Pages

ಗುರುವಾರ, ಅಕ್ಟೋಬರ್ 25, 2012


ನಾನು ಬೆತ್ತಲಾಗೇ ಇರಬೇಕು!

ರಸ್ತೆಯಲ್ಲಿ ನಡೆಯುತ್ತಿದ್ದರೆ, ಆ ಹೆಣ್ಣು ಮಕ್ಕಳೆಲ್ಲ ಅಚ್ಚರಿಯಿಂದ ದೃಷ್ಟಿಸಿ, ಕಿಸಕ್ಕನೆ ನಕ್ಕು ಕೆಲವರು ಸಂದಿಯೊಳಗೆ, ಮತ್ತೆ ಕೆಲವರು ಮನೆ ಬಾಗಿಲ ಹಿಂದೆ ಅಡಗಿಕೊಂಡರಲ್ಲ.. ಏನಾಗಿದೆ ಇವರಿಗೆ, ಮನುಷ್ಯನನ್ನು ನೋಡೇ ಇಲ್ಲವೇ. ನಾನೂ ಎಲ್ಲರಂತೆಯೇ ಇದ್ದೇನೆ. ಎರಡು ಕಾಲು ಕೈ, ಒಂದು ತಲೆ ಎರಡು ಕಣ್ಣುಗಳು! ಆದರೂ ಜನರಿಗೆ ನನ್ನ ಬಗ್ಗೆ ತಾತ್ಸಾರ. ಹತ್ತಿರ ಬಂದರೆ ಹಚೇ.. ಅಂತಾ ಓಡಿಸುತ್ತಾರೆ. ಬೆತ್ತಲೆ ಮನುಷ್ಯ ಎಂದು ಬಟ್ಟೆ ತೊಟ್ಟ ಮಹಾನುಭಾವರು ಅಣಕಿಸುತ್ತಾರೆ. ಬಟ್ಟೆ ತೊಡದ ಮಾತ್ರಕ್ಕೆ ನಾನು ಹುಚ್ಚನಾದೆನೇ..? ಬಟ್ಟೆ ತೊಟ್ಟವರಲ್ಲೇ ಎಷ್ಟು ಮಂದಿ ಹುಚ್ಚರಿಲ್ಲ..? ಇದೊಂದೇ ಕಾರಣಕ್ಕೆ ನನ್ನ ದೂರ ಮಾಡಬಹುದಾ..? ಒಪ್ಪತ್ತಿನ ಊಟಕ್ಕಿಲ್ಲವೆಂದು ನಾಲ್ಕಾರು ಮೈಲಿ ನಡೆದು ಅದೊಂದು ದೊಡ್ಡ ತುಳಸಿಕಟ್ಟೆ ಇದ್ದ ಮನೆಯಲ್ಲಿ ಊಟ ಕೇಳಿದರೆ ಕೋಲು ಹಿಡಿದು ಓಡಿಸಿದರಲ್ಲ.. ಮೊನ್ನೆ ನಾಯಿ ಕಚ್ಚಿ ಆದ ಕಾಲು ನೋವಿನಲ್ಲಿ ಬೆತ್ತದ ಹೆದರಿಕೆಗೆ ಅಂತೂ ಓಡಿದೆ. ಇತ್ಲಾಗಿ ನಾಯಿಗಳಿಗೂ ನನ್ನ ಕಂಡರಾಗುವುದಿಲ್ಲ. ಅವುಗಳಿಗೂ ಈ ಹಾಳು ಮನುಷ್ಯರಂತೆ ಯಾರೋ ಮನಸ್ಸು ತಿರುಗಿದ್ದಿರಬೇಕು. ಕಂಡರೆ ಒಂದೇ ಸಮನೆ ಬೊಗಳುತ್ತವೆ. ಕೆಲವು ಕಚ್ಚಲೂ ಬರುತ್ತವೆ. ಶನಿ ಮುಂಡೇದು ಮೊನ್ನೆ ಕಾಲಿಗೆ ಕಚ್ಚೇ ಬಿಟ್ಟಿತ್ತು. ಅದೇ ನೋವಿನಲ್ಲಿ ಓಡಿದೆ. ಆ ದಿನ ಊಟವೇ ಇಲ್ಲ. ಊಟ ಕೇಳಿದರೆ ಎಲ್ಲರೂ ಓಡಿಸುವವರೇ ಆಗಿದ್ದಾರೆ. ದೇವಸ್ಥಾನಕ್ಕಾದರೂ ಹೋಗೋಣ ಎಂದರೆ, ಮೆಟ್ಟಿಲು ಹತ್ತಲೂ ಬಿಡುವುದಿಲ್ಲ. ಅದೇನೋ ಬಿಳಿ ಬಟ್ಟೆ ಉಟ್ಟಿರಬೇಕಂತೆ. ಹಾಗೂ ಊಟವಿಲ್ಲದೇ, ಕೊನೆಗೆ ಕಸದ ತೊಟ್ಟಿಗೆ ಎಸೆದ ನಂದಿನ ಹಾಲಿನ ಪ್ಯಾಕೇಟಿನಲ್ಲಿ ಉಳಿದ ಎರಡು ತೊಟ್ಟು ಹಾಲು ಕುಡಿದು ರಾಜನಂತೆ ಬೀಗಿದೆ. ಊಟ ಕೇಳಿದರೆ ಕೊಡಲಿಲ್ಲ ಸಾಯಲಿ. ಹಾಲಾದರೂ ಸಿಕ್ಕಿತಲ್ಲ!
ನಾನು ಹುಟ್ಟಿದ್ದು ಎಲ್ಲಿ ಏನು ಎತ್ತ ಎಂಬುದೇ ಗೊತ್ತಿಲ್ಲ. ಜಗತ್ತು ಹೀಗೆ ಪರಿಚಿತವಾಯಿತು. ಒಂದು ಊರು, ಒಂದು ಪೇಟೆ, ಕರಿ ರಸ್ತೆ, ಮರ, ಪ್ರಾಣಿಗಳು ಅವೆಲ್ಲದರ ಮಧ್ಯೆ ನನ್ನ ನೋಡಿದರೆ, ಹಲ್ಲು ಕಿಸಿಯುವ, ಓಡಿಸುವ, ಗದರಿಸುವ ಮನುಷ್ಯರು. ಮೊನ್ನೆ ಅದೇನೋ ಊರು. ನಡೆದದ್ದೊಂದೇ ಗೊತ್ತು. ಒಂದು ರಾತ್ರಿ ಅದಾವುದೋ ಬಸ್ ನಿಲ್ಲುವ ಜಾಗದಲ್ಲಿ ಮಲಗಿ ಬೆಳಗಾಯಿತು. ಹೊಟ್ಟೆ ಚುರುಗುಟ್ಟಿತು. ಎಲ್ಲಾದರೂ ಕೇಳೋಣ ಎಂದರೆ ಮತ್ತದೇ ಗದರಿಕೆ. ಹತ್ತಿರದ ಸಂದಿಯ ಕೊಳವೆಯಲ್ಲಿ ನೀರು ಬರುತ್ತಿದ್ದುದೇ ಆ ದಿನದ ಭರ್ಜರಿ ಭೋಜನ. ಬಿಸಿಲು ನಡು ನೆತ್ತಿಗೇರಿತ್ತು. ಅಷ್ಟಕ್ಕೇ ಬಿಳಿ ವ್ಯಾನೊಂದು ಹತ್ತಿರ ಬಂದು ನಾಲ್ಕಾರು ಜನ ಎತ್ತಿ, ಆ ವಾಹನದೊಳಕ್ಕೆ ನನ್ನ ಬೀಸಿ ಒಗೆದರು. ಬಿಟ್ಟು ಬಿಡಿ, ಯಾರಿಗೂ ಏನೂ ಮಾಡಲ್ಲ ನಾನು ಎಂದು ಹೇಳಿದರೂ ಕೇಳಲಿಲ್ಲ. ಒಬ್ಬಾತ ಗದರಿಸಿದ, ಮತ್ತೊಬ್ಬ ದುರುಗುಟ್ಟಿದ. ಇನ್ನೊಬ್ಬ ಏನೂ ಮಾಡಲಿಲ್ಲ, ಆದರೆ ಕೊನೆಗೆ ಕಪಾಳಕ್ಕೆ ಬಾರಿಸಿದ. ಅದೊಂದು ಮಾತ್ರ ನೆನಪಿತ್ತು. ಕಣ್ಣು ಬಿಟ್ಟಾಗ ಅದೆಲ್ಲೋ ತಂದು ಕೂರಿಸಿದ್ದರು. ಒಬ್ಬಾತ ದರದರನೆ ಕೈ ಹಿಡಿದೆಳೆದು ಬೇಡ ಬೇಡವೆಂದರೂ ಹೊರಗೆ ಕರೆದೊಯ್ದು.. ನಲ್ಲಿ ನೀರು ಬರುವಲ್ಲಿ, ತಲೆಗೆ ಚೊಂಬುಗಟ್ಟಲೆ ನೀರು ಹಾಕಿದ. ಸಾಬೂನು ಹಾಕಿ ತೊಳೆದ. ಕೊನೆಗೆ ಕೋಣೆಗೆ ಕರೆತಂದು ಬಟ್ಟೆ ಹಾಕಿಸಿದರು. ನನಗೆ ಅಸಾಧ್ಯ ಎನ್ನುವದೆಲ್ಲವನ್ನೂ ಮಾಡಿಸಿದರು. ಹಾಗೆಯೇ ನಾಲ್ಕಾರು ದಿನ ಅಲ್ಲೇ ಇದ್ದೆ. ಸ್ವಾತಂತ್ರ್ಯವಿಲ್ಲ ದಿನವಿಡೀ ಬಂಧನ. ಎಲ್ಲೂ ಹೋಗಲು ಬಿಡುವುದಿಲ್ಲ, ಕೊಟ್ಟದ್ದನ್ನು ತಿನ್ನಬೇಕು. ಮೊದಲು ತಂಗಳು ತಿನ್ನುತ್ತಿದ್ದೆನಾದರೂ ಅದಕ್ಕೂ ಒಂದು ವಿಶೇಷ ರುಚಿ ಇತ್ತು. ಆದರೆ ಅವರು ಕೊಟ್ಟದ್ದರಲ್ಲಿ ಯಾವುದೂ ಇಲ್ಲ. ದನಕ್ಕೆ ಕೊಟ್ಟಂತೆ ಕೊಡುವುದು ತಿನ್ನು ತಿನ್ನು ಎಂದು ಹೇಳುವುದು. ಅಂತೂ ಅಲ್ಲಿನ ಕಷ್ಟದ ದಿನಗಳಿಂದ ನನಗೆ ಹೊರಗೆ ಹೋಗಬೇಕೆನಿಸಿತ್ತು. ತೋಟಕ್ಕೆ ನೀರು ಹಾಕುವ ಕೆಲಸಕ್ಕೆ ನನ್ನನ್ನು ನೇಮಿಸಿದ್ದರಿಂದ ನಾನು ಅಲ್ಲಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಯಿತು. ಅದರೆ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಿರಲಿಲ್ಲ. ಕಾರಣ ನನ್ನ ಬಟ್ಟೆ. ಎರಡೂ ಕಾಲುಗಳಿಗೆ ಹಾಕುವ ಉದ್ದದ ಬಟ್ಟೆ ಮೈಮೇಲೊಂದು ಬಟ್ಟೆ ನನಗೆ ತೊಡಿಸಿದರು. ಅದನ್ನು ಹಾಕಿ ನಡೆಯುತ್ತಿದ್ದರೆ, ಕಾಲು ಅದೆಲ್ಲೋ ಸಿಕ್ಕಿ ಹಾಕಿಕೊಂಡ ಅನುಭವ. ನಡೆಯಲು, ಓಡಲು ಸಾಧ್ಯವಿಲ್ಲ. ಬಹಿದರ್ೆಸೆಗೆ ಇದನ್ನು ಹಾಕಿ ಕುಳಿತುಕೊಳ್ಳುವುದು ಹೇಗೆ ಎಂದು ನನಗೆ ಕಂಡಿತ್ತು. ಏನೇ ಆಗಲಿ ಈ ನರಕ ಬೇಡ ಎಂದು ಓಡಿದೆ.. ಮತ್ತಷ್ಟು ಓಡಿದೆ. ಕೊನೆಗೆ ಅದೆಲ್ಲೂ ಮುಟ್ಟಿದೆ. ಮತ್ತೆ ಅದೇ ಪೇಟೆ, ಕರಿ ರಸ್ತೆಗಳಲ್ಲಿ ಹೆಜ್ಜೆ. ಆದರೆ ಮೈಮೇಲಿನ ಬಟ್ಟೆ ಕಿರಿಕಿರಿ ಅನಿಸಿತ್ತು. ಕೊನೆಗೂ ಅದನ್ನು ಬೀಸಿ ಒಗೆದೆ. ಕೈಕಾಲುಗಳಿಗೆ ಮತ್ತೆ ಜೀವ ಬಂದಂತಾಯಿತು. ಗಾಳಿ ಮೈ ಸೋಕಿತು. ಮನಸ್ಸೂ, ದೇಹ ಎರಡೂ ನಿರುಮ್ಮಳ, ಸಂತೋಷ ಪಟ್ಟವು.
ಅದಾಗಿ ನಡೆದೆ. ಎಲ್ಲಿಗೆ ಏನು ಎತ್ತ, ಯಾಕಾಗಿ.. ಎಷ್ಟು ಹೊತ್ತು ಏನೂ ಗೊತ್ತಿಲ್ಲ.. ಬಿಸಿಲು ನೆತ್ತಿಗೇರುತ್ತಿದ್ದಂತೆ ಬಾಯಾರಿಕೆ, ಗದ್ದೆ, ಹಳ್ಳಗಳಲ್ಲಿ ಹರಿಯುತ್ತಿದ್ದ ನೀರೇ ದಾಹ ನೀಗಿಸಿದವು. ದಾರಿ ಗುಂಟ ಸಿಗುತ್ತಿದ್ದ ಸಣ್ಣ ಪೇಟೆ, ಅಂಗಡಿ ಎದುರು ಕೈಯೊಡ್ಡಿದರೆ ಮೂರು ಹೊತ್ತಿಗೆ ತೊಂದರೆಯಾಗುತ್ತಿರಲಿಲ್ಲ. ಹಾಗೇ ನಡೆಯುತ್ತಾ ನಡೆಯುತ್ತಾ.. ದಾರಿ ಬದಿಯ ಎಲ್ಲವೂ ನನ್ನಂತೆಯೇ ಕಂಡಿದ್ದವು. ನನಗಂತೂ ಖುಷಿಯಾಗಿತ್ತು. ಬೋಳು ಮರ, ಗದ್ದೆ, ಮೇಯುತ್ತಿದ್ದ ದನ, ಬೀಡಾಡಿ ನಾಯಿಗಳು.. ಯಾವುದಕ್ಕೂ ಬಟ್ಟೆ ಇಲ್ಲ. ಸರ್ವತಂತ್ರ ಸ್ವತಂತ್ರ ಎಂದರೆ ಇದೇ ಅಲ್ಲವೇ? ಬೇಕೆಂದಲ್ಲಿ ಬೇಕಾದಂತೆ, ತಮ್ಮಿಷ್ಟಕ್ಕೆ.. ಮನಸ್ಸಿಗೆ ಬೇಕುಬೇಕಾದಂತೆ..
ಕೊನೆಗೊಂದು ದಿನ ಅದೊಂದು ದೊಡ್ಡ ಪೇಟೆ ಎಂಬಂತಿತ್ತು. ಕಾರಣ ಬಟ್ಟೆ ತೊಟ್ಟವರೇ ಹಲವರಿದ್ದರು. ಕೆಲವರು ದುರುಗುಟ್ಟುತ್ತಿದ್ದರು. ಇನ್ನು ಕೆಲವರಿಗೆ ನನ್ನ ಕಂಡರಾಗುತ್ತಿರಲಿಲ್ಲ. ಎಲ್ಲಿಗೆ ಯಾಕೆ ಎಂಬ ಪ್ರಶ್ನೆ ಇಲ್ಲದ್ದರಿಂದ ನಾನು ಅಲ್ಲಿಗೆ ಹೋದೆ. ಮನಸ್ಸಿಗೆ ತೋಚಿದಂತೆ ತಿರುಗಾಡಿದೆ. ನಾಲ್ಕಾರು ದಿನ ಆ ಸ್ಮಶಾನದ ಮೂಲೆಯಲ್ಲಿ ನೆಮ್ಮದಿಯಾಗಿ ಮಲಗಿದೆ. ಸಂದು ಗೊಂದಿಗಳಲ್ಲಿ ಮನೆಗಳ ರಾಶಿಯ ನಡುವೆ ತುತ್ತಿಗಾಗಿ ಅಲೆದೆ. ಹಸಿವು ಎನ್ನುವುದೊಂದು ಇಲ್ಲದಿದ್ದರೆ ಯಾರ ಹಂಗೂ ನನಗೆ ಬೇಡವಿತ್ತು. ಕೆಲ ದಿನ ಆ ಹೆಣ್ಮಕ್ಕಳು ಬಿಸಿನೀರು ಚೆಲ್ಲಿದರು, ಬೆತ್ತ, ಕೈಗೆ ಸಿಕ್ಕಿದ್ದು ಹಿಡಿದು ಓಡಿಸಿದರು. ಮಕ್ಕಳು ಕಲ್ಲು ಬೀಸಿದರು. ಹಣೆಗೆ ತಾಗಿ ಕೆಂಪು ನೀರು ಬಂತು. ಈ ಊರೇ ಬೇಡ ಎಂದು ಹೊರಹೋಗಲು ನೋಡಿದೆ. ಎಷ್ಟು ಹೋದರೂ ಪೇಟೆ, ಜನಜಂಗುಳಿ ಮುಗಿಯುತ್ತಿರಲಿಲ್ಲ. ಮಾಯಾಲೋಕ್ಕೆ ಹೊಕ್ಕ ಅನುಭವ. ಹೊರ ಬರುವುದು ಹೇಗೆ ಎಂದು ಗೊತ್ತಿಲ್ಲ. ದಿನ ಕಳೆಯುತ್ತಿದ್ದಂತೆ ಹಸಿವಿಗೂ ಹೆಚ್ಚಿಗೆ ಪೆಟ್ಟಿನಿಂದ ಪಾರಾಗುವುದೇ ಕಷ್ಟವಾಯಿತು. ಕೇವಲ ಬಟ್ಟೆ ತೊಡದ ಮಾತ್ರಕ್ಕೆ ನನ್ನ ಜೀವಂತ ಉಳಿಸುವುದಿಲ್ಲ ಅನ್ನೋದು ಖಾತರಿಯಾಯಿತು. ಸದ್ಯ ಮರದ ತೊಗಟೆ ಹುಲ್ಲು ತಿಂದು ಹೊಟ್ಟೆ ತುಂಬಿಸಿ ಕೂತಿದ್ದೇನೆ. ಅಷ್ಟಾದರೆ ಸಾಲದು ಮೈ ಎಲ್ಲಾ ಕಣ್ಣಾಗಿರಬೇಕು, ಯಾವ ಹೊತ್ತಿನಲ್ಲಿ ಕಲ್ಲು ಬಂದು ಬೀಳುತ್ತದೆ ಗೊತ್ತಿಲ್ಲ.. ರಾತ್ರಿಯಾದರೆ ಸಾಕು. ನಿರುಮ್ಮಳ, ಶಾಂತವಾಗಿರಬಹುದು. ಬೆಳಗಾದರೆ ಕಷ್ಟ. ಹಾಗಂತ ಬಟ್ಟೆ ಖಂಡಿತಾ ಹಾಕುವುದಿಲ್ಲ. ಹಗಲುಗಳಿಗೆ ಬೇಕಾಗಿ ನನ್ನ ಸಂತೋಷ ಯಾಕೆ ಕಳೆಯಬೇಕು.. ಇಲ್ಲ.. ಇಲ್ಲ.. ನಾನು ಬೆತ್ತಲಾಗಿಯೇ ಇರಬೇಕು..!

( ಬೆಳಗಿನ ವಾಕಿಂಗ್ ವೇಳೆ ಕಂಡ ಬೆತ್ತಲೆ ಮನುಷ್ಯ, ಕಸದ ತೊಟ್ಟಿಯೊಳಗಿದ್ದ ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿದ್ದ ತೊಟ್ಟು ಹಾಲಿಗೆ ಬಾಯೊಡ್ಡಿದ ಕ್ಷಣಗಳು ಹಲವು ಬಾರಿ ಮನಸ್ಸಿಗೆ ಕಾಡಿದಾಗ ಹುಟ್ಟಿಕೊಂಡ ಬರಹ)