Pages

ಗುರುವಾರ, ಆಗಸ್ಟ್ 2, 2012


 ಒಂದು ರಾತ್ರಿಯ ವೈರಾಗ್ಯ!

ಮಧ್ಯರಾತ್ರಿ ಒಂದು ಗಂಟೆ. ಯಾಕೋ ನಿದ್ದೆ ಹತ್ತಿರಲಿಲ್ಲ. ಕೊನೆಗೆದ್ದು ಹಾಗೆ ತಡಕಾಡಿ ಮೊಬೈಲ್ನಲ್ಲಿದ್ದ ಲೈಟ್ ಆನ್ ಮಾಡಿ ಆತ ಉಚ್ಚೆ ಹೊಯ್ದು ಬಂದ. ಹೊರಗಡೆ ಜಿಟಿ ಜಿಟಿ ಮಳೆ. ಜೋರಾಗಿ ಏನೂ ಬಂದಿರಲಿಲ್ಲ. ಆದರೂ ಕರೆಂಟು ಯಾಕೋ ಕೈಕೊಟ್ಟಿತ್ತು. ಜಗ್ನಲ್ಲಿದ್ದ ನೀರನ್ನು ಗ್ಲಾಸ್ಗೆ ಬಗ್ಗಿಸಿಕೊಂಡ. ಹಾಗೆ ತಿರುಗಿ ಗೋಡೆ ನೋಡಿದ. ಬೆಳಗಾಗಲು ಇನ್ನೂ ಆರು ಗಂಟೆ ಇದೆ. ಹೇಗಪ್ಪಾ ಸಮಯ ಕಳೆಯುವುದು ಎಂಬುದೇ ಆತನ ಚಿಂತೆ.


ಮನಸ್ಸಿನಲ್ಲಿ ಆಲೋಚನೆ ತಿರುಗತೊಡಗಿತು. ನಾಳೆ ಬೆಳಗಾದರೆ ಒಂದು ವಾಕಿಂಗ್, ಚಳಿ ಇದ್ದರೆ, ಜಾಕೆಟ್ ಹಾಕಿಕೊಂಡರಾಯಿತು. ಮತ್ತೊಂದು ಕಾಫಿ ತಿಂಡಿ. ನಂತರ ಕಂಪ್ಯೂಟರ್ ಎದುರು ಕೂತು ಫೇಸ್ಬುಕ್ ನೋಡಿದರೆ ಮಧ್ಯಾಹ್ನ. ಮಧ್ಯಾಹ್ನ ಮೇಲೆ ಆಫೀಸು. ಅದೇ ಕ್ಯಾಬು, ಅದೇ ಟ್ರಾಫಿಕ್. ಅಲ್ಲಿಗೆ ದಿನದ ಕಥೆ ಮುಗೀತು. ಹಾಗಂತ ಆಲೋಚನೆ ಮಾಡಿಕೊಂಡೇ ಹಾಸಿಗೆಗೆ ಉರುಳಿದ. ತಲೆಯಲ್ಲಿ ನೂರು ವಿಷಯ ಫ್ಯಾನು ತಿರುಗಿದಂತೆ ತಿರುಗುತ್ತಿದ್ದರಿಂದ ಹಾಸಿಗೆಯಲ್ಲಿ ಮುಳ್ಳು ಚುಚ್ಚಿದಂತಾಗುತ್ತಿತ್ತು. ಇನ್ನೂ ಇಪ್ಪತ್ತಾರು ದಿನ ಕಳೆದಿಲ್ಲ, ಅಷ್ಟಕ್ಕೆ ಎಷ್ಟು ತಲೆನೋವುಗಳು ಅಂದುಕೊಂಡ.
ಊರಿನಲ್ಲಿ ಈ ಬಾರಿ ಮಳೆ ಸುರಿಯಲಿಲ್ಲ. ವ್ಯವಸಾಯ ಮಾಡೇ ಇಲ್ಲ ಎಂದು ಅಮ್ಮ ಫೋನು ಮಾಡಿದ್ದಾಗ ಹೇಳಿದ್ದು ನೆನಪಾಯಿತು. ಮಠದ ಸ್ವಾಮೀಜಿಗಳೆಲ್ಲ ಈ ಬಾರಿ ಚಾತುರ್ಮಾಸ್ಯಕ್ಕೆ ಪೇಟೆಗೇ ಹೋಗಿದ್ದಾರಂತೆ. ಬಹುಶಃ ಜೋಬು ಖಾಲಿಯಾಗಿರಬೇಕು. ಹಳ್ಳಿಯಲ್ಲಿ ಮಳೆ-ಬೆಳೆ ಇಲ್ಲದಿದ್ದರಿಂದ ಭಿಕ್ಷೆ ಹಾಕುವವರು ಯಾರೂ ಇಲ್ಲವೇನೋ! ಇಲ್ಲಿ ಬಂದರೆ ಪೇಟೆಯವರು ಭಯಭಕ್ತಿಯಿಂದ ಪೂಜೆಗೀಜೆ ಅಂತಾ ತಾವು ಮಾಡಿದ ಪಾಪಕರ್ಮ ಕಳೆಯಲು ಸಾವಿರದ ಗರಿಗರಿ ನೋಟು ಬಿಚ್ಚುತ್ತಾರೆ. ಅಲ್ಲಿಗೆ ಒಂದು ವರ್ಷ ಮಠದ ಸ್ವಾಮಿಗಳ ಇನ್ನೊವಾ ಕಾರಿಗೆ ವರ್ಷಕ್ಕಾಗುವಷ್ಟು ಡೀಸೆಲ್ ಭರ್ತಿಯಾಗಬಹುದು! ಅಂದುಕೊಂಡ.
ಕಳೆದ ಬಾರಿ ಮನೆಗೆ ಹೋಗಿದ್ದಾಗ ಮನೆ ಎದುರಿನ ತೆಂಗಿನ ಮರದಲ್ಲಿ ಕಾಯಿಗಳೇ ಇರಲಿಲ್ಲ. ಹೂವಿನ ಗಿಡಗಳಲ್ಲಿ ಹೂವಿರಲಿಲ್ಲ. ಕುಂಬಳ ಬಳ್ಳಿಯಲ್ಲಿ ಒಂದು ಕುಂಬಳವೂ ಇರಲಿಲ್ಲ. ದನವೂ ಗೊಡ್ಡಾಗಿತ್ತು. ಮನೆ ನಾಯಿ ಬೊಗಳುವ ಶಬ್ದವೂ ಕಡಿಮೆಯಾದಂತೆನಿಸಿತ್ತು. ನನಗೂ ಆದ ಹಾಗೆ ಪ್ರಕೃತಿಗೇ ವೈರಾಗ್ಯ ಬಂತಾ.. ಪ್ರಶ್ನಿಸಿಕೊಂಡ.
ಇಲ್ಲ ಹಾಗಾಗಲು ಸಾಧ್ಯವೇ ಇಲ್ಲ. ಪ್ರಕೃತಿಗೆ ವೈರಾಗ್ಯ ಎಂಬುದಿದೆಯೇ? ಕಳೆದ ವರ್ಷ ಊರಿಗೆ ಹೋಗಿದ್ದಾಗ ಎಲ್ಲವೂ ಚೆನ್ನಾಗಿಯೇ ಇತ್ತಲ್ಲ. ಹಲಸಿನಕಾಯಿ ಬೆಳೆದಿದೆ, ನೀನು ಬಂದಾಗ ದೋಸೆ ಮಾಡುವುದು ಎಂದು ಅಮ್ಮ ಕಷ್ಟಪಟ್ಟು ಮುನ್ನಾದಿನವೇ ಹಿಟ್ಟು ಕಲೆಸಿ ಮರುದಿನ ದೋಸೆ ಹುಯ್ದುಕೊಟ್ಟಿದ್ದಳಲ್ಲ ಈ ಬಾರಿ ಅವುಗಳಿಗೇನಾಯಿತು? ಮಳೆಯೂ ಸರಿ ಬರಲಿಲ್ಲ ಎಂದು ಕೇಳಿದ್ದುಂಟು. ಒಂಚೂರು ಮಳೆ ಕಡಿಮೆಯಾದರೆ ಹೀಗಾಗುತ್ತಾ..? ಗೊತ್ತಿಲ್ಲ.. ಇಂಟರ್ನೆಟ್ನಲ್ಲಿ ಹುಡುಕಬೇಕು ಅಂದುಕೊಂಡ..
ಹಾಸಿಗೆಯಲ್ಲಿ ಹಾಗೆ ಕಾಲು ಚಾಚಿ ದಿಂಬಿಗೆ ತಲೆಯಾನಿಸುತ್ತಿದ್ದಂತೆ, ಒಂದು ಬಾರಿ ನಿದ್ದೆ ಬರಬಾರದಾ ಅಂದುಕೊಂಡ. ಹೀಗೆ ನಿದ್ದೆಯಿಲ್ಲದೆ ದಿನಗಳು ಎಷ್ಟಾಯಿತು ಎಂದೂ ಪ್ರಶ್ನಿಸಿಕೊಂಡ. ಕಾಲೇಜು ಬಿಟ್ಟು ಕೆಲಸಕ್ಕೆ ಸೇರಿದ ಬಳಿಕ ಒಂದರ್ಥದಲ್ಲಿ ನಿದ್ದೆಯೇ ಇಲ್ಲ. ಎಲ್ಲರಿಗೂ ಹೀಗೆಯಾ ಆಗಿರಬಹುದೇ? ಇದೇ ಕಾರಣಕ್ಕೆ, ಐಟಿ ಬಿಟಿಯ ಹುಡುಗರೆಲ್ಲ. ಮದಿರೆ, ಡ್ರಗ್ಸ್ ರುಚಿ ಹತ್ತಿಸಿ ದಾಸರಾಗುತ್ತಿರುವ ವಿಷಯವೆಲ್ಲ ಕಣ್ಣೆದುರಿಗೆ ಬಂತು. ವಾರದ 5 ದಿನ ಕತ್ತೆಯಂತೆ, ಹೇಳುವವರೂ ಕೇಳುವವರೂ ಇಲ್ಲದಂತೆ ದುಡಿದು, ಶುಕ್ರವಾರದ ಸಂಜೆಯಿಂದ ಭಾನುವಾರ ಪರ್ಯಂತ ಮಜಾ ಉಡಾಯಿಸುವ ಜೀವನ. ಅದಲ್ಲೇನು ಸುಖವಿದೆ. ಬರೀ ಹುಚ್ಚುಗಳು ಮಾತ್ರ. 2 ಟ್ರಕ್ಕಿಂಗು, ಮನೆಯಲ್ಲಿರುವ ನಾಡ ಬಂದೂಕಿನಷ್ಟುದ್ದ ಕ್ಯಾಮರಾ ಹೆಗಲಿಗೇರಿಸಿ ಕೆಲಸಕ್ಕೆ ಬಾರದ ಫೋಟೋ ತೆಗೆದು ಮೀಸೆ ತಿರುವುತ್ತಾರೆ. ಹೋದಲ್ಲಿ ಸಂಭ್ರಮ ಪಟ್ಟರೆ ಸೋಮವಾರದಿಂದ ಅತ್ತೆ ಮನೆಯಲ್ಲಿರುವ ಹೆಣ್ಮಗಳಂತೆ ಆಡುತ್ತಾರೆ. ಇರಲಿ ಅವರಿಗೆ ವಾರಕ್ಕೆರಡು ಬಾರಿಯಾದರೂ ಸಂಭ್ರಮವಿದೆ. ಆದರೆ ಪೇಟೆಯ ಕೊಂಪೆ ಕೊಂಪೆಗಳಲ್ಲಿ ತಿರುಗಾಡಿ ಚಪ್ಪಲಿ ಸವೆಸುವ ನನಗೆ ಅದೂ ಇಲ್ಲ. ತಿಂಗಳ ಕೊನೆಗೆ ಸಾಲವಂತೂ ಸಾವಿರಗಟ್ಟಲೆ ಏರುತ್ತಲೇ ಇದೆ. ರೂಂ ಮೇಟ್, ಶಿವಾಜಿನಗರದ ಕಾಕಾ ಬಳಿ ನನಗಾಗಿ ದುಡ್ಡು ಇಸಕೊಂಡಿದ್ದನ್ನು ಕೊಟ್ಟೇ ಇಲ್ಲ. ಅದು ಹಾಳಾಗಿ ಹೋಗಲಿ.. ಊರಿಡೀ ಸಾಲವಾಗಿ ಬಡ್ಡಿಯೂ ಕೊಡಲಾಗದ ಪರಿಸ್ಥಿತಿಗೆ ಬಂದು ಮುಟ್ಟಿದೆ.

ಇವೆಲ್ಲದರ ಮಧ್ಯೆ ಮನೆಯಲ್ಲಿ ನಿನಗೆ ಮದುವೆಯಾಗಬಾರದಾ ಎಂದು ಕೇಳುತ್ತಾರೆ. ಥತ್ತೇರಿಕೆ. ಅವರಿಗೇನು ಗೊತ್ತು. ನನ್ನ ಪಡಬಾರದ ಪಾಡು. ಒಪ್ಪತ್ತಿಗೆ ದುಡ್ಡಿಲ್ಲ ಎಂಬ ಕಾರಣಕ್ಕೆ ಮೊದ ಮೊದಲು ಎರಡು ಬನ್ನು ಟೀಗಳಲ್ಲಿ ದಿನ ಕಳೆದದ್ದಿದೆ. ಆಗೆಲ್ಲ ನಾನೂ ಒಂದು ದಿನ ಸ್ವಲ್ಪ ಚೆನ್ನಾಗಿರೋ ಬಟ್ಟೆ ಹಾಕಿ, ರಿಬಾಕ್ ಶೂನಲ್ಲಿ ನೆಲವನ್ನು ಕುಟ್ಟಿ ನಡೆಯಬೇಕು ಅಂದುಕೊಂಡಿದ್ದೆ. ಸದ್ಯ ಬಾಟಾ ಶೂ ತೆಗೆಯುವಲ್ಲಿವರೆಗೆ ಮುಟ್ಟಿದೆ. ರಿಬಾಕ್ ಇನ್ನೂ ಕನಸಾಗಿದೆ. ಹೀಗೆ ಮುಗಿಯದ ಆಸೆಗಳಲ್ಲೇ ನಾನು ಸತ್ತರೆ, ಪ್ರೇತವಾಗಿ ಎಲ್ಲ ಅಂಗಡಿಯೂ ಹೊಕ್ಕು ಹೊರಬಹುದೇನೋ.. ಆದರೆ ಎಲ್ಲರಿಗೂ ಕಾಣುವಂತೆ ಇರಲಾಗುವುದಿಲ್ಲ. ಹೀಗೆ ಮಣಗಟ್ಟಲೆ ಆಸೆಗಳನ್ನು ಸಂಗ್ರಹಿಸಿ ನಾನೇನು ಮಾಡಲಿ. ಅದಕ್ಕಿಂತ ಏನೂ ಬೇಡ ಎನ್ನುವುದು ಒಳ್ಳೆಯದಲ್ಲವೇ.? ಅಷ್ಟೊಂದು ಸಂಪತ್ತಿದ್ದರೂ ಎಲ್ಲವನ್ನೂ ತ್ಯಜಿಸಿ ಸಿದ್ಧಾರ್ಥ ಬುದ್ಧನಾದದ್ದು ಚಿಲ್ಲರೆ ವಿಷಯವಲ್ಲ. ಹಾಗೆ ಮಧ್ಯರಾತ್ರಿ ಈಗಲೇ ಎದ್ದು ಹೋಗೋಣ, ಎಂದು ಅನಿಸುತ್ತದೆ. ಆದರೆ ಹೋಗುವುದೆಲ್ಲಿಗೆ? ಬೆಂಗಳೂರಿನಲ್ಲಿ ರಾತ್ರಿ ಎದ್ದು ಹೋದರೆ ಬುದ್ಧನಾಗುವುದಲ್ಲ ಬದಲಿಗೆ ನಾಯಿಗಳು ಮುರಕೊಂಡು ಬೀಳುತ್ತವೆ. ಹಾಳು ಬಿಬಿಎಂಪಿ ನನ್ಮಕ್ಕಳು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಎಂಥದ್ದೋ ಮಾಡಿಸಿದರು. ಅಷ್ಟಾದರೆ ಅವುಗಳು ಮನುಷ್ಯರಿಗೆ ಕಚ್ಚಬಾರದು ಎಂದಿದೆಯೇ..? ಎಂದುಕೊಂಡ.
ಅಸಲಿಗೆ ಜೀವನ ಇಷ್ಟು ಕಷ್ಟವಾಗಬಾರದಿತ್ತು. ಇಷ್ಟು ಸಣ್ಣ ಪ್ರಾಯದಲ್ಲಿ ಹೃಷಿಕೇಶ, ಹರಿದ್ವಾರ, ಕಾಶಿಯ ಚಿತ್ರಗಳು ಮನಸ್ಸಿನಲ್ಲೂ ಬರಬಾರದು. ತೀರದ ಆಸೆಗಳೆಲ್ಲ ಗುಡ್ಡೆ ಬಿದ್ದಾಗ ವೈರಾಗ್ಯ ನೆನಪಾದ್ದಲ್ಲವೇ? ಮತ್ತೆ ಬುದ್ಧನ ಕಲ್ಪನೆ ಬೇರೆ. ಬುದ್ಧನ ಹೆಸರು ಹೇಳುವ ಯೋಗ್ಯತೆಯೂ ನನಗಿಲ್ಲ. ಕೋಪ, ಲೋಭ, ಮೌಢ್ಯ, ಮದ, ಮಾತ್ಸರ್ಯಗಳನ್ನು ಜಯಿಸಬೇಕಂತೆ. ಅದಿಲ್ಲದೆ ಬದುಕುವುದಕ್ಕಾಗುತ್ತಾ? ಬಂಧ ಮೋಕ್ಷಕ್ಕೆ ಇಂದ್ರಿಯಗಳೇ ಕಾರಣ. ಕಟ್ಟಿಟ್ಟಾಗ ಅವು ನಮ್ಮನ್ನು ಬಂಧನದಲ್ಲಿ ಕೆಡವುತ್ತದೆ. ಕಟ್ಟು ಬಿಡಿಸಿದಾಗ ಮುಕ್ತಿ ನೀಡುತ್ತವೆ. ಭೋಗ-ವೈರಾಗ್ಯಕ್ಕೆ ಕೂದಲೆಳೆಯಷ್ಟೇ ವ್ಯತ್ಯಾಸ. ಅದು ತುಂಬ ಸೂಕ್ಷ್ಮವಾದದ್ದು. ಮನಸ್ಸಿಗೆ ಯಾವುದೂ ಸಾಧ್ಯವಿದೆ. ಆದರೆ ಎಲ್ಲರೂ ಮೊದಲನೆಯದ್ದಕ್ಕೇ ಕಟ್ಟು ಬೀಳುತ್ತಾರೆ. 
ಯಾಕೆಂದರೆ ಮನುಷ್ಯನಲ್ಲವೇ ಅಂದುಕೊಂಡ.
ಏನಿದು ಮಲಗಿದಲ್ಲಿಗೇ ದಾರ್ಶನಿಕನಾದೆನೇ..? ಮುರುಕು ಚಾಪೆ ಉಪನಿಷತ್ತು ಹೇಳಿಸುತ್ತಿದೆಯೇ? ತತ್ವಶಾಸ್ತ್ರ ತರಗತಿಯಲ್ಲಿ ಕಲಿತ ಶಿವಸೂತ್ರವೇನಾದರೂ ಮನಸ್ಸಿಗೆ ಬಂತಾ? ಒಂದೂ ಅರ್ಥವಾಗುತ್ತಿಲ್ಲ.. ಹಾಗೆನ್ನುತ್ತಲೇ ಮತ್ತೆ ಎದ್ದ. ಹೋದ ಕರೆಂಟು ಬಂದಿತ್ತು. ಇನ್ನಾದರೂ ನಿದ್ದೆ ಬರಲೇಬೇಕು ಎಂದು, ತಲೆ ಮೇಲಿನ ಕಪಾಟು ತೆಗೆದು ಖಾಲಿ ನವರತ್ನ ತೈಲ ಬಾಟಲಿಯಲ್ಲಿದ್ದ ಎರಡು ಹುಂಡು ತೈಲ ಕೈಗೆ ಬಗ್ಗಿಸಿದ. ಹಾಗೇ ತಲೆಗೆ ತಿಕ್ಕಿಕೊಂಡ. ಮಲಗಿದವನೇ ಮುಸುಕೆಳೆದ. ಅಷ್ಟರಲ್ಲಿ ಹೊರಗಡೆ ಒಂದು ಕೊಡ ನೀರು ತಂದು ಮನೆ ಒಡತಿ ರಂಗೋಲಿ ಹಾಕುವ ಸನ್ನಾಹದಲ್ಲಿದ್ದರು. ಅಷ್ಟರಲ್ಲಿ ಅವರ ಕೈ ಜಾರಿತೋ ಏನೋ ಕೊಡ ದಭಾಲನೆ ಕೆಳಗೆ ಬಿದ್ದು ದೊಡ್ಡ ಶಬ್ದ ಕೇಳಿತು. ಆ ರೂಮಿನೊಳಗೆ ಮಲಗಿದ್ದ ಆತ ಆಕಳಿಸುತ್ತ ಮಗ್ಗಲು ಬದಲಿಸಿಕೊಂಡ.


2 ಕಾಮೆಂಟ್‌ಗಳು:

jeevaraj bhat ಹೇಳಿದರು...

ನಿನ್ನ ಜೀವನ ಚರಿತ್ರೆ ತುಂಬಾ ಚೆನ್ನಾಗಿದೆ.......

hamsadhwni.blogspot.com ಹೇಳಿದರು...

ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ..ರಾಧೆಗೆ ಕೃಷ್ಣ ಬೇಡ ಕೃಷ್ಣನಿಗೆ ಕೊಳಲೂ ಬೇಡ ಎಂದು ಅವರಿಗೇ ವೃರಾಗ್ಯ ಹತ್ತಿಸಿದ ನೀವು,ನಗರೀಕರಣದಿಂದಲೋ ಅಥವಾ ಇತರೆ ಪ್ರಭಾವಗಳಿಂದಲೋ ನಮ್ಮಲ್ಲಿ ಕಡಿಮೆಯಾಗುತ್ತಿರುವ ಜೀವನೋತ್ಸಾಹವನ್ನ ತುಂಬಾ ಸರಳವಾಗಿ ನಿಮ್ಮ ಬರವಣಿಗೆಯಲ್ಲಿ ಚಿತ್ರಿಸಿದ್ದೀರಾ..ಮಳೆಗೆ ಬಡಿದ ಬರ ನಮಗೂ ಹತ್ತಿರುವುದು ಅಕ್ಷರ ಸಹ ಸತ್ಯ.