಮ ಕಡೆಯಲ್ಲೊಬ್ಬರು ಇಂತಿಂಥವರನ್ನು.. ಇಂಥಕಡೆಯಲ್ಲಿ ಹೋಗಿ ಕಾಣು ಎಂದು ಹೇಳಿದ್ದಾರೆ. ಅಲ್ಲಿಗೊಮ್ಮೆ ಹೋಗಬೇಕು. ನಾನೂ ತಲೆ ಅಲ್ಲಾಡಿಸಿದ್ದೆ. ಊರಿನಿಂದ ಬಂದಿರುವವರಿಗೆ, ಹೆಚ್ಚೇಕೆ ಬೆಂಗಳೂರಿನಲ್ಲಿ  ಇರುವವರಿಗೇ ಇಲ್ಲಿನ ವಿಳಾಸ ಪತ್ತೆ ಮಾಡುವುದು ಕಷ್ಟ.  ಸರಿ ಆ ಯುನಾನಿ ಪಂಡಿತನ ಅನ್ವೇಷಣೆಗೆ ಶುರು ಮಾಡಿದ್ದವು.. ಹೆಚ್ಚೇನೂ ಕಷ್ಟವಾಗಲಿಲ್ಲ.  ಬ್ರಿಗೇಡ್ ರೋಡ್ನಿಂದಾಚೆಗೆ ರಿಚ್ಮಂಡ್ ಸರ್ಕಲ್ ರೋಡ್ ಬಳಿಯ ಸಂದು ಗೊಂದಿಗಳಲ್ಲಿ ತಡಕಾಡಿದಾಗ ಪಂಡಿತ ಸಿಕ್ಕಿದ್ದ. ನನಗೆ ಮೊದಲಿಗೆ ಅನಿಸಿತ್ತು ಇವ ಏನು ಔಷಧ ಕೊಡಬಹುದು ಎಂಬಂತೆ. ಕಾರಣ ಒಂದು ಮುರುಕಲು ಮನೆ. ಬೈಕ್ ನಿಲ್ಲಿಸಿ ಬಾಗಿಲು ತೆರೆದರೆ ಕಿಟಾರನೆ ಕಿರುಚಿ ತೆಗೆದುಕೊಂಡಿತ್ತು. ಅದರ ಬದಿಯಲ್ಲೇ ಒಂದು ಸಣ್ಣ ಕೋಣೆಯ ಮಂಚದಲ್ಲಿ ತಕ್ಕಮಟ್ಟಿಗೆ ಕಟ್ಟುಮಸ್ತಾಗಿದ್ದ ಸುಮಾರು 65-70ರ ಪ್ರಾಯದ ವ್ಯಕ್ತಿ ಕೂತಿದ್ದ. ನಮ್ಮನ್ನು ಕಂಡಕೂಡಲೇ ‘ಆವೋ ಆವೋ...  ಮಂಗಳೂರಿಂದ ಬಂದಿದ್ದೀರಾ..?’ ಪ್ರಶ್ನೆ.. ನಾನು ಎಲಾ ಇವನಾ ಅಂದುಕೊಂಡೆ..! ನಮ್ಮನ್ನು ನೋಡಿದ ಒಂದೇ ಬಾರಿಗೆ ಮಂಗಳೂರಿನವರು ಎನ್ನಬೇಕಾದರೆ ಅದೂ ಒಂದು ಮಾತು ಮಾತನಾಡದೇ.. ಭಲೇ ಅಂದುಕೊಂಡಿದ್ದೆ. ಆತನ ಕೋಣೆಯೊಳಗೆ ಹೋಗಲು ಜಾಗವೂ ಇರಲಿಲ್ಲ.  ಘಾಟು ವಾಸನೆ ಬೇರೆ..  ಇಬ್ಬರನ್ನೂ ಒಳಗೆ ಕುಳ್ಳಿರಿಸಿ ಕೇಳಿದ ಪ್ರಯಾಣ ಹೇಗಿತ್ತು ಇತ್ಯಾದಿ.. ಮತ್ತೆ ಅವನೊದ್ದೊಂದು ಪ್ರಶ್ನೆ ನಿಮಗೆ ತಲೆನೋವಾ.. ಸ್ವಾಮಿ ಕಳಿಸಿದ್ದಾರಾ ಎಂದು ಉರ್ದು, ಕನ್ನಡ ಇಂಗ್ಲಿಷ್ ಮಿಶ್ರಿತ ಭಾಷೆಯಲ್ಲಿ ಗೆಳೆಯನನ್ನು ಕೇಳಿದ ನನಗೆ ಮತ್ತೆ ಕುತೂಹಲ. ಅಸಾಮಿ ಸಾಧಾರಣದ್ದಲ್ಲ ಎಂದು ತೀರ್ಮಾನಿಸಿಕೊಂಡೆ. ಒಂದೋ ಕಳುಹಿಸಿದವರು ಈತನಿಗೆ ಫೋನು ಮಾಡಿರಬೇಕು.. ಇತ್ಯಾದಿ ಎಲ್ಲ ನನ್ನ ತಲೆಯಲ್ಲಿ ತಿರುಗುತ್ತಿತ್ತು. ಅಷ್ಟರಲ್ಲಿ ಅವನೇ ಸಂಶಯ ಪರಿಹಾರ ಮಾಡಿದ.. ನನಗೆ ನೀವು ಕಳುಹಿಸಿದ ಜನ ಯಾರು ಎಂದೇ ಗೊತ್ತಿಲ್ಲ.. ಈ ಮೊದಲು ನಾಲ್ಕು ಮಂದಿ ಇಲ್ಲಿಗೆ ಬಂದಿದ್ದಾರೆ. ನಾನು ಅವರನ್ನು ನೋಡಿಯೂ ಇಲ್ಲ, ಮಾತಾಡಿಯೂ ಇಲ್ಲ. ಆದರೆ ನನ್ನ ಮೇಲಿನ ನಂಬಿಕೆಯಿಂದ ನಿಮ್ಮನ್ನು ಕಳುಹಿಸಿದ್ದಾರೆ ಎಂದು ಕಿರುನಗೆಯಲ್ಲೇ ಹೇಳಿದ.
ಉಭಯ ಕುಶಲೋಪರಿ ಎಲ್ಲ ಕೇಳಿ ಬಳಿಕ ಆತ ವಿಚಾರದ ಬಗ್ಗೆ ಮಾತನಾಡಲು ಶುರು ಮಾಡಿದ.. ನಿಮ್ಗೆ ನಾಳೆ ಔಷಧ ಹಾಕ್ತಾನು.. ಬೆಳಗೆ 7 ಗಂಟೆಗೆ ತಿಂಡಿ ತಿಂದು ಇಲ್ಗೇ ಬನ್ನಿ ಇತ್ಯಾದಿ’ ಇದನ್ನೆಲ್ಲ ಹೇಳುವಷ್ಟರ ಹೊತ್ತಿಗೆ 2 ಬಾರಿ ಬಾಯಿಗೆ ಹೊಗೆಸೊಪ್ಪು ‘ಮಧು‘ ಇಟ್ಟು ನಾಲ್ಕು ಬಾರಿ ಅದನ್ನು ಕರಂಡಕಕ್ಕೆ ಉಗುಳಿದ್ದ. ಆತನ ಹಾವ ಭಾವ ಮಾತನಾಡುವ ಶೈಲಿ ಎಂಥವರನ್ನೂ ಮರುಳುಗೊಳಿಸಿವಂತಿತ್ತು. ಅಷ್ಟರಲ್ಲೇ ಆತ ‘ವಿಷಯ’ಕ್ಕೆ ಬಂದ. ನಿಮ್ಮ ಚಿಕಿತ್ಸೆಗೆ ಮೂರು ಸಾವಿರ ಆಗುತ್ತದೆ.! ನನಗೆ ಎದೆ ಧಸಕ್ಕೆಂದಿತು.  ಒಂದು ಬಾರಿ ಗೆಳೆಯನ ಮುಖ ನೋಡಿದೆ. ಅವ ಹಣ ನೀಡಲು ಬ್ಯಾಗು ತಡಕಾಡುತ್ತಿದ್ದ. ನಾನು ಸುಮ್ಮನೆ ಕೂತೆ.
ಈ ನಡುವೆ ಯುನಾನಿ ಪಂಡಿತನ ಗಮನ ನನ್ನೆಡೆಗೆ ತಿರುಗಿತ್ತು. ಯೂ ಆರ್ ಲುಕಿಂಗ್ ಸೋ ಎನೆರ್ಜೆಟಿಕ್.. ಬಟ್.. ನಾಟ್ ವೆರಿ ಹ್ಯಾಪಿ ಎನ್ನುತ್ತಲೇ ಎದ್ದುನಿಂತು ನನ್ನತ್ತ ತಿರುಗಿ ಕುತ್ತಿಗೆ ಹಿಡಿದುಕೊಂಡ.. ಇದ್ಯಾಕೋ ಎಡವಟ್ಟಾಗುತ್ತಿದೆ ಅನ್ನಿಸತೋಡಗಿತು.. ಗೆಳೆಯನ ಬಳಿ ಕೈ ಭಾಷೆ ಮಾಡುತ್ತಿದ್ದೆ. ಪಂಡಿತ ಒಂದು ಉಸಿರು ತೆಗೆದು ಹಿಡಿತ ಮತ್ತಷ್ಟು ಬಿಗಿ ಮಾಡಿದ ಮನೆಯರೆಲ್ಲ ಕಣ್ಮುಂದೆ ಬಂದರು ಅಷ್ಟೇ.. ನನ್ನ ಕಣ್ಣು ಮೇಲಕ್ಕೆ ಹೋಯಿತು.. ಭರ್ತಿ 15-20 ಸೆಕೆಂಡಾಗಿರಬೇಕು.. ಆತ ಪಟ್ಟು ಸಡಿಲಿಸಿದ. ನನ್ನ ಹೋದ ಜೀವ ಮರಳಿ ಬಂದಿತು ಅಬ್ಬಾ ದೇವರೆ.. ಇವನ ಚಿಕಿತ್ಸೆಯೇ ಬೇಡಪ್ಪಾ ಅಂದುಕೊಂಡೆ. ನನಗೆ ಪ್ರಾಣಾಂತಿಕವಾದ್ದನ್ನು ನೋಡಿ ಚಿಕಿತ್ಸೆ ತೆಗೆದುಕೊಳ್ಳಲಿರುವ ಗೆಳೆಯ ಬೆಪ್ಪಾಗಿದ್ದ.. ನಾಳೆ ಬರುವುದೋ ಬೇಡವೋ ಎನ್ನುವಲ್ಲಿವರೆಗೆ ಬಂದಿದ್ದ.
ಆದರೆ ಬಂದ ಕಾರ್ಯವಾಗಬೇಕು ನೋಡಿ. ಬ್ಯಾಂಗ್ನಿಂದ ಅಡ್ವಾನ್ಸ್ ಎಂದು ಐನೂರರ ಎರಡು ನೋಟುಗಳನ್ನು ಕೊಟ್ಟೇ ಬಿಟ್ಟ.. ಪಂಡಿತ ಹಣ ತೆಗೆದುಕೊಂಡವನೇ ತನ್ನ ಸನಿಹದ ಲಟಾರಿ ಕಪಾಟಿಗೆ ಅದನ್ನು ಎಸೆದುಬಿಟ್ಟ.. ಅದರಲ್ಲಿದ್ದ ರಾಶಿ ಔಷಧ ಡಬ್ಬಿಗಳು, ಪೇಪರ್, ಎಂಥದ್ದೋ ಬಾಕ್ಸ್ ಬದಿಗೆ ಹೋಗಿ ನೋಟುಗಳು ಬಿದ್ದಿದ್ದವು. ನನಗೆ ತೀರ ಅಚ್ಚರಿ. ಕೊಟ್ಟ ಹಣವನ್ನು ಹೀಗ್ಯಾರಾದರೂ ಎಸೆಯುತ್ತಾರಾ..? ಬಹುಶಃ ನನ್ನ ನೋಟ ಅವನಿಗೆ ಅರ್ಥವಾಗಿರಬೇಕು. ವೇದಾಂತ ಮಾತನಾಡಲು ಶುರುವಿಟ್ಟುಕೊಂಡ ‘ಮನಿ ಇಂಪಾರ್ಟ್ಟೆಂಟ್ ನಹೀ ಹೆ.. ಒಳ್ಳೆ ಮನಸ್ಸು ಬೇಕು. ಸಂಪಾದ್ನೆ ಮಾಡ್ತಿದ್ರೆ ನಾನು ರಾಜ ಆಗ್ತಿದ್ದೆ.. ಆಗ ಸಂಪಾದನೆ ಮಾಡಿಲ್ಲ. ನನ್ನ ತಲೆತಲಾಂತರದ ವೃತ್ತಿಯನ್ನು ನಡೆಸಿಕೊಂಡು ಬರಬೇಕಿತ್ತು. ಉಳಿದವರೆಲ್ಲ ಏನೇನೋ ಹೇಳಿ ಸಂಪಾದನೆ ಮಾಡುವಾಗ ಸಂಪಾದನೆ ಮಾಡಬೇಕಿತ್ತು ಅನಿಸುತ್ತದೆ.. ಈಗ ಕಾಲ ಕಳೆದುಹೋಗಿದೆ. ದುಡ್ಡಿನ ಅವಶ್ಯಕತೆ ನನಗಿಲ್ಲ.. ಸಾಯುವ ವರಗೆ ಸೇವೆ ಮಾಡಿಕೊಂಡಿರುತ್ತೇನೆ. ನಿಮ್ಮ ಕೈಂದ ಪಡೆದ ದುಡ್ಡು ಔಷಧ ರೆಡಿ ಮಾಡೋಕೆ’ ಅಷ್ಟರಲ್ಲಿ ನನಗ್ಯಾಕೋ ಈತ ಬಹಳ ವಿಚಿತ್ರ ಮನುಷ್ಯ ಎಂಬ ತೀರ್ಮಾನಕ್ಕೆ ಬಂದಿದ್ದೆ.
ಅದಾಗಿ ಮರುದಿನ ಬೆಳಗ್ಗೆ ಹೋಗಿ ಗೆಳೆಯ ಔಷಧ ಪಡೆದಿದ್ದೂ ಆಯ್ತು.. ನೀವು ಸೋಲ್ಜರ್ ಥರಾ, ಐ ವಿಲ್ ಮೇಕ್ ಯು ಪರ್ಫೆಕ್ಟ್ ಎನ್ನುತ್ತ ಅಮೋಘ 2 ನೇ ಬಾರಿಗೆ ಕುತ್ತಿಗೆ ಹಿಚುಕಿದ್ದ. ಆದರೆ ಆ ಅನುಭವ ಮರೆಯಲು ಸಾಧ್ಯವೇ ಇಲ್ಲ. ಪ್ರಾಣ ಹೋಗುತ್ತದೆ ಎಂದೆನಿಸಿದರೂ, ಆತ ಕೈಬಿಟ್ಟ ಬಳಿಕ ಮನಸ್ಸಿಗೆ ಬಹಳ ಮುದವಾಗುತ್ತಿತ್ತು. ಒಂಥರಾ ಸ್ನಾನ ಮಾಡಿ ಬಂದು ಫ್ಯಾನ್ ಅಡಿಯಲ್ಲಿ ಕೂತರೆ ಆಗುವ ಅನುಭವದಂತೆ. ಫುಲ್ ರಿಫ್ರೆಶ್ ಅಂತಾರಲ್ಲ ಹಾಗೆ. ಸಾಲದ್ದಕ್ಕೆ ತುಮಾರಾ ಐ ಸೈಟ್ ಶಾರ್ಪ್ ಕರೇಗಾ ಎಂದು ಹೇಳುತ್ತಾ ಎಂಥದ್ದೋ ಔಷಧವನ್ನು ಬೇಡ ಬೇಡವೆಂದರೂ ಬಿಟ್ಟಿದ್ದ. 10 ನಿಮಿಷ ನನಗೆ ಕಣ್ಣೇ ಕಂಡಿರಲಿಲ್ಲ.. ಉರಿಯೋ ಉರಿ. ಈ ಜನ್ಮದಲ್ಲಿ ಆ ಕಡೆ ತಲೆಹಾಕಿ ಮಲಗಲ್ಲ ಅಂದುಕೊಂಡಿದ್ದೆ. ಅಲ್ಲಿಗೆ ಆ ದಿನದ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದೆ. ಅಂದಹಾಗೆ 2ನೇ ದಿನವೂ ಪಂಡಿತನ ಲಟಾರಿ ಕಪಾಟು ನನ್ನ ಕಣ್ಣಿಗೆ ಬಿದ್ದಿತ್ತು. ಅಚ್ಚರಿ ಎಂದರೆ, ಹಿಂದಿನ ದಿನ ಮುದ್ದೆ ಮಾಡಿ ಬಿಸಾಕಿದ್ದ ಐನೂರರ ನೋಟು ಹಾಗೇ ಬಿದ್ದುಕೊಂಡಿದ್ದವು. ನಿನ್ನೆ ಬಿಸಾಕಿದ ರೀತಿ ನಮ್ಮೆದುರಿಗೆ ಸ್ಪೆಷಲ್ ಆಗಿ ತೋರಿಸಿದ್ದಲ್ಲ ಎಂಬುದು ನನಗೆ ಸ್ಪಷ್ಟವಾಗತೊಡಗಿತ್ತು.     
ಮತ್ತೆ ಮೂರನೇ ದಿನ ಕಿಷ್ಕಿಂಧೆಯಂಥಾ ಅವನ ಕೋಣೆಯೊಳಗೆ ನುಗ್ಗಿದ್ದೂ ಆಯ್ತು.. ಮತ್ತಿನ್ನೇನೋ ಔಷಧವನ್ನೂ ನೀಡಿದ್ದ.. ಅಲ್ಲದೇ ನನಗೂ ಸಣ್ಣ ಬಾಟಲಿಯಲ್ಲಿ ಕಂದು ಬಣ್ಣದ ಎಂಥದ್ದೋ ಔಷಧ ನೀಡಿ ಇದನ್ನು ಕಣ್ಣಿಗೆ ಹಾಕಿ.. ಒಳ್ಳೇದಾಗ್ತದೆ ಅಂದಿದ್ದ. ನನಗಾವಾಗಲೇ ಇದು ಅದೇ ಉರಿ ಔಷಧ ಎಂದು ಗೊತ್ತಾಗಿತ್ತು. ಅಲ್ಲಿಗೆ ನಮ್ಮ ಅಭಿಯಾನ ಮುಕ್ತಾಯಗೊಂಡಿತ್ತು. ಮೂರು ದಿನಗಳ ಭೇಟಿಯಾದರೂ, ವೇದಾಂತ, ಹಿತವಚನ, ಬದುಕು ಕಷ್ಟಕಾರ್ಪಣ್ಯ, ನಾವು ಆಫ್ಘಾನಿಸ್ತಾನದವರು, ಎಲ್ಲಿಂದಲೋ ಬಂದು ಎಲ್ಲಿಗೋ ತಲುಪುವವರು.. ಹಾಗೆ ಹೀಗೆ ಎಲ್ಲಾ ಅಲ್ಲಾನ ದಯೆ ಎನ್ನುವಲ್ಲಿವರೆಗೆ ಬಂದಿದ್ದ. ಉಳಿದ ಹಣವನ್ನೂ ನೀಡುತ್ತಿರುವಾಗಲೇ, ನನ್ನ ಔಷಧದಿಂದ ನಿಮಗೆ ಫಲಿತಾಂಶ ಸಿಗದಿದ್ದರೆ ಹಣ ವಾಪಸ್ ಎಂದು ಕೈಮೇಲೆ ಕೈಯಿಟ್ಟು ಹೇಳಿದ್ದ.
ನನಗೆ ಅತೀವ ಕುತೂಹಲಕ್ಕೆ ಕಾರಣವಾದ ಯುನಾನಿ ಪಂಡಿತ ಸಾಧಾರಣದವನಲ್ಲ ಎಂಬುದು ಖಚಿತವಾಗಿತ್ತು. ಒಂದು ಅತ್ಯುದ್ಭುತ ಜೀವನಾನುಭವ, ಎಂಥವರನ್ನೂ ಒಲಿಸಿಕೊಳ್ಳುವ ತಾಕತ್ತು ಅವನಿಗಿದೆ ಅನಿಸಿತ್ತು. ಆತ ಕೊಟ್ಟ ಔಷಧ ಕಣ್ಣಿಗೆ ಹಾಕದಿದ್ದರೂ (ಉರಿಯ ಹೆದರಿಕೆ) ಮನೆಯಲ್ಲಿಟ್ಟಿರುವ ಆ ಬಾಟಲ್ ಆತನನ್ನು ಪದೇ ಪದೇ ನೆನಪಿಸುತ್ತಿದೆ.

ಮಂಗಳವಾರ, ನವೆಂಬರ್ 29, 2011

ಕಳೆದು ಹೋದ ಅವಳ ನೆನಪಲ್ಲಿ...

ತ್ತೆ ಮತ್ತೆ ಅವಳ ನೆನಪು.. ಅದು ಕಾಡುವ ನೆನಪು.. ಒಂದೊಮ್ಮೆ ಮರೆತು ಹೋದರೂ, ಕೆಲವೊಮ್ಮೆ ನೆನಪಾಗಲೇ ಬೇಕು.. ಅವಳಂಥವಳನ್ನು ಕಂಡಾಗಲಾದರೂ ನೆನಪಾಗಬೇಕು. ಅಂಥಾ ಒಂದು ಸ್ಥಿತಿಗೆ ನಾನು ಬಂದಿದ್ದೇನೆ. ಬೆಂಗಳೂರಿಗೆ ಬಂದ ಸಮಯದಲ್ಲಿ ಅವಳ ಬಗ್ಗೆ ಹಲವು ಕನಸು.. ಬೀದಿ ಬೀದಿಗಳಲ್ಲಿ ಅವಳ ಜೊತೆ ಓಡಾಡಬೇಕು. ವಾರದ ರಜೆ ದಿನ ಅವಳೇ ಎಲ್ಲ ಇತ್ಯಾದಿ. ನಿರೀಕ್ಷೆ ನಿಜವಾಗಲು ಹೆಚ್ಚು ದಿನವೇನೂ ಹಿಡಿಯಲಿಲ್ಲ. ಶಿವಾಜಿನಗರದ ಬೀದಿ ಬದಿಯಲ್ಲಿ ಸಾಗುತ್ತಿದ್ದವನಿಗೆ ನೀರಿಕ್ಷಿಸಿದವಳೇ ಸಿಕ್ಕಿದ್ದಳು. ಒಂದಲ್ಲ ನಾಲ್ಕಾರು ಬಾರಿ ಅಲೋಚನೆ. ಇವಳು ಆಗಬಹುದಾ ಎಂಬಂತೆ. ನಿನ್ನ ಸ್ಥಿತಿ ಗತಿಗೆ ಅವಳೇ ಆಗಬಹುದು ಮಾರಾಯಾ ಅಂತಾ ಗೆಳೆಯ ರಾಗ ತೆಗೆದಿದ್ದ. ಮುಂದಿನ ಒಂದು ಶುಭ ಸಂದರ್ಭದಲ್ಲಿ ಅವಳನ್ನು ಮನೆಗೆ ಕರೆದುಕೊಂಡು ಹೋಗಬೇಕು ಅದಕ್ಕಿಂತಲೂ ಮೊದಲು ಅವಳ ಬಗ್ಗೆ ಮನೆಯಲ್ಲಿ ಅಪ್ಪ-ಅಮ್ಮನಿಗೆ ಹೇಳಬೇಕು ಎಂದೆಲ್ಲ ಅಂದುಕೊಂಡಿದ್ದೆ ಹೇಳಿಯೂ ಇದ್ದೆ. ಮೊದಲಿಗೆ ಅಪ್ಪ ಬೇಡ ಎಂದರೂ ನನ್ನ ಮಾತಿಗೆ ಕಟ್ಟು ಬಿದ್ದು ನಿನಗೆ ಒಳ್ಳೆದಾಗುವುದಾದರೆ ಆಗಲಿ ಅಂದಿದ್ದರು. ಸರಿ. ಮತ್ತಿನ್ಯಾರನ್ನೂ ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಗೆಳೆಯನನ್ನು ಕೂಡಿಕೊಂಡು ಅವಳನ್ನು ನೋಡಲೊಮ್ಮೆ ಹೋಗಿದ್ದೆ. ಮೊದಲೇ ಇಷ್ಟವಾದವಳು ಅಲ್ಲವೇ? ಮತ್ತೆ ತಡಮಾಡಲಿಲ್ಲ. ನನ್ನೊಂದಿಗೆ ಬರುತ್ತೀಯಾ ಎಂದು ಕೇಳಿದೆ. ಆಕೆಗೂ ಮನಸ್ಸಿತ್ತು. ಮಾರನೇ ದಿನ ಹೋದಾಗ ಬಾಗಿಲಲ್ಲೇ ನಿಂತಿದ್ದಳು. ನಾನು ಅಪಾರ ಖುಷಿಯಿಂದ ಅವಳನ್ನು ಕರೆದುಕೊಂಡು ಬಂದೆ.
ನಿಜವಾದ ಕಥೆ ಶುರುವಾಗುವುದೇ ಇನ್ನು, ಅವಳು ಬಂದ ಮೇಲಿನ ಸಂಭ್ರಮ ಹೇಳಬೇಕೆ. ಸಣ್ಣ ಮಕ್ಕಳಿಗೆ ಪ್ರೀತಿಯ ವಸ್ತುಕೊಟ್ಟರೆ ಆಗುವಷ್ಟೇ ಸಂತಸ ನನಗಾಗಿತ್ತು. ದಿನವೂ ಅವಳೊದಂದಿಗೆ ಸಂಭ್ರಮಿಸುವುದೇನು, ಕನ್ನಿಂಗ್ಹ್ಯಾಮ್ ರಸ್ತೆಯಿಂದ ಪ್ಯಾಲೇಸ್ ರೋಡ್ನವರೆಗೆ, ಕಬ್ಬನ್ ಪಾರ್ಕ್, ಕಮರ್ಷಿಯಲ್ ಸ್ಟ್ರೀಟ್ಗಳಲ್ಲಿ ಕೈಕೈ ಹಿಡಿದು ಅಡ್ಡಾಡಿದ್ದೇನು ಒಂದಾ ಎರಡಾ. ಆಫೀಸ್ಗೂ ಅವಳ ಜೊತೆಯೇ ಹೋಗುವುದೆಂದು ಬಳಿಕ ನಿರ್ಧಾರ ಮಾಡಿಕೊಂಡೆ. ಹೋಗುವುದು ಬರುವುದು ಜೊತೆಯಲ್ಲೇ. ದಿನಕಳೆದದ್ದೇ ಗೊತ್ತಾಗಲಿಲ್ಲ. ನಾನು ಇವಳ ಜೊತೆ ಬರುವುದೆಂದು ಆಫೀಸ್ನಲ್ಲಿ ಕೆಲವರಿಗೆ ತೀವ್ರ ಕುತೂಹಲ ಹುಟ್ಟಿತ್ತು. ಸೆಕ್ಯುರಿಟಿ ಗಾರ್ಡ್ ನಿಂದ ಹಿಡಿದು, ಬಾಸ್.. ಎಲ್ಲರೂ ನನ್ನನ್ನು ನೋಡುವವರೇ. ಕೆಲವರು ಮನಸ್ಸು ತಡೆಯಲಾರದೆ ಕೇಳಿಬಿಟ್ಟಿದ್ದರು. ಹೇಗಿದೆ ಲೈಫು ಎಂಬತೆ. ಇನ್ನು ಕೆಲವರು ನನ್ನದೇ ಮನಸ್ಥಿತಿಯವರು ಇಂಥವಳು ನಮಗೂ ಸಿಕ್ಕಿದ್ದರೆ ಚೆನ್ನಾಗಿತ್ತು ಎಂದೂ ಹೇಳಿದ್ದರು. ಅಷ್ಟರ ಮಟ್ಟಿಗೆ ನಾನು ಅದೃಷ್ಟವಂತ.
ಹೀಗೆ ದಿನಗಳು ಉರುಳುತ್ತಿದ್ದಂತೆ, ಸಂತೋಷವೂ ಹಾಗೇ ಇರಬೇಕೆಂದೇನಿಲ್ಲವಲ್ಲ.. ಅಷ್ಟಕ್ಕೂ ಆ ಘಟನೆ ನಡೆದೇ ಹೋಗಬಹುದೆಂಬ ಅನುಮಾನವೂ ನನಗಿರಲಿಲ್ಲ. ನಾನಿದ್ದ ಮನೆ, ನೆರೆಕರೆಯವರಿಗೂ ಇವಳು ಇಷ್ಟವಾಗಿದ್ದಳು. ನಾನು ಇವಳೊಂದಿಗೆ ಹೋಗುವಾಗ ಬರುವಾಗ ಎಲ್ಲರೂ ತದೇಕ ಚಿತ್ತದಿಂದ ನನ್ನನ್ನೇ ನೋಡುತ್ತಿದ್ದರು. ನಾನೂ ಒಳಗೊಳಗೇ ಸಂಭ್ರಮಿಸುತ್ತಿದ್ದೆ. ನನ್ನ ಗೆಳೆಯರಂತೂ ನನಗಿಂತಲೂ ನನ್ನ ಖುಷಿಯ ಮನಸ್ಥಿಗೆ ಸಂಭ್ರಮಪಟ್ಟಿದ್ದರು. ಆದರೆ...
ಆ ದಿನ ಬಂದೇ ಬಿಟ್ಟಿತು.  ಅಂದು ನಾನು ಅವಳೊಂದಿಗೆ ಆಫೀಸಿಗೆ ಹೋಗೇ ಇರಲಿಲ್ಲ. ಬೆಳಗ್ಗೆ ಎಲ್ಲೋ ಸುತ್ತಾಡಿ, ಅಲ್ಲಿಂದಲೇ ಆಫೀಸಿಗೆ ಹೋಗಿದ್ದೆ. ಅವಳು ಮನೆಯಲ್ಲಿದ್ದಳು. ಹೋಗುವಾಗ ನನಗೆ ಕಂಪನಿಯಿಲ್ಲ ಎಂದು ಅನಿಸುತ್ತಿತ್ತು. ಇಂದು ಒಂದೇ ದಿನ ಮಾತ್ರ ಹೀಗೆ ನಾಳೆಯಿಂದ ಅವಳ ಕಂಪನಿ ಇದ್ದೇ ಇದೆಯಲ್ಲ ಅಂದುಕೊಂಡಿದ್ದೆ.
ಅಂದು ನನಗೆ ಮಧ್ಯಾಹ್ನ ಮೇಲೆ ಕೆಲಸ. ಮಧ್ಯಾಹ್ನ ಎರಡೂವರೆ ಹೊತ್ತಿಗೆ ಆಫೀಸಿಗೆ ತಲುಪಿ, ರಾತ್ರಿ ಹನ್ನೆರಡು ಗಂಟೆ ಪರ್ಯಂತ ನಿರಂತರ ದುಡಿಮೆ ಮಾಡಿ ಮನೆಗೆ ಹೊರಟಿದ್ದೆ. ಆಫೀಸ್ನ ಮೆಟ್ಟಿಲಿಳಿಯುತ್ತಿರುವಾಗಲೊಮ್ಮೆ ಮತ್ತೆ ಅವಳ ನೆನಪು. ಛೇ ಇವತ್ತಿಲ್ಲ ಅವಳು ಎಂಬಂತೆ. ಸರಿ ಬೀದಿ ದೀಪದ ಬೆಳಕಿನಲ್ಲೇ ಅವರಳನ್ನು ನೋಡುವ ನೆವದಲ್ಲಿ ಅವಸರವಸರವಾಗಿ ನಡೆದುಕೊಂಡು ಹೋಗಿದ್ದೆ. ಇನ್ನೇನು ಮನೆ ತಲುಪಲಿದೆ ಅನ್ನುವಷ್ಟರಲ್ಲಿ ಮನಸ್ಸು ಭಾರವಾಗಿತ್ತು.. ಏನೋ ಆಗಬಾರದ್ದು ಆಗಿದೆ ಎಂಬಂತೆ. ಹಾಗಾದಿರಲಪ್ಪಾ, ಅವಳು ಚೆನ್ನಾಗಿರಲಿ ಅಂತ ಮನದಲ್ಲೇ ಅಂದುಕೊಂಡಿದ್ದೆ. ಕೆಲವೊಮ್ಮೆ ಗ್ರಹಿಸಿದ್ದು ನಿಜವಾಗುತ್ತದಂತೆ.. ಇಲ್ಲೂ ಹಾಗೇ ಆಯಿತು. ನನ್ನ ಕನಸು ಚೂರು ಚೂರಾಗಿತ್ತು. ಅವಳು ಮನೆಯಲ್ಲಿ ಇರಲೇ ಇಲ್ಲ. ಒಮ್ಮೆ ಕುತೂಹಲ, ಹೊರಗಡೆ ಹೋಗಿರಬಹುದಾ ಎಂಬಂತೆ. ಅಲ್ಲೇ ಮಲಗಿದ್ದ ಸ್ನೇಹಿತನನ್ನು ಕೇಳಿದೆ. ಅವಳೆಲ್ಲಿದ್ದಾಳೆ ಎಂದು ‘ಗೊತ್ತಿಲ್ಲ.. ಇರಬಹುದು ಇಲ್ಲೇ’ ಎಂದು ಮುಸುಕೆಳೆದು ಮಲಗಿಕೊಂಡ. ನನಗೆ ಕ್ಷಣ ಕ್ಷಣ ಕಷ್ಟವಾಗುತ್ತಿತ್ತು. ಹಾಗಾದರೆ ಈ ರಾತ್ರಿ 1 ಗಂಟೆ ಸುಮಾರಿಗೆ ಎಲ್ಲಿಗೆ ಹೋಗಿರಬಹುದು ಎಂಬ ಪ್ರಶ್ನೆಯೊಂದಿಗೆ ಹುಡುಕಲು ಶುರುಮಾಡಿದೆ. ಎಲ್ಲೂ ಇಲ್ಲ ಮನೆಯ ಹಿಂಭಾಗ ಆ ವಠಾರದ ಸಂದು ಗೊಂದಿಗಳಲ್ಲೆಲ್ಲೂ ಇಲ್ಲ.. ಬಿಟ್ಟು ಹೋದ್ದಕ್ಕೆ ಆಗಬಾರದ್ದು ಆಯಿತಲ್ಲಾ ಎಂಬ ದುಃಖ ಉಮ್ಮಳಿಸಿ ಬರುತ್ತಿತ್ತು. ಉಪಾಯ ಕಾಣದೆ ಅವಳ ನೆನಪಲ್ಲಿ ಕದ ಹಾಕಿ ಮಲಗಿದೆ. ನಿದ್ದೆಯೂ ಇಲ್ಲ. ಬೆಳಗ್ಗೆ ಎದ್ದು ಇನ್ನೊಂದು ರೌಂಡ್ ಹುಡುಕುವ ಮನಸ್ಸಾಯಿತು. ಎಲ್ಲಿ ನೋಡಿದರೂ ಅವಳ ಪತ್ತೆಯಿಲ್ಲ. ಹತ್ತಿರದ ಮನೆಯವರಿಗೆ ಆಶ್ಚರ್ಯ, ಬೇಸರ. ಕೆಲವರು ನೋಡಿದ್ರೆ ಹೇಳ್ತೀವಪ್ಪಾ.. ಅಂದರು. ನನ್ನ ಕಷ್ಟ ಗೆಳೆಯರಿಗೂ ಹೇಳಿಕೊಂಡೆ ಆದರೆ ಪ್ರಯೋಜನವಾಗಲಿಲ್ಲ. ನಾಲ್ಕಾರು ತಿಂಗಳಿಂದ ಒಟ್ಟಿಗಿದ್ದವಳು ಒಂದು ಹೊತ್ತಿನಲ್ಲಿ ನನ್ನ ಬಿಟ್ಟೇ ಹೋಗಿದ್ದಳು. ಮತ್ತೆ ಏಕಾಂಗಿ ಬದುಕಿಗೆ ಮರಳಿದ್ದೆ.
ಅಲ್ಲಿಂದ ಬಳಿಕ ನನಗೆ ಕೆಲವೊಮ್ಮೆ ಅವಳ ನೆನಪು ಕಾಡುತ್ತದೆ. ಅವಳು ಅವಳೇ ಅಲ್ಲವೇ.? ಬೇರೆಯವರು ಆ ಜಾಗ ತುಂಬುವುದು ಕಷ್ಟ. ಭಾವನಾತ್ಮಕ ವಿಷಯ ಅದು. ಮೊನ್ನೆ ಮೊನ್ನೆ ಗೆಳತಿಯ ಮನೆಗೆ ಹೋಗಿದ್ದವನಿಗೆ ಅವಳಂತೇ ಒಬ್ಬಳು ಕಂಡಿದ್ದಳು. ಅಷ್ಟಕ್ಕೆ ಇಷ್ಟೆಲ್ಲ ಹೇಳಬೇಕಾಯಿತು. ಅದು ನನ್ನ ಪ್ರೀತಿ ಪಾತ್ರದ ಸೈಕಲ್. ಚೈನಿನಲ್ಲಿ ಬಿಗಿದಿದ್ದರೂ ದೊಡ್ಡ ಬೀಗ ಕತ್ತರಿಸಿ ಲಪಟಾಯಿಸಿದ್ದರು. ಖದೀಮರ  ಐದೋ ನಾಲ್ಕೋ ಸಾವಿರದ ಆಸೆಗೆ ನನ್ನ ಕನಸು ಹಾಗೇ ತೊಳೆದು ಹೋಗಿತ್ತು.
 

ಶನಿವಾರ, ನವೆಂಬರ್ 5, 2011

ಶವಯಾತ್ರೆಗಳ ನಡುವೆ

ಬ್ಲಾಗ್ ಬರೆಯದೇ ಹಲವು ಕಾಲವೇ ಆಗಿ ಹೋಯಿತು.. ಇನ್ನೇನು ಮರೆತೇ ಹೋಯಿತು ಅನ್ನುವಷ್ಟರಲ್ಲಿ ಮತ್ತೆ ವಿನಾಕಾರಣ ಬ್ಲಾಗ್ ನೆನಪಾಗಿದೆ. ಬೆಂಗಳೂರಿಗೆ ಬಂದು ಕಳೆದ ಬಾರಿ ಭಿಕ್ಷುಕರ ತವಕ ತಲ್ಲಣಗಳ ಬಗ್ಗೆ ಬರೆದಿದ್ದು. ಒಂದಷ್ಟು ಸಮಾನ ಮನಸ್ಕರು ಹೌದಾ.. ಹಾಗಾ ಎಂಬಂತೆ ಕೇಳಿದ್ದೂ ಆಯಿತು. ಅಲ್ಲಿಗೆ ಬದುಕಿನ ಜಂಜಾಟದಲ್ಲಿ ಬ್ಲಾಗ್ ಮರೆತೇ ಹೋಗಿತ್ತು. ಈಗ್ಯಾಕೆ ಬರೆಯುತ್ತಿದ್ದೀರಿ ಎಂಬುದಕ್ಕೆ ವಿಶೇಷ ಕಾರಣವಿದೆ. ಅಂತಹ ಸಂದರ್ಭವೂ ಸೃಷ್ಟಿಯಾಗಿದೆ. ನಾನಿರುವ ಸ್ಥಳ ಅಂಥದ್ದೇ ಆಗಿ ಹೋಗಿದೆ. ಹೇಳಿದರೆ ಆಶ್ಚರ್ಯ ಪಡುತ್ತೀರಿ.. ನನ್ನ (ಈಶ್ವರ) ಹೆಸರಿಗೆ ನಿಜವಾದ ಅನ್ವರ್ಥವೇ ಆಗಿದೆ.
ಹರಿಶ್ಚಂದ್ರ ಘಾಟ್..!! ಯಾರಿಗೆ ಗೊತ್ತಿಲ್ಲ ಹೇಳಿ.. ಬೆಂಗಳೂರು ಆಜು ಬಾಜಿನ ಸುತ್ತ.. ಹೊರವಲಯದಲ್ಲೂ ಬಹಳ ಫೇಮಸ್ಸು.. ಈ ಸ್ಥಳ... ಅದೊಂದು ಸ್ಮಶಾನ.. ಹೆಣ ಸುಡುವ ಅಥವಾ ಹೆಣ ಹೂಳುವ ಸ್ಥಳ.. ಬೆಂಗಳೂರಿನಲ್ಲೇ ಅತಿ ದೊಡ್ಡದು.. ವಿದ್ಯುತ್ ಮತ್ತು ಕಟ್ಟಿಗೆಯ ಸುಸಜ್ಜಿತ ಚಿತಾಗಾರಗಳಿರುವ ಸ್ಥಳ. ಅದರ ಎದುರು ಒಂದು ಬಸ್ ನಿಲ್ದಾಣ... ನೂರಾರು ಮಂದಿ ಆಫೀಸ್ಗೆ, ಮಕ್ಕಳು ಶಾಲಾ ಕಾಲೇಜಿಗೆ ಬಸ್ಸು ಹತ್ತುವ ಸ್ಥಳ. ಬದಿಯ ಓಣಿಯಲ್ಲಿ, ಸ್ವಲ್ಪ ಮುಂದೆ ಸಾಗಿ ಸ್ವಲ್ಪ ಎಡಕ್ಕೆ ತಿರುಗಿದರೆ ಅಲ್ಲೆ ನನ್ನ ಬಾಡಿಗೆ ಮನೆ. ಮನೆಗಿಂತಲೂ ಅದು ರೂಂ ಎಂದರೆ ಸೂಕ್ತ. ಇಂತಿಪ್ಪ.. ನಾನು ಹೇಳಲೇ ಬೇಕಾದ್ದು.. ಶವಗಳ ಕುರಿತು.. ಶವಯಾತ್ರೆಯ ಕುರಿತು.. ಮತ್ತು ಮನುಷ್ಯನ ಅಂತಿಮ ಯಾತ್ರೆಯ ಒಂದು ಸೂಕ್ಷ್ಮ ಮನಸ್ಥಿತಿ ಬಗ್ಗೆ.
ಹೇಳಿ ಕೇಳಿ ಇಂಥ ಸ್ಥಳದಲ್ಲೇ ನಾನು ಬಂದು ಕುಳಿತದ್ದು.. ಅಚಾನಕ್ ಆಗಿ, ಒಂದು ಹಂತದಲ್ಲಿ ತೀವ್ರ ಅನಿವಾರ್ಯತೆಯಿಂದಾಗಿ. ನಂಬಿದರೆ ನಂಬಿ ದಿನಕ್ಕೆ ನಾನು ಕನಿಷ್ಟ 1/2 ಶವಯಾತ್ರೆಯನ್ನು ತಪ್ಪದೇ ನೋಡುತ್ತೇನೆ.. ಅಥವಾ ಶವಯಾತ್ರೆಯ ಗೌಜಿ ಗದ್ದಲ ಬ್ಯಾಂಡ್, ಪಟಾಕಿಗಳ ಅಬ್ಬರವನ್ನಾದರೂ ಕೇಳುತ್ತೇನೆ. ಶವವನ್ನು ಹೂವಿನಿಂದ ಅಲಂಕರಿಸಿರುವ ಅಂಬ್ಯುಲೆನ್ಸ್ನಲ್ಲಿಟ್ಟಿದ್ದರೆ ಅದರೆದುರು ಒಂದು ಬ್ಯಾಂಡ್ ಸೆಟ್.. ಅದರ ಹಿಂದೆ ಪಟಾಕಿ ಹೊಡೆಯುವ ಹುಡುಗರು.. ಅಂಬ್ಯುಲೆನ್ಸ್ ಹಿಂದೆ ಮೃತರ ಸಂಬಂಧಿಕರೋ, ಆತ್ಮೀಯರೋ ಇತ್ಯಾದಿ.. ಇನ್ನು ಅಂಬ್ಯುಲೆನ್ಸ್ ಒಳಗೆಯೂ ನಾಲ್ಕಾರು ಮಂದಿ. ಅವರಲ್ಲೆ ಅಂಬ್ಯುಲೆನ್ಸ್ಗೆ ಕಟ್ಟಿದ್ದ ಹೂವಿನ ಮಾಲೆಗಳನ್ನು ಕಿತ್ತು, ಹೀಗೆ ದಾರಿಗೆ ಚೆಲ್ಲುತ್ತಾ ಹೋಗುತ್ತಾರೆ.. ಹಿಂದಿನವರಿಂದ ಮೃತರ ಹೆಸರು ಹೇಳಿ ಜೈಕಾರವೋ, ಗೋವಿಂದ ನಾಮಸ್ಮರಣೆಯೋ ಎಂಥದ್ದೋ ಒಂದು. ಅವರೊಂದಿಗೆ ಅಳುವವರೂ ಇಲ್ಲದಿಲ್ಲ.. ಆದರೆ ಶವ ಮೆರವಣಿಗೆಯ ಬೊಬ್ಬೆಯಲ್ಲಿ ಅವರ ಅಳು, ಯಾವುದೂ ಕೇಳಿಸುವುದಿಲ್ಲ.. ಹಾಗೇ ಹೋದವರು ಸ್ಮಶಾನದ ಒಳಗೆ ಹೋಗಿ ಅಂಬ್ಯುಲೆನ್ಸ್ನಿಂದ ಶವ ಇಳಿಸಿ, ವಿದ್ಯುತ್ ಚಿತಾಗಾರದಲ್ಲೋ, ಕಟ್ಟಿಗೆ ಚಿತಾಗಾರದಲ್ಲೋ ಇಟ್ಟು ಕೈತೊಳೆಯುತ್ತಾರೆ. ಅಲ್ಲಿಗೆ ಶವದ್ದು, ಸಂಬಂಧಿಗಳದ್ದು ಕೆಲಸ ಮುಗಿದಂತೆ.. ಈ ವಿಚಾರಗಳಿಗೆಲ್ಲ ಆರಂಭದಲ್ಲಿ ಅಷ್ಟೆಲ್ಲ ತಲೆಕೆಡಿಸಿಕೊಳ್ಳದಿದ್ದರೂ, ಕ್ರಮೇಣ ನನ್ನಲ್ಲಿ ಕೆಲ ಕುತೂಹಲ ಹುಟ್ಟಿಸಿದ್ದವು. ಶವ ಮೆರವಣಿಗೆಯಲ್ಲಿ ಸಂಬಂಧಿಕರ ನಡೆ. ಹೂವು ಹಾಕಿದ ಅಂಬ್ಯುಲೆನ್ಸ್, ಮೌನವಾಗಿ ಹೋಗುತ್ತಾರಾ.? ಅಥವಾ ಬ್ಯಾಂಡ್ ಪಟಾಕಿಗಳ ಅಬ್ಬರ ಇದೆಯಾ ಇತ್ಯಾದಿ. ಅದಕ್ಕೂ ಹೆಚ್ಚಿಗೆ ಶವ ಮೆರವಣಿಗೆಯಲ್ಲಿ ಜನರೆಷ್ಟಿದ್ದಾರೆ ಎಂಬುದು. ಮೃತಪಟ್ಟವ ಅವರ ಏರಿಯಾದಲ್ಲಿ, ತನ್ನ ಪಾಳಯದಲ್ಲಿ ಒಂದಷ್ಟು ಹವಾ ಸೃಷ್ಟಿಸಿದ್ದನೆಂದರೆ ಈ ಮೆರವಣಿಗೆಯಲ್ಲಿ ಜನ ಹೆಚ್ಚು. ಅಂಬ್ಯುಲೆನ್ಸ್ ಎದುರು ಒಂದು ರಿಕ್ಷದಲ್ಲೋ ಜೀಪಿನಲ್ಲೋ ಆತನ ಫೋಟೋ ಹಾಕಿ ಒಂದು ಹೂವಿನ ಹಾರ ಹಾಕಿ ಗಡದ್ದು ಮೆರವಣಿಗೆ. ಮೆರವಣಿಗೆ ಹಿಂದೆ ಮುಂದೆ ಜನವೋ ಜನ. ಅಲ್ಲದೇ ರಸ್ತೆಯಲ್ಲಿ ಹೋಗುವ ವಾಹನಗಳನ್ನು ನಿಯಂತ್ರಿಸಲು ಸ್ವಯಂಸೇವಕರಂತ ವ್ಯವಸ್ಥೆ. ಸಾಮಾನ್ಯರಾದರೆ ಅಂತಹ ಗೌಜಿ ಗದ್ದಲಗಳು ಕಡಿಮೆಯೇ..
ಇಂತಹ ಮೆರವಣಿಗೆಗಳೆಂದರೆ ನಾನಿರುವ ಪ್ರದೇಶದ ಜನರಿಗೆ ಸಾಮಾನ್ಯವಾಗಿ ಬಿಟ್ಟಿವೆ. ಅವರಿಗೆ ಏನೂ ಅನ್ನಿಸುವುದೇ ಇಲ್ಲ.. ನಿತ್ಯಕರ್ಮ ಅದು.. ಸಣ್ಣದಿರುವಾಗ ಒಂದು ಬ್ಯಾಂಡ್ ಶಬ್ದ, ಒಂದು ಮೋಟಾರು ವಾಹನದ ಶಬ್ದ ಕೇಳಿದರೆ ಎದ್ದು ಬಿದ್ದು ಅಂಗಳಕ್ಕೆ ಓಡುತ್ತಿದ್ದ ನನಗೆ, ದಿನವೂ ಬ್ಯಾಂಡ್ ಶಬ್ದ ಕೇಳುವಂತಾಗಿದೆ. ಇಷ್ಟಕ್ಕೂ ಅಲ್ಲೇ ಇರಬೇಕೆಂದೇನೂ ಇಲ್ಲ.. ಆದರೂ ಇದ್ದೇನೆ. ದಿನ ದಿನ ಕಳೆದಂತೆ ಶವಯಾತ್ರೆ ಕುತೂಹಲ ಹುಟ್ಟಿಸಿದ್ದರೂ. ಅದರ ಕುರಿತ ಒಳನೋಟದಲ್ಲಿ ಎಲ್ಲರೂ ಹೀಗೇ ಹೋಗುವವರೇ ಎಂದು ಅನಿಸಿದ್ದಿದೆ. ಜೀವಂತವಿದ್ದಾಗ ಯಾರಿಗೂ ಬೇಡವಾಗಿ ಮೃತಪಟ್ಟ ಬಳಿಕ ಅತ್ತೂ ಕರೆದು ಕಳುಹಿಸಿ ಕೊಡುವ ಗೌಜು ಗದ್ದಲಗಳೇನು.. ತೀರ ವಿಚಿತ್ರ ಅನ್ನಿಸಿ ಬಿಡುತ್ತದೆ. ಹುಟ್ಟಿನ ಸಂಭ್ರಮವನ್ನು ಸಾವಿನಲ್ಲೂ ಕಾಣಿ ಎಂಬುದು ಹಿಂದಿನ ಮಾತು. ಅದರಂತೆ ನನ್ನೆದುರು ಶವಯಾತ್ರೆಗಳೂ ಹೋಗುತ್ತವೆ. ಮೃತಪಟ್ಟವರನ್ನು ತುಂಬು ಮನಸ್ಸಿನಿಂದ ಯಾರಾದರೂ ಕಳುಹಿಸಿ ಕೊಡುತ್ತಾರಾ..? ನಿನ್ನ ಬದುಕು ಸಾರ್ಥಕವಾಯಿತು ಎಂದು ಯಾರಾದರೂ ಹೇಳುತ್ತಾರಾ? ಇಂಥ ಪ್ರಶ್ನೆಗಳೆಲ್ಲವನ್ನು ಶವಯಾತ್ರೆ ಹೋದಾಗೆಲ್ಲ ಆಗಿಂದಾಗ್ಗೆ ಮನಸಿಗೆ ಬರುತ್ತವೆ. ಅಂತ್ಯಕ್ರಿಯೆಯೊಂದಿಗೆ ವ್ಯಕ್ತಿಯ ಬದುಕು ಅಂತ್ಯವಾದರೂ, ಅವನಿಂದ ಸೃಷ್ಟಿಯಾದದ್ದು ಒಂದಿಬ್ಬರಿಗಾದರೂ ನೆನಪಿನಲ್ಲಿ ಉಳಿಯುತ್ತಾದಾ ಎಂಬುದನ್ನೂ ಕೇಳಿಕೊಳ್ಳುತ್ತೇನೆ.. ಇಷ್ಟು ಬರೆಯುವಷ್ಟರಲ್ಲಿ.. ಮತ್ತೆ ದೂರದಲ್ಲೆಲ್ಲೋ ಬ್ಯಾಂಡ್, ಪಟಾಕಿ ಶಬ್ದದಂತೆ ಕೇಳಿಸುತ್ತಿದೆ.

ಚಿತ್ರ: ಇಂಟರ್ನೆಟ್ ಕೃಪೆ